ಕನ್ನಡ ಸುದ್ದಿ  /  Karnataka  /  Jds Leader Gubbi Srinivas Joins Congress

S.R.Srinivas joins Congress: ಜೆಡಿಎಸ್ ಮುಖಂಡ ಗುಬ್ಬಿ ಶ್ರೀನಿವಾಸ್ ಕಾಂಗ್ರೆಸ್​ ಸೇರ್ಪಡೆ..

ಮೊನ್ನೆಯಷ್ಟೆ ಗುಬ್ಬಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಜೆಡಿಎಸ್ ಮುಖಂಡ ಎಸ್.ಆರ್. ಶ್ರೀನಿವಾಸ್ (ಗುಬ್ಬಿ ಶ್ರೀನಿವಾಸ್) ತಮ್ಮ ಮಾತಿನಂತೆ ಇಂದು ಕಾಂಗ್ರೆಸ್​​ಗೆ ಸೇರ್ಪಡೆಯಾಗಿದ್ದಾರೆ.

ಗುಬ್ಬಿ ಶ್ರೀನಿವಾಸ್ ಕಾಂಗ್ರೆಸ್​ ಸೇರ್ಪಡೆ
ಗುಬ್ಬಿ ಶ್ರೀನಿವಾಸ್ ಕಾಂಗ್ರೆಸ್​ ಸೇರ್ಪಡೆ

ಬೆಂಗಳೂರು: ಮೊನ್ನೆಯಷ್ಟೆ ಗುಬ್ಬಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಜೆಡಿಎಸ್ ಮುಖಂಡ ಎಸ್.ಆರ್. ಶ್ರೀನಿವಾಸ್ (ಗುಬ್ಬಿ ಶ್ರೀನಿವಾಸ್) ತಮ್ಮ ಮಾತಿನಂತೆ ಇಂದು ಕಾಂಗ್ರೆಸ್​​ಗೆ ಸೇರ್ಪಡೆಯಾಗಿದ್ದಾರೆ. ಇವರೊಂದಿಗೆ ಮೂಡಿಗೆರೆ ಪುರಸಭೆಯ ಮಾಜಿ ಅಧ್ಯಕ್ಷ, ಬಿಜೆಪಿ ಮುಖಂಡರಾದ ಹಾಲಪ್ಪ ಮತ್ತು ಮಂಡ್ಯದ ಬಿಜೆಪಿ ನಾಯಕ ಸತ್ಯಾನಂದ ಅವರೂ ಕೂಡ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಪಕ್ಷಕ್ಕೆ ಸೇರ್ಪಡೆಯಾದರು.

ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಶ್ರೀನಿವಾಸ್ ಅವರನ್ನು ಪಕ್ಷದಿಂದ ಉಚ್ಛಾಟಿಸಿದ್ದ ಜೆಡಿಎಸ್, ಗುಬ್ಬಿ ಕ್ಷೇತ್ರದಲ್ಲಿ ಬೇರೊಬ್ಬರನ್ನು ಅಭ್ಯರ್ಥಿಯಾಗಿ ಘೋಷಿಸಿತ್ತು. ಹೀಗಾಗಿ ಮಾರ್ಚ್​ 28 ರಂದು ಗುಬ್ಬಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಶ್ರೀನಿವಾಸ್, ಕಾಂಗ್ರೆಸ್​ ಸೇರುವುದಾಗಿ ಘೋಷಿಸಿದ್ದರು.

ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಡಿಕೆಶಿ, ಮುಖ್ಯಮಂತ್ರಿಗಳು ನಾನು ಬಿಜೆಪಿ ಶಾಸಕರಿಗೆ ಕರೆ ಮಾಡಿ ಕಾಂಗ್ರೆಸ್ ಪಕ್ಷಕ್ಕೆ ಬರುವಂತೆ ಆಹ್ವಾನ ನೀಡುತ್ತಿರುವುದಾಗಿ ಹೇಳಿದ್ದಾರೆ. ಕಳೆದ ಚುನಾವಣೆ ನಂತರ ಬಿಜೆಪಿಯವರು ಕಾಂಗ್ರೆಸ್ ಪಕ್ಷದ 13 ಶಾಸಕರು, ಜೆಡಿಎಸ್ ನ 5 ಶಾಸಕರು ಹಾಗೂ ಇಬ್ಬರು ಪಕ್ಷೇತರರು ಸೇರಿದಂತೆ 18 ಶಾಸಕರ ಮನೆ ಬಾಗಿಲು ತಟ್ಟಿ ಅವರನ್ನು ಕರೆದುಕೊಂಡು ಹೋದರಲ್ಲಾ ಆಗ ಮುಖ್ಯಮಂತ್ರಿಗಳ ನೈತಿಕತೆ ಎಲ್ಲಿಗೆ ಹೋಗಿತ್ತು? ಏನಾಗಿತ್ತು? ಎಂದು ಪ್ರಶ್ನಿಸಿದರು.

ಆಪರೇಷನ್ ಕಮಲ ಮಾಡಿ ಬೇರೆ ಪಕ್ಷದಲ್ಲಿ ಆಯ್ಕೆಯಾಗಿದ್ದ ಶಾಸಕರನ್ನು ಕರೆದುಕೊಂಡು ಹೋಗಿ ನಾಲ್ಕು ವರ್ಷಗಳಿಂದ ಅಧಿಕಾರ ಅನುಭವಿಸಿದ್ದೀರಲ್ಲಾ ಈಗ ಮಾತನಾಡಲು ಸಿಎಂಗೆ ಯಾವ ನೈತಿಕತೆ ಇದೆ? ನಿಮ್ಮ ಪಕ್ಷಕ್ಕೆ ಬಹುಮತ ಬಾರದೇ ಇದ್ದಾಗ ನೀವು ಅನೈತಿಕವಾಗಿ ದಳ, ಕಾಂಗ್ರೆಸ್ ಹಾಗೂ ಬಿಜೆಪಿ ಮೈತ್ರಿ ಸರ್ಕಾರ ರಚನೆ ಮಾಡಿದ್ದೀರಿ. ಇದು ರಾಜ್ಯಕ್ಕೆ ಶಾಪವಾಗಿ ಪರಿಣಮಿಸಿದೆ. ಈ ಸರ್ಕಾರವನ್ನು ಕಿತ್ತೊಗೆಯಲು ರಾಜ್ಯದ ಜನ ತೀರ್ಮಾನಿಸಿದ್ದಾರೆ ಎಂದರು.

ರಾಜ್ಯದಲ್ಲಿ ಚುನಾವಣೆ ಘೋಷಣೆಯಾಗಿದ್ದು, ಮೇ 10ರ ದಿನ ಕರ್ನಾಟಕವನ್ನು ಅಭಿವೃದ್ಧಿ ರಾಜ್ಯವನ್ನಾಗಿ ನಿರ್ಮಾಣ ಮಾಡುವ, ಭ್ರಷ್ಟಾಚಾರ ಬಡಿದೋಡಿಸುವಂತಹ ದಿನ. ರಾಜ್ಯಕ್ಕೆ ಉತ್ತಮವಾದ ಆಡಳಿತ ನೀಡುವ ದಿನ. ಈ ರಾಜ್ಯದ ಹಾಗೂ ಜನರ ಭವಿಷ್ಯವನ್ನು ಜನರೇ ತೀರ್ಮಾನಿಸುವ ದಿನ. ಈ ಪ್ರಜಾಪ್ರಭುತ್ವದ ಹಬ್ಬಕ್ಕೆ ಎಲ್ಲರೂ ಕಾತರರಾಗಿದ್ದಾರೆ ಎಂದು ಹೇಳಿದರು.

ಗುಬ್ಬಿಯ ಮಾಜಿ ಶಾಸಕ ಶ್ರೀನಿವಾಸ್​ ಅವರು, ಗೃಹ ಮಂಡಳಿಯ ಮಾಜಿ ಅಧ್ಯಕ್ಷರು, ಮೂಡಿಗೆರೆ ಪುರಸಭೆ ಮಾಜಿ ಅಧ್ಯಕ್ಷರಾದ ಹಾಲಪ್ಪ ಅವರು ಹಾಗೂ ಮಂಡ್ಯದ ಸತ್ಯಾನಂದ ಅವರು ಬಿಜೆಪಿ ತೊರೆದು ಮತ್ತೆ ಕಾಂಗ್ರೆಸ್ ಸೇರುತ್ತಿದ್ದಾರೆ. ಹಾಲಪ್ಪ ಹಾಗೂ ಸತ್ಯಾನಂದ ಅವರು ಎಸ್.ಎಂ ಕೃಷ್ಣ ಅವರ ಆಪ್ತರಾಗಿದ್ದು ಮತ್ತೆ ನಮ್ಮ ಪಕ್ಷಕ್ಕೆ ಮರಳಿದ್ದಾರೆ. ಗುಬ್ಬಿ ಹಾಗೂ ತುಮಕೂರು ಜಿಲ್ಲೆಯಿಂದ ಅನೇಕರು ಪಕ್ಷಕ್ಕೆ ಸೇರುತ್ತಿದ್ದು ಎಲ್ಲರಿಗೂ ಹೃದಯಪೂರ್ವಕ ಸ್ವಾಗತ ಎಂದರು.

ಸತತ ನಾಲ್ಕು ಬಾರಿ ಶಾಸಕರಾಗಿ, ಮಾಜಿ ಸಚಿವರಾಗಿ ಸೇವೆ ಸಲ್ಲಿಸಿದ ವಾಸು (ಶ್ರೀನಿವಾಸ್​) ಅವರಿಗೆ ನಾನು ಅನೇಕ ವರ್ಷಗಳಿಂದ ಗಾಳ ಹಾಕುತ್ತಿದ್ದೆ. ನನ್ನ ಗಾಳಕ್ಕೆ ಬಿದ್ದಿರಲಿಲ್ಲ. ಆದರೆ ಈಗ ರಾಜ್ಯದ ಮತದಾರರ ಚಿತ್ತ ಯಾವ ಕಡೆ ಇದೆ ಎಂದು ತಿಳಿದು ಮತದಾರರ ಗಾಳಕ್ಕೆ ಅವರು ಬಿದ್ದಿದ್ದಾರೆ. ಮತದಾರರು ಬದಲಾವಣೆ ಬಯಸಿದ್ದಾರೆ. ರಾಷ್ಟ್ರೀಯ ಪಕ್ಷ ಬೇಕಾಗಿದೆ ಎಂದು ತೀರ್ಮಾನಿಸಿದ್ದಾರೆ. ವಾಸು ಅವರ ಆಗಮನ ತುಮಕೂರು ಜಿಲ್ಲೆ ಮಾತ್ರವಲ್ಲ ಹಳೇ ಮೈಸೂರು ಭಾಗಕ್ಕೆ ಶಕ್ತಿ ತುಂಬಲಿದೆ ಎಂದರು.

ವಾಸು ಅವರು ಬಹಳ ಹಿಂದೆಯೇ ಕಾಂಗ್ರೆಸ್ ಸೇರುವ ತೀರ್ಮಾನ ಮಾಡಿದ್ದರು. ನಾನು, ಸಿದ್ದರಾಮಯ್ಯ ಹಾಗೂ ಆ ಜಿಲ್ಲೆಯ ನಾಯಕರೆಲ್ಲರೂ ಅವರನ್ನು ಅಧಿಕೃತವಾಗಿ ಇಂದು ಪಕ್ಷಕ್ಕೆ ಸೇರಿಸಿಕೊಳ್ಳುತ್ತಿದ್ದೇವೆ. ರಾಹುಲ್ ಗಾಂಧಿ ಅವರು ಭಾರತ ಜೋಡೋ ಯಾತ್ರೆ ಮಾಡಿದ ಸಂದರ್ಭದಲ್ಲಿ ವಾಸು ಅವರು ರಾಹುಲ್ ಗಾಂಧಿ ಅವರಿಗೆ ತ್ರಿವರ್ಣ ಧ್ವಜ ನೀಡಿ ಯಾತ್ರೆಗೆ ಶಕ್ತಿ ತುಂಬಿದ್ದನ್ನು ನಾವು ಸ್ಮರಿಸಬೇಕಿದೆ ಎಂದರು.

ಮುಂದಿನ ಕೆಲ ದಿನಗಳಲ್ಲಿ ಅರಸಿಕೆರೆ ಶಾಸಕ ಶಿವಲಿಂಗೇಗೌಡರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಇಂಗಿತ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ಕಾಂತರಾಜು ಅವರು ಹಾಲಿ ವಿಧಾನಪರಿಷತ್ ಸದಸ್ಯರಾಗಿದ್ದರೂ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದರು. ಕೋಲಾರದಿಂದ ಹಾಲಿ ಪರಿಷತ್ ಸದಸ್ಯರಾಗಿದ್ದ ಮನೋಹರ್, ಶಾಸಕ ಶ್ರೀನಿವಾಸ ಗೌಡರು ಕೂಡ ಜೆಡಿಎಸ್ ತೊರೆದು ಕಾಂಗ್ರೆಸ್ ಪಕ್ಷದ ಜತೆ ಸೇರಿದ್ದಾರೆ. ಮಧುಬಂಗಾರಪ್ಪ, ದೇವೇಂದ್ರಪ್ಪ ಸೇರಿದಂತೆ 37 ಮಂದಿ ಜೆಡಿಎಸ್ ನಿಂದ ಕಾಂಗ್ರೆಸ್ ಪಕ್ಷಕ್ಕೆ ಬಂದಿದ್ದಾರೆ.

ಬಿಜೆಪಿಯಿಂದ ಹಾಲಿ ವಿಧಾನ ಪರಿಷತ್ ಸದಸ್ಯರಾಗಿ ನಾಲ್ಕು ವರ್ಷ ಅಧಿಕಾರ ಹೊಂದಿದ್ದ ಪುಟ್ಟಣ್ಣ, ಚಿಂಚನಸೂರು ಅವರು ಇತ್ತೀಚೆಗೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಪಕ್ಷ ಸೇರಿದ್ದಾರೆ. ಯಡಿಯೂರಪ್ಪ ಅವರ ಆತ್ಮೀಯರು ನಿಂಬಿಕಾಯಿ, ಯು.ಬಿ ಬಣಕಾರ್, ಬೊಮ್ಮಾಯಿ ಅವರ ಆಪ್ತರಾಗಿದ್ದ ಮಂಜುನಾಥ್ ಕುನ್ನೂರು ಸೇರಿದಂತೆ ಅನೇಕರು ಈಗಾಗಲೇ ಕಾಂಗ್ರೆಸ್ ಪಕ್ಷ ಸೇರಿದ್ದು, ಮುಂದೆ ಅನೇಕ ಬಿಜೆಪಿ ನಾಯಕರು ಕಾಂಗ್ರೆಸ್ ಸೇರಲಿದ್ದಾರೆ. ಮುಂದಿನ ದಿನಗಳಲ್ಲಿ ಅದನ್ನು ಬಹಿರಂಗಪಡಿಸುತ್ತೇನೆ ಎಂದು ಡಿಕೆಶಿ ಹೇಳಿದರು.

IPL_Entry_Point