Srimanth Illal: ಗಾಂಜಾ ದಂಧೆಕೋರರಿಂದ ಹಲ್ಲೆಗೊಳಗಾದ ಕಲಬುರಗಿ ಇನ್ಸ್‌ಪೆಕ್ಟರ್ ಶ್ರೀಮಂತ ಇಲ್ಲಾಳ ಬೆಂಗಳೂರಿಗೆ ಏರ್ಲಿಫ್ಟ್
ಕರ್ನಾಟಕದ ಇನ್ಸ್‌ಪೆಕ್ಟರ್ ಮೇಲೆ ಮಹಾರಾಷ್ಟ್ರದಲ್ಲಿ ಗಾಂಜಾ ದಂಧೆಕೋರರು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಕಲಬುರಗಿ ಗ್ರಾಮೀಣ ಠಾಣೆಯ ಸರ್ಕಲ್ ಪೊಲೀಸ್ ಇನ್ಸ್‌ಪೆಕ್ಟರ್ (ಸಿಪಿಐ) ಶ್ರೀಮಂತ ಇಲ್ಲಾಳ ಅವರನ್ನು ಕಲಬುರಗಿಯ ಯುನೈಟೆಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಏರ್ ಆ್ಯಂಬುಲೆನ್ಸ್ ಮೂಲಕ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಕರೆತರಲಾಗಿದೆ.
ಬೆಂಗಳೂರು: ಕರ್ನಾಟಕದ ಇನ್ಸ್‌ಪೆಕ್ಟರ್ ಮೇಲೆ ಮಹಾರಾಷ್ಟ್ರದಲ್ಲಿ ಗಾಂಜಾ ದಂಧೆಕೋರರು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಕಲಬುರಗಿ ಗ್ರಾಮೀಣ ಠಾಣೆಯ ಸರ್ಕಲ್ ಪೊಲೀಸ್ ಇನ್ಸ್‌ಪೆಕ್ಟರ್ (ಸಿಪಿಐ) ಶ್ರೀಮಂತ ಇಲ್ಲಾಳ ಅವರನ್ನು ಕಲಬುರಗಿಯ ಯುನೈಟೆಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಏರ್ ಆ್ಯಂಬುಲೆನ್ಸ್ ಮೂಲಕ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಕರೆತರಲಾಗಿದೆ.
ಕಮಲಾಪುರ ತಾಲೂಕಿನ ದಸ್ತಾಪುರ ಕ್ರಾಸ್ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ಕಲಬುರಗಿಯ ನವೀನ ಹಾಗೂ ಬಸವಕಲ್ಯಾಣ ತಾಲೂಕು ಭೋಸಗಾದ ಸಂತೋಷ ಎಂಬಾತನನ್ನು ಬಂಧಿಸಲಾಗಿತ್ತು. ವಿಚಾರಣೆ ವೇಳೆ ಇವರು ನೀಡಿದ ಮಾಹಿತಿ ಆಧಾರದ ಮೇಲೆ ಮಹಾರಾಷ್ಟ್ರದ ಮಂಠಾಳ ಪೊಲೀಸ್ ಠಾಣಾ ವ್ಯಾಪ್ತಿಯ ಉಮರ್ಗಾ ತಾಲೂಕಿನ ತರೂರಿ ಗ್ರಾಮದಲ್ಲಿ ಗಾಂಜಾ ಬೆಳೆದಿದ್ದ ಜಮೀನೊಂದರ ಮೇಲೆ ಕಮಲಾಪುರ ಸಿಪಿಐ ಶ್ರೀಮಂತ ಇಲ್ಲಾಳ ನೇತೃತ್ವದ 10 ಜನರ ತಂಡ ಸೆ.23 ರಂದು ದಾಳಿ ನಡೆಸಿತ್ತು.
ಆದರೆ 40 ಮಂದಿ ಗಾಂಜಾ ದಂಧೆಕೋರರ ಗುಂಪು ಕಟ್ಟಿಗೆ ಮತ್ತು ಕಲ್ಲುಗಳೊಂದಿಗೆ ಪೊಲೀಸ್ ತಂಡದ ಮೇಲೆ ದಾಳಿ ನಡೆಸಿದೆ. ಜೀವ ಉಳಿಸಿಕೊಳ್ಳಲು ಇತರ ಪೊಲೀಸ್ ಸಿಬ್ಬಂದಿ ಚೆಲ್ಲಾಪಿಲ್ಲಿಯಾಗಿ ಓಡಿದ್ದಾರೆ. ಆದರೆ, ಸಿಪಿಐ ಶ್ರೀಮಂತ ಇಲ್ಲಾಳ ಗಾಂಜಾ ಗ್ಯಾಂಗ್ ಕೈಯಲ್ಲಿ ಸಿಕ್ಕಿದ್ದು, ಅವರ ಮನಬಂದಂತೆ ಹಲ್ಲೆಗೈದು ಅಟ್ಟಹಾಸ ಮೆರೆದಿದ್ದಾರೆ.
ಶ್ರೀಮಂತ ಇಲ್ಲಾಳ ಅವರು ರಕ್ತಮಡುವಿನಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದರು. ಉಳಿದ ಪೊಲೀಸರು ಮಂಠಾಳ ಮತ್ತು ಉಮರ್ಗಾ ಠಾಣೆ ಪೊಲೀಸರ ಸಹಾಯದಿಂದ ಗಂಭೀರ ಗಾಯಗೊಂಡು ಚಿಂತಾಜನಕ ಸ್ಥಿತಿಯಲ್ಲಿರುವ ಸಿಪಿಐ ಇಲ್ಲಾಳ ಅವರನ್ನು ಬಸವಕಲ್ಯಾಣದಲ್ಲಿ ಚಿಕಿತ್ಸೆ ಕೊಡಿಸಿ ಬಳಿಕ ಕಲಬುರಗಿಯ ಯುನೈಟೆಡ್ ಆಸ್ಪತ್ರೆಗೆ ತಂದು ದಾಖಲು ಮಾಡಿದ್ದರು.
ಇಲ್ಲಾಳ ಅವರ ತಲೆ, ಎದೆ, ಹೊಟ್ಟೆ ಮತ್ತು ಮುಖ ಭಾಗಕ್ಕೆ ಗಂಭೀರ ಗಾಯಗಳಾಗಿವೆ. ಪಕ್ಕೆಲುಬು ಮುರಿದಿದ್ದು, ಮುಖ ಭಾಗದಲ್ಲೂ ಮುಳೆ ಮುರಿದಿದೆ. ಹೊಟ್ಟೆಯ ಒಳಭಾಗದಲ್ಲಿ ಗಂಭೀರ ಪ್ರಮಾಣದ ಗಾಯಳಾಗಿವೆ. ಶ್ರೀಮಂತ ಇಲ್ಲಾಳ ಮೇಲೆ ನಡೆದ ಮಾರಣಾಂತಿಕ ಹಲ್ಲೆ ಪ್ರಕರಣದ ಬಗ್ಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಮಾಹಿತಿ ಪಡೆದಿದ್ದು, ಖರ್ಚು ವೆಚ್ಚ ಎಷ್ಟೇ ಬರಲಿ ಸೂಕ್ತ ಚಿಕಿತ್ಸೆಗೆ ಸೂಚಿಸಿದ್ದಾರೆ ಎಂದು ಕಲಬುರಗಿ ಎಸ್ಪಿ ಇಶಾ ಪಂತ್ ತಿಳಿಸಿದ್ದಾರೆ.