ಜಪಾನ್ ಕಾನ್ಸುಲೇಟ್‌ನಿಂದ ಪದವಿಪೂರ್ವ ವಿದ್ಯಾರ್ಥಿವೇತನ ಕಾರ್ಯಕ್ರಮಕ್ಕೆ ಅರ್ಜಿ ಆಹ್ವಾನ
ಕನ್ನಡ ಸುದ್ದಿ  /  ಕರ್ನಾಟಕ  /  ಜಪಾನ್ ಕಾನ್ಸುಲೇಟ್‌ನಿಂದ ಪದವಿಪೂರ್ವ ವಿದ್ಯಾರ್ಥಿವೇತನ ಕಾರ್ಯಕ್ರಮಕ್ಕೆ ಅರ್ಜಿ ಆಹ್ವಾನ

ಜಪಾನ್ ಕಾನ್ಸುಲೇಟ್‌ನಿಂದ ಪದವಿಪೂರ್ವ ವಿದ್ಯಾರ್ಥಿವೇತನ ಕಾರ್ಯಕ್ರಮಕ್ಕೆ ಅರ್ಜಿ ಆಹ್ವಾನ

ಜಪಾನಿನ ದೂತವಾಸ ಕಚೇರಿ ಪದವಿಪೂರ್ವ ವಿದ್ಯಾರ್ಥಿವೇತನವನ್ನು ಪ್ರಕಟಿಸಿದ್ದು, ಈ ಕಾರ್ಯಕ್ರಮದ ಅಡಿಯಲ್ಲಿ ಮಾನವಿಕ, ಸಮಾಜ ವಿಜ್ಞಾನ ಮತ್ತು ನೈಸರ್ಗಿಕ ವಿಜ್ಞಾನಗಳ ವಿಷಯದಲ್ಲಿ ಅಧ್ಯಯನ ಮಾಡಬಹುದಾಗಿದೆ.

ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ,
ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ, (Pixabay)

ಬೆಂಗಳೂರು: ಬೆಂಗಳೂರಿನಲ್ಲಿರುವ ಜಪಾನ್‌ ಕಾನ್ಸುಲೇಟ್ ಆಫೀಸ್‌ ಪ್ರಸ್ತುತ ಜಪಾನ್‌ನ ಪದವಿಪೂರ್ವ ವಿದ್ಯಾರ್ಥಿವೇತನ ಕಾರ್ಯಕ್ರಮಕ್ಕೆ ಅರ್ಜಿಗಳನ್ನು ಸ್ವೀಕರಿಸುತ್ತಿದೆ. ಅರ್ಜಿ ಸಲ್ಲಿಸಲು ಮೇ 16 ಕೊನೆಯ ದಿನವಾಗಿದೆ. 'MEXT ವಿದ್ಯಾರ್ಥಿವೇತನ 2026' ಎಂದು ಕರೆಯಲ್ಪಡುವ ಸ್ಕಾಲರ್‌ಶಿಪ್ ಯೋಜನೆಯಲ್ಲಿ, 2025 ರಲ್ಲಿ ಅಥವಾ ಅದಕ್ಕೂ ಮೊದಲು ಕನಿಷ್ಠ 80% ರೊಂದಿಗೆ 12 ನೇ ತರಗತಿಯನ್ನು ಪೂರ್ಣಗೊಳಿಸಿದ ಮತ್ತು ಜಪಾನೀಸ್ ಭಾಷೆಯಲ್ಲಿ ಪ್ರಾವೀಣ್ಯತೆಯನ್ನು ಹೊಂದಿರುವ ವಿದ್ಯಾರ್ಥಿಗಳಿಗೆ ಮುಕ್ತವಾಗಿದೆ.

ವಿದ್ಯಾರ್ಥಿವೇತನವು ಏಪ್ರಿಲ್ 2026 ರಿಂದ ಮಾರ್ಚ್ 2031 ರವರೆಗಿನ ಐದು ವರ್ಷಗಳ ಅವಧಿಯನ್ನು ಒಳಗೊಂಡಿದೆ. ಕಾರ್ಯಕ್ರಮದ ಅಡಿಯಲ್ಲಿ ಮಾನವಿಕ, ಸಮಾಜ ವಿಜ್ಞಾನ ಮತ್ತು ನೈಸರ್ಗಿಕ ವಿಜ್ಞಾನ ಪ್ರಾಥಮಿಕ ಅಧ್ಯಯನ ಕ್ಷೇತ್ರಗಳಾಗಿರುತ್ತವೆ. ಕೆಲವು ವಿದ್ಯಾರ್ಥಿವೇತನಗಳು ಅರ್ಥಶಾಸ್ತ್ರ, ವ್ಯವಹಾರ ಆಡಳಿತ, ಲೆಕ್ಕಪತ್ರ ನಿರ್ವಹಣೆ ಮತ್ತು ಹಣಕಾಸು ವಿಷಯಗಳಲ್ಲಿಯೂ ಲಭ್ಯವಿದೆ. ಅರ್ಜಿ ಸಲ್ಲಿಸುವ ಹೆಚ್ಚಿನ ಭಾರತೀಯ ವಿದ್ಯಾರ್ಥಿಗಳು STEM ವಿಷಯಗಳ ಮೇಲೆ ಅಧ್ಯಯನ ಕೇಂದ್ರೀಕರಿಸಿದ್ದಾರೆ ಮತ್ತು ನಂತರ ಜಪಾನ್‌ನಲ್ಲಿ IT ಕ್ಷೇತ್ರಗಳಲ್ಲಿ ಉದ್ಯೋಗವನ್ನು ಪಡೆದುಕೊಂಡಿದ್ದಾರೆ ಎಂದು ಜಪಾನ್ ಕಾನ್ಸುಲೇಟ್ ತಿಳಿಸಿದೆ.

ಎರಡೂ ದೇಶಗಳ ನಡುವೆ ಮಾನವ ವಿನಿಮಯವನ್ನು ಬಲಪಡಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ಕಾನ್ಸುಲ್-ಜನರಲ್ ನಕಾನೆ ಟ್ಸುಟೊಮು ಹೇಳಿರುವುದಾಗಿ ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ. ದ್ವಿಪಕ್ಷೀಯ ಸಂಬಂಧಗಳನ್ನು ಬೆಳೆಸಲು ಇದು ಮುಖ್ಯವಾಗಿದೆ. ಪಾಶ್ಚಿಮಾತ್ಯ ದೇಶಗಳಲ್ಲಿ ಲಕ್ಷಾಂತರ ಭಾರತೀಯ ವಿದ್ಯಾರ್ಥಿಗಳಿದ್ದಾರೆ, ಆದರೆ ಜಪಾನ್‌ನಲ್ಲಿ ಕೇವಲ 1,600 ವಿದ್ಯಾರ್ಥಿಗಳಿದ್ದಾರೆ ಎಂದು ಅವರು ಹೇಳಿದ್ದಾರೆ.

ಒಟ್ಟು ಹನ್ನೆರಡು ವಿದ್ಯಾರ್ಥಿಗಳನ್ನು ವಿದ್ಯಾರ್ಥಿವೇತನಕ್ಕೆ ಆಯ್ಕೆ ಮಾಡಲಾಗುತ್ತದೆ. ಪ್ರತಿಯೊಬ್ಬರಿಗೂ ಮಾಸಿಕ 68,000 ರೂ. ಭತ್ಯೆ ನೀಡಲಾಗುತ್ತದೆ. ಜತೆಗೆ ಬೋಧನಾ ಶುಲ್ಕವನ್ನು ಮನ್ನಾ ಮಾಡಲಾಗುತ್ತದೆ ಮತ್ತು ಅದರ ಜತೆಗೆ ಜಪಾನ್ ಸರ್ಕಾರವು ರೌಂಡ್-ಟ್ರಿಪ್ ಪ್ರಯಾಣ ವೆಚ್ಚವನ್ನು ಭರಿಸುತ್ತದೆ. ಹೆಚ್ಚಿನ ವಿವರಗಳಿಗಾಗಿ, dl.bengaluru@ig.mofa.go.jp ಗೆ ಇಮೇಲ್ ಮಾಡಬಹುದು.

Kiran Kumar I G

TwittereMail
ಕಿರಣ್ ಐ.ಜಿ.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜನರ ಬದುಕು ಸುಧಾರಿಸಬಲ್ಲ ಟೆಕ್‌ ಮತ್ತು ಗ್ಯಾಜೆಟ್ ಇವರ ಆಸಕ್ತಿಯ ಕ್ಷೇತ್ರ. ಯಾವುದೇ ವಿಷಯವಾದರೂ ಶ್ರದ್ಧೆಯಿಂದ ಕಲಿಯಬಲ್ಲೆ, ಬರೆಯಬಲ್ಲೆ ಎನ್ನುವುದು ಇವರ ವಿಶ್ವಾಸ. ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕ ವೆಬ್ ಹಾಗೂ ಟಿವಿ9 ಕನ್ನಡ ಡಿಜಿಟಲ್‌ನ ವಿವಿಧ ವಿಭಾಗಗಳಲ್ಲಿ ಒಟ್ಟು 10 ವರ್ಷ ಕೆಲಸ ಮಾಡಿದ ಅನುಭವ. ಇಮೇಲ್: kiran.kumar@htdigital.in