ಕನ್ನಡ ಸುದ್ದಿ  /  Karnataka  /  Jds Opinion About Ysv Datta, We Dont Want Dhongi Manasaputra Who Want Join Congress

YSV Datta: ಜೆಡಿಎಸ್‌ ತೊರೆದ ವೈ.ಎಸ್.ವಿ ದತ್ತಾ ಹೆಚ್.ಡಿ.ದೇವೇಗೌಡರ ಮಾನಸ ಪುತ್ರರೇ? ಢೋಂಗಿ ಮಾನಸಪುತ್ರರ ಅಗತ್ಯವಿಲ್ಲವೆಂದ ಜೆಡಿಎಸ್‌

ಮಾನಸಪುತ್ರನೆಂದು ಖ್ಯಾತಿಯ ಜತೆಗೆ ಸಕಲವನ್ನೂ ಸಂಪಾದನೆ ಮಾಡಿಕೊಂಡ ಮೇಲೆ ಸಲುಹಿದ, ಕಷ್ಟ ಬಂದಾಗ ಕಾಪಾಡಿದ, ಕಠಿಣ ಸಂದರ್ಭಗಳಲ್ಲಿ ಕಣ್ರೆಪ್ಪೆಯಂತೆ ಪೊರೆದ, ಅನೇಕ ಸಲ ಜನ್ಮಕೊಟ್ಟ ತಂದೆಗಿಂತ ಗಟ್ಟಿಯಾಗಿ ಜತೆಗೆ ನಿಂತು ಮುಳುಗೇ ಹೋಗುತ್ತಿದ್ದ ಬದುಕನ್ನು ಬದುಕಿಸಿಕೊಟ್ಟ ' ಮಾನಸ ತಂದೆ' ಯನ್ನು ಮರೆತು, ತೊರೆಯುತ್ತಿದ್ದರೆ? ಎಂದು ಜೆಡಿಎಸ್‌ ಪ್ರಶ್ನಿಸಿದೆ.

YSV Datta: ಜೆಡಿಎಸ್‌ ತೊರೆದ ವೈ.ಎಸ್.ವಿ ದತ್ತಾ ಹೆಚ್.ಡಿ.ದೇವೇಗೌಡರ ಮಾನಸ ಪುತ್ರರೇ?
YSV Datta: ಜೆಡಿಎಸ್‌ ತೊರೆದ ವೈ.ಎಸ್.ವಿ ದತ್ತಾ ಹೆಚ್.ಡಿ.ದೇವೇಗೌಡರ ಮಾನಸ ಪುತ್ರರೇ?

ಬೆಂಗಳೂರು: ಹೆಚ್‌ಡಿ ದೇವೇಗೌಡರ ಮಾನಸಪುತ್ರರೆಂದು ಜನಪ್ರಿಯತೆ ಪಡೆದಿರುವ ಮಾಜಿ ಶಾಸಕ ವೈ.ಎಸ್.ವಿ. ದತ್ತಾ ಅವರು ಜೆಡಿಎಸ್‌ ಪಕ್ಷ ತ್ಯಜಿಸಿ ಕಾಂಗ್ರೆಸ್‌ ಪಕ್ಷಕ್ಕೆ ಸೇರುವ ಕುರಿತು ಇತ್ತೀಚಿಗೆ ಅಧಿಕೃತವಾಗಿ ಘೋಷಿಸಿದ್ದರು. "ಕಡೂರು ತಾಲೂಕಿನ ಸ್ವಗ್ರಾಮ ಯುಗಟಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಐವತ್ತು ವರ್ಷಗಳಿಂದ ಮಾಜಿ ಪ್ರಧಾನಿ ದೇವೇಗೌಡರು-ನನ್ನದು ತಂದೆ ಮಕ್ಕಳ ಸಂಬಂಧ ಆಗಿದೆ. ನಾನು ಎಲ್ಲೇ ಇದ್ದರೂ ಅವರ ಹಾರೈಕೆ ನನ್ನ ಮೇಲೆ ಇದ್ದೇ ಇರುತ್ತದೆ." ಎಂದು ದತ್ತಾ ಹೇಳಿದ್ದರು.

ಇದೇ ಮೊದಲ ಬಾರಿಗೆ ಜೆಡಿಎಸ್‌ ಪಕ್ಷ ಈ ಕುರಿತು ಸರಣಿ ಟ್ವೀಟ್‌ ಮೂಲಕ ಪ್ರತಿಕ್ರಿಯೆ ನೀಡಿದೆ. "ರಾಜ್ಯದ ಅಗ್ರಮಾನ್ಯ ನಾಯಕರು, ಮಾಜಿ ಪ್ರಧಾನಮಂತ್ರಿಗಳು ಆಗಿರುವ ಹೆಚ್.ಡಿ.ದೇವೇಗೌಡರ ' ಮಾನಸಪುತ್ರ ' ಎಂದೇ ಖ್ಯಾತಿ ಆಗಿರುವ ಶ್ರೀ ವೈ.ಎಸ್.ವಿ ದತ್ತಾ ಅವರು ಜೆಡಿಎಸ್ ತೊರೆದು ಕಾಂಗ್ರೆಸ್ ಪಕ್ಷ ಸೇರುತ್ತಿದ್ದಾರೆ, ಕೈ ಹಿಡಿಯಲು ಅವರು ದಿನವನ್ನೂ ನಿಗದಿ ಮಾಡಿಕೊಂಡಿದ್ದಾರೆ ಎನ್ನುವುದು ಸದ್ಯದ ಸುದ್ದಿ" ಎಂದು ಜೆಡಿಎಸ್‌ ಟ್ವೀಟ್‌ ಮಾಡಿದೆ.

"ಬಹುತೇಕ ಕಡೆ ದೇವೇಗೌಡರ ' ಮಾನಸಪುತ್ರ ' ಜೆಡಿಎಸ್ ತೊರೆದು ಹೋಗುತ್ತಿದ್ದಾರೆ ಎಂದು ಪ್ರಚಾರ ಮಾಡಲಾಗುತ್ತಿದೆ. ' ಮಾನಸಪುತ್ರ ' ಎನ್ನುವ ಪದವೇ ಹೆಚ್ಚು ಸದ್ದು ಮಾಡುತ್ತಿದೆ. ದತ್ತಾ ಅವರು ಗೌಡರಿಗೆ ಮಾನಸಪುತ್ರ ಪುತ್ರರಾಗಿದ್ದರೋ ಇಲ್ಲವೋ ಗೊತ್ತಿಲ್ಲ, ಆದರೆ, ದೇವೇಗೌಡರು ಮಾತ್ರ ನಿಜಕ್ಕೂ ದತ್ತಾ ಅವರನ್ನು ಹೆತ್ತ ತಂದೆಗಿಂತ ಹೆಚ್ಚು ಸಲುಹಿದ್ದರು, ಪೊರೆದಿದ್ದರು" ಎಂದು ಜೆಡಿಎಸ್‌ ಟ್ವೀಟ್‌ ಮಾಡಿದೆ.

ನಿಜಕ್ಕೂ ಮಾನಸ ಪುತ್ರರೇ?

"ಅಂತಹ ದತ್ತಾ, ಮಾನಸಪುತ್ರನೆಂದು ಖ್ಯಾತಿಯ ಜತೆಗೆ ಸಕಲವನ್ನೂ ಸಂಪಾದನೆ ಮಾಡಿಕೊಂಡ ಮೇಲೆ ಸಲುಹಿದ, ಕಷ್ಟ ಬಂದಾಗ ಕಾಪಾಡಿದ, ಕಠಿಣ ಸಂದರ್ಭಗಳಲ್ಲಿ ಕಣ್ರೆಪ್ಪೆಯಂತೆ ಪೊರೆದ, ಅನೇಕ ಸಲ ಜನ್ಮಕೊಟ್ಟ ತಂದೆಗಿಂತ ಗಟ್ಟಿಯಾಗಿ ಜತೆಗೆ ನಿಂತು ಮುಳುಗೇ ಹೋಗುತ್ತಿದ್ದ ಬದುಕನ್ನು ಬದುಕಿಸಿಕೊಟ್ಟ ' ಮಾನಸ ತಂದೆ' ಯನ್ನು ಮರೆತು, ತೊರೆಯುತ್ತಿದ್ದರೆ?" ಎಂದು ಜೆಡಿಎಸ್‌ ಸರಣಿ ಟ್ವೀಟ್‌ ಮಾಡಿದೆ.

"ಮಾನಸಪುತ್ರನನ್ನು ಇನ್ನೊಬ್ಬ ಪುತ್ರನೆಂದೇ ನಂಬಿದ್ದರು ದೇವೇಗೌಡರು. ನಂಬಿ ಪಕ್ಕದಲ್ಲಿ ಇಟ್ಟುಕೊಂಡರು. ಕೇಳಿದ್ದೆಲ್ಲಾ ಕೊಟ್ಟರು, ಕೇಳದಿದ್ದರೂ ಕೊಟ್ಟರು. ಪ್ರೀತಿ, ವಿಶ್ವಾಸ, ವಾತ್ಸಲ್ಯ ಎಲ್ಲವನ್ನೂ ಧಾರೆ ಎರೆದರು. ಆದರೆ, ಇವತ್ತು ಮಾನಸಪುತ್ರ ಎಲ್ಲವನ್ನೂ ಮರೆತು ಕೃತಜ್ಞತಾಹೀನರಾಗಿ ಅದೇ ಗೌಡರಿಗೆ ಬೆನ್ನಿಗೆ ಚೂರಿ ಹಾಕಿದ ಕಾಂಗ್ರೆಸ್ ಸೇರುತ್ತಿದ್ದಾರೆʼʼ ಎಂದು ಜೆಡಿಎಸ್‌ ಟ್ವೀಟ್‌ ಮಾಡಿದೆ.

"ಮಾನಸಪುತ್ರನಿಗೆ ನಂಬಿಕೆ ಎಂದರೆ ವ್ಯಾಪಾರ, ಪ್ರೀತಿ ಎಂದರೆ ಲಾಭದ ದಾರಿ, ವಿಶ್ವಾಸ ಎಂದರೆ ರಾಜಕೀಯ ಹಕೀಕತ್ತಿನ ರಾಜಮಾರ್ಗ. ಅಂಥ ಮಾನಸಪುತ್ರನ ಬಗ್ಗೆ ಗೌಡರು ಕೊರಗುವುದಿಲ್ಲ. ಏಕೆಂದರೆ, ಪಕ್ಷದ ಎಲ್ಲಾ ನಾಯಕರು, ಕಟ್ಟ ಕಡೆಯ ಕಾರ್ಯಕರ್ತನೂ ಮಾಜಿ ಪ್ರಧಾನಿಗಳ ಮಾನಸಪುತ್ರರೇ.. ಢೋಂಗಿ ಮಾನಸಪುತ್ರರನ್ನು ಮರೆಯುವುದೇ ಲೇಸು. ಅಲ್ಲವೇ?" ಎಂದು ಜೆಡಿಎಸ್‌ ಟ್ವೀಟ್‌ ಮಾಡಿದೆ.

ಜನವರಿ 15ರ ಬಳಿಕ ಕಾಂಗ್ರೆಸ್‌ ಸೇರ್ಪಡೆ

ಕಳೆದ ಐವತ್ತು ವರ್ಷಗಳಿಂದ ನನ್ನದು ದೇವೇಗೌಡರದ್ದು ತಂದೆ ಮಕ್ಕಳ ಸಂಬಂಧ. ನಾನು ಎಲ್ಲೇ ಇದ್ದರೂ ಅವರ ಹಾರೈಕೆ ಇರುತ್ತದೆ. ಜನವರಿ ಹದಿನೈದರ ಬಳಿಕ ಕಾಂಗ್ರೆಸ್‌ ಪಕ್ಷ ಸೇರುವೆ ಎಂದು ಮಾಜಿ ಶಾಸಕರಾದ ವೈ.ಎಸ್‌.ವಿ. ದತ್ತಾ ಇತ್ತೀಚೆಗೆ ಹೇಳಿಕೆ ನೀಡಿದ್ದರು.

ನನ್ನನ್ನ ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಿದ್ದು ದೇವೇಗೌಡರು. ಅದು ನನ್ನ ರಾಜಕೀಯ ಜೀವನಕ್ಕೆ ಸಿಕ್ಕ ತಿರುವಾಗಿದೆ. ಇದೀಗ ಅನಿವಾರ್ಯವಾಗಿ ಕಾಂಗ್ರೆಸ್ ಸೇರ್ಪಡೆ ಆಗುತ್ತಿದ್ದೇನೆ. ಇದನ್ನ ಅವರಿಗೆ ಹೇಳಲು ಒಂದು ರೀತಿ ಮುಜುಗರವಾಗುತ್ತದೆ ಎಂದು ಅವರು ಹೇಳಿದ್ದರು.

ಕಡೂರಿನಲ್ಲಿ ನಿರಂತರ ಜನರ ಸಂಪರ್ಕದಲ್ಲಿದ್ದೇನೆ. ಕಳೆದ ಒಂದೂವರೆ ವರ್ಷದಿಂದಲೂ ತಾಲೂಕಿನಲ್ಲಿ ಎಲ್ಲೇ ಹೋದರೂ ಕಾಂಗ್ರೆಸ್ ಸೇರಬೇಕೆಂಬ ಸಾರ್ವತ್ರಿಕ ಅಭಿಪ್ರಾಯ ವ್ಯಕ್ತವಾಗುತ್ತಿತ್ತು. ಹಾಗಾಗಿ, ಜನಾಭಿಪ್ರಾಯ, ಅಭಿಮಾನಿಗಳು ಹಾಗೂ ಕಾರ್ಯಕರ್ತರ ಅಭಿಪ್ರಾಯದಂತೆ ನನ್ನ ಸಮಾನ ಮನಸ್ಕ ಸ್ನೇಹಿತರಿರುವ ಕಾಂಗ್ರೆಸ್ ಪಕ್ಷಕ್ಕೆ ಸೇರುವ ನಿರ್ಧಾರ ಮಾಡಿದ್ದೇನೆ ಎಂದು ಅವರು ಹೇಳಿದ್ದರು.