ರೇಣುಕಾಸ್ವಾಮಿ ಹತ್ಯೆ ಪ್ರಕರಣ; ದರ್ಶನ್ ಸೇರಿ 17 ಆರೋಪಿಗಳ ನ್ಯಾಯಾಂಗ ಬಂಧನ ಅವಧಿ ಸೆಪ್ಟೆಂಬರ್ 17ರವರೆಗೆ ವಿಸ್ತರಣೆ-judicial custody of 17 accused including darshan thoogudeepa extended till september 17 on renukaswamy murder case mrt ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  ರೇಣುಕಾಸ್ವಾಮಿ ಹತ್ಯೆ ಪ್ರಕರಣ; ದರ್ಶನ್ ಸೇರಿ 17 ಆರೋಪಿಗಳ ನ್ಯಾಯಾಂಗ ಬಂಧನ ಅವಧಿ ಸೆಪ್ಟೆಂಬರ್ 17ರವರೆಗೆ ವಿಸ್ತರಣೆ

ರೇಣುಕಾಸ್ವಾಮಿ ಹತ್ಯೆ ಪ್ರಕರಣ; ದರ್ಶನ್ ಸೇರಿ 17 ಆರೋಪಿಗಳ ನ್ಯಾಯಾಂಗ ಬಂಧನ ಅವಧಿ ಸೆಪ್ಟೆಂಬರ್ 17ರವರೆಗೆ ವಿಸ್ತರಣೆ

ರೇಣುಕಾಸ್ವಾಮಿ ಹತ್ಯೆ ಪ್ರಕರಣ ಸಂಬಂದ ನಟ ದರ್ಶನ್ ತೂಗುದೀಪ ಸೇರಿದಂತೆ 17 ಆರೋಪಿಗಳ ನ್ಯಾಯಾಂಗ ಬಂಧನ ಅವಧಿ ಸೆಪ್ಟೆಂಬರ್‌ 17ರವರೆಗೆ ವಿಸ್ತರಣೆಯಾಗಿದೆ. ಇದೇ ವೇಳೆ ಪೋಕ್ಸೋ ಪ್ರಕರಣದಡಿ ಚಿತ್ರದುರ್ಗ ಶಿವಮೂರ್ತಿ ಶರಣರ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದ್ದು, ಮುರುಘಾ ಮಠದ ಶರಣರಿಗೆ ಹಿನ್ನೆಡೆಯಾಗಿದೆ. (ವರದಿ: ಎಚ್ ಮಾರುತಿ).

ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಆರೋಪಿಗಳ ನ್ಯಾಯಾಂಗ ಬಂಧನ ಅವಧಿ ವಿಸ್ತರಣೆ
ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಆರೋಪಿಗಳ ನ್ಯಾಯಾಂಗ ಬಂಧನ ಅವಧಿ ವಿಸ್ತರಣೆ

ಬೆಂಗಳೂರು: ರಾಜ್ಯಾದ್ಯಂತ ತೀವ್ರ ಕುತೂಹಲ ಕೆರಳಿಸಿದ್ದ ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿರುವ ಚಿತ್ರನಟ ದರ್ಶನ್ ತೂಗುದೀಪ, ಅವರ ಆಪ್ತ ಗೆಳತಿ ಪವಿತ್ರಾಗೌಡ ಸೇರಿದಂತೆ 17 ಆರೋಪಿಗಳ ನ್ಯಾಯಾಂಗ ಬಂಧನದ ಅವಧಿಯನ್ನು ಸೆಪ್ಟೆಂಬರ್ 17ರವರೆಗೆ ವಿಸ್ತರಿಸಲಾಗಿದೆ. ಸೆ.13ರ ಶುಕ್ರವಾರ ವಿಚಾರಣೆ ನಡೆಸಿದ 24ನೇ ಎಸಿಎಂ ನ್ಯಾಯಾಲಯ ಈ ಆದೇಶ ಹೊರಡಿಸಿದೆ. ಎಲ್ಲ ಆರೋಪಿಗಳನ್ನು ವಿಡಿಯೊ ಕಾನ್ಸರೆನ್ಸ್ ಮೂಲಕ ಹಾಜರುಪಡಿಸಲಾಗಿತ್ತು.

ಬಳ್ಳಾರಿ ಕೇಂದ್ರ ಕಾರಾಗೃಹದಿಂದ ದರ್ಶನ್, ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ಪವಿತ್ರಾಗೌಡ ಹಾಗೂ ದೀಪಕ್, ತುಮಕೂರು ಜೈಲಿನಿಂದ ಕಾರ್ತಿಕ್, ನಿಖಿಲ್ ನಾಯಕ್, ಬೆಳಗಾವಿ ಜೈಲಿನಿಂದ ಪ್ರದೂಷ ಸೇರಿದಂತೆ ರಾಜ್ಯದ ಹಲವು ಕಾರಾಗೃಹಗಳಲ್ಲಿರುವ ಎಲ್ಲ 17 ಆರೋಪಿಗಳನ್ನು ವಿಡಿಯೊ ಕಾನ್ಸರೆನ್ಸ್ ಮೂಲಕ ನ್ಯಾಯಾಧೀಶರ ಎದುರು ಹಾಜರುಪಡಿಸಲಾಯಿತು.

ಆರೋಪಿಗಳ ಪರ ವಾದ ಮಂಡಿಸಿದ ವಕೀಲರು ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾಧಿಕಾರಿಗಳು ಇನ್ನೂ ಪೂರ್ಣ ಪ್ರಮಾಣದ ದೋಷಾರೋಪ ಪಟ್ಟಿ ಸಲ್ಲಿಸಿಲ್ಲ. ಇದುವರೆಗೂ ನ್ಯಾಯಾಲಯಕ್ಕೆ ತಾಂತ್ರಿಕ ಸಾಕ್ಷ್ಯಾಧಾರಗಳನ್ನು ಒದಗಿಸಿಲ್ಲ. ಅಪರಾಧ ದಂಡ ಸಂಹಿತೆ ಸೆಕ್ಷನ್ -164ರ ಅಡಿಯಲ್ಲಿ ಹೇಳಿಕೆ ನೀಡಿದ್ದವರ ಪ್ರಮಾಣೀಕೃತ ದಾಖಲಾತಿ ನೀಡಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಆಗ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಪ್ರಸನ್ನ ಕುಮಾರ್ ಮುಂದಿನ ವಾರ ನ್ಯಾಯಾಲಯಕ್ಕೆ ತಾಂತ್ರಿಕ ಸಾಕ್ಷಾಧಾರಗಳನ್ನು ತನಿಖಾಧಿಕಾರಿಗಳು ಸಲ್ಲಿಸಲಿದ್ದಾರೆ ಎಂದು ಮಾಹಿತಿ ನೀಡಿದರು. ತಾಂತ್ರಿಕ ಸಾಕ್ಷಾಧಾರಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದ ನಂತರ ಸೆಷನ್ಸ್ ನ್ಯಾಯಾಲಯಕ್ಕೆ ಪ್ರಕರಣ ವರ್ಗಾವಣೆ ಮಾಡುವಂತೆ ಆರೋಪಿಗಳ ಪರ ವಕೀಲರು ಮನವಿ ಮಾಡಿಕೊಂಡರು.

ವಾದ ಪ್ರತಿವಾದಗಳನ್ನು ಆಲಿಸಿದ ನ್ಯಾಯಾಧೀಶರು ಪ್ರಕರಣದ ವಿಚಾರಣೆಯನ್ನು ಮಂಗಳವಾರದವರೆಗೆ ಮುಂದೂಡಿ ಆದೇಶ ಹೊರಡಿಸಿದರು.

ಪೋಕ್ಸೋ ಪ್ರಕರಣ: ಚಿತ್ರದುರ್ಗ ಮುರುಘಾ ಮಠದ ಶಿವಮೂರ್ತಿ ಶರಣರ ಅರ್ಜಿ ವಜಾ

ಇಬ್ಬರು ಅಪ್ರಾಪ್ತೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಸಂತ್ರಸ್ತೆಯ ಹೇಳಿಕೆಯ ಭಾಗವನ್ನು ತೆಗೆದುಹಾಕಲು ನಿರ್ದೇಶಿಸಬೇಕು ಎಂದು ಚಿತ್ರದುರ್ಗದ ಮುರುಘಾ ಮಠದ ಪೀಠಾಧಿಪತಿ ಶಿವಮೂರ್ತಿ ಮುರುಘಾ ಶರಣರ ಮನವಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ಅವರು ಈ ಪ್ರಕರಣದ

ಆರೋಪಿಯೂ ಆಗಿದ್ದಾರೆ. ಈ ಸಂಬಂಧ 64 ವರ್ಷದ ಶಿವಮೂರ್ತಿ ಮುರುಘಾ ಶರಣರು ಬಿನ್ ಲೇಟ್ ಗುರುಮೂರ್ತಯ್ಯ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯ ವಿಚಾರಣೆ ನಡೆಸಿ ತೀರ್ಪನ್ನು ಕಾಯ್ದಿರಿಸಲಾಗಿತ್ತು. ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಶುಕ್ರವಾರ ತೀರ್ಪನ್ನು ಪ್ರಕಟಿಸಿತು.

ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಕ್ಕೆ ಸಂಬಂಧಿಸಿದಂತೆ ಸದ್ಯ ಚಿತ್ರದುರ್ಗ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಶಿವಮೂರ್ತಿ ಶರಣರ ವಿರುದ್ಧ ಭಾರತೀಯ ದಂಡ ಸಂಹಿತೆ- 1860ರ ಕಲಂ 376 (2) (ಎನ್), 376(3),504 ಪೋಕ್ಸೋ ಕಾಯಿದೆ -2012ರ ಅಡಿಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಾಗಿದೆ. ಈ ಪ್ರಕರಣ ಕುರಿತು ಚಿತ್ರದುರ್ಗ ಜಿಲ್ಲಾ 2ನೇ ಹೆಚ್ಚುವರಿ ಸೆಷೆನ್ಸ್ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ.

mysore-dasara_Entry_Point