Kalaburagi Crime: ಬಿಜೆಪಿ ಕಾರ್ಯಕರ್ತನ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ತಿರುವು; ಆಡಿಯೊದಲ್ಲಿರುವ ಧ್ವನಿ ಮಗನದ್ದಲ್ಲ ಎಂದ ಮೃತನ ತಾಯಿ
ಕನ್ನಡ ಸುದ್ದಿ  /  ಕರ್ನಾಟಕ  /  Kalaburagi Crime: ಬಿಜೆಪಿ ಕಾರ್ಯಕರ್ತನ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ತಿರುವು; ಆಡಿಯೊದಲ್ಲಿರುವ ಧ್ವನಿ ಮಗನದ್ದಲ್ಲ ಎಂದ ಮೃತನ ತಾಯಿ

Kalaburagi Crime: ಬಿಜೆಪಿ ಕಾರ್ಯಕರ್ತನ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ತಿರುವು; ಆಡಿಯೊದಲ್ಲಿರುವ ಧ್ವನಿ ಮಗನದ್ದಲ್ಲ ಎಂದ ಮೃತನ ತಾಯಿ

ಈ ಆಡಿಯೊಗಳು ಸಿಕ್ಕ ತಕ್ಷಣವೇ ಬಿಜೆಪಿ ನಾಯಕರು, ಕಾರ್ಯಕರ್ತರು ಪ್ರಮುಖ ಅಸ್ತ್ರವಾಗಿಸಿಕೊಂಡು ಕಲಬುರಗಿಯಲ್ಲಿ ಬೃಹತ್‌ ಪ್ರತಿಭಟನೆ ನಡೆಸಿ ಸಚಿವ ಡಾ ಶರಣಪ್ರಕಾಶ ಪಾಟೀಲ್ ರಾಜೀನಾಮೆಗೆ ಆಗ್ರಹಿಸಿದ್ದರು.

ಮೃತ ಶಿವಕುಮಾರ್
ಮೃತ ಶಿವಕುಮಾರ್

ಕಲಬುರಗಿ: ಬಿಜೆಪಿ ಕಾರ್ಯಕರ್ತನ ಆತ್ಮಹತ್ಯೆಗೆ ಕಾಂಗ್ರೆಸ್‌ನವರೇ ಕಾರಣವೆಂದು ಮೃತ ಮಾಡಿರುವ ಆಡಿಯೋವನ್ನು ಪ್ರಮುಖ ಅಸ್ತ್ರವಾಗಿಸಿಕೊಂಡಿರುವ ಬಿಜೆಪಿ ನಾಯಕರು ವೈದ್ಯಕೀಯ ಶಿಕ್ಷಣ ಸಚಿವ ಡಾ ಶರಣಪ್ರಕಾಶ ಪಾಟೀಲ್‌ ಅವರ ರಾಜೀನಾಮೆಗೆ ಪಟ್ಟು ಹಿಡಿದು ಹೋರಾಟ ನಡೆಸಲು ಮುಂದಾಗಿದ್ದರು. ಇದೀಗ ಆಡಿಯೋದಲ್ಲಿರೋ ಧ್ವನಿ ಶಿವಕುಮಾರ್‌ನದ್ದು ಅಲ್ಲ ಎಂದು ಅವರ ಕುಟುಂಬಸ್ಥರು ಹೇಳುವ ಮೂಲಕ ಈ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಇದರಿಂದ ಬಿಜೆಪಿ ನಾಯಕರ ಹೋರಾಟಕ್ಕೆ ಭಾರಿ ಹಿನ್ನಡೆಯಾದಂತಾಗಿದೆ.

ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಶಿರೋಳ್ಳಿ ಗ್ರಾಮದಲ್ಲಿ ಅ 19 ರಂದು ಶಿವಕುಮಾರ ಆತ್ಮಹತ್ಯೆ ಮಾಡಿಕೊಂಡಿದ್ದ. ಆತ್ಮಹತ್ಯೆಗೆ ಮೊದಲು ಮೂರು ಆಡಿಯೊಗಳನ್ನು ಕೆಲವರಿಗೆ ಕಳಿಸಿದ್ದ. ಅದರಲ್ಲಿ ತನ್ನ ಸಾವಿಗೆ ಸೇಡಂ ಶಾಸಕ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ ಶರಣ ಪ್ರಕಾಶ ಪಾಟೀಲ್ ಮತ್ತು ಕೆಲ ಕಾಂಗ್ರೆಸ್ ಕಾರ್ಯಕರ್ತರೇ ಕಾರಣ. ಅತಿಯಾದ ಕಿರುಕುಳ ನೀಡಿದ್ದಾರೆ. ಅವರಿಗೆ ಹಿಂದೂ ಧರ್ಮ ಅಂದ್ರೆ ಆಗಿಬರಲ್ಲಾ, ನನ್ನದು ಸಹಜ ಸಾವಲ್ಲ ಎಂದು ಹೇಳಿಕೊಂಡಿದ್ದ ಎಂದು ಹೇಳಲಾಗಿತ್ತು.

ಈ ಆಡಿಯೊಗಳು ಸಿಕ್ಕ ತಕ್ಷಣವೇ ಬಿಜೆಪಿ ನಾಯಕರು, ಕಾರ್ಯಕರ್ತರು ಪ್ರಮುಖ ಅಸ್ತ್ರವಾಗಿಸಿಕೊಂಡು ಕಲಬುರಗಿಯಲ್ಲಿ ಬೃಹತ್‌ ಪ್ರತಿಭಟನೆ ನಡೆಸಿ ಸಚಿವ ಡಾ ಶರಣಪ್ರಕಾಶ ಪಾಟೀಲ್ ರಾಜೀನಾಮೆಗೆ ಆಗ್ರಹಿಸಿದ್ದರು. ಪ್ರಕರಣವನ್ನು ಸಿಬಿಐಗೆ ನೀಡಬೇಕೆಂದು ಒತ್ತಾಯಿಸಿದ್ದರು. ಮೃತ ಶಿವಕುಮಾರ ಕುಟುಂಬಕ್ಕೆ ಸಾಂತ್ವನ ಹೇಳಿ 3 ಲಕ್ಷ ನಗದು ಸಹಾಯ ಮಾಡಿದ್ದರು. ಕಾಂಗ್ರೆಸ್ ಅಧಿಕಾರಕ್ಕೆ ಬಂದಮೇಲೆ ಬಿಜೆಪಿ ಕಾರ್ಯಕರ್ತರ ಮೇಲೆ ದೌರ್ಜನ್ಯ, ದಬ್ಬಾಳಿಕೆ ಹೆಚ್ಚಾಗುತ್ತಿವೆ ಎಂದು ಆರೋಪಿಸಿದ್ದರು.

ಇದೀಗ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದ್ದು, ಪ್ರಮುಖ ಸಾಕ್ಷಿಯಾಗಿದ್ದ ಶಿವಕುಮಾರ ಮಾತನಾಡಿರುವ ಧ್ವನಿ ಅವನದ್ದಲ್ಲ ಎಂದು ಮೃತ ಶಿವಕುಮಾರನ ತಾಯಿ ಮತ್ತು ಪತ್ನಿ ಹೇಳಿದ್ದಾರೆ. ಮಗನ ಸಾವಿಗೆ ತಮಗೆ ಕಾರಣ ಗೊತ್ತಿಲ್ಲ, ಆದರೆ ಸಾಲ ಮಾಡಿಕೊಂಡಿದ್ದ. ಸಾಲಬಾಧೆಯಿಂದಲೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ದೂರು ನೀಡಿದ್ದ ಮೃತನ ತಾಯಿ ಸುಶೀಲಾಬಾಯಿ ಹೇಳಿದ್ದರು.

ಬಿಜೆಪಿ ಕಾರ್ಯಕರ್ತನ ಆತ್ಮಹತ್ಯೆಗೂ ನನಗೂ ಯಾವುದೇ ಸಂಬಂಧವಿಲ್ಲ. ಆ ವ್ಯಕ್ತಿಯನ್ನು ನಾನು ಈವರೆಗೂ ನೋಡಿರಲ್ಲ ಎಂದು ಸಚಿವ ಡಾ ಶರಣ ಪ್ರಕಾಶ ಪಾಟೀಲ್‌ ಸ್ಪಷ್ಟನೆ ನೀಡಿದ್ದರು.

(ವರದಿ: ಎಸ್.ಬಿ.ರೆಡ್ಡಿ,ಕಲಬುರಗಿ)

Whats_app_banner