ಕಾಚಿಗುಡ-ಮಂಗಳೂರು ಎಕ್ಸ್‌ಪ್ರೆಸ್ ರೈಲು ಮುರುಡೇಶ್ವರದವರೆಗೂ ವಿಸ್ತರಣೆ; ಉಡುಪಿ-ಕೊಲ್ಲೂರು ತೆರಳುವ ಪ್ರಯಾಣಿಕರಿಗೆ ಸಿಹಿಸುದ್ದಿ
ಕಾಚಿಗುಡ-ಮಂಗಳೂರು ಎಕ್ಸ್‌ಪ್ರೆಸ್ ರೈಲನ್ನು ಮುರುಡೇಶ್ವರದವರೆಗೂ ವಿಸ್ತರಣೆ ಮಾಡಲಾಗಿದೆ. ಈ ಕುರಿತು ದಕ್ಷಿಣ ರೈಲ್ವೆ ತಿಳಿಸಿದೆ. ಮಂಗಳೂರುವರೆಗೆ ಬರುತ್ತಿದ್ದ ರೈಲು ಉಡುಪಿ, ಕೊಲ್ಲೂರು ಮಾರ್ಗವಾಗಿ ಪ್ರಯಾಣಿಸುವುದರಿಂದ ಪ್ರಮುಖ ತೀರ್ಥಸ್ಥಳಗಳಿಗೆ ಪ್ರಯಾಣ ಸುಲಭವಾಗಿದೆ.

ಕಾಚಿಗುಡ - ಮಂಗಳೂರು ಎಕ್ಸ್‌ಪ್ರೆಸ್ (12789) ರೈಲು ಸೇವೆಯನ್ನು ದಕ್ಷಿಣ ರೈಲ್ವೆಯು ಮುರುಡೇಶ್ವರದವರೆಗೆ ವಿಸ್ತರಿಸಿದೆ. ಪ್ರತಿ ಮಂಗಳವಾರ ಮತ್ತು ಶುಕ್ರವಾರದಂದು ಹೈದರಾಬಾದ್‌ನ ಕಾಚಿಗುಡದಿಂದ ಬೆಳಿಗ್ಗೆ 6:05ಕ್ಕೆ ಹೊರಡುವ ರೈಲು, ಕ್ರಮವಾಗಿ ಬುಧವಾರ ಮತ್ತು ಶನಿವಾರದಂದು ಮಧ್ಯಾಹ್ನ 2:05ಕ್ಕೆ ಮುರುಡೇಶ್ವರಕ್ಕೆ ತಲುಪಲಿದೆ. ಈವರೆಗೆ ಮಂಗಳೂರಿನವರೆಗೆ ಬರುತ್ತಿದ್ದ ರೈಲು ಮುಂದೆ ಉತ್ತರ ಕನ್ನಡದವರೆಗೂ ತಲುಪಲಿದೆ. ಇದರಿಂದ ಹಲವರಿಗೆ ಪ್ರಯೋಜನೆ ಸಿಗಲಿದೆ ಎಂಬ ನಿರೀಕ್ಷೆ ಇದೆ.
ಹೈದರಾಬಾದ್‌ನ ಕಾಚಿಗುಡದಿಂದ ಮಂಗಳೂರು ಸೆಂಟ್ರಲ್ ರೈಲ್ವೆ ನಿಲ್ದಾಣಕ್ಕೆ ಹಾಗೂ ಮಂಗಳೂರು ಸೆಂಟ್ರಲ್‌ನಿಂದ ಕಾಚಿಗುಡ ವಾರಕ್ಕೆ ಎರಡು ಬಾರಿ ಪ್ರಯಾಣಿಸುವ ರೈಲನ್ನು ಮುರುಡೇಶ್ವರದವರೆಗೆ ವಿಸ್ತರಿಸಲಾಗಿದೆ. ಈ ಕುರಿತು ದಕ್ಷಿಣ ರೈಲ್ವೆಯ ಸೇಲಂ ಡಿವಿಷನ್ ಮಾಹಿತಿ ನೀಡಿದೆ.
ಪ್ರತಿ ಮಂಗಳವಾರ ಮತ್ತು ಶುಕ್ರವಾರ ಕಾಚಿಗೂಡದಿಂದ ಹೊರಡುವ ರೈಲು ಸಂಖ್ಯೆ 12789 ಜೋಲಾರ್‌ಪೆಟ್ಟೈ, ಸೇಲಂ, ಈರೋಡ್, ತಿರುಪ್ಪೂರ್, ಕೊಯಮತ್ತೂರು ಜಂಕ್ಷನ್ ಮಾರ್ಗವಾಗಿ ಮಂಗಳೂರು ತಲುಪುತ್ತದೆ. ಮುಂದೆ ಮಂಗಳೂರಿನಿಂದ ಉಡುಪಿ ಕುಂದಾಪುರ ಭಟ್ಕಳ ಮಾರ್ಗವಾಗಿ ಮುರುಡೇಶ್ವರ ತಲುಪಲಿದೆ. ಇದೇ ವೇಳೆ ಪ್ರತಿ ಬುಧವಾರ ಹಾಗೂ ಶನಿವಾರ ಮುರುಡೇಶ್ವರದಿಂದ ಹೊರಡಲಿರುವ ರೈಲು ಸಂಖ್ಯೆ 12790, ಇದೇ ಮಾರ್ಗವಾಗಿ ಕಾಚಿಗುಡ ತೆರಳಲಿದೆ.
ಕೇರಳದಲ್ಲಿ ಈ ರೈಲು ತಿರೂರ್, ಕೋಯಿಕ್ಕೋಡ್, ವಡಕರ, ತಲಶ್ಶೇರಿ, ಕಣ್ಣೂರು, ಪಯ್ಯನೂರು, ನೀಲೇಶ್ವರ, ಕಾಞಂಗಾಡ್, ಕಾಸರಗೋಡು ನಿಲ್ದಾಣಗಳಲ್ಲಿ ನಿಲ್ಲಲಿದೆ. ಕರ್ನಾಟಕದ ಮಂಗಳೂರು ಸೆಂಟ್ರಲ್, ಸುರತ್ಕಲ್, ಮುಲ್ಕಿ, ಉಡುಪಿ, ಬಾರ್ಕೂರು, ಕುಂದಾಪುರ, ಮೂಕಾಂಬಿಕಾ ರಸ್ತೆ (ಬೈಂದೂರು), ಮತ್ತು ಭಟ್ಕಳದಲ್ಲಿ ನಿಲ್ಲಲಿದೆ.
ನಾಲ್ಕು ರಾಜ್ಯಗಳ ಸಂಪರ್ಕ
ತೆಲಂಗಾಣದ ರಾಜಧಾನಿ ಹೈದರಾಬಾದ್‌ನಿಂದ ಹೊರಡುವ ರೈಲು, ತಮಿಳುನಾಡು ಹಾಗೂ ಕೇರಳದಿಂದ ಸಾಗಿ ಬಂದು ಕರ್ನಾಟಕದ ಮಂಗಳೂರು ತಲುಪುತ್ತಿತ್ತು. ಇದೀಗ ಈ ರೈಲಿನ ವಿಸ್ತರಣೆಯಿಂದ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ತೆರಳುವ ಭಕ್ತರಿಗೆ ವಿಶೇಷವಾಗಿ ಉಪಯುಕ್ತವಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಕೇರಳ ಸೇರಿದಂತೆ ವಿವಿಧ ರಾಜ್ಯಗಳಿಂದ ಕೊಲ್ಲೂರಿಗೆ ಭಕ್ತರು ಆಗಮಿಸುತ್ತಾರೆ. ಇದು ಮಧ್ಯಾಹ್ನ 12:56 ಕ್ಕೆ ಬೈಂದೂರಿಗೆ ತಲುಪುತ್ತದೆ ಮತ್ತು ಮುರ್ಡೇಶ್ವರದಿಂದ ಹೊರಡುವ ರೈಲು ಮಧ್ಯಾಹ್ನ 3:54 ಕ್ಕೆ ನಿಲ್ದಾಣಕ್ಕೆ ಆಗಮಿಸುತ್ತದೆ.
ಆದರೆ ಮಂಗಳೂರುವರೆಗೆ ಬರುತ್ತಿದ್ದ ರೈಲನ್ನು ಮುರುಡೇಶ್ವರದವರೆಗೂ ವಿಸ್ತರಿಸುವುದರಿಂದ ಯಾವುದೇ ಪ್ರಯೋಜನವಿಲ್ಲ. ಈ ವಿಸ್ತರಣೆ ಅಗತ್ಯವಿರಲಿಲ್ಲ ಎಂದು ಸೋಷಿಯಲ್ ಮೀಡಿಯಾದಲ್ಲಿ ಹಲವರು ಪ್ರತಿಕ್ರಿಯಿಸಿದ್ದಾರೆ.
ವೇಳಾಪಟ್ಟಿ
ರೈಲು ಸಂಖ್ಯೆ 12789 ಮಂಗಳವಾರ ಮತ್ತು ಶುಕ್ರವಾರದಂದು ಬೆಳಿಗ್ಗೆ 6.05ಕ್ಕೆ ಕಾಚಿಗುಡದಿಂದ ಹೊರಟು ಬುಧವಾರ ಮತ್ತು ಶನಿವಾರ ಬೆಳಗ್ಗೆ 9.30ಕ್ಕೆ ಮಂಗಳೂರು ಸೆಂಟ್ರಲ್ ನಿಲ್ದಾಣಕ್ಕೆ ಆಗಮಿಸುತ್ತದೆ. ಇದು ಬೆಳಿಗ್ಗೆ 9.40ಕ್ಕೆ ಮಂಗಳೂರು ಸೆಂಟ್ರಲ್‌ನಿಂದ ಹೊರಟು ಬೆಳಗ್ಗೆ 10.34ಕ್ಕೆ ಸುರತ್ಕಲ್, ಬೆಳಗ್ಗೆ 10.46ಕ್ಕೆ ಮುಲ್ಕಿ, ಉಡುಪಿಗೆ ಬೆಳಗ್ಗೆ 11.42, 11.56 ಬಾರ್ಕೂರು, ಕುಂದಾಪುರಕ್ಕೆ ಮಧ್ಯಾಹ್ನ 12.12, ಬೈಂದೂರ್ 12.42, ಮಧ್ಯಾಹ್ನ 2.05ಕ್ಕೆ ಮುರ್ಡೇಶ್ವರ ತಲುಪಲಿದೆ.
ರೈಲು ಸಂಖ್ಯೆ 12790 ಬುಧವಾರ ಮತ್ತು ಶನಿವಾರದಂದು ಮುರ್ಡೇಶ್ವರದಿಂದ ಮಧ್ಯಾಹ್ನ 3.30ಕ್ಕೆ ಹೊರಟು, ಭಟ್ಕಳದಿಂದ ಮಧ್ಯಾಹ್ನ 3.44, ಬೈಂದೂರಿನಿಂದ 3.56, ಕುಂದಾಪುರದಿಂದ 4.32, ಬಾರ್ಕೂರು 4.52, ಉಡುಪಿ 5.10, ಮೂಲ್ಕಿ 6.04, 6.32ಕ್ಕೆ ಸುರತ್ಕಲ್ ಹಾಗೂ ಸಂಜೆ 7.55ಕ್ಕೆ ಮಂಗಳೂರು ಸೆಂಟ್ರಲ್ ತಲುಪಲಿದೆ.
