ಕನ್ನಡ ಸುದ್ದಿ  /  Karnataka  /  Jds Yet Again Attacks Bjp Over Not Inviting Former Pm Hd Deve Gowda To Kempegoda Statue Event

JDS Hits Back BJP: ಸರ್ಕಾರದ ಶಿಷ್ಟಾಚಾರದ ಲೋಪಕ್ಕೆ ಬಿಜೆಪಿ ಏಕೆ ಉತ್ತರಿಸುತ್ತಿದೆ?: ಬಂದೂಕು ಹೆಗಲೇರಿಸಿದ ಜೆಡಿಎಸ್!‌

ಕೆಂಪೇಗೌಡ ಪ್ರತಿಮೆ ಉದ್ಘಾಟನಾ ಸಮಾರಂಭಕ್ಕೆ ಮಜಿ ಪ್ರಧಾನಿ ಹೆಚ್‌ಡಿ ದೇವೇಗೌಡ ಅವರಿಗೆ ಆಹ್ವಾನ ನೀಡಿರಲಿಲ್ಲ ಎಂದು ಆರೋಪಿಸುತ್ತಿರುವ ಜೆಡಿಎಸ್‌, ಈ ಕುರಿತು ತಾನು ಕೇಳಿರುವ ಪ್ರಶ್ನೆಗಳಿಗೆ ಬಿಜೆಪಿ ಏಕೆ ಉತ್ತರಿಸುತ್ತಿದೆ ಎಂದು ಪ್ರಶ್ನಿಸಿದೆ. ಮುಖ್ಯಮಂತ್ರಿ ಮತ್ತು ಸರ್ಕಾರದ ಮುಖ್ಯ ಕಾರ್ಯದರ್ಶಿಯಿಂದ ಈ ಕುಎರಿತು ವಿವರಣೆ ಬಯಸಿರುವುದಾಗಿ ಜೆಡಿಎಸ್‌ ಇದೇ ವೇಳೆ ಸ್ಪಷ್ಟಪಡಿಸಿದೆ.

ಕೆಂಪೇಗೌಡ ಪ್ರತಿಮೆ (ಸಂಗ್ರಹ ಚಿತ್ರ)
ಕೆಂಪೇಗೌಡ ಪ್ರತಿಮೆ (ಸಂಗ್ರಹ ಚಿತ್ರ) (ANI)

ಬೆಂಗಳೂರು: ಕಳೆದ ನವೆಂಬರ್‌ 11(ಶುಕ್ರವಾರ)ರಂದು ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 108 ಅಡಿ ಎತ್ತರದ ಕಂಚಿನ ಕೆಂಪೇಗೌಡ ಪ್ರತಿಮೆಯನ್ನು ಉದ್ಘಾಟಿಸಿದ್ದಾರೆ. ಆದರೆ ಈ ಕಾರ್ಯಕ್ರಮಕ್ಕೆ ಮಾಜಿ ಪ್ರಧಾನಮಂತ್ರಿ ಹೆಚ್‌ಡಿ ದೇವೇಗೌಡ ಅವರಿಗೆ ಆಹ್ವಾನ ನೀಡಿರಲಿಲ್ಲ ಎಂದು ಜೆಡಿಎಸ್‌ ಆರೋಪಿಸಿದೆ.

ಇದಕ್ಕೆ ಪ್ರತಿಯಾಗಿ ಆಡಳಿತಾರೂಢ ಬಿಜೆಪಿ, ಸರ್ಕಾರವು ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡ ಅವರಿಗೆ ಆಹ್ವಾನ ಪತ್ರಿಕೆ ಕಳುಹಿಸಿತ್ತು ಎಂದು ಸ್ಪಷ್ಟಪಡಿಸಿದೆ. ಅಲ್ಲದೇ ಖುದ್ದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ದೂರವಾಣಿ ಕರೆ ಮಾಡಿ ಹೆಚ್‌ಡಿ ದೇವೇಗೌಡ ಅವರನ್ನು ಆಹ್ವಾನಿಸಿದ್ದಾರೆ ಎಂದು ಬಿಜೆಪಿ ಪ್ರತಿಪಾದಿಸಿದೆ.

ಆದರೆ ಇಷ್ಟಕ್ಕೆ ಸುಮ್ಮನಾಗದ ಜೆಡಿಎಸ್‌, ಸರ್ಕಾರ ಎಸಗಿದ ಲೋಪಕ್ಕೆ ರಾಜಕೀಯ ಪಕ್ಷವಾಗಿರುವ ಬಿಜೆಪಿ ಉತ್ತರಿಸುತ್ತಿರುವುದು ಏಕೆ ಎಂದು ತಿಳಿಯುತ್ತಿಲ್ಲ ಎಂದು ಲೇವಡಿ ಮಾಡಿದೆ. ಈ ಕುರಿತು ಸರಣಿ ಟ್ವೀಟ್‌ ಮಾಡಿರುವ ಜೆಡಿಎಸ್‌, ಆಡಳಿತಾರೂಢ ಬಿಜೆಪಿಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ.

'ನಾಡಪ್ರಭುಗಳ ಪ್ರತಿಮೆ ಅನಾವರಣಕ್ಕೆ ಮಾಜಿ ಪ್ರಧಾನಿಗಳಾದ ಹೆಚ್‌ಡಿ ದೇವೇಗೌಡ ಅವರನ್ನು ಆಹ್ವಾನಿಸದೇ, ರಾಜ್ಯ ಬಿಜೆಪಿ ಸರ್ಕಾರೆ ಶಿಷ್ಟಾಚಾರ ಲೋಪ ಎಸಗಿದೆ. ಈ ಕುರಿತು ನಾವು ಕೇಳೀರುವ ಪ್ರಶ್ನೆಗಳಿಗೆ ಮುಖ್ಯಮಂತ್ರಿ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿ ಉತ್ತರ ನೀಡಬೇಕು. ಆದರೆ ಇದಕ್ಕೆ ಬಿಜೆಪಿ ಏಕೆ ಉತ್ತರಿಸುತ್ತಿದೆ ಎಂಬುದು ತಿಳಿಯುತ್ತಿಲ್ಲ' ಎಂದು ಜೆಡಿಎಸ್‌ ಹರಿಹಾಯ್ದಿದೆ.

'ಈ ವಿವಾದದ ಕುರಿತು ಬಿಜೆಪಿ ಉತ್ತರಿಸಲು ಅದು ಕೇಶವಕೃಪ(ಆರ್‌ಎಸ್‌ಎಸ್‌ ಕಚೇರಿ)ದ ಕಾರ್ಯಕ್ರಮವಾಗಿರಲಿಲ್ಲ. ಹೆಚ್‌ಡಿ ದೇವೇಗೌಡ ಅವರಿಗೆ ಆಹ್ವಾನ ನೀಡದೇ ನಾಡಿನ ಜನತೆಗೆ ಮಾಡಿದ ಅಪಮಾನಕ್ಕೆ ರಾಜ್ಯ ಸರ್ಕಾರ ಉತ್ತರ ನೀಡಲೇಬೇಕು' ಎಂದು ಜೆಡಿಎಸ್‌ ಒತ್ತಾಯಿಸಿದೆ.

'ಕಮಲಕ್ಕೆ ಕಾಮಾಲೆ ಕಣ್ಣು ಎನ್ನುವುದು ನಾಟಕವೋ, ಬೂಟಕವೋ ತಿಳಿಯದಾಗಿದೆ ಜಾತಿವಾರು ಮತಗಳ ಧ್ರುವೀಕರಣಕ್ಕೆ ಹೊರಟವರು ಯಾರು? ಕೆಂಪೇಗೌಡರನ್ನು ರಾಜಕೀಯಕ್ಕೆ ಎಳೆದು ತಂದವರು ಯಾರು? ಸಂತ ಕನಕದಾಸರ ʼಕುಲ ಕುಲವೆಂದು ಹೊಡೆದಾಡದಿರಿ..ʼ ಪದವನ್ನು ಹೇಳುತ್ತಲೇ ʼಕುಲಕಿಚ್ಚಿನ ರಾಜಕೀಯʼ ಮಾಡಿದವರು ಯಾರು? ಅಂಗೈ ಹುಣ್ಣಿಗೆ ಕನ್ನಡಿ ಯಾಕೆ?' ಎಂದು ಜೆಡಿಎಸ್‌ ಟ್ವೀಟ್‌ ಮೂಲಕ ಪ್ರಶ್ನಿಸಿದೆ.

'ಸಂಸ್ಕಾರವೇ ಗೊತ್ತಿಲ್ಲದ ಪಕ್ಷಕ್ಕೆ ಶಿಷ್ಟಾಚಾರ ಮಾತೇಕೆ? ಅದು ತನಗಿಲ್ಲ ಎಂದು ಬಿಜೆಪಿ ಈಗಾಗಲೇ ಸಾಬೀತುಪಡಿಸಿದೆ. ಕನ್ನಡದ ಆಚಾರ-ವಿಚಾರಕ್ಕೆ ಕೊಡಲಿ ಪೆಟ್ಟು ಹಾಕುತ್ತಿರುವ ಆ ಪಕ್ಷ, ಕನ್ನಡನಾಡಿಗೆ ಬಹುದೊಡ್ಡ ಬೆದರಿಕೆ' ಎಂದು ಜೆಡಿಎಸ್‌ ಟ್ವೀಟ್‌ ಮೂಲಕ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ.

IPL_Entry_Point