Kalyana Karnataka: ಪ್ರತ್ಯೇಕ ಬಜೆಟ್, 10 ಗ್ಯಾರಂಟಿ ಬೇಡಿಕೆ; ಬಜೆಟ್‌ನಲ್ಲಿ ಕಲ್ಯಾಣ ಕರ್ನಾಟಕದ ನಿರೀಕ್ಷೆಗಳಿವು
Kalaburagi News: ನೂತನ ಕಾಂಗ್ರೆಸ್ ಸರ್ಕಾರದ ಮೊದಲ ಬಜೆಟ್‌ಗೆ ದಿನಗಣನೆ ಆರಂಭವಾಗಿದೆ. ಈ ನಡುವೆ ರಾಜ್ಯಾದ್ಯಂತ ಬಜೆಟ್ ಮೇಲಿನ ನಿರೀಕ್ಷೆಗಳು ಕೂಡಾ ಹೆಚ್ಚಿವೆ. ಕಲ್ಯಾಣ ಕರ್ನಾಟಕದ ಜನರ ನಿರೀಕ್ಷೆಗಳೇನು ಎಂಬ ಬಗ್ಗೆ ವಿವರ ಇಲ್ಲಿದೆ.

ಕಲಬುರಗಿ: ನೂತನ ಕಾಂಗ್ರೆಸ್ ಸರ್ಕಾರದ ಚೊಚ್ಚಲ ಬಜೆಟ್ ಅಧಿವೇಶನ ಜುಲೈ 3ರಿಂದ ಆರಂಭವಾಗಲಿದೆ. ಜುಲೈ 7ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್ ಮಂಡಿಸಲಿದ್ದು, ಈ ಬಜೆಟ್‌ನಲ್ಲಿ ಕಲ್ಯಾಣ ಕರ್ನಾಟಕ ಭಾಗಕ್ಕೆ ವಿಶೇಷ ಅನುದಾನ ನೀಡಿ ಅಭಿವೃಈ ದ್ಧಿಗೆ ನಾಂದಿ ಹಾಡುವರೇ ಎಂದು ಈ ಭಾಗದ ಜನರ ನಿರೀಕ್ಷೆಯಲ್ಲಿದ್ದಾರೆ.
ಟ್ರೆಂಡಿಂಗ್ ಸುದ್ದಿ
ಪ್ರತ್ಯೇಕ ಬಜೆಟ್ ಮಂಡನೆಯಾಗಲಿ
ಕಲ್ಯಾಣ ಕರ್ನಾಟಕ ಅಭಿವೃದ್ಧಿಗಾಗಿ ಈ ಹಿಂದೆ ಪ್ರತ್ಯೇಕ ರಾಜ್ಯದ ಕೂಗು ಕೇಳಿ ಬಂದಿತ್ತು. ಅದರ ಶಮನಕ್ಕಾಗಿಯೇ 371 (ಜೆ) ವಿಧಿ ಜಾರಿಗೆ ಬಂದಿತು. ಆದರೆ, ಈಗ ಪ್ರತ್ಯೇಕ ಬಜೆಟ್ ಕೂಗು ಕೇಳಿ ಬರುತ್ತಿದೆ. ರಾಜ್ಯದ ಬಜೆಟ್‌ನಲ್ಲಿ ಮೂರು ಲಕ್ಷ ಕೋಟಿ ರೂಪಾಯಿ ಮೊತ್ತದ ಬಜೆಟ್ ಮಂಡನೆಯಾದರೆ, ಕಲ್ಯಾಣ ಕರ್ನಾಟಕ ಭಾಗಕ್ಕೆ ಭೌಗೋಳಿಕ ಸರಾಸರಿ ಹಾಗೂ ಜನಸಂಖ್ಯೆಗೆ ಅನುಗುಣವಾಗಿ ಕನಿಷ್ಠ 70 ಸಾವಿರ ಕೋಟಿ ರೂಪಾಯಿಗಳಷ್ಟಾದರೂ ಕಲ್ಯಾಣ ಕರ್ನಾಟಕಕ್ಕೆ ಮೀಸಲಿಡಬೇಕು. ಈ ನಿಟ್ಟಿನಲ್ಲಿ ಪ್ರತ್ಯೇಕ ಬಜೆಟ್ ಮಂಡಿಸಿದಲ್ಲಿ ಈ ಭಾಗ ರಾಜ್ಯದ ಸರಾಸರಿಯಷ್ಟಾದರೂ ಅಭಿವೃದ್ಧಿ ಸಾಧ್ಯ ಎಂಬುದು ಈ ಭಾಗದ ಜನರ ಅಭಿಪ್ರಾಯ.
ತೊಗರಿ ಮಂಡಳಿಗೆ ಸಿಗಲಿ ಅನುದಾನ
ಎಸ್ಎಂ ಕೃಷ್ಣ ಸಿಎಂ ಆಗಿರುವ ಸಂದರ್ಭದಲ್ಲಿ ತೊಗರಿ ಅಭಿವೃದ್ಧಿ ಮಂಡಳಿ ರಚನೆಯಾಗಿತ್ತು. ಹೆಸರಿಗಷ್ಟೇ ಮಂಡಳಿ ಇದೆ. ಈ ಮಂಡಳಿಗೆ ಯಾವ ಸರ್ಕಾರವೂ ಅನುದಾನ ಬಿಡುಗಡೆ ಮಾಡಿಲ್ಲ. ಕೆಎಂಎಫ್ ಮಾದರಿಯಲ್ಲಿ ಈ ಮಂಡಳಿ ರಚನೆಯಾಗಬೇಕೆಂಬುದು ಈ ಭಾಗದ ರೈತರ ಬೇಡಿಕೆಯಾಗಿದೆ. ಮಂಡಳಿಯಿಂದ ಹೊಸ ತಳಿಗಳ ಸಂಶೋಧನೆ, ತೊಗರಿ ಬೇಳೆಗೆ ಸೂಕ್ತ ಮಾರುಕಟ್ಟೆ ಕಲ್ಪಿಸಲು ಮಂಡಳಿಗೆ ಕನಿಷ್ಠ 100 ಕೋಟಿ ರೂಪಾಯಿ ಅನುದಾನದ ಅಗತ್ಯವಿದೆ. ಇಲ್ಲಿಯವರೆಗೂ ಯಾವ ಮುಖ್ಯಮಂತ್ರಿಯೂ ಈ ಮಂಡಳಿ ಬಗ್ಗೆ ಕಾಳಜಿ ತೋರಿಲ್ಲ. ಸಿದ್ದರಾಮಯ್ಯನವರಾದರೂ ವಿಶೇಷ ಕಾಳಜಿ ತೋರಿಸಿ ಹೆಚ್ಚಿನ ಅನುದಾನ ನೀಡುತ್ತಾರೆಯೇ ಎಂದು ನೋಡಬೇಕಾಗಿದೆ.
ಕಲ್ಯಾಣ ಕರ್ನಾಟಕಕ್ಕೆ ಬೇಕು 10 ಗ್ಯಾರಂಟಿ
ಚುನಾವಣೆಯಲ್ಲಿ ಕಾಂಗ್ರೆಸ್ ಐದು ಗ್ಯಾರಂಟಿ ನೀಡಿದಂತೆ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗಾಗಿಯೇ ನೀಡಿರುವ 10 ಭರವಸೆಗಳಿಗೆ ಸರಕಾರ ಅನುಮೋದನೆ ನೀಡಬೇಕಾಗಿದೆ. 371(ಜೆ) ವಿಧಿ ಪೂರ್ಣ ಪ್ರಮಾಣದಲ್ಲಿ ಜಾರಿಗೊಳಿಸುವುದು. ಮೂಲ ಸೌಕರ್ಯ ಅಭಿವೃದ್ಧಿಗಾಗಿ ಪ್ರತಿ ವರ್ಷ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ 5 ಸಾವಿರ ಕೋಟಿ ರೂಪಾಯಿ ಅನುದಾನ ನೀಡುವುದು. ಖಾಲಿ ಇರುವ 32 ಸಾವಿರಕ್ಕೂ ಅಧಿಕ ಹುದ್ದೆಗಳನ್ನು ಭರ್ತಿ ಮಾಡುವುದು. ಕಲ್ಯಾಣ ಕರ್ನಾಟಕದಲ್ಲಿ ಕೈಗಾರಿಕಾ ಕಾರಿಕಾರ್ ನಿರ್ಮಾಣ, ಒಂದು ಲಕ್ಷ ಉದ್ಯೋಗವನ್ನು ಖಾಸಗಿ ವಲಯವೊಂದರಲ್ಲಿ ಸೃಷ್ಟಿಸುವುದು. ಕೃಷ್ಣಾ ಮತ್ತು ಗೋದಾವರಿ ಜಲಾನಯನ ಪ್ರದೇಶದ ಎಲ್ಲ ನೀರಾವರಿ ಯೋಜನೆಗಳನ್ನು 24 ತಿಂಗಳೊಳಗೆ ಕಾಮಗಾರಿ ಕೈಗೆತ್ತಿಕೊಳ್ಳುವುದು. ಜಿಲ್ಲಾ ಕೇಂದ್ರಗಳಲ್ಲಿ ಚತುಷ್ಪಥ ರಸ್ತೆ ನಿರ್ಮಾಣ ಮಾಡುವುದು. ಐಐಟಿ, ಐಎಎಂ, ಏಮ್ಸ್ ಸ್ಥಾಪಿಸುವುದು. ಶಿಶು ಮರಣ ಪ್ರಮಾಣ ಹಾಗೂ ಅಪೌಷ್ಟಿಕತೆಯ ಸಮಸ್ಯೆಗಳ ತುರ್ತು ಪರಿಹಾರಕ್ಕಾಗಿ 41 ಕ್ಷೇತ್ರಗಳಲ್ಲಿ ತಲಾ ಒಂದರಂತೆ ತಾಯಿ ಮತ್ತು ಮಕ್ಕಳ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪಿಸುವುದು. ಬಡ ಕುಟುಂಬಕ್ಕೆ ಮನೆ ನಿರ್ಮಿಸಿಕೊಡುವುದು. ಪ್ರತಿ ಗ್ರಾಪಂಗೆ ಒಂದು ಕೋಟಿ ರೂ ಅನುದಾನ ನೀಡುವುದು. ಈ 10 ಅಂಶಗಳ ಯೋಜನೆ ಜಾರಿಗೊಳ್ಳಬೇಕಾಗಿದೆ.
ಪ್ರತ್ಯೇಕ ಕೈಗಾರಿಕಾ ನೀತಿ ಜಾರಿಯಾಗಲಿ
ಎಲ್ಲ ಕ್ಷೇತ್ರಗಳಂತೆ ಕೈಗಾರಿಕಾ ಕ್ಷೇತ್ರವೂ ತೀರಾ ಹಿಂದುಳಿದಿದೆ. ವಿಮಾನ ನಿಲ್ದಾಣ ಇಲ್ಲದೆ ಕೈಗಾರಿಕೆಗಳ ಅಭಿವೃದ್ಧಿ ಅಸಾಧ್ಯವೆಂದು ಹೇಳಲಾಗುತ್ತಿತ್ತು. ಆದರೆ, ಹಲವು ವರ್ಷಗಳೇ ಕಳೆದರೂ ಇಲ್ಲಿ ವಿಮಾನ ನಿಲ್ದಾಣವಾಗಿಲ್ಲ. ಕೈಗಾರಿಕೆಗಳು ಸ್ಥಾಪನೆ ಆಗಲೇ ಇಲ್ಲ. ಹೀಗಾಗಿ ಕೈಗಾರಿಕಾ ಅಭಿವೃದ್ಧಿಯಾಗಲೇ ಬೇಕು. ಕೈಗಾರಿಕಾ ಸ್ನೇಹಿ ವಾತಾವರಣ ನಿರ್ಮಿಸುವುದು ಅಗತ್ಯವಾಗಿದೆ. ಕಲ್ಯಾಣ ಕರ್ನಾಟಕ ಭಾಗಕ್ಕೆ ಪ್ರತ್ಯೇಕ ಕೈಗಾರಿಕಾ ನೀತಿ ಜಾರಿಗೊಳಿಸಲು ಸರ್ಕಾರ ಬದ್ಧವಾಗಿದೆ ಎಂದು ಸಣ್ಣ ಕೈಗಾರಿಕಾ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಹೇಳಿದ್ದಾರೆ. ಈ ನಿಟ್ಟಿನಲ್ಲಿ ಸರ್ಕಾರ ಪ್ರಯತ್ನ ಮಾಡಬೇಕಾಗಿದೆ.
ಮೆಗಾ ಟೆಕ್ಸ್‌ಟೈಲ್ ಪಾರ್ಕ್‌ಗೆ ಸೌಲಭ್ಯ
ಚುನಾವಣೆ ಸಂದರ್ಭದಲ್ಲಿ ಕೇಂದ್ರ ಬಿಜೆಪಿ ಸರ್ಕಾರ ದೇಶದ ಏಳು ಕಡೆ ಮೆಗಾ ಟೆಕ್ಸ್‌ಟೈಲ್ ಪಾರ್ಕ್‌ಗೆ ಅಡಿಗಲ್ಲು ಹಾಕಿದೆ. ಇದಕ್ಕಾಗಿ ಕೇಂದ್ರ ಸರ್ಕಾರ ಅನುದಾನವೂ ಮೀಡಲಿಟ್ಟಿದೆ. ಹೂಡಿಕೆದಾರರ ಪಾಲ್ಗೊಳ್ಳುವಿಕೆ ಪ್ರಕ್ರಿಯೆ ನಡೆಯುತ್ತಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕೇಂದ್ರದಿಂದ ಅನುದಾನ ಪಡೆಯುವುದರ ಜೊತೆಗೆ ಈ ಪಾರ್ಕ್ ಅಭಿವೃದ್ಧಿಗೆ ಸೌಲಭ್ಯ ಕಲ್ಪಿಸಲು ಅನುದಾನ ನೀಡಬೇಕಾಗಿದೆ.
ಹುದ್ದೆಗಳ ನೇಮಕಾತಿ ಆಗಲಿ
ಕಲ್ಯಾಣ ಕರ್ನಾಟಕ ಪ್ರದೇಶದ ಅಭಿವೃದ್ಧಿಗೆ ಪೂರಕವಾಗಿ ಪೂರ್ಣ ಪ್ರಮಾಣದಲ್ಲಿ ಹುದ್ದೆಗಳ ಭರ್ತಿಯಾಗಬೇಕಿದೆ. ಆದರೆ ಯಾವುದೇ ಸರ್ಕಾರವೂ ಈ ಭಾಗದಲ್ಲಿ 34 ಸಾವಿರ ಹುದ್ದೆಗಳು ಖಾಲಿ ಇದ್ದರೂ ಭರ್ತಿ ಮಾಡಿಲ್ಲ. ಈ ಹಿಂದೆ ಸಿದ್ದರಾಮಯ್ಯ ಸಿಎಂ ಅಗಿದ್ದಾಗ 2014ರ ನವೆಂಬರ್‌ನಲ್ಲಿ ವಿಶೇಷ ಸಂಪುಟ ಸಭೆ ನಡೆಸಿ 34 ಸಾವಿರ ಹುದ್ದೆ ಖಾಲಿ ಇರುವುದನ್ನು ಗುರುತಿಸಲಾಗಿತ್ತು. ಈ ಹುದ್ದೆಗಳನ್ನು 2015ರೊಳಗಾಗಿ ಭರ್ತಿ ಮಾಡಲು ಸಹ ಗಡುವು ನೀಡಲಾಗಿತ್ತು. ಆದರೆ, ಐದು ವರ್ಷಗಳಲ್ಲಿ ಕೇವಲ 14 ಸಾವಿರ ಹುದ್ದೆಗಳು ಭರ್ತಿಯಾಗಿವೆ. ಈ ಐದು ವರ್ಷದಲ್ಲಿ ಹೆಚ್ಚು ಹುದ್ದೆಗಳು ಖಾಲಿಯಾಗಿವೆ. ಈ ಹುದ್ದೆಗಳ ಬಗ್ಗೆ ಪುನರ್ ಪರಿಶೀಲಿಸಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಸರ್ಕಾರ ಮುಂದಾಗಬೇಕಾಗಿದೆ.
ಅಭಿವೃದ್ಧಿ ಮಂಡಳಿಗೆ ಪ್ರತ್ಯೇಕ ಅನುದಾನ
ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ ಈ ಹಿಂದಿನ ಸರ್ಕಾರ 5 ಸಾವಿರ ಕೋಟಿ ರೂಪಾಯಿ ನೀಡುವುದಾಗಿ ಘೋಷಣೆ ಮಾಡಿದ್ದರೂ ಸಹ ಕೇವಲ 3 ಸಾವಿರ ಕೋಟಿ ರೂಪಾಯಿ ಅನುದಾನ ನೀಡಿತ್ತು. ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಈ ಮಂಡಳಿಗೆ 5 ಸಾವಿರ ಕೋಟಿ ರೂಪಾಯಿ ಅನುದಾನ ನೀಡುವುದಾಗಿ ಘೋಷಿಸಿತ್ತು. ಕೊಟ್ಟ ಮಾತಿನಂತೆ ಸರ್ಕಾರ ಈ ಅನುದಾನ ಘೋಷಣೆ ಮಾಡಬೇಕಾಗಿದೆ.
ಸಿಎಂ ಸಿದ್ದರಾಮಯ್ಯನವರು ಮಂಡಿಸುವ ಬಜೆಟ್‌ನಲ್ಲಿ ಕಲ್ಯಾಣ ಕರ್ನಾಟಕ ಭಾಗದ ಕಲಬುರಗಿ, ಬೀದರ್, ಯಾದಗಿರಿ, ರಾಯಚೂರು, ಬಳ್ಳಾರಿ, ಕೊಪ್ಪಳ ಮತ್ತು ವಿಜಯನಗರ ಜಿಲ್ಲೆಗಳ ಜನರು ಭಾರಿ ಅನುದಾನದ ನಿರೀಕ್ಷೆಯಲ್ಲಿದ್ದಾರೆ.
ವರದಿ: ಎಸ್‌ಬಿ ರೆಡ್ಡಿ, ಕಲಬುರಗಿ
ಸಂಬಂಧಿತ ಲೇಖನ