Karnataka Weather: ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ಮಳೆ ಆರಂಭ; ಕರ್ನಾಟಕದ 11 ಜಿಲ್ಲೆಗಳಿಗೆ ಮಳೆಯ ಮುನ್ಸೂಚನೆ
ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಇಂದು (ಜ.19) ಬೆಳಗ್ಗೆಯೇ ಮಳೆ ಆರಂಭವಾಗಿದೆ. ರಾಜ್ಯದ ಕರಾವಳಿ ಸೇರಿದಂತೆ 11 ಜಿಲ್ಲೆಗಳಲ್ಲಿ ಇಂದು ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಬೆಂಗಳೂರು: ಕರ್ನಾಟಕ ರಾಜ್ಯದಾದ್ಯಂತ ಚಳಿ ಮುಂದುವರೆದಿದೆ. ಇತ್ತೀಚೆಗೆ ಮಕರ ಸಂಕ್ರಾಂತಿ ದಿನ ರಾಜ್ಯದ ಕೆಲವು ಭಾಗಗಳಲ್ಲಿ ಅಲ್ಪ ಪ್ರಮಾಣದ ಮಳೆಯಾಗಿತ್ತು. ಜನವರಿ 19ರ ಭಾನುವಾರವಾದ ಇಂದು ಕೂಡಾ, ಕೆಲವು ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ತಿಳಿಸಿದೆ. ರಾಜ್ಯಾದ್ಯಂತ ತಾಪಮಾನದಲ್ಲಿ ದೊಡ್ಡ ಬದಲಾವಣೆಯಾಗಿಲ್ಲ. ಕಳೆದ ದಿನ (ಜ.18) ರಾಜ್ಯದಲ್ಲಿ ಮಳೆಯಾಗಿರುವ ಬಗ್ಗೆ ವರದಿಯಾಗಿಲ್ಲ. ಆದರೆ, ಭಾನುವಾರ ದಿನ ಮಳೆಯ ಸಾಧ್ಯತೆ ಇದೆ.
ಕರಾವಳಿ ಜಿಲ್ಲೆಯಾದ ದಕ್ಷಿಣ ಕನ್ನಡ, ದಕ್ಷಿಣ ಒಳನಾಡಿನ ಕೆೊಡಗು, ಮೈಸೂರು, ಚಾಮರಾಜನಗರ, ರಾಮನಗರ, ಮಂಡ್ಯ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಮಗಳೂರು, ಕೋಲಾರ ಮತ್ತು ಹಾಸನ ಜಿಲ್ಲೆಗಳ ಒಂದು ಅಥವಾ ಎರಡು ಸ್ಥಳಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ.
ಇದೇ ವೇಳೆ ಉತ್ತರ ಒಳನಾಡು ಮತ್ತು ಕರಾವಳಿ ಕರ್ನಾಟಕದ ಉಳಿದ ಜಿಲ್ಲೆಗಳು ಮತ್ತು ದಕ್ಷಿಣ ಒಳನಾಡು ಕರ್ನಾಟಕದಲ್ಲಿ ಒಣ ಹವಾಮಾನ ಇರುವ ಸಾಧ್ಯತೆ ಇದೆ. ಉತ್ತರ ಒಳನಾಡು ಕರ್ನಾಟಕದ ಒಂದು ಅಥವಾ ಎರಡು ಸ್ಥಳಗಳಲ್ಲಿ ಮಂಜು ಬೀಳುವ ಸಾಧ್ಯತೆ ಇದೆ.
ಜನವರಿ 24ರವರೆಗೆ ದಕ್ಷಿಣ ಒಳನಾಡು ಭಾಗದ ಒಂದು ಅಥವಾ ಎರಡು ಸ್ಥಳಗಳಲ್ಲಿ ಆಳದಿಂದ ಮಧ್ಯಮ ಪ್ರಮಾಣದಲ್ಲಿ ಇಬ್ಬನಿ ಬೀಳುವ ಸಾಧ್ಯತೆ ಇದೆ. ಇಂದು (ಭಾನುವಾರ) ಹೊರತುಪಡಿಸಿದರೆ ಮುಂದಿನ ಮುಂದಿನ 5 ದಿನಗಳಲ್ಲಿ ಮಳೆಯ ಮುನ್ಸೂಚನೆ ಇಲ್ಲ.
ಬೆಂಗಳೂರಿನಲ್ಲಿ ಬೆಳ್ಳಬೆಳಗ್ಗೆ ಮಳೆ
ಕರ್ನಾಟಕದ ರಾಜಧಾನಿ ಬೆಂಗಳೂರು ನಗರದ ಹಲವು ಭಾಗಗಳಲ್ಲಿ ಇಂದು ಬೆಳಗ್ಗಿನಿಂದಲೇ ಮಳೆ ಆರಂಭವಾಗಿದೆ. ಆರ್ ಟಿ ನಗರ, ಹೆಬ್ಬಾಳ, ಮುನಿರೆಡ್ಡಿ ಪಾಳ್ಯ, ಸುಲ್ತಾನ್ ಪಾಳ್ಯ, ವಸಂತ ನಗರ, ಇಂಡಿಯನ್ ಎಕ್ಸ್‌ಪ್ರೆಸ್, ಎಂ ಜಿ ರಸ್ತೆ ಸೇರಿದಂತೆ ಹಲವು ಭಾಗಗಳಲ್ಲಿ ಮಳೆಯಾಗಿದೆ. ಬೆಳಗ್ಗೆ ಬೇಗ ಎದ್ದು ನಿತ್ಯದ ಕೆಲಸ ಕಾರ್ಯಗಳಿಗೆ ತೆರಳುವವರಿಗೆ ಅನಿರೀಕ್ಷಿತ ಮಳೆ ಅಡ್ಡಿಯಾಗಿದೆ. ಚಳಿಗಾಲದ ಬಿರುಸಿನ ಚಳಿ ಇರಬೇಕಾದ ಸಂದರ್ಭದಲ್ಲಿ ವರುಣಾಗಮನವಾಗಿದೆ. ಉದ್ಯಾನ ನಗರಿಯಲ್ಲಿ ಚಳಿ ತುಸು ಕಡಿಮೆಯಾಗಿದೆ.
ಮುಂದಿನ 24 ಗಂಟೆಗಳ ಕಾಲ ಬೆಂಗಳೂರಿನಲ್ಲಿ ಸಾಮಾನ್ಯವಾಗಿ ಮೋಡ ಕವಿದ ಆಕಾಶ ಇರಲಿದೆ. ಕೆಲವು ಪ್ರದೇಶಗಳಲ್ಲಿ ಬೆಳಗ್ಗಿನ ಜಾವ ಮಂಜು ಕಾಣಿಸಿಕೊಳ್ಳಲಿದೆ. ಗರಿಷ್ಠ ತಾಪಮಾನವು 26ಡಿಗ್ರಿ ಸೆಲ್ಸಿಯಸ್ ಆದರೆ, ಕನಿಷ್ಠ 17 ಡಿಗ್ರಿ ಸೆಲ್ಸಿಯಸ್ ಇರುವ ಸಾಧ್ಯತೆ ಇದೆ.
