ಕನ್ನಡ ಸುದ್ದಿ  /  Karnataka  /  Kalaburagi News Brutal Murder Of Girish Chakra A Supporter Of Mp Umesh Jadhav In Saganur Village Afazalpur Tq Mkk

Kalaburagi Crime: ಅಫಜಲಪುರ ತಾಲೂಕು ಸಾಗನೂರು ಗ್ರಾಮದಲ್ಲಿ ಸಂಸದ ಉಮೇಶ್​ ಜಾಧವ್ ಬೆಂಬಲಿಗ ಗಿರೀಶ್ ಚಕ್ರನ ಬರ್ಬರ ಹತ್ಯೆ

ಬಿಜೆಪಿ ನಾಯಕ ಗಿರೀಶ್ ಚಕ್ರ ಅವರನ್ನು ಅಫಜಲಪುರ ತಾಲೂಕಿನ ಸಾಗನೂರ ಗ್ರಾಮದಲ್ಲಿ ಗುರುವಾರ ರಾತ್ರಿ ಭೀಕರವಾಗಿ ಹತ್ಯೆ ಮಾಡಲಾಗಿದೆ. ಗಿರೀಶ್ ಚಕ್ರ ಅವರು ಸಂಸದ ಉಮೇಶ್ ಜಾಧವ್ ಅವರ ಆಪ್ತರಾಗಿದ್ದರು. (ವರದಿ- ಮಹೇಶ್ ಕುಲಕರ್ಣಿ, ಕಲಬುರಗಿ)

ಕೊಲೆಗೀಡಾದ ಗಿರೀಶ್ ಚಕ್ರ (ಎಡ ಚಿತ್ರ); ಗಿರೀಶ್ ಚಕ್ರ ಸಂಸದ ಉಮೇಶ್ ಜಾಧವ್ ಜೊತೆಗೆ (ಬಲ ಚಿತ್ರ)
ಕೊಲೆಗೀಡಾದ ಗಿರೀಶ್ ಚಕ್ರ (ಎಡ ಚಿತ್ರ); ಗಿರೀಶ್ ಚಕ್ರ ಸಂಸದ ಉಮೇಶ್ ಜಾಧವ್ ಜೊತೆಗೆ (ಬಲ ಚಿತ್ರ)

ಕಲಬುರಗಿ: ಸಂಸದ ಡಾ. ಉಮೇಶ್ ಜಾದವ್ ಅವರ ಬೆಂಬಲಿಗ, ಬಿಜೆಪಿ ನಾಯಕ ಗಿರೀಶ್ ಚಕ್ರ ಅವರನ್ನು ಅಫಜಲಪುರ ತಾಲೂಕಿನ ಸಾಗನೂರ ಗ್ರಾಮದಲ್ಲಿ ಗುರುವಾರ ರಾತ್ರಿ ಭೀಕರವಾಗಿ ಹತ್ಯೆ ಮಾಡಲಾಗಿದೆ.

ನಾಲ್ಕು ದಿನಗಳ ಹಿಂದಷ್ಟೇ ಗಿರೀಶ್ ಚಕ್ರ ಅವರನ್ನು ಜಿಲ್ಲಾ ಬಿಎಸ್‌ಎನ್‌ಎಲ್ ಸಲಹಾ ಸಮಿತಿ ಸದಸ್ಯರನ್ನಾಗಿ ಸಂಸದ ಉಮೇಶ್ ಜಾಧವ್ ನೇಮಕ ಮಾಡಲಾಗಿತ್ತು. ಹೀಗಾಗಿ ಪಾರ್ಟಿ ಕೊಡಿಸುವ ನೆಪದಲ್ಲಿ ಜಮೀನಿಗೆ ಕರೆಯಿಸಿ ಆತನ ಸ್ನೇಹಿತರೇ ಈ ಕೃತ್ಯವೆಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸ್ನೇಹಿತರ ಆಹ್ವಾನಕ್ಕೆ ಓಗೊಟ್ಟು ಜಮೀನಿಗೆ ಬಂದ ಗಿರೀಶ್ ಕಣ್ಣಿಗೆ ಮೆಣಿಸಿನ ಪುಡಿ ಎರಚಿ, ಬಳಿಕ ಹಲ್ಲೆ ನಡೆಸಿದ್ದಾರೆ. ಮಾರಣಾಂತಿಕ ಗಾಯಗೊಂಡಿದ್ದ ಅವರು ಸ್ಥಳದಲ್ಲೇ ಮೃತಪಟ್ಟರು.

ಘಟನೆ ನಡೆದ ಸ್ಥಳಕ್ಕೆ ಗಾಣಗಾಪುರ ಪೊಲೀಸರು ತತ್‌ಕ್ಷಣವೇ ಹೋಗಿದ್ದರು. ಭೀಕರ ಹತ್ಯೆಗೆ ಸಂಬಂಧಿಸಿದ ತನಿಖೆ ಪ್ರಗತಿಯಲ್ಲಿದೆ. ಈ ಅಮಾನುಷ ಕೃತ್ಯವೆಸಗಿದವರನ್ನು ಬಂಧಿಸಲು ಪೊಲೀಸರು ಶೋಧ ಮಂದುವರಿಸಿದ್ದಾರೆ. ಕೊಲೆಗೆ ಸ್ಪಷ್ಟ ಕಾರಣ ಬಹಿರಂಗವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಗಿರೀಶ್ ಚಕ್ರ ಯಾರು

ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಸಾಗನೂರ ಗ್ರಾಮದ ಬಳಿ ಗುರುವಾರ ರಾತ್ರಿ ಹತ್ಯೆಗೀಡಾದ ಬಿಜೆಪಿ ಯುವ ಮುಖಂಡ ಗಿರೀಶ್ ಚಕ್ರ ಕೋಲಿ ಸಮಾಜದ ಪ್ರಬಲ ಯುವ ನಾಯಕ ಎಂದು ಗುರುತಿಸಿಕೊಳ್ಳಲು ಆರಂಭಿಸಿದ್ದ. ಈತ ಇತ್ತೀಚೆಗೆ ಸಂಸದ ಉಮೇಶ್ ಜಾಧವ್ ಅವರ ಮೂಲಕ ಕೇಂದ್ರ ಮತ್ತು ರಾಜ್ಯ ಸರಕಾರಕ್ಕೆ ಸಮುದಾಯವನ್ನು ಎಸ್ಟಿ ಕ್ಯಾಟಗರಿಗೆ ಸೇರ್ಪಡೆ ಮಾಡುವ ನಿಟ್ಟಿನಲ್ಲಿ ಒತ್ತಡ ಹೇರುವ ಕೆಲಸ ಸಹ ಮಾಡುತ್ತಿದ್ದ ಎನ್ನಲಾಗಿದೆ.

ಮುಖ್ಯವಾಗಿ, ಕಲಬುರಗಿ ಸಂಸದ ಡಾ.ಉಮೇಶ್ ಜಾಧವ್ ಅವರ ಬಲಗೈ ಭಂಟನಾಗಿದ್ದ ಈತ ನೇರ ಮಾತುಗಾರ ಎಂದೇ ಗೆಳೆಯರ ಬಳಗದಲ್ಲಿ ಗುರುತಿಸಿಕೊಂಡಿದ್ದ. ಈತನ ನೇರವಂತಿಕೆ ಮೆಚ್ಚಿದ್ದ ಸಂಸದ ಡಾ.ಜಾಧವ್ ಕಳೆದ ಐದು ದಿನಗಳ ಹಿಂದೆ ಬಿಎಸ್‍ಎನ್‍ಎಲ್ ಸಲಹಾ ಸಮಿತಿ ಸದಸ್ಯನಾಗಿ ನೇಮಕ ಮಾಡಿಸಿದ್ದರು. ಯಾರಿಗೂ ನೋವುಂಟು ಮಾಡದ ವ್ಯಕ್ತಿಯಾಗಿದ್ದರೂ, ಅನ್ಯಾಯದ ವಿರುದ್ಧ ಪ್ರತಿಭಟಿಸುವ ಮನೋಭಾವದವನು ಎಂದು ಗ್ರಾಮಸ್ಥರು ಹೇಳುತ್ತಾರೆ.

(This copy first appeared in Hindustan Times Kannada website. To read more like this please logon to kannada.hindustantimes.com)

(ವರದಿ- ಮಹೇಶ್ ಕುಲಕರ್ಣಿ, ಕಲಬುರಗಿ)

IPL_Entry_Point