ಲೂಟಿ ಸ್ಪರ್ಧೆಯಲ್ಲಿ ಪೈಪೋಟಿಗೆ ಬಿದ್ದಿರುವ, ಅಪಘಾತಗಳಾದಾಗ ನಾಟಕ ಆಡುವ ಜನಪ್ರತಿನಿಧಿಗಳೇ ಈಗ ಎಲ್ಲಿದ್ದೀರಿ: ರಾಜೀವ್ ಹೆಗಡೆ ಬರಹ-journalist rajeev hegde questioned the silence of the representatives on the state of national highways in karnataka prs ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  ಲೂಟಿ ಸ್ಪರ್ಧೆಯಲ್ಲಿ ಪೈಪೋಟಿಗೆ ಬಿದ್ದಿರುವ, ಅಪಘಾತಗಳಾದಾಗ ನಾಟಕ ಆಡುವ ಜನಪ್ರತಿನಿಧಿಗಳೇ ಈಗ ಎಲ್ಲಿದ್ದೀರಿ: ರಾಜೀವ್ ಹೆಗಡೆ ಬರಹ

ಲೂಟಿ ಸ್ಪರ್ಧೆಯಲ್ಲಿ ಪೈಪೋಟಿಗೆ ಬಿದ್ದಿರುವ, ಅಪಘಾತಗಳಾದಾಗ ನಾಟಕ ಆಡುವ ಜನಪ್ರತಿನಿಧಿಗಳೇ ಈಗ ಎಲ್ಲಿದ್ದೀರಿ: ರಾಜೀವ್ ಹೆಗಡೆ ಬರಹ

NHAI: ಪ್ರಸ್ತುತ ರಾಷ್ಟ್ರೀಯ ಹೆದ್ದಾರಿಗಳ ಪರಿಸ್ಥಿತಿ ಹೇಗಿದೆ? ಎಷ್ಟು ಭೀಕರವಾಗಿವೆ, ರಸ್ತೆಗಳ ತುಂಬೆಲ್ಲಾ ಗುಂಡಿಗಳೇ ತುಂಬಿದ್ದರೂ ಟೋಲ್​​ ಮೂಲಕ ದೋಚುತ್ತಿರುವ ಸ್ಥಿತಿಯ ಕುರಿತು ಪತ್ರಕರ್ತ ರಾಜೀವ್ ಹೆಗಡೆ ಅವರು ವಿವರವಾಗಿ ಬರೆದಿದ್ದಾರೆ.

ರಾಷ್ಟ್ರೀಯ ಹೆದ್ದಾರಿ - ಸಾಂದರ್ಭಿಕ ಚಿತ್ರ
ರಾಷ್ಟ್ರೀಯ ಹೆದ್ದಾರಿ - ಸಾಂದರ್ಭಿಕ ಚಿತ್ರ (Rajeev hegde facebook)

ಪ್ರಸ್ತುತ ರಾಷ್ಟ್ರೀಯ ಹೆದ್ದಾರಿ ಪರಿಸ್ಥಿತಿ ಘನಘೋರ ಸ್ಥಿತಿಗೆ ತಲುಪಿವೆ. ಎಲ್ಲೆಂದರಲ್ಲಿ ಗುಂಡಿಗಳು ಬಿದ್ದಿವೆ. ಇದರಿಂದ ನಿರಂತರ ರಸ್ತೆ ಅಪಘಾತಗಳು ಆಗುತ್ತಿವೆ. ಕೆಲವರು ಬದುಕುಳಿದಿದ್ದರೆ, ಕೆಲವರು ಜೀವ ಕಳೆದುಕೊಂಡಿದ್ದಾರೆ. ಇದು ಮುಂದುವರೆದರೂ ಅಚ್ಚರಿ ಇಲ್ಲ. ಆದರೆ ಹಾಗಾಗುವುದು ಬೇಡ. ಆದರೂ ಟೋಲ್​​​ ವಸೂಲಿ ನಿಲ್ಲುತ್ತಿಲ್ಲ. ಇಷ್ಟಾದರೂ ರಾಜ್ಯ ರಸ್ತೆಗಳ ರಾಜ್ಯ ರಸ್ತೆಗಳ ದುಃಸ್ಥಿತಿ ಜನಪ್ರತಿನಿಧಿಗಳು, ಮಾಧ್ಯಮಗಳ ಕಣ್ಣಿಗೆ ಕಾಣಿಸುತ್ತಿಲ್ಲವೇ ಎಂಬುದು ವಿಪರ್ಯಾಸವೇ ಸರಿ. ಲೂಟಿ ಸ್ಪರ್ಧೆಯಲ್ಲಿ ಪೈಪೋಟಿಗೆ ಬಿದ್ದಿರುವ, ಅಪಘಾತಗಳಾದಾಗ ನಾಟಕ ಆಡುವ ಜನಪ್ರತಿನಿಧಿಗಳೇ ಈಗ ಎಲ್ಲಿದ್ದೀರಿ ಎಂದು ಪತ್ರಕರ್ತ ರಾಜೀವ್ ಹೆಗಡೆ ಅವರು ತಮ್ಮ ಫೇಸ್​ಬುಕ್​ನಲ್ಲಿ ಪೋಸ್ಟ್ ಮೂಲಕ ಪ್ರಶ್ನಿಸಿದ್ದಾರೆ. ಅವರ ಅನುಭವವನ್ನೇ ಇಲ್ಲಿ ಬರೆದಿದ್ದಾರೆ.

ರಾಣೆಬೆನ್ನೂರಿನಿಂದ ತುಮಕೂರಿಗೆ ಬರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವರೆಗೆ ನಾಲ್ಕು ಡೈವರ್ಶನ್‌ಗಳಿವೆ. 300 ರೂಪಾಯಿಯಷ್ಟು ಟೋಲ್‌ ಕಟ್ಟಿಕೊಂಡು ಎರಡು ಡೈವರ್ಶನ್‌ ದಾಟಲು ಬರೋಬ್ಬರಿ ಒಂದು ಗಂಟೆ ಬೇಕಾಯಿತು. ತುಮಕೂರಿನ ಬಳಿ ಇನ್ನೆರಡು ಡೈವರ್ಶನ್‌ನಲ್ಲಿ ಅದಕ್ಕಿಂತ ಹೆಚ್ಚಿನ ಸಮಯ ಬೇಕಾಗುತ್ತದೆ ಎನ್ನುವುದನ್ನು ಗೂಗಲ್‌ ಹೇಳುತ್ತಿದ್ದಂತೆ, ಯಾವುದೋ ಹಳ್ಳಿಯ ರಸ್ತೆ ಮೂಲಕ ಬೆಂಗಳೂರು ಬಂದು ತಲುಪಿದೆ. ಅಲ್ಲಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಟೋಲ್‌ ತುಂಬಿಕೊಂಡು ಒಟ್ಟಾರೆ ಪ್ರಯಾಣದಲ್ಲಿ ಎರಡು ಗಂಟೆ ವಿಳಂಬದ ಜತೆಗೆ, ಸಣ್ಣ ಪುಟ್ಟ ರಸ್ತೆಗಳಲ್ಲೆಲ್ಲ ಹೊಂಡ ಹಾರಿಸಿಕೊಂಡು ʼಸುಖಕರʼ ಪ್ರಯಾಣ ಮಾಡುವಂತಾಯಿತು.

ನಮ್ಮ ಸರ್ಕಾರ ಹೇಳಿದಂತೆ 100 ಕಿಮೀ/ಗಂಟೆ ವೇಗದಲ್ಲಿ ಕ್ರೂಸ್‌ ಕಂಟ್ರೋಲರ್‌ ಹಾಕಿಕೊಂಡು ಎಲ್ಲಾ ನಿಯಮಗಳನ್ನು ಪಾಲಿಸಿಕೊಂಡು ಬಂದಿದ್ದಕ್ಕೆ ಸಿಕ್ಕ ಉಡುಗೊರೆಗಳಿವು. ರಾಜ್ಯದ ಎಲ್ಲ ರೀತಿಯ ಹೆದ್ದಾರಿಗಳ ಸ್ಥಿತಿ ಎಷ್ಟು ಭೀಕರವಾಗಿದೆ ಎಂದರೆ, ನನ್ನ ಇಷ್ಟು ವರ್ಷದ ಪಯಣದಲ್ಲಿ ಮೊದಲ ಬಾರಿಗೆ ಇಷ್ಟೊಂದು ಸಂಖ್ಯೆಯ ಕಾರುಗಳ ಟೈರ್‌ ಪಂಕ್ಚರ್‌ ಆಗಿ ರಸ್ತೆ ಬದಿಯಲ್ಲಿ ನಿಂತುಕೊಂಡಿರುವುದನ್ನು ನೋಡಿದೆ. ನಮ್ಮ ರಾಜ್ಯದ ರಸ್ತೆಗಳ ಹೊಂಡಗಳನ್ನು ಹಾರಿಸಿಕೊಂಡು, ಹೆದ್ದಾರಿಗೆ ಬಂದು ಎಲ್ಲ ನಿಯಮ ಪಾಲಿಸಿ ಟೋಲ್‌ ಕೊಟ್ಟರೆ, ಇಲ್ಲಿಯೂ ಅದೇ ಹೊಂಡದ ರಸ್ತೆಗಳೇ ತುಂಬಿವೆ.

ಅದರ ಜೊತೆಗೆ ವರ್ಷಗಳಿಂದ ನಡೆಯುತ್ತಿರುವ ಕಾಮಗಾರಿ ಹಾಗೆಯೇ ನೆನೆಗುದಿಗೆ ಬಿದ್ದಿದೆ. ಇಲ್ಲೆಲ್ಲ ಪ್ರತಿ ದಿನ ಅರ್ಧ, ಒಂದು ಗಂಟೆ ಸಂಚಾರ ವ್ಯತ್ಯಯವಾಗುತ್ತಲೇ ಇದೆ. ಆದಾಗ್ಯೂ ಕಾಮಗಾರಿ ನಡೆಯುವ ವೇಳೆ ಟೋಲ್‌ ಸಂಗ್ರಹಿಸುವ ದಂಧೆಗೆ ಮಾತ್ರ ಕಡಿವಾಣ ಹಾಕುವವರಿಲ್ಲ. ನಾವು 100 ಕಿಮೀ ವೇಗವನ್ನು ದಾಟಿದ ಕೂಡಲೇ, ಕೆಲವೆಡೆ ಅದಕ್ಕಿಂತಲೂ ಕಡಿಮೆ ವೇಗಕ್ಕೂ ದಂಡ ಹಾಕಿ ಹಣ ವಸೂಲಿ ಮಾಡಲು ಈ ಸರ್ಕಾರ ತಯಾರಾಗಿ ನಿಂತಿದೆ. ಆದರೆ ಇದೇ ರಸ್ತೆಯಲ್ಲಿ ನಮಗಾಗುವ ಕಿರಿಕಿರಿಯನ್ನು ಕೇಳವವರು ಯಾರೂ ಇಲ್ಲ.

ಜನಪ್ರತಿನಿಧಿಗಳು ಎಲ್ಲಿದ್ದಾರೆ?

ಯಾವುದೋ ಒಂದು ಭೀಕರ ಘಟನೆಗಳು ನಡೆದಾಗ ಎಲ್ಲರೂ ಮೊಸಳೆ ಕಣ್ಣೀರು ಸುರಿಸಿಕೊಂಡು ಬರುತ್ತಾರೆ. ಟೋಲ್‌ನಲ್ಲಿ ಪುಕ್ಕಟೆ ಸಂಚರಿಸುವರಿಗೆ ಪ್ರತ್ಯೇಕ ವಿಐಪಿ ಲೇನ್‌ ಮಾಡಿದ ಬಳಿಕ, ಹೆದ್ದಾರಿಯಲ್ಲಿ ಪ್ರತ್ಯೇಕ ಲೇನ್‌ ಬೇಕೆಂದು ವಿಧಾನಸಭೆಯಲ್ಲಿ ಮಾತನಾಡುವ ದುರಹಂಕಾರವು ನಮ್ಮ ಜನಪ್ರತಿನಿಧಿಗಳಿಗಿದೆ. ಆದರೆ ಇದೇ ರಸ್ತೆ ಹಾಗೂ ಟೋಲ್‌ನಲ್ಲಿ ಜನಸಾಮಾನ್ಯರು ಗಂಟೆಗಟ್ಟಲೇ ಪ್ರತಿದಿನ ಕಾಯುತ್ತಿದ್ದರೂ, ರಸ್ತೆ ತುಂಬೆಲ್ಲ ಹೊಂಡಗಳಿದ್ದರೂ ಈ ಲಜ್ಜೆಗೆಟ್ಟ ಜನಪ್ರತಿನಿಧಿಗಳಿಗೆ ಕಾಣಿಸುವುದೇ ಇಲ್ಲ. ಕಿತ್ತು ಹೋದ ವಿಚಾರಗಳಿಗೆ ಪ್ರತಿಭಟನೆ, ಧರಣಿ ಮಾಡುವ ಇವರೆಲ್ಲ, ಜನರ ಸಂಕಷ್ಟಗಳಿಗಾಗಿ ಧ್ವನಿ ಎತ್ತುವುದೇ ಇಲ್ಲ. ಅಂದ್ಹಾಗೆ ಈ ರಾಜ್ಯದ ಮುಕ್ಕಾಲು ಭಾಗ ಜನಪ್ರತಿನಿಧಿಗಳು ಇದೇ ರಸ್ತೆ ಮಾರ್ಗದ ಮೂಲಕ ಬೆಂಗಳೂರು ತಲುಪಬೇಕಾಗುತ್ತದೆ. ಆದರೆ ಇವರಿಗೆಲ್ಲ ಅಧಿಕಾರದ ಮದವೇರಿದೆ ಅಥವಾ ಜನರ ಕಷ್ಟವೇನು ಎನ್ನುವ ಅರಿವಿಲ್ಲದಂತಾಗಿದೆ.

ಲೂಟಿ ಹೊಡೆದು ಕೋಟಿ ಕೋಟಿ ಬಾಚಿಡುವ ದರೋಡೆಕೋರರ ವಿರುದ್ಧದ ಒಂದು ತನಿಖೆಯಾದರೆ ಸಂವಿಧಾನ ನಾಶ ಎನ್ನುವ ಮಟ್ಟಿಗೆ ಜನಪ್ರತಿನಿಧಿಗಳು ಕಿರುಚಾಡುತ್ತಾರೆ. ಆದರೆ ಜನಸಾಮಾನ್ಯನಿಗೆ ಪ್ರತಿ ದಿನ, ಪ್ರತಿ ಕ್ಷಣ ಗೋಳು ಹೊಯ್ದುಕೊಳ್ಳುವುದು ಪ್ರಜಾಪ್ರಭುತ್ವದ ನಿಜವಾದ ಕಗ್ಗೊಲೆ ಹಾಗೂ ಸಂವಿಧಾನಕ್ಕೆ ಮಾಡುತ್ತಿರುವ ದ್ರೋಹ ಎನ್ನುವುದು ಗೊತ್ತಾಗುತ್ತಲೇ ಇಲ್ಲ. ಇಂದಿನ ಪ್ರಜಾಪ್ರಭುತ್ವವು ಪ್ರಜೆಗಳಿಗಾಗಿ ಉಳಿದಿಲ್ಲ. ಬದಲಾಗಿ ಇಂತಹ ಲೂಟಿಕೋರ ಹಾಗೂ ಜನಸಾಮಾನ್ಯರ ಬಗ್ಗೆ ಕಾಳಜಿಯಿರದ ಜನಪ್ರತಿನಿಧಿಗಳ ಹಿತಾಸಕ್ತಿಗೆ ಇರುವ ಒಂದು ಕೂಟವಾಗಿದೆಯಷ್ಟೆ. ಇಲ್ಲವಾದಲ್ಲಿ ಕಳೆದ ಐದಾರು ತಿಂಗಳಿಂದ ತುಮಕೂರು-ಚಿತ್ರದುರ್ಗ ರಸ್ತೆಯಲ್ಲಿ ಆಗುತ್ತಿರುವ ಇಂತಹ ಹೊಲಸುಗಳು ಈ ಭಾಗದ ಜನಪ್ರತಿನಿಧಿಗಳ ಕಣ್ಣಿಗೆ ಬೀಳದಿರಲು ಸಾಧ್ಯವಿದೆಯೇ?

ಇದಕ್ಕಾಗಿಯೇ ತೆರಿಗೆ ಕಟ್ಟಲು ಬೇಸರ!

ಆದಾಯ ತೆರಿಗೆ ಸೇರಿಸಿ ಯಾವುದೇ ರೂಪದ ತೆರಿಗೆ ಕಟ್ಟಲು ನಮಗೆ ಬೇಸರವಿಲ್ಲ. ಆದರೆ ನಮ್ಮಿಂದ ಲೂಟಿ ಮಾಡಿಕೊಂಡು, ಇಂತಹ ದರಿದ್ರ ರಸ್ತೆ ಕೊಟ್ಟಾಗ ಬೇಸರವಾಗುತ್ತದೆ. ನಮ್ಮ ತೆರಿಗೆ, ಅದರ ಮೇಲೆ ಟೋಲ್‌ಗಳಿಗೆ ಯಾವುದೇ ಸಣ್ಣ ಗೌರವವೂ ಇಲ್ಲದಂತೆ ವರ್ತಿಸಿದಾಗ ಇಂತಹ ಜನಪ್ರತಿನಿಧಿಗಳು ಹಾಗೂ ಸರ್ಕಾರಕ್ಕಿಂತ ಕತ್ತೆಗಳು ಅದೆಷ್ಟೋ ವಾಸಿ ಎನಿಸಿಬಿಡುತ್ತದೆ. ಒಂದೊಮ್ಮೆ ಜನಪ್ರತಿನಿಧಿಗಳಿಗೆ ಕತ್ತೆಯಷ್ಟಾದರೂ ಸೂಕ್ಷ್ಮತೆ ಇದ್ದರೆ, ಇಂತಹ ಅವ್ಯವಸ್ಥೆಗಳು ಇರಲು ಸಾಧ್ಯವೇ ಇಲ್ಲ. ಹೀಗಾಗಿ ಕತ್ತೆಗೆ ಅವಮಾನ ಮಾಡಿದ್ದರೆ, ಆ ಬಡ ಪ್ರಾಣಿಯ ಕ್ಷಮೆ ಕೇಳುತ್ತೇನೆ. ಮುಂದಿನ ಬಾರಿಯಿಂದ ದಯವಿಟ್ಟು ಯಾರೂ ಕತ್ತೆಯ ಮೆರವಣಿಗೆ ಎಂದೆಲ್ಲ ಮಾಡಬೇಡಿ. ಬದಲಾಗಿ ಜನಸಾಮಾನ್ಯರ ನೋವು, ಗೋಳನ್ನು ಅರಿಯದ ಜನಪ್ರತಿನಿಧಿಗಳ ಮೆರವಣಿಗೆ ಮಾಡೋಣ ಎಂದುಬಿಡಿ. ಆ ರೀತಿಯಲ್ಲಿ ನಾವು ಕತ್ತೆಗೆ ಗೌರವ ಸಲ್ಲಿಸಿದಂತಾಗುತ್ತದೆ.

ಓಪನ್‌ ಆಫರ್‌!

ರಾಜ್ಯವನ್ನು ಲೂಟಿ ಮಾಡುವ ಸ್ಪರ್ಧೆಯಲ್ಲಿ ಪ್ರಚಾರಕ್ಕೆ ತಾಕತ್ತು, ಧಮ್ಮು ಎಂದು ಮಾತನಾಡುವ ಜನಪ್ರತಿನಿಧಿಗಳು ನಮ್ಮ ರಸ್ತೆಗಳ ವಿಚಾರದಲ್ಲಿ ಒಂದು ಓಪನ್‌ ಆಫರ್‌ ಇದೆ. ನನ್ನದೇ ಕಾರಿನಲ್ಲಿ ರಾಜ್ಯದಲ್ಲಿ ಅವರು ಹೇಳಿದ ದಿಕ್ಕಿನಲ್ಲಿ 400 ಕಿಮೀ ಪ್ರಯಾಣಕ್ಕೆ ಹೋಗೋಣ. ಅರ್ಧ ದಾರಿ ನಾನು ಕಾರು ಚಲಾಯಿಸುತ್ತೇನೆ. ಇನ್ನರ್ಧ ದೂರವನ್ನು ನೀವು ಚಲಾಯಿಸಿ. ಪ್ರಯಾಣದ ಬಳಿಕ ಈ ದೇಶ, ರಾಜ್ಯ ಹಾಗೂ ಕ್ಷೇತ್ರವನ್ನು ಪ್ರತಿನಿಧಿಸುವರ ಬಗ್ಗೆ ನಿಮ್ಮ ಬಾಯಿಯಿಂದ ಬರುವ ಬೈಗುಳಗಳನ್ನು ಒಮ್ಮೆ ಕೇಳಿಸಿಕೊಳ್ಳುವ ಆಸೆಯಿದೆ.

ಮುರಿದು ಬಿದ್ದ ನಾಲ್ಕನೇ ಸ್ತಂಭ!

ಯಾವುದೇ ದೊಡ್ಡ ದುರ್ಘಟನೆಯಾಗುವವರೆಗೆ ಜನಸಾಮಾನ್ಯರ ಸಂಕಷ್ಟಗಳು ಮಾಧ್ಯಮಗಳಿಗೆ ಏಕೆ ಕಾಣಿಸುತ್ತಿಲ್ಲ ಎನ್ನುವುದು ಅರ್ಥವೇ ಆಗುತ್ತಿಲ್ಲ. ನಮ್ಮ ಹೆದ್ದಾರಿಗಳ ಸ್ಥಿತಿ ಇಷ್ಟೊಂದು ದಯನೀಯ ಹಂತಕ್ಕೆ ತಲುಪಿದ್ದರೂ, ಈ ಬಗ್ಗೆ ಏಕೆ ಸಾರ್ವಜನಿಕ ಅಭಿಪ್ರಾಯ ಮೂಡಿಸುವ ಪ್ರಯತ್ನಗಳನ್ನು ಮಾಧ್ಯಮ ಮಾಡುತ್ತಿಲ್ಲ. ನಮ್ಮ ರಸ್ತೆಗಳ ಬಗ್ಗೆ ದಿನವಿಡಿ ಅಭಿಯಾನಗಳನ್ನು ಮಾಧ್ಯಮಗಳು ಏಕೆ ಮಾಡುವುದಿಲ್ಲ? ಈ ಸಿದ್ದರಾಮಯ್ಯ, ಯಡಿಯೂರಪ್ಪ, ಡಿಕೆಶಿ, ಕುಮಾರಸ್ವಾಮಿಯ ಹಳಸಲು ಜಪವನ್ನು ಬಿಟ್ಟು ಜನರ ಕಷ್ಟಗಳಿಗೆ ಮಾಧ್ಯಮಗಳು ಕೂಡ ಸ್ಪಂದಿಸದಿದ್ದರೆ ಜನರು ಯಾರ ಬಳಿ ಹೋಗಬೇಕು? ಅದರಲ್ಲೂ ವಿಶೇಷವಾಗಿ ಕನ್ನಡ ಮಾಧ್ಯಮಗಳು, ಆಗಾಗ ಜನರಿಗೆ ಬೈಯ್ಯುವುದನ್ನು ನೋಡುತ್ತೇವೆ. ಜನರು ಮಾಧ್ಯಮಗಳಿಂದ ದೂರವಾಗಿಲ್ಲ.

ಮಾಧ್ಯಮಗಳು ಜನ ಸಾಮಾನ್ಯರ ಸಂಕಷ್ಟದಿಂದ ದೂರ ಸರಿದಿವೆ. ಹೀಗಾಗಿ ಅವರಿಗೂ ಮಾಧ್ಯಮದ ಮೇಲೆ ಆಸಕ್ತಿ ಹೋಗಿರಬಹುದು ಎನ್ನುವ ಇನ್ನೊಂದು ಆಯಾಮವನ್ನು ಏಕೇ ನೋಡುತ್ತಿಲ್ಲ? ರಾಜಕೀಯ ಕಿತ್ತಾಟಗಳಿಗೆ ಹೊರತಾಗಿ ಜನರ ಕಷ್ಟಕ್ಕೆ ಸ್ಪಂದಿಸುವ ಅಭಿಯಾನವನ್ನು ಮಾಡುವುದನ್ನೇ ಏಕೆ ಮರೆತಿದ್ದೇವೆ ಎನ್ನುವ ಪ್ರಾಮಾಣಿಕ ಪ್ರಶ್ನೆಯನ್ನು ಮಾಧ್ಯಮಗಳು ಕೇಳಿಕೊಳ್ಳಬೇಕಿದೆ. ಮಾಧ್ಯಮದಿಂದ ದೂರವಾದ ಬಳಿಕ ಇಂತಹ ಲೇಖನ ಬರೆಯುವುದು ಸುಲಭ ಎಂದು ಕೆಲವರು ಟೀಕಿಸಬಹುದು. ಆದರೆ ಇತ್ತೀಚಿನ ದಿನಗಳಲ್ಲಿ ರಾಜಕೀಯ ಹೊರತಾಗಿ ಜನಸಾಮಾನ್ಯರ ಪರ ಧ್ವನಿ ಎತ್ತಿದ ಪ್ರಾಮಾಣಿಕ ಅಭಿಯಾನದ ವಿಷಯ ಯಾವುದೆಂದು ಒಮ್ಮೆ ನೆನಪಿಸಿಕೊಳ್ಳಿ.

ಈ ಯಡಿಯೂರಪ್ಪ, ಸಿದ್ದರಾಮಯ್ಯ, ಡಿಕೆಶಿ, ಕುಮಾರಸ್ವಾಮಿ ಎಲ್ಲರೂ ಒಂದೇ ದೋಣಿಯಲ್ಲಿ ಸಾಗುವ ಚಾಣಾಕ್ಷ ಆರೋಪಿಗಳು. ಅವರ ನಾಟಕಕ್ಕೆ ಪರದೆ ಎಳೆಯುವ ಬದಲಿಗೆ, ಜನರ ಕಷ್ಟಕ್ಕೆ ಧ್ವನಿಯಾಗೋಣ ಬನ್ನಿ. ಅಕ್ಷರಶಃ ಮತಿಹೀನರಾಗಿರುವ ಜನಪ್ರತಿನಿಧಿಗಳು ಹಾಗೂ ಸರ್ಕಾರವನ್ನು ಬಡಿದೆಬ್ಬಿಸುವ ಕೆಲಸಕ್ಕೆ ದಯವಿಟ್ಟು ಕೈ ಜೋಡಿಸಿ.

ಕೊನೆಯದಾಗಿ: ಈ ಕ್ಷಣದಿಂದ ಈ ರಾಜ್ಯದ ಎಲ್ಲ ಸಚಿವರು, ಶಾಸಕರು, ಸಂಸದರು, ಹಿರಿಯ ಅಧಿಕಾರಿಗಳಿಗೆ ಚಾಲಕರನ್ನು ಕೊಡುವ ವ್ಯವಸ್ಥೆಗೆ ತೆರೆ ಎಳೆದುಬಿಡಿ. ಹಾಗೆಯೇ ಅವರವರ ಸ್ವಂತ ಕಾರುಗಳನ್ನೇ ಬಳಸುವಂತೆ ಸೂಚನೆ ನೀಡಿ, ಅದಕ್ಕೆ ಪೂರಕವಾದ ಹಣವನ್ನು ನೀಡಿ. ಹಾಗೆಯೇ ಈ ಎಲ್ಲ ಬೇಜವಾಬ್ದಾರಿ ಜನರಿಗೆ ರೈಲ್ವೆಯಲ್ಲಿ ಎಸಿ ಟಿಕೆಟ್‌ ಹಾಗೂ ವಿಮಾನ ಪ್ರಯಾಣದ ವೆಚ್ಚ ನೀಡುವುದನ್ನು ನಿಲ್ಲಿಸಿ. ಇಂತಹ ಆದೇಶ ಮಾಡಿದ ಮೂರು ತಿಂಗಳಲ್ಲಿ ಮೇಲೆ ಉಲ್ಲೇಖಿಸಿದ ಎಲ್ಲ ಕ್ರಮಗಳಿಗೆ ಒಂದಿಷ್ಟು ಪರಿಹಾರ ದೊರೆಯದಿದ್ದರೆ ನೀವು ಹೇಳಿದ ಹಾಗೆ ನಾನು ಕೇಳುತ್ತೇನೆ. ಜನಪ್ರತಿನಿಧಿಗಳು ನೆಲದ ಮೇಲೆ ಇಲ್ಲದಿರುವ ಪರಿಣಾಮವಿದು.

✍🏻ರಾಜೀವ ಹೆಗಡೆ ಬರಹ (ಫೇಸ್​ಬುಕ್ ಪೋಸ್ಟ್)