ಮೀಸಲಾತಿ ಹೆಚ್ಚಳಕ್ಕೆ ಜಯಪ್ರಕಾಶ್ ಹೆಗ್ಡೆ ಆಯೋಗದ ಶಿಫಾರಸು, ಮುಸ್ಲಿಂ, ಲಿಂಗಾಯತ, ಒಕ್ಕಲಿಗರ ಮೀಸಲು ಎಷ್ಟು ಹೆಚ್ಚಳ
ಕರ್ನಾಟಕದಲ್ಲಿ ಮುಸ್ಲಿಂ, ಲಿಂಗಾಯತ, ಒಕ್ಕಲಿಗರ ಮೀಸಲು ಎಷ್ಟು ಹೆಚ್ಚಳ ಮಾಡುವಂತೆ ಕೆ ಜಯಪ್ರಕಾಶ್ ಹೆಗ್ಡೆ ಆಯೋಗ ಶಿಫಾರಸು ಮಾಡಿದೆ. ಇದರಂತೆ ಮೀಸಲು ಪ್ರಮಾಣ ಶೇಕಡ 75.1 ಆಗಲಿದೆ. ತುಲನಾತ್ಮಕ ವಿವರ ಹೀಗಿದೆ.

ಬೆಂಗಳೂರು: ಹಿಂದುಳಿದವರ ಮೀಸಲಾತಿ ಪ್ರಮಾಣ ಶೇ 32ರಿಂದ ಶೇ 51ಕ್ಕೆ ಏರಿಕೆ ಮಾಡುವಂತೆ ಕೆ. ಜಯಪ್ರಕಾಶ್ ಹೆಗ್ಡೆ ಅಧ್ಯಕ್ಷತೆಯ ಆಯೋಗ ಕರ್ನಾಟಕ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಇದರಂತೆ, ಲಿಂಗಾಯತರು, ಒಕ್ಕಲಿಗರು, ಮುಸ್ಲಿಮರು, ಹಿಂದುಳಿದ ತಳ ಸಮುದಾಯಗಳೂ ಸೇರಿ ಇತರೆ ಹಿಂದುಳಿದ ಜಾತಿಗಳ (ಒಬಿಸಿ) ಪಟ್ಟಿಯಲ್ಲಿರುವ ವಿವಿಧ ಜಾತಿಗಳ ಮೀಸಲಾತಿಯನ್ನು ಮರುವರ್ಗೀಕರಣ ಮಾಡಿ, ಆಯಾ ಜಾತಿಯವರ ಜನಸಂಖ್ಯೆಗೆ ಅನುಗುಣವಾಗಿ ಈಗಿರುವ ಮೀಸಲು ಪ್ರಮಾಣವನ್ನು ಹೆಚ್ಚಳ ಮಾಡಬೇಕು ಎಂದು ಆಯೋಗ ವಿವರಿಸಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಶುಕ್ರವಾರ (ಏಪ್ರಿಲ್ 11) ನಡೆದ ಸಚಿವ ಸಂಪುಟ ಸಭೆಯಲ್ಲಿ ಕೆ. ಜಯಪ್ರಕಾಶ್ ಹೆಗ್ಡೆ ನೇತೃತ್ವದ ಆಯೋಗವು 2024ರ ಫೆಬ್ರವರಿಯಲ್ಲಿ ಸಲ್ಲಿಸಿದ್ದ ‘2015ರ ದತ್ತಾಂಶಗಳ ಅಧ್ಯಯನ ವರದಿ 2024’ರ ಶಿಫಾರಸು ಹಾಗೂ ಮುಖ್ಯಾಂಶಗಳ ಮಂಡನೆಯಾಗಿದೆ.
ಮೀಸಲಾತಿ ಹೆಚ್ಚಳಕ್ಕೆ ಜಯಪ್ರಕಾಶ್ ಹೆಗ್ಡೆ ಆಯೋಗದ ಶಿಫಾರಸು
ಕರ್ನಾಟಕದ 6.35 ಕೋಟಿ ಜನಸಂಖ್ಯೆ ಪೈಕಿ 5.98 ಕೋಟಿ ಜನ ಭಾಗಿಯಾಗಿರುವ ಸಮೀಕ್ಷೆಯ ದತ್ತಾಂಶ ಆಧರಿಸಿ ‘2015ರ ದತ್ತಾಂಶಗಳ ಅಧ್ಯಯನ ವರದಿ 2024’ ಅನ್ನು ಕೆ. ಜಯಪ್ರಕಾಶ್ ಹೆಗ್ಡೆ ನೇತೃತ್ವದ ಆಯೋಗ ಸಿದ್ಧಪಡಿಸಿದೆ.
1) ಇತರೆ ಹಿಂದುಳಿದವರು (ಒಬಿಸಿ) : ಜನಸಂಖ್ಯೆಗೆ ಅನುಗುಣವಾಗಿ ಹಿಂದುಳಿದವರ ಮೀಸಲಾತಿ ಪ್ರಮಾಣವನ್ನು ಈಗ ಇರುವ ಶೇ 32ರಿಂದ ಶೇ 51ಕ್ಕೆ ಏರಿಕೆ ಮಾಡುವಂತೆ ಶಿಫಾರಸು ಮಾಡಲಾಗಿದೆ.
2) ಎಸ್‌ಸಿ ಎಸ್‌ಟಿ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಒಟ್ಟು ಜನಸಂಖ್ಯೆ 1.6 ಕೋಟಿಗೂ ಅಧಿಕ. ಪರಿಶಿಷ್ಟ ಜಾತಿಗೆ 17.15%, ಪರಿಶಿಷ್ಟ ಪಂಗಡಕ್ಕೆ 6.95% ಮೀಸಲಾತಿ ಇದ್ದು ಯಥಾ ಸ್ಥಿತಿ ಮುಂದುವರಿಸುವಂತೆ ಆಯೋಗ ಶಿಫಾರಸು ಮಾಡಿದೆ.
3) ಮುಸ್ಲಿಮರು: ಪರಿಶಿಷ್ಟ ಜಾತಿ ಬಳಿಕ ಮುಸ್ಲಿಂ ಸಮುದಾಯದವರ ಸಂಖ್ಯೆ (75.27 ಲಕ್ಷ) ಹೆಚ್ಚಿರುವ ಕಾರಣ ಈ ಸಮುದಾಯದ ಮೀಸಲಾತಿ ಪ್ರಮಾಣವನ್ನು ಈಗ ಇರುವಂತಹ ಶೇ 4 ರಿಂದ ಶೇ 8ಕ್ಕೆ ಏರಿಸಬೇಕು.
4) ಲಿಂಗಾಯತ (3ಬಿ): ಲಿಂಗಾಯತ (66 ಲಕ್ಷ) ಹಾಗೂ ಅದರ ಉಪ ಜಾತಿಗಳ ಒಟ್ಟು ಜನ ಸಂಖ್ಯೆ 81 ಲಕ್ಷ. ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಈಗ ಇರುವ ಶೇಕಡ 5 ರಿಂದ ಶೇ 8ಕ್ಕೆ ಏರಿಸಬೇಕು
5) ಒಕ್ಕಲಿಗ (3ಎ): ಒಕ್ಕಲಿಗ (61.50 ಲಕ್ಷ) ಮತ್ತು ಅದರ ಉಪ ಜಾತಿಗಳ ಒಟ್ಟು ಜನಸಂಖ್ಯೆ 72 ಲಕ್ಷ. ಈಗ ಇರುವ ಮೀಸಲಾತಿ ಶೇ 4 ರಿಂದ ಶೇ 7ಕ್ಕೆ ಏರಿಸಬೇಕು.
ಮೀಸಲಾತಿ ಲೆಕ್ಕಾಚಾರ
ಆಯೋಗದ ಶಿಫಾರಸು ಪ್ರಕಾರ ಪ್ರವರ್ಗ 1ಕ್ಕೆ ಇದ್ದ ಮೀಸಲಾತಿಯನ್ನು ಶೇ 4 ರಿಂದ ಶೇ 6ಕ್ಕೆ ಪ್ರವರ್ಗ 2 ಎಗೆ ಶೇ 15 ಮೀಸಲಾತಿಯನ್ನು ‘1 ಬಿ’ ಹಾಗೂ ‘2 ಎ’ಗೆ ಮರು ಹಂಚಿಕೆ ಮಾಡಲಾಗಿದೆ. ಇದರಿಂದಾಗಿ ‘1 ಬಿ’ಗೆ ಶೇ 12 ಹಾಗೂ ‘2 ಎ’ಗೆ ಶೇ 10 ಹಂಚಿಕೆಯಾಗಿದೆ. ಇದರಿಂದಾಗಿ ಹಿಂದುಳಿದ ಜಾತಿಯವರಿಗೆ (2ಎ)ಇದ್ದ ಮೀಸಲಾತಿ ಶೇ 15 ರಿಂದ ಶೇ 21ಕ್ಕೆ ಏರಿಕೆಯಾಗಿದೆ ಎಂದು ಪ್ರಜಾವಾಣಿ ಮತ್ತು ಪಬ್ಲಿಕ್ ಟಿವಿ ವರದಿಗಳು ಹೇಳಿವೆ.
ಕಾನೂನು ಪ್ರಕಾರ ಮೀಸಲಾತಿ ಪ್ರಮಾಣ ಶೇಕಡ 50 ಮೀರುವಂತೆ ಇಲ್ಲ. ಆಯೋಗದ ಶಿಫಾರಸು ಪ್ರಕಾರ ಮೀಸಲಾತಿ ಜಾರಿಗೊಳಿಸಿದರೆ, ಜಾತಿ ಮೀಸಲಾತಿ ಪ್ರಮಾಣವೇ ಶೇಕಡ 75.1 ಆಗಲಿದೆ. ಇದರೊಂದಿಗೆ ಆರ್ಥಿಕವಾಗಿ ದುರ್ಬಲ ವರ್ಗದ ಮೀಸಲಾತಿ ಶೇ 10 ಸೇರಿದರೆ ಶೇ 85.10 ಆಗಲಿದೆ. ಆಗ ಸಾಮಾನ್ಯ ವರ್ಗದವರಿಗೆ ಶೇ 14.9 ಮಾತ್ರ ಉಳಿಯಲಿದೆ.
