Kalaburagi Crime: ಆಳಂದ ಬಿಜೆಪಿ ನಾಯಕ ಮಹಾಂತಪ್ಪ ಸಿದ್ದರಾಮಪ್ಪ ಆಲೂರೆ ಹತ್ಯೆ; 3 ಆಯಾಮದಲ್ಲಿ ಪೊಲೀಸ್ ತನಿಖೆ ಶುರು
ಕಲಬುರಗಿಯ ಆಳಂದ ತಾಲೂಕಿನ ಬಿಜೆಪಿ ನಾಯಕ ಮಹಾಂತಪ್ಪ ಸಿದ್ದರಾಮಪ್ಪ ಆಲೂರೆ ಅವರನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಗುರುವಾರ ಈ ಹತ್ಯೆ ನಡೆದಿದ್ದು, 3 ಆಯಾಮಗಳಲ್ಲಿ ಈ ಕೇಸ್‌ನ ತನಿಖೆಯನ್ನು ಪೊಲೀಸರು ಶುರುಮಾಡಿದ್ದಾರೆ. (ವರದಿ- ಮಹೇಶ್ ಕುಲಕರ್ಣಿ, ಕಲಬುರಗಿ)
ಕಲಬುರಗಿ: ಆಳಂದ ತಾಲೂಕಿನ ಸರಸಂಬಾ ಗ್ರಾಮದಲ್ಲಿ ದುಷ್ಕರ್ಮಿಗಳು ಬಿಜೆಪಿ ಮುಖಂಡನ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಹಲ್ಲೆ ಮಾಡಿ ಕೊಲೆಗೈದ ಘಟನೆ ಗುರುವಾರ ನಡೆದಿದೆ. ಮಹಾಂತಪ್ಪ ಸಿದ್ದರಾಮಪ್ಪ ಆಲೂರೆ (45) ಕೊಲೆಯಾದವರು. ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.
ಕೊಲೆಯ ಕಾರಣ ಬಹಿರಂಗವಾಗಿಲ್ಲ. ಆಲೂರೆ ಮರ್ಡರ್ ಮಿಸ್ಟರಿ ಬಿಡಿಸಲು ಪೊಲೀಸರು ಮೂರು ಆಯಾಮದಲ್ಲಿ ತನಿಖೆ ಶುರುಮಾಡಿದ್ದಾರೆ. ಮಹಾಂತಪ್ಪ ಅವರು ಸರಸಂಬಾ ಗ್ರಾಮದಲ್ಲಿ ಧನಲಕ್ಷ್ಮೀ ಸಹಕಾರಿ ಸಂಘದ ಅಧ್ಯಕ್ಷರಾಗಿದ್ದರು. ಸತತ ಮೂರು ಬಾರಿ ಗ್ರಾಮ ಪಂಚಾಯತಿ ಸದಸ್ಯರಾಗಿಯೂ ಆಯ್ಕೆಯಾಗಿದ್ದರು.
ಯಾವಾಗ ದಾಳಿ ನಡೆಯಿತು
ಭಾರತೀಯ ಜನತಾ ಪಕ್ಷದ ಜಿಲ್ಲಾ ಘಟಕದ ಮಾಜಿ ಉಪಾಧ್ಯಕ್ಷರಾಗಿದ್ದ ಆಲೂರೆ ತಮ್ಮ ಹೊಲದಿಂದ ವಾಪಸ್ ಬರುತ್ತಿದ್ದಾಗ ಎದುರಿಗೆ ಬಂದ ಕಾರು ಅವರ ಬೈಕಿಗೆ ಡಿಕ್ಕಿ ಹೊಡೆದಿದೆ. ಬಳಿಕ ಕಾರಿನಿಂದಿಳಿದ ದುಷ್ಕರ್ಮಿಗಳು ಏಕಾಏಕಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ.
ಬಹುಮುಖ್ಯವಾಗಿ ಕೊಡಲಿಯಿಂದ ತಲೆ ಸೀಳಿರುವ ಹಿನ್ನೆಲೆಯಲ್ಲಿ ಗಂಭೀರವಾಗಿದ್ದ ಗಾಯಗೊಂಡಿದ್ದ ಅವರನ್ನು ಆಳಂದ ಆಸ್ಪತ್ರೆಗೆ ತರಲಾಗಿತ್ತು. ಬಳಿಕ ವೈದ್ಯರ ಸಲಹೆಯ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಸೊಲ್ಲಾಪುರ ಆಸ್ಪತ್ರೆಗೆ ಕೊಂಡೊಯ್ಯಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಇನ್ನು ಬರ್ಬರ ಹತ್ಯೆಗೆ ಸಂಬಂಧಿಸಿದಂತೆ ಪೊಲೀಸ್ ತನಿಖೆ ಚುರುಕುಗೊಂಡಿದೆ.
ಮಹಾಂತಪ್ಪ ಸಿದ್ದರಾಮಪ್ಪಆಲೂರೆ ಯಾರು?
ಸರಸಂಬಾ ಗ್ರಾಮದಲ್ಲಿ ಧನಲಕ್ಷ್ಮಿ ಕೋಆಪರೇಟಿವ್ ಸೊಸೈಟಿ ನಡೆಸುತ್ತಿದ್ದ ಮಹಾಂತಪ್ಪ, ತಮ್ಮ ಜನ ಸಂಪರ್ಕ ಜಾಲದಿಂದಾಗಿ ಆಳಂದ, ಹಿರೊಳ್ಳಿ, ಮಾದನಹಿಪ್ಪರಗಾ, ಪಡಸಾವಳಗಿಯಲ್ಲಿ ಸೊಸೈಟಿಯ ಶಾಖಾ ಕಚೇರಿಗಳನ್ನು ತೆರೆದಿದ್ದರು. ಗಮನಾರ್ಹ ಅಂಶವೆಂದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಲಹೆಗಾರರಾಗಿ ನೇಮಕಗೊಂಡಿರುವ ಬಿ.ಆರ್.ಪಾಟೀಲ್ ಈ ಹಿಂದೆ ಈ ಸೊಸೈಟಿ ಸ್ಥಾಪಿಸಿದ್ದರಾದರೂ, ಕಾರ್ಯಬಾಹುಳ್ಯದ ಕಾರಣಕ್ಕಾಗಿ ಅದರ ಸಂಪೂರ್ಣ ಹೊಣೆಗಾರಿಕೆಯನ್ನು ಆಲೂರೆ ಅವರಿಗೆ ವಹಿಸಿಕೊಟ್ಟಿದ್ದರು. ಆದರೆ, ಆಲೂರೆ ಬಿಜೆಪಿಯೊಂದಿಗೆ ಗುರುತಿಸಿಕೊಂಡಿದ್ದರಿಂದ ಬಿ.ಆರ್.ಪಾಟೀಲ್ ಹಾಗೂ ಆಲೂರೆ ಮಧ್ಯೆ ಸಂಬಂಧ ಕಳಚಿಬಿದ್ದಿತ್ತು ಎಂದು ಸ್ಥಳೀಯರು ಹೇಳುತ್ತಾರೆ.
ಜನಸಂಪರ್ಕದ ಕಾರಣಕ್ಕಾಗಿ ಅವರನ್ನು ಬಿಜೆಪಿ ಜಿಲ್ಲಾ ಘಟಕದ ಉಪಾಧ್ಯಕ್ಷರಾಗಿಯೂ ಆಲೂರೆ ಕೆಲದಿನಗಳ ಕಾಲ ಕಾರ್ಯನಿರ್ವಹಿಸಿದ್ದರು. ಮೇಲಾಗಿ, ಸರಸಂಬಾ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಪ್ರಬಲ ಆಕಾಂಕ್ಷಿಯಾಗಿ ಸಹ ಗುರುತಿಸಿಕೊಂಡಿದ್ದರು.
ಮತ್ತೊಂದೆಡೆ, ಇತ್ತೀಚೆಗೆ ಕೌಟುಂಬಿಕ ಆಸ್ತಿ ವಿಚಾರವಾಗಿ ಸಂಬಂಧಿಕರ ಮಧ್ಯೆ ಜೋರು ಮಾತಿನ ಜಗಳ ನಡೆದಿತ್ತು ಎನ್ನಲಾಗಿದ್ದು, ಈ ಆಯಾಮಕ್ಕೆ ಸಂಬಂಧಿಸಿದಂತೆ ಪೊಲೀಸರು ಸಂಬಂಧಿಕರ ವಿಚಾರಣೆ ನಡೆಸುತ್ತಿದ್ದಾರೆ.
ಈ ಹಿಂದೆ ಸರಸಂಬಾ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಅಭ್ಯರ್ಥಿಯಾಗಿ ಹಾಲಿ ಕೆ.ಎಂ.ಎಫ್ ಅಧ್ಯಕ್ಷ ಆರ್.ಕೆ.ಪಾಟೀಲ್ ತಮ್ಮ ಪತ್ನಿಯನ್ನು ಕಣಕ್ಕಿಳಿಸಿದ್ದರಾದರೂ, ಮೂರನೇ ಸ್ಥಾನಕ್ಕೆ ಅವರು ಸಮಾಧಾನಪಟ್ಟಿದ್ದರು. ಹೀಗಿರುವಾಗ, ಇದೇ ಹೊತ್ತಿನಲ್ಲಿ ಬಿಜೆಪಿಯ ಪ್ರಬಲ ನಾಯಕರಾಗಿ ಗುರುತಿಸಿಕೊಂಡಿದ್ದ ಆಲೂರೆ ಇದೇ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದರು ಎಂಬುದು ಇಲ್ಲಿ ಗಮನಾರ್ಹ ಸಂಗತಿ.
ಸರಸಂಬಾ ಗ್ರಾಮ ಪಂಚಾಯಿತಿಗೆ ಈ ಹಿಂದೆ ಮೂರು ಬಾರಿ ಸದಸ್ಯರಾಗಿ ಆಯ್ಕೆಗೊಂಡಿದ್ದ ಆಲೂರೆ ಸ್ಥಳೀಯವಾಗಿ ಉತ್ತಮ ಜನಸಂಪರ್ಕ ಕಾಯ್ದುಕೊಂಡಿದ್ದರು. ಈ ಎಲ್ಲ ಆಯಾಮಗಳಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
(ವರದಿ- ಮಹೇಶ್ ಕುಲಕರ್ಣಿ, ಕಲಬುರಗಿ)
(This copy first appeared in Hindustan Times Kannada website. To read more like this please logon to kannada.hindustantimes.com)