ಕನ್ನಡ ಸುದ್ದಿ  /  Karnataka  /  Kalaburagi News Jevargi Mla Ajay Singh Has Been Appointed As Chairman Of Kkrdb Political News In Kannada Arc

Kalaburagi News: ಅತೃಪ್ತ ಶಾಸಕ ಡಾ. ಅಜಯಸಿಂಗ್‌ಗೆ ಕೆಕೆಆರ್‌ಡಿಬಿ ಅಧ್ಯಕ್ಷ ಪಟ್ಟ ನೀಡಿದ ಸರಕಾರ

ಕಲಬುರಗಿ ಜಿಲ್ಲೆಯ ಜೇವರ್ಗಿ ಕ್ಷೇತ್ರದ ಅತೃಪ್ತ ಶಾಸಕ ಡಾ. ಅಜಯಸಿಂಗ್‌ ಅವರಿಗೆ ಸರಕಾರ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ (ಕೆಕೆಆರ್‌ಡಿಬಿ) ಅಧ್ಯಕ್ಷರಾಗಿ ನೇಮಕ ಮಾಡುವ ಮೂಲಕ ಪಕ್ಷ, ಸರಕಾರೊಂದಿಗೆ ಬಾಂಧವ್ಯ ಗಟ್ಟಿಗೊಳಿಸಲು ಪ್ರಯತ್ನ ಮಾಡಿದೆ.

ಜೇವರ್ಗಿ ಕ್ಷೇತ್ರದ ಶಾಸಕರಾದ ಡಾ. ಅಜಯ್‌ ಸಿಂಗ್‌ ಅವರು ಕೆಕೆಆರ್‌ಡಿಬಿ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.
ಜೇವರ್ಗಿ ಕ್ಷೇತ್ರದ ಶಾಸಕರಾದ ಡಾ. ಅಜಯ್‌ ಸಿಂಗ್‌ ಅವರು ಕೆಕೆಆರ್‌ಡಿಬಿ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.

ಕಲಬುರಗಿ: ಸಚಿವ ಸ್ಥಾನ ಸಿಗದೆ ಇರುವುದರಿಂದ ಸರಕಾರದಿಂದ ಮತ್ತು ಸಚಿವ, ಶಾಸಕರಿಂದ ಅಂತರ ಕಾಯ್ದುಕೊಂಡು ದೂರ ಉಳಿದುಕೊಂಡಿದ್ದ ಜಿಲ್ಲೆಯ ಜೇವರ್ಗಿ ಕ್ಷೇತ್ರದ ಅತೃಪ್ತ ಶಾಸಕ ಡಾ. ಅಜಯಸಿಂಗ್‌ ಅವರಿಗೆ ಸರಕಾರ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅಧ್ಯಕ್ಷರಾಗಿ ನೇಮಕ ಮಾಡುವ ಮೂಲಕ ಪಕ್ಷ, ಸರಕಾರೊಂದಿಗೆ ಬಾಂಧವ್ಯ ಗಟ್ಟಿಗೊಳಿಸಲು ಪ್ರಯತ್ನ ಮಾಡಿದೆ.

ಟ್ರೆಂಡಿಂಗ್​ ಸುದ್ದಿ

ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್‌ ಅವರ ಸುಪುತ್ರ ಆಗಿರುವ ಡಾ.ಅಜಯಸಿಂಗ್‌ ಅವರು ಸತತ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ಸಚಿವ ಸ್ಥಾನಕ್ಕೆ ಪ್ರಬಲ ಆಕಾಂಕ್ಷಿಯಾಗಿದ್ದರು. ಆದರೆ, ಶಾಸಕರ ತಂದೆಯ (ದಿ.‌ ಮಾಜಿ ಸಿಎಂ ದರ್ಮಸಿಂಗ್) ಆಪ್ತ ಸ್ನೇಹಿತರಾಗಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಈ ಬಾರಿ ನನಗೆ ಸಚಿವರಾಗಿ ನೇಮಕ ಮಾಡುತ್ತಾರೆ ಎಂಬ ಭರವಸೆ ಹೊಂದಿದ್ದರು. ಆದರೆ, ಮಲ್ಲಿಕಾರ್ಜುನ ಖರ್ಗೆ ಅವರು ತಮ್ಮ ಸುಪುತ್ರ ಪ್ರಿಯಾಂಕ್‌ ಖರ್ಗೆ, ಕಟ್ಟಾ ಬೆಂಬಲಿಗ ಡಾ. ಶರಣಪ್ರಕಾಶ ಪಾಟೀಲ್‌ ಅವರಿಗೆ ಸಚಿವ ಸ್ಥಾನ ನೀಡಿ ಡಾ. ಅಜಯಸಿಂಗ್‌ ಅವರನ್ನು ಸಚಿವ ಸ್ಥಾನದಿಂದ ವಂಚಿತಗೊಳಿಸಲಾಗಿತ್ತು. ಇದರಿಂದ ಅತೃಪ್ತಗೊಂಡ ಡಾ. ಅಜಯಸಿಂಗ್‌ ಪಕ್ಷ ಮತ್ತು ಸರಕಾರದೊಂದಿಗೆ ಅಂತರ ಕಾಯ್ದುಕೊಂಡಿದ್ದರು.

ರಾಜ್ಯ ಸರಕಾರದ ಮಹತ್ವದ ಗ್ಯಾರಂಟಿ ಯೋಜನೆಗಳಲ್ಲೊಂದಾದ ಗೃಹಜ್ಯೋತಿ ಯೋಜನೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ನೇತೃತ್ವದಲ್ಲಿ ಕಲಬುರಗಿಯಲ್ಲಿಯೇ ಸಿಎಂ ಸಿದ್ದರಾಮಯ್ಯ, ಡಿಸಿಎ ಸಿದ್ದರಾಮ್ಯಯ ಅವರನ್ನೊಳಗೊಂಡು ಈ ಭಾಗದ ಸಚಿವ, ಶಾಸಕರ ಸಮ್ಮುಖದಲ್ಲಿ ಆಗಸ್ಟ್‌ 5 ರಂದು ಚಾಲನೆ ನೀಡಲಾಗಿತ್ತು. ಈ ಸಮಾರಂಭಕ್ಕೆ ಜೇವರ್ಗಿ ಶಾಸಕ ಡಾ.ಅಜಯಸಿಂಗ್ ಕಾರ್ಯಕ್ರಮಕ್ಕೆ ಗೈರಾಗುವ ಮೂಲಕ ತಮ್ಮ ಅಸಮಾಧಾನ ಹೊರ ಹಾಕಿದ್ದರು. ಜೊತೆಗೆ ಅವರು ತಮ್ಮ ಫೇಸ್ಬುಕ್ ಖಾತೆಯಲ್ಲಿ, ಅವಕಾಶ ಕಿತ್ತುಕೊಳ್ಳಬಹುದೆ ಹೊರತು ಸಾಮರ್ಥ್ಯ, ಜನಪ್ರಿಯತೆಯನಲ್ಲ ಎಂದು ಬರೆದುಕೊಂಡಿದ್ದರು. ಅಲ್ಲದೇ ಶಾಸಕ ಡಾ. ಅಜಯಸಿಂಗ್‌ ಪಕ್ಷ ತೊರೆದು ಬಿಜೆಪಿ ಸೇರಲಿದ್ದಾರೆ ಎಂಬ ವದಂತಿ ಸಹ ಹಬ್ಬಿತ್ತು. ಇದರಿಂದ ಎಚ್ಚೆತ್ತುಕೊಂಡ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಚಿವ ಪ್ರಿಯಾಂಕ್‌ ಖರ್ಗೆ ಅವರು ಡಾ.ಅಜಯಸಿಂಗ್‌ ಅವರಿಗೆ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅಧ್ಯಕ್ಷರಾಗಿ ನೇಮಕ ಮಾಡಿ ಸರಕಾರದ ಮೂಲಕ ಗುರುವಾರ ಅಧಿಸೂಚನೆ ಹೊರಡಿಸಿದೆ.

ಮಂಡಳಿಗೆ ಅಧ್ಯುಕ್ಷರಾಗಿ ಡಾ. ಅಜಯಸಿಂಗ್‌, ಸದಸ್ಯರಾಗಿ ರಾಜ್ಯಸಭಾ ಸದಸ್ಯ ಸೈಯದ್‌ ನಾಜೀರ್‌ ಹುಸೇನ್‌, ಬೀದರ್‌ ವಿಧಾನ ಪರಿಷತ್‌ ಸದಸ್ಯ ಅರವಿಂದ ಅರಳಿ ಯಲಕನೂರು, ಕಲಬುರಗಿಯ ವಿಧಾನ ಪರಿಷತ್‌ ಸದಸ್ಯ ತಿಪ್ಪಣಪ್ಪ ಕಮಕನೂರು, ಆಳಂದ ಶಾಸಕ ಬಿ.ಆರ್.ಪಾಟೀಲ್‌, ಯಾದಗಿರಿ ಜಿಲ್ಲೆಯ ಸೇಡಂ ಶಾಸಕ ರಾಜಾ ವೆಂಕಟಪ್ಪ ನಾಯಕ, ರಾಯಚೂರು ಜಿಲ್ಲೆಯ ಸಿಂಧನೂರ ಶಾಸಕ ಹಂಪನಗೌಡ ಬಾದರ್ಲಿ, ಯಲಬುರ್ಗಾ ಶಾಸಕ ಬಸವರಾಜ ರಾಯರೆಡ್ಡಿ, ಕೊಪ್ಪಳ ಜಿಲ್ಲೆಯ ಶಾಸಕ ರಾಘವೇಂದ್ರ ಇಟ್ನಾಳ, ಸಂಡೂರ ಶಾಸಕ ತುಕಾರಾಮ, ವಿಜಯನಗರ ಶಾಸಕ ಎಚ್.ಆರ್.ಗವಿಯಪ್ಪ ಅವರನ್ನು ಸದಸ್ಯರನ್ನಾಗಿ ನೇಮಕ ಮಾಡಿ ಅಧಿಸೂಚನೆ ಹೊರಡಿಸಿದ್ದು, ಇವರೆಲ್ಲ ಅವಧಿ ಒಂದು ವರ್ಷದಾಗಿದೆ ಎಂದು ತಿಳಿಸಿದೆ.

(ವರದಿ: ಎಸ್.ಬಿ.ರೆಡ್ಡಿ, ಕಲಬುರಗಿ)