ಕನ್ನಡ ಸುದ್ದಿ  /  Karnataka  /  Jds To Protest Against Bjp Governement Over Hindi Diwas Celebration In Karnataka

Hindi Diwas: ಹಿಂದಿ ದಿವಸ್‌ಗೆ ಸಿಡಿದೆದ್ದ ಜೆಡಿಎಸ್:‌ ಒತ್ತಾಯದ ಹಿಂದಿ ಹೇರಿಕೆ ವಿರುದ್ಧ ದಳದಿಂದ ಪ್ರತಿಭಟನೆಯ ದಾಳ!

ರಾಜ್ಯದಲ್ಲಿ ಹಿಂದಿ ದಿವಸ್ ಆಚರಣೆಗೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಜೆಡಿಎಸ್‌, ಇಂದು(ಸೆ.14-ಬುಧವಾರ) ರಾಜ್ಯಾದ್ಯಂತ ಪ್ರತಭಟನೆ ನಡೆಸಲು ನಿರ್ಧರಿಸಿದೆ. ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ನೇತೃತ್ವದಲ್ಲಿ, ಹಿಂದಿ ದಿವಸ್‌ ಆಚರಣೆ ವಿರುದ್ಧ ಪ್ರತಿಭಟನೆ ನಡೆಸಲಾಗುವುದು ಎಂದು ಜೆಡಿಎಸ್‌ ಸ್ಪಷ್ಟಪಡಿಸಿದೆ. ಬಲವಂತದ ಹಿಂದಿ ದಿವಸ್ ಆಚರಣೆಗೆ ವಿರೋಧವಿದೆ ಎಂದು ಜೆಡಿಎಸ್‌ ಹೇಳಿದೆ.

ಎಚ್‌ಡಿ ಕುಮಾರಸ್ವಾಮಿ (ಸಂಗ್ರಹ ಚಿತ್ರ)
ಎಚ್‌ಡಿ ಕುಮಾರಸ್ವಾಮಿ (ಸಂಗ್ರಹ ಚಿತ್ರ) (Verified Twitter)

ಬೆಂಗಳೂರು: ರಾಜ್ಯದಲ್ಲಿ ಹಿಂದಿ ದಿವಸ್ ಆಚರಣೆಗೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಜೆಡಿಎಸ್‌, ಇಂದು(ಸೆ.14-ಬುಧವಾರ) ರಾಜ್ಯಾದ್ಯಂತ ಪ್ರತಭಟನೆ ನಡೆಸಲು ನಿರ್ಧರಿಸಿದೆ. ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ನೇತೃತ್ವದಲ್ಲಿ, ಹಿಂದಿ ದಿವಸ್‌ ಆಚರಣೆ ವಿರುದ್ಧ ಪ್ರತಿಭಟನೆ ನಡೆಸಲಾಗುವುದು ಎಂದು ಜೆಡಿಎಸ್‌ ಸ್ಪಷ್ಟಪಡಿಸಿದೆ.

ಬಲವಂತದ ಹಿಂದಿ ದಿವಸ್ ಆಚರಣೆಗೆ ವಿರೋಧವಿದೆ ಎಂದು ಹೇಳಿರುವ ಜೆಡಿಎಸ್‌, ರಾಜ್ಯ ಬಿಜೆಪಿ ಸರ್ಕಾರ ಜನಸಾಮಾನ್ಯರ ಮೇಲೆ ಒತ್ಥಾಯಪೂರ್ವಕವಾಗಿ ಹಿಂದಿ ಹೇರಲು ಪ್ರಯತ್ನಿಸುತ್ತಿದೆ ಎಂದು ಕಿಡಿಕಾರಿದೆ. ರಾಜಧಾನಿ ಬೆಂಗಳೂರಿನಲ್ಲಿರುವ ಜೆಡಿಎಸ್ ಕಚೇರಿ ಜೆಪಿ ಭವನದ ಆವರಣದಲ್ಲಿ, ಹಿಂದಿ ದಿವಸ್ ಆಚರಣೆ ವಿರೋಧಿಸಿ ಪ್ರತಿಭಟನೆ ನಡೆಸುವುದಾಗಿ ಜೆಡಿಎಸ್‌ ಹೇಳಿದೆ.

ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರಗಳು ಒತ್ತಾಯಪೂರ್ವಕವಾಗಿ ರಾಜ್ಯದಲ್ಲಿ ಹಿಂದಿ ಹೇರಿಕೆ ಮಾಡುತ್ತಿವೆ. ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ಹಿಂದಿ ದಿನ ಆಚರಣೆ ಮಾಡಬಾರದು. ದೇಶದ ಇತರ ಭಾಷೆಗಳಂತೆ ಹಿಂದಿ ಕೂಡ ಒಂದು ಭಾಷೆಯಷ್ಟೇ ಎಂದು ಜೆಡಿಎಸ್‌ ಪ್ರತಿಪಾದಿಸಿದೆ.

ಹಿಂದಿ ದಿವಸ್‌ ಆಚರಣೆ ವಿರೋಧಿಸಿ ಕೆಲ ದಿನಗಳ ಹಿಂದಷ್ಟೇ ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದದರು. ಒತ್ತಾಯದ ಹಿಂದಿ ದಿನ ಆಚರಣೆಗೆ ಅವಕಾಶ ನೀಡದಂತೆ ಎಚ್‌ಡಿ ಕುಮಾರಸ್ವಾಮಿ ಪತ್ರ ಮುಖೇನ ಒತ್ತಾಯಿಸಿದ್ದರು.

ʼʼರಾಷ್ಟ್ರೀಯ ಪಕ್ಷಗಳು ಆರಂಭದಿಂದಲೂ ಹಿಂದಿ ಭಾಷೆಯನ್ನು ದೇಶದ ಹಿಂದಿಯೇತರ ರಾಜ್ಯಗಳ ಮೇಲೆ ಹೇರಿಕೆ ಮಾಡುತ್ತಾ ಬಂದಿವೆ. ಈ ನಿಲುವನ್ನು ಪ್ರಾದೇಶಿಕ ಪಕ್ಷವಾದ ಜಾತ್ಯತೀತ ಜನತಾದಳ ಬಲವಾಗಿ ವಿರೋಧಿಸುತ್ತದೆ, ಬಲವಂತವಾಗಿ ಯಾವುದೇ ಒಂದು ಭಾಷೆಯನ್ನು ಹೇರಿಕೆ ಮಾಡುವುದು ಪ್ರಾದೇಶಿಕ ಅಸಮಾನತೆಯ ಸಂಕೇತ. ಸೆಪ್ಟೆಂಬರ್ 14 ರಂದು ಯಾವುದೇ ಕಾರಣಕ್ಕೂ ಕರ್ನಾಟಕದಲ್ಲಿ ಹಿಂದಿ ದಿವಸ್‌ ಆಚರಣೆ ಮಾಡಬಾರದು. ಕನ್ನಡಿಗರ ತೆರಿಗೆ ಹಣ ಕನ್ನಡಿಗರ ಅಭಿವೃದ್ಧಿಗೆ ವಿನಿಯೋಗಿಸಬೇಕೆ ಹೊರತು, ಯಾವುದೋ ಅನ್ಯ ಭಾಷೆಯ ಪ್ರಚಾರಕ್ಕಾಗಿ ಅಲ್ಲ..ʼʼಎಂದು ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ತಮ್ಮ ಪತ್ರದಲ್ಲಿ ಆಕ್ರೋಶ ಹೊರಹಾಕಿದ್ದರು.

ಕರ್ನಾಟಕದಲ್ಲಿ ಹಿಂದಿ ದಿವಸ್ ಆಚರಣೆಗೆ ಕನ್ನಡಪರ ಸಂಘಟನೆಗಳಿಂದಲೂ ತೀವ್ರ ವಿರೋಧ ವ್ಯಕ್ತವಾಗಿದೆ. ರಾಜ್ಯ ಸರ್ಕಾರದಿಂದ ಒತ್ತಾಯಪೂರ್ವಕವಾಗಿ ಹಿಂದಿ ಹೇರಿಕೆ ನಡೆದಿದೆ. ಕೂಡಲೇ ಹಿಂದಿ ದಿವಸ್ ಆಚರಣೆ ಕೈಬಿಡಬೇಕು ಎಂದು ಕನ್ನಡಪರ ಸಂಘಟನೆಗಳು ಒತ್ತಾಯಿಸಿವೆ.

ಒಟ್ಟಿನಲ್ಲಿ ಜೆಡಿಎಸ್‌ ಹಿಂದಿ ದಿವಸ್‌ ಆಚರಣೆ ವಿರುದ್ಧ ಸಿಡಿದೆದ್ದಿದ್ದು, ಬಲವಂತದ ಹಿಂದಿ ದಿವಸ್‌ ಆಚರಣೆಯಿಂದ ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆ ಬರಲಿದೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಅಲ್ಲದೇ ಬಲವಂತದ ಹಿಂದಿ ದಿವಸ್‌ ಆಚರಣೆ ವಿರುದ್ಧ ಪ್ರತಿಭಟನೆ ಹಾದಿಯನ್ನೂ ಹಿಡಿದಿದೆ.