ಪ್ರಜ್ವಲ್‌ ರೇವಣ್ಣ ಆದ ಮಾತ್ರಕ್ಕೆ ಕಾನೂನು ಬದಲಾಗುವುದಿಲ್ಲ, ನಿಮ್ಮ ವಿರುದ್ಧದ ಡಿಜಿಟಲ್‌ ಸಾಕ್ಷ್ಯಗಳು ಅಶ್ಲೀಲವಾಗಿವೆ -ಹೈಕೋರ್ಟ್
ಕನ್ನಡ ಸುದ್ದಿ  /  ಕರ್ನಾಟಕ  /  ಪ್ರಜ್ವಲ್‌ ರೇವಣ್ಣ ಆದ ಮಾತ್ರಕ್ಕೆ ಕಾನೂನು ಬದಲಾಗುವುದಿಲ್ಲ, ನಿಮ್ಮ ವಿರುದ್ಧದ ಡಿಜಿಟಲ್‌ ಸಾಕ್ಷ್ಯಗಳು ಅಶ್ಲೀಲವಾಗಿವೆ -ಹೈಕೋರ್ಟ್

ಪ್ರಜ್ವಲ್‌ ರೇವಣ್ಣ ಆದ ಮಾತ್ರಕ್ಕೆ ಕಾನೂನು ಬದಲಾಗುವುದಿಲ್ಲ, ನಿಮ್ಮ ವಿರುದ್ಧದ ಡಿಜಿಟಲ್‌ ಸಾಕ್ಷ್ಯಗಳು ಅಶ್ಲೀಲವಾಗಿವೆ -ಹೈಕೋರ್ಟ್

Prajwal Revanna Case: ನಿಮ್ಮ ಸಂಪರ್ಕಕ್ಕೆ ಬಂದಿರುವ ಎಲ್ಲ ಮಹಿಳೆಯರ ದಾಖಲೆಗಳನ್ನು ಒದಗಿಸಲು ಸಾಧ್ಯವಿಲ್ಲ. ಈ ಮಹಿಳೆಯರು ನಿಮ್ಮ ವಿರುದ್ಧ ದೂರು ದಾಖಲಿಸದೆ ಇರುವಾಗ ಅವರ ಖಾಸಗಿತನದಲ್ಲಿ ಪ್ರವೇಶಿಸಲು ಹೇಗೆ ಸಾಧ್ಯ ಎಂದು ಪ್ರಜ್ವಲ್ ರೇವಣ್ಣಗೆ ಕರ್ನಾಟಕ ಹೈಕೋರ್ಟ್ ಪ್ರಶ್ನಿಸಿದೆ. ಪ್ರಜ್ವಲ್‌ ರೇವಣ್ಣ ಎಂದ ಮಾತ್ರಕ್ಕೆ ಕಾನೂನು ಬದಲಾಗಲ್ಲ ಎಂದಿದೆ.

Prajwal Revanna Case: ಪ್ರಜ್ವಲ್‌ ರೇವಣ್ಣ ಆದ ಮಾತ್ರಕ್ಕೆ ಕಾನೂನು ಬದಲಾಗುವುದಿಲ್ಲ, ನಿಮ್ಮ ವಿರುದ್ಧದ ಡಿಜಿಟಲ್‌ ಸಾಕ್ಷ್ಯಗಳು ಅಶ್ಲೀಲವಾಗಿವೆ, ಪ್ರಕರಣಕ್ಕೆ ಸಂಬಂಧಿಸಿದ ವಿಡಿಯೋ ಮಾತ್ರ
ಒದಗಿಸಬಹುದು ಎಂದು ಕರ್ನಾಟಕ ಹೈಕೋರ್ಟ್ ಹೇಳಿದೆ.
Prajwal Revanna Case: ಪ್ರಜ್ವಲ್‌ ರೇವಣ್ಣ ಆದ ಮಾತ್ರಕ್ಕೆ ಕಾನೂನು ಬದಲಾಗುವುದಿಲ್ಲ, ನಿಮ್ಮ ವಿರುದ್ಧದ ಡಿಜಿಟಲ್‌ ಸಾಕ್ಷ್ಯಗಳು ಅಶ್ಲೀಲವಾಗಿವೆ, ಪ್ರಕರಣಕ್ಕೆ ಸಂಬಂಧಿಸಿದ ವಿಡಿಯೋ ಮಾತ್ರ ಒದಗಿಸಬಹುದು ಎಂದು ಕರ್ನಾಟಕ ಹೈಕೋರ್ಟ್ ಹೇಳಿದೆ.

ಬೆಂಗಳೂರು: ತನ್ನ ವಿರುದ್ಧ ಆರೋಪ ಮಾಡಿ ಪ್ರಕರಣ ದಾಖಲಿಸಿದ ಸಂತ್ರಸ್ತೆಗೆ ಸಂಬಂಧಿಸಿದ ಡಿಜಿಟಲ್‌ ಸಾಕ್ಷ್ಯಗಳನ್ನು ಮಾತ್ರ ಪರಿಶೀಲಿಸಬಹುದೇ ಹೊರತು ಇತರೆ ಮಹಿಳೆಯರ ವಿಡಿಯೋಗಳನ್ನು ನೋಡುವಂತಿಲ್ಲ ಎಂದು ಹೈಕೋರ್ಟ್‌ ಪ್ರಜ್ವಲ್‌ ರೇವಣ್ಣ ಅವರಿಗೆ ಸ್ಪಷ್ಟಪಡಿಸಿದೆ. ಪ್ರಜ್ವಲ್‌ ರೇವಣ್ಣ ಎಂದ ಮಾತ್ರಕ್ಕೆ ಕಾನೂನು ಬದಲಾಗುವುದಿಲ್ಲ ಎಂದು ಹೇಳಿರುವ ನ್ಯಾಯಾಲಯ ಲೈಂಗಿಕವಾಗಿ ಸಂತ್ರಸ್ತೆಯರಾಗಿರುವ ಮಹಿಳೆಯರ ಖಾಸಗಿತನವನ್ನು ಕಾಪಾಡುವುದು ಮುಖ್ಯ ಎಂದು ಪ್ರತಿಪಾದಿಸಿದೆ.

ತನ್ನ ಕಾರು ಚಾಲಕನ ಫೋನ್‌ನಲ್ಲಿ ಇವೆ ಎನ್ನಲಾದ ಡಿಜಿಟಲ್‌ ಸಾಕ್ಷ್ಯಗಳನ್ನು ಒದಗಿಸುವಂತೆ ಪ್ರಾಸಿಕ್ಯೂಷನ್‌ಗೆ ನಿರ್ದೇಶಿಸಬೇಕೆಂದು ಕೋರಿ ಪ್ರಜ್ವಲ್‌ ರೇವಣ್ಣ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ಗುರುವಾರ (ಜನವರಿ 16) ನಡೆಯಿತು. ಪ್ರಜ್ವಲ್ ರೇವಣ್ಣ ಪರ ವಕೀಲ ಜಿ. ಅರುಣ್‌ ವಾದ ಮಂಡನೆ ಮಾಡಿದರು. 33 ವರ್ಷದ ಪ್ರಜ್ವಲ್‌ ರೇವಣ್ಣ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ಮೊಮ್ಮಗ ಹಾಗೂ ಮಾಜಿ ಸಚಿವ ಜೆಡಿಎಸ್‌ ವರಿಷ್ಠ ಎಚ್.ಡಿ.ರೇವಣ್ಣ ಅವರ ಪುತ್ರ. ಲೈಂಗಿಕ ಕಿರುಕುಳ ನೀಡಿದ ಆರೋಪದಡಿಯಲ್ಲಿ 2024ರ ಮೇ 31 ರಿಂದ ಪ್ರಜ್ವಲ್‌ ಜೈಲಿನಲ್ಲಿದ್ದಾರೆ. ಈ ಪ್ರಕರಣದ ತನಿಖೆಗಾಗಿ ಕಳೆದ ವರ್ಷದ ಏಪ್ರಿಲ್‌ ನಲ್ಲಿ ವಿಶೇಷ ತನಿಖಾ ದಳ ಸ್ಥಾಪಿಸಲಾಗಿದೆ.

ಈಗಾಗಲೇ ನಾಲ್ಕು ಪ್ರಕರಣಗಳ ತನಿಖೆ ನಡೆಯುತ್ತಿದ್ದು, ಮೊದಲ ಪ್ರಕರಣದಲ್ಲಿ ಮೂರು ಚಾರ್ಜ್‌ ಶೀಟ್‌ ಗಳನ್ನು ಸಲ್ಲಿಸಲಾಗಿದೆ. ಪ್ರಜ್ವಲ್‌ ರೇವಣ್ಣ ಕಾರು ಚಾಲಕನ ಮೊಬೈಲ್‌ ನಲ್ಲಿರುವ ಡಿಜಿಟಲ್‌ ಸಾಕ್ಷ್ಯಗಳ ದಾಖಲೆಗಳನ್ನು ನೀಡಬೇಕು ಎಂದು ಪ್ರಜ್ವಲ್‌ ಹೈಕೋರ್ಟ್‌ ನಲ್ಲಿ ಅರ್ಜಿ ಸಲ್ಲಿಸಿದ್ದರು. ಪ್ರಜ್ವಲ್‌ ಪರ ವಕೀಲರು ಈ ದಾಖಲೆಗಳು ಅಶ್ಲೀಲವಾಗಿವೆ ಎಂದು ಭಾವಿಸುವುದಿಲ್ಲ ಎಂದು ವಾದಿಸಿದಾಗ ಚಾಲಕನ ಮೊಬೈಲ್‌ ನಲ್ಲಿರುವ ಎಲ್ಲಾ ಫೋಟೊ, ವಿಡಿಯೊಗಳು ಅಶ್ಲೀಲವಾಗಿವೆ ಎಂದು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಹೇಳಿದರು.

ನಿಮ್ಮ ಮನೆಯ ಕೆಲಸದಾಕೆ ನಿಮ್ಮ ವಿರುದ್ಧ ಸೆಕ್ಷನ್‌ 376 ಅಡಿಯಲ್ಲಿ ದಾಖಲಿಸಿರುವ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದ ವಿಡಿಯೊ ಮತ್ತು ಚಿತ್ರಗಳನ್ನು ಮಾತ್ರ ನೀವು ಪರಿಶೀಲಿಸಲು ಸಾಧ್ಯ. ನಿಮ್ಮ ಸಂಪರ್ಕಕ್ಕೆ ಬಂದಿರುವ ಎಲ್ಲ ಮಹಿಳೆಯರ ದಾಖಲೆಗಳನ್ನು ಒದಗಿಸಲು ಸಾಧ್ಯವಿಲ್ಲ. ಈ ಮಹಿಳೆಯರು ನಿಮ್ಮ ವಿರುದ್ಧ ದೂರು ದಾಖಲಿಸದೆ ಇರುವಾಗ ಅವರ ಖಾಸಗಿತನದಲ್ಲಿ ಪ್ರವೇಶಿಸಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ ನ್ಯಾಯಮೂರ್ತಿಗಳು, ಪ್ರಜ್ವಲ್‌ ರೇವಣ್ಣ ಎಂದ ಮಾತ್ರಕ್ಕೆ ಕಾನೂನು ಬದಲಾಗಲ್ಲ ಎಂದು ಹೇಳಿದರು.

ವಿಚಾರಣೆ ಆರಂಭವಾದಾಗ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಹೋಗಿರುವ ಫೋನ್‌ನಲ್ಲಿನ ದಾಖಲೆಗಳನ್ನು ನೀಡಲು ಸಮಸ್ಯೆ ಏನು? ಎಂದು ಹೆಚ್ಚುವರಿ ಎಸ್‌ಪಿಪಿ ಜಗದೀಶ್‌ ಅವರನ್ನು ಹೈಕೋರ್ಟ್‌ ಪ್ರಶ್ನೆ ಮಾಡಿತು. ಹಾಲಿ ಪ್ರಕರಣಕ್ಕೆ ಸಂಬಂಧಿಸಿದ ವಿಡಿಯೊ ಮತ್ತು ಚಿತ್ರಗಳನ್ನು ಒದಗಿಸಲಾಗಿದೆ. ವಿಚಾರಣೆಯನ್ನು ವಿಳಂಬಗೊಳಿಸುವ ಉದ್ದೇಶದಿಂದ ಈ ಅರ್ಜಿ ಸಲ್ಲಿಸಿದ್ದಾರೆ. ವಿಚಾರಣಾಧೀನ ನ್ಯಾಯಾಲಯದಲ್ಲೂ ಸಿಡಿಆರ್‌ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಎಲ್ಲವನ್ನೂ ಒದಗಿಸಲಾಗಿದೆ ಎಂದು ಜಗದೀಶ್‌ ಉತ್ತರಿಸಿದರು.

ಕಳೆದ ಲೋಕಸಭಾ ಚುನಾವನೆಯ ಸಂದರ್ಭದಲ್ಲಿ ಪ್ರಜ್ವಲ್‌ ರೇವಣ್ಣ ಚಿತ್ರೀಕರಿಸಿಕೊಂಡಿದ್ ವಿಡಿಯೊ ಮತ್ತು ಚಿತ್ರಗಳ ಸಿಡಿಗಳು ಹಾಸನದಲ್ಲಿ ಹಂಚಿಕೆಯಾಗಿದ್ದವು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಜನವರಿ 9 ರಂದು ನಡೆದ ವಿಚಾರಣೆಯ ಸಂದರ್ಭದಲ್ಲಿ ವಿಶೇಷ ಎಸ್‌ ಪಿಪಿ ಜಗದೀಶ್‌ ಅವರು, ದೂರು ದಾಖಲಾದ ಮಹಿಳೆಗೆ ಸಂಬಂಧಿಸಿದ ಡಿಜಿಟಲ್‌ ಸಾಕ್ಷ್ಯಗಳನ್ನು ಒದಗಿಸಲಾಗಿದೆ. ಎಲ್ಲ ಮಹಿಳೆಯರ ಸಾಕ್ಷ್ಯಗಳನ್ನು ಹಂಚಿಕೊಳ್ಳುವುದು ಖಾಸಗಿತನದ ಉಲ್ಲಂಘನೆಯಾಗುತ್ತದೆ. ಕಾರು ಚಾಲಕನ ಮೊಬೈಲ್‌ ನಲ್ಲಿ 15000 ಫೋಟೋ, 2000 ವಿಡಿಯೋ ಗಳಿವೆ ಎಂದು ತಿಳಿಸಿದ್ದರು. ಜನಪ್ರತಿನಿಧಿ ಮಹಿಳೆಯೊಬ್ಬರು ಪ್ರಜ್ವಲ್‌ ರೇವಣ್ಣ ವಿರುದ್ಧ ದೂರು ಸಲ್ಲಿಸಿದ್ದರು. ಈ ಸಂಬಂಧ ಬೆಂಗಳೂರಿನ ಸಿಐಡಿ ಕಚೇರಿಯಲ್ಲಿ ದೂರು ದಾಖಲಾಗಿತ್ತು.

Whats_app_banner