Kannada News  /  Karnataka  /  Jds Slams Zameer Ahmed On Twitter, Where Do You Have The Morals To Talk About The Muslim Community?
ಮಾಜಿ ಸಚಿವ, ಚಾಮರಾಜಪೇಟೆ ಕ್ಷೇತ್ರದ ಕಾಂಗ್ರೆಸ್​ ಶಾಸಕ ಜಮೀರ್‌ ಅಹ್ಮದ್‌ ಖಾನ್​
ಮಾಜಿ ಸಚಿವ, ಚಾಮರಾಜಪೇಟೆ ಕ್ಷೇತ್ರದ ಕಾಂಗ್ರೆಸ್​ ಶಾಸಕ ಜಮೀರ್‌ ಅಹ್ಮದ್‌ ಖಾನ್​

Zameer Ahmed: ಜಮೀರ್ ಅಹಮದ್, ನಿಮಗೆ ಮುಸ್ಲಿಂ ಸಮುದಾಯದ ಬಗ್ಗೆ ಮಾತನಾಡುವ ನೈತಿಕತೆ ಎಲ್ಲಿದೆ?: ಹೀಗಂದವರು ಯಾರು?

05 February 2023, 15:47 ISTHT Kannada Desk
05 February 2023, 15:47 IST

ಫಯಾಜ್‌ಗೆ ಹುಮ್ನಾಬಾದ್ ಜೆಡಿಎಸ್ ಟಿಕೆಟ್ ಕೊಟ್ಟು ಬಲಿ ಕಾ ಬಕ್ರಾ ಮಾಡ್ತಿದ್ದಾರೆ ಎಂದ ಜಮೀರ್ ಅಹಮದ್‌ಗೆ ಜನತಾ ದಳವು ಸರಣಿ ಟ್ವೀಟ್‌ ಮೂಲಕ ಟಾಂಗ್‌ ನೀಡಿದೆ.

ಬೆಂಗಳೂರು: "ನಾಲಗೆಯ ಮೇಲೆ ಸದಾ ಕಂಡವರ ಎಂಜಲು ಚಪ್ಪರಿಸುವ ಜಮೀರ್ ಅಹಮದ್, ನಿಮಗೆ ಮುಸ್ಲಿಂ ಸಮುದಾಯದ ಬಗ್ಗೆ ಮಾತನಾಡುವ ನೈತಿಕತೆ ಎಲ್ಲಿದೆ? ರಾಜಕಾರಣಕ್ಕಾಗಿ ನೀವು ಆ ಸಮುದಾಯವನ್ನು ಹೇಗೆ ನಡೆಸಿಕೊಂಡಿದ್ದಿರಿ? ಶ್ರೀ ಹೆಚ್.ಡಿ.ದೇವೇಗೌಡರ ಕುಟುಂಬ ಹೇಗೆ ನಡೆಸಿಕೊಳ್ಳುತ್ತಿದೆ ಎನ್ನುವುದು ದೇಶಕ್ಕೇ ಗೊತ್ತಿದೆ. ಭೂತದ ಬಾಯಲ್ಲಿ ಭಗವದ್ಗೀತೆ ಚೆನ್ನಾಗಿರಲ್ಲ" ಎಂದು ಜಾತ್ಯಾತೀತ ಜನತಾ ದಳ ಟ್ವಿಟ್ಟರ್‌ ಹ್ಯಾಂಡಲ್‌ ಮೂಲಕ ಸರಣಿ ಟ್ವೀಟ್‌ ಮಾಡಲಾಗಿದೆ.

ಟ್ರೆಂಡಿಂಗ್​ ಸುದ್ದಿ

ಹುಮ್ನಾಬಾದ್ ಪಟ್ಟಣದಲ್ಲಿ ನಡೆದ ಪ್ರಜಾಧ್ವನಿ ಯಾತ್ರೆಯ ಬಹಿರಂಗ ಸಮಾವೇಶದಲ್ಲಿ ಹೆಚ್‌ಡಿಕೆ ವಿರುದ್ಧ ಜಮೀರ್‌ ಅಹಮದ್‌ ಕಿಡಿ ಕಾರಿದ್ದರು. "ನಾನು ದಿನದ 24 ಗಂಟೆಯಲ್ಲಿ 16 ಗಂಟೆ ಅವನ ಜೊತೆ ಇದ್ದವನು, ಇವತ್ತು ಸಿ.ಎಂ ಇಬ್ರಾಹಿಂ ಮತ್ತು ಅವರ ಪುತ್ರನನ್ನ ಕುಮಾರಸ್ವಾಮಿ ಮುಗಿಸಲು ಹೊರಟಿದ್ದಾರೆ" ಎಂದು ಜಮೀರ್‌ ಅಹಮದ್‌ ಖಾನ್‌ ಹೇಳಿದ್ದರು.

ಕುಮಾರಸ್ವಾಮಿ ಹೆಂಗೆ ಅಂದ್ರೆ ಬುಸ್… ಬುಸ್… ತರ, ಅವನು ಯಾವಾಗ ಕಚ್ಚುತ್ತಾನೊ ಗೊತ್ತಿಲ್ಲ ಎಂದು ಕೈಯಿಂದ ಹಾವಿನ ಹೆಡೆ ತೋರಿಸಿ ಶಾಸಕ ಜಮೀರ್ ಅಹಮದ್ ಖಾನ್ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ವಿರುದ್ಧ ಏಕವಚನದಲ್ಲಿಯೇ ಕಿಡಿಕಾರಿದ್ದರು.

ಸಿ.ಎಂ ಇಬ್ರಾಹಿಂಗೆ ಕುಮಾರಸ್ವಾಮಿ ಕಿವಿಯಲ್ಲಿ ಹೂ ಇಡುತ್ತಿದ್ದಾರೆ. ಫಯಾಜ್‌ಗೆ ಹುಮ್ನಾಬಾದ್ ಜೆಡಿಎಸ್ ಟಿಕೆಟ್ ಕೊಟ್ಟು ಬಲಿ ಕಾ ಬಕ್ರಾ ಮಾಡ್ತಿದ್ದಾರೆ. ಬೇಕಿದ್ದರೆ ರಾಮನಗರ, ಹಾಸನ, ಹೊಳೆನರಸಿಪುರ, ಮಂಡ್ಯ ಬಿಟ್ಟು ಕೊಡಲು ಹೇಳಿ, ಫಯಾಜ್ ಪಾಪ ಒಳ್ಳೆಯ ಹುಡುಗ, ಇಬ್ರಾಹಿಂ ಕೂಡ ತಮ್ಮ ಮಗನನ್ನ ನಿಲ್ಲಿಸಿ ಬಲಿ ಕಾ ಬಕ್ರಾ ಮಾಡುತ್ತಿದ್ದಾರೆ ಎಂದು ಜಮೀರ್‌ ಹೇಳಿದ್ದರು. ಇದಕ್ಕೆ ಪ್ರತಿಯಾಗಿ ಜೆಡಿಎಸ್‌ ಸರಣಿ ಟ್ವೀಟ್‌ ಮಾಡಿದೆ.

"ಅರಮನೆಯಂಥ ವಿಲಾಸಿ ಭವನದಲ್ಲಿ ಐಷಾರಾಮಿ ಜೀವನ ನಡೆಸುವ ನಿಮಗೆ, ನಿಮ್ಮದೇ ಕ್ಷೇತ್ರದ ಗೌರಿಪಾಳ್ಯ, ಪಾದರಾಯನಪುರದ ಬಡ ಮುಸ್ಲಿಂ ಬಂಧುಗಳು ಎಂಥ ಕಷ್ಟದ ಸ್ಥಿತಿಯಲ್ಲಿ ಇದ್ದಾರೆ ಎನ್ನುವುದು ಗೊತ್ತಾ? ಕಾಮಾಲೆ ಕಣ್ಣಲ್ಲಿ ಮುಸ್ಲಿಂ ಸಮುದಾಯದ ಬಗ್ಗೆ ಮೊಸಳೆ ಕಣ್ಣೀರು ಹಾಕುವ ನಿಮಗೆ ಮುಸ್ಲಿಮರ ನೈಜಸ್ಥಿತಿಯ ಬಗ್ಗೆ ಅರಿವಿದೆಯಾ? ಎಂದು ಜೆಡಿಎಸ್‌ ಪ್ರಶ್ನಿಸಿದೆ.

ಹರಕಲು ನಾಲಿಗೆಯ ಜಮೀರ್, ಮುಸ್ಲಿಂ ಸಮುದಾಯಕ್ಕೆ ಸೇರಿದ ನಿಮಗೆ ರಾಜಕೀಯ ಜನ್ಮಕೊಟ್ಟಿದು ಇದೇ ಕುಮಾರಣ್ಣ.ವಿಧಾನ ಸಭೆಯ ಮಾರ್ಷಲ್ ಗಳು ಕುತ್ತಿಗೆಪಟ್ಟಿ ಹಿಡಿದು ಹೊರದಬ್ಬಿದಾಗ ಇದೇ ಕುಮಾರಣ್ಣ ನಿಮ್ಮ ಮಾನ ಕಾಪಾಡಿದ್ದು. ಅಂದು ಶಪಥಗೈದ ಕುಮಾರಣ್ಣ ನಿಮ್ಮನ್ನು ಶಾಸಕರನ್ನಾಗಿ ಮಾಡಿದ್ದು ನೆನಪಿಲ್ಲವೇ? ನಿಯತ್ತಿಲ್ಲದ ನಿಮಗೆ ಇದೆಲ್ಲಾ ಅರ್ಥವಾದೀತೆ? ಎಂದು ಜನತಾ ದಳ ಸೆಕ್ಯುಲರ್‌ ಸರಣಿ ಟ್ವೀಟ್‌ ಮಾಡಿದೆ.

ಉಂಡ ಮನೆಯ ಗಳ ಇರಿಯುವ ಜಮೀರ್, ಸಿಎಂ ಇಬ್ರಾಹಿಂ ಅವರ ರಾಜಕೀಯ ಹಿತದ ಬಗ್ಗೆ ಈಗ ನೆನಪು ಬಂತಾ ನಿಮಗೆ? ಹಿಂದೆ, ಇದೇ ಸಿಎಂ ಇಬ್ರಾಹಿಂ ಅವರನ್ನು ಅದೇ ನಿಮ್ಮ ನಾಯಕ ಶಿಕಾಮಣಿ ಸಿದ್ದರಾಮಯ್ಯ ಅವರು ತಮ್ಮ ಸಂಪುಟಕ್ಕೆ ಯಾಕೆ ಸೇರಿಸಿಕೊಳ್ಳಲಿಲ್ಲ? ಹೋಗಲಿ, ಪ್ರತಿಪಕ್ಷ ನಾಯಕರನ್ನಾಗಿ ಮಾಡುವ ಅವಕಾಶವೂ ಇತ್ತು. ಅದನ್ನು ಮಾಡಲಿಲ್ಲ ಯಾಕಪ್ಪಾ ಜಮೀರ್? ಎಂದು ಜೆಡಿಎಸ್‌ ಪ್ರಶ್ನಿಸಿದೆ.

ಇಬ್ರಾಹಿಂ ಅವರನ್ನು ನಾವು ಅತ್ಯಂತ ಗೌರವಯುತವಾಗಿ ನಡೆಸಿಕೊಂಡಿದ್ದೇವೆ. ಪಕ್ಷಕ್ಕೆ ಬಂದಾಗ ಪ್ರೀತಿಯಿಂದ ಬರ ಮಾಡಿಕೊಂಡಿದ್ದೇವೆ. ಈಗ ಅವರು ನಮ್ಮ ಅಧ್ಯಕ್ಷರು. ನಿಮ್ಮ ಗಂಜಿ ಕೇಂದ್ರವಾಗಿರುವ ಕಾಂಗ್ರೆಸ್ ಪಕ್ಷದಲ್ಲಿ ಓರ್ವ ಮುಸ್ಲಿಂ ನಾಯಕ ಪಕ್ಷದ ಅಧ್ಯಕ್ಷರಾಗುವುದು ಸಾಧ್ಯವೇ? ಕಾಮಾಲೆ ಕಣ್ಣಲ್ಲಿ ಕೆಂಡ ಸುರಿದುಕೊಂಡರೆ ಯಾರಿಗೆ ನಷ್ಟ ಜಮೀರ್? ಎಂದು ಜೆಡಿಎಸ್‌ ಸರಣಿ ಟ್ವೀಟ್‌ ಮಾಡಿದೆ.

ಇಬ್ರಾಹಿಂ ಅವರ ಪುತ್ರನ ಬಗ್ಗೆ ವಿಷಕಾರುವ ಕೆಟ್ಟ ಪ್ರಯತ್ನ ಮಾಡಿದ್ದೀರಿ. ಹುಮನಾಬಾದ್ ನಲ್ಲಿ ಯುವಕ ಸಿಎಂ ಫಯಾಜ್ ಗೆದ್ದೇ ಗೆಲ್ಲುತ್ತಾರೆ. ನಿಮಗೂ ಈ ವಿಷಯ ಚೆನ್ನಾಗಿ ಗೊತ್ತು. ಪಂಚರತ್ನ ರಥಯಾತ್ರೆ ಈ ಕ್ಷೇತ್ರದಲ್ಲಿ ಹೇಗೆ ಅಬ್ಬರಿಸಿತು ಎನ್ನುವ ಮಾಹಿತಿ ಪಡೆದುಕೊಳ್ಳಿ. ನಿಮ್ಮದೆ ಸಮುದಾಯದ ತರುಣನ ಮೇಲೆ ಈ ಪರಿಯ ಮತ್ಸರ ಏಕೆ ಜಮೀರ್? ಎಂದು ಜೆಡಿಎಸ್‌ ಪ್ರಶ್ನಿಸಿದೆ.

ಇಬ್ರಾಹಿಂ ಅವರನ್ನು ಕಾಂಗ್ರೆಸ್ ಪಕ್ಷದಲ್ಲಿ ಮುಗಿಸಲು ಹೊರಟಿದ್ದು ಸುಳ್ಳಾ? ನಿಮ್ಮ ರೀತಿ ಇಬ್ರಾಹಿಂ ಅವರು ರಾಜಕೀಯದಲ್ಲಿ ಸಭ್ಯತೆಯ ಎಲ್ಲೆ ಮೀರಿದವರಲ್ಲ. ಆದರೆ, ಸಭ್ಯತೆಯ ಗಂಧಗಾಳಿ ಗೊತ್ತಿಲ್ಲದ ನಿಮಗೆ ರಾಜಕೀಯ ಜನ್ಮಕೊಟ್ಟ ಮಾತೃಪಕ್ಷದ ಬಗ್ಗೆ ಇರುವ ಮತ್ಸರ ನಿಮ್ಮ ಕೊಳಕು ಮನಃಸ್ಥಿತಿಗೆ ಹಿಡಿದ ಕನ್ನಡಿ ಎಂದು ಜೆಡಿಎಸ್‌ ತಿಳಿಸಿದೆ.

ಇಬ್ರಾಹಿಂ ಅವರನ್ನು ಕಾಂಗ್ರೆಸ್ ನಲ್ಲಿ ಮುಗಿಸಲು ಷಡ್ಯಂತ್ರ ರೂಪಿಸಿದಂತೆ, ಈಗ ಅವರ ಮಗನ ವಿಷಯದಲ್ಲೂ ದುಷ್ಟತಂತ್ರ ಹೂಡಲು ಹೊರಟಿದ್ದೀರಿ. ಸಿದ್ದಹಸ್ತನ ಜತೆ ಸೇರಿ ಮುಸ್ಲಿಂ ನಾಯಕರನ್ನು ಒಬ್ಬೊಬ್ಬರನ್ನಾಗಿಯೇ ಮುಗಿಸಿದ ಮಿಸ್ಟರ್ ಜಮೀರ್, ಮುಸ್ಲಿಂ ಸಮುದಾಯಕ್ಕೆ ನಿಮಗಿಂತ ದೊಡ್ಡ ಶತ್ರು ಬೇರೆ ಯಾರೂ ಇಲ್ಲ. ಸಮುದಾಯಕ್ಕೆ ಈ ಸತ್ಯ ಅರ್ಥವಾಗಿದೆ ಎಂದು ಜೆಡಿಎಸ್‌ ಸರಣಿ ಟ್ವೀಟ್‌ ಮಾಡಿದೆ.