Tippannappa Kamaknoor: ಪಕ್ಷದ ಶಿಸ್ತಿನ ಸಿಪಾಯಿ ತಿಪ್ಪಣ್ಣಪ್ಪ ಕಮಕನೂರಗೆ ಒಲಿದ ಎಂಎ‌ಲ್​ಸಿ ಪಟ್ಟ; ಖರ್ಗೆ ಅವರ ಶಿಷ್ಯನ ಪರಿಚಯ ಇಲ್ಲಿದೆ
ಕನ್ನಡ ಸುದ್ದಿ  /  ಕರ್ನಾಟಕ  /  Tippannappa Kamaknoor: ಪಕ್ಷದ ಶಿಸ್ತಿನ ಸಿಪಾಯಿ ತಿಪ್ಪಣ್ಣಪ್ಪ ಕಮಕನೂರಗೆ ಒಲಿದ ಎಂಎ‌ಲ್​ಸಿ ಪಟ್ಟ; ಖರ್ಗೆ ಅವರ ಶಿಷ್ಯನ ಪರಿಚಯ ಇಲ್ಲಿದೆ

Tippannappa Kamaknoor: ಪಕ್ಷದ ಶಿಸ್ತಿನ ಸಿಪಾಯಿ ತಿಪ್ಪಣ್ಣಪ್ಪ ಕಮಕನೂರಗೆ ಒಲಿದ ಎಂಎ‌ಲ್​ಸಿ ಪಟ್ಟ; ಖರ್ಗೆ ಅವರ ಶಿಷ್ಯನ ಪರಿಚಯ ಇಲ್ಲಿದೆ

ವಿಧಾನ ಪರಿಷತ್​ ಸದಸ್ಯರಾಗಿ ಅವಿರೋಧವಾಗಿ ಆಯ್ಕೆಯಾದ ಕಲಬುರಗಿ ಜಿಲ್ಲೆಯ ಕೋಲಿ, ಕಬ್ಬಲಿಗ ಸಮಾಜದ ಪ್ರಭಾವಿ ನಾಯಕ ತಿಪ್ಪಣ್ಣಪ್ಪ ಕಮಕನೂರ

ಪಕ್ಷದ ಶಿಸ್ತಿನ ಸಿಪಾಯಿ ತಿಪ್ಪಣ್ಣಪ್ಪ ಕಮಕನೂರಗೆ ಒಲಿದ ಎಂಎ‌ಲ್​ಸಿ ಪಟ್ಟ
ಪಕ್ಷದ ಶಿಸ್ತಿನ ಸಿಪಾಯಿ ತಿಪ್ಪಣ್ಣಪ್ಪ ಕಮಕನೂರಗೆ ಒಲಿದ ಎಂಎ‌ಲ್​ಸಿ ಪಟ್ಟ

ಕಲಬುರಗಿ: ಕಾಂಗ್ರೆಸ್‌ ಪಕ್ಷದ (Congress Party) ಶಿಸ್ತಿನ ಸಿಪಾಯಿ ತಿಪ್ಪಣ್ಣಪ್ಪ ಕಮಕನೂರ (Tippannappa Kamaknoor) ಅವರಿಗೆ ವಿಧಾನ ಪರಿಷತ್‌ ಸ್ಥಾನ ಒಲಿದು ಬಂದಿದೆ. ತೆರವಾಗಿದ್ದ ಮೂರು ಸ್ಥಾನಗಳಿಗೆ ನಡೆದ ವಿಧಾನ ಪರಿಷತ್‌ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದ ಜಗದೀಶ್ ಶೆಟ್ಟರ್‌ (Jagadish Shettar), ಸಚಿವ ಎನ್ಎಸ್ ಬೋಸರಾಜು (NS Boseraju) ಮತ್ತು ಕಲಬುರಗಿ ಜಿಲ್ಲೆಯ ಕೋಲಿ, ಕಬ್ಬಲಿಗ ಸಮಾಜದ ಪ್ರಭಾವಿ ನಾಯಕ ತಿಪ್ಪಣ್ಣಪ್ಪ ಕಮಕನೂರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಲಕ್ಷ್ಮಣ ಸವದಿ (Laxman Savadi), ಆರ್ ಶಂಕರ್‌ (R Shankar) ಹಾಗೂ ಬಾಬುರಾವ್ ಚಿಂಚನಸೂರ್​ (Baburao Chinchansur) ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಗಳಿಗೆ ಉಪ ಚುನಾವಣೆ ಘೋಷಿಸಲಾಗಿತ್ತು. ಸದ್ಯ ಶಂಕರ್‌ ಅವರಿಂದ ತೆರವಾದ ಸ್ಥಾನಕ್ಕೆ ತಿಪ್ಪಣ್ಣಪ್ಪ ಆಯ್ಕೆಯಾಗಿದ್ದಾರೆ. ಇವರ ಅಧಿಕಾರವಧಿ 2026ರ ಜೂನ್‌ 30ರವರೆಗೆ ಇರಲಿದೆ.

ಕೋಲಿ, ಕಬ್ಬಲಿಗ ಸಮಾಜ ರಾಜ್ಯದಲ್ಲಿ ಅಧಿಕ ಜನಸಂಖ್ಯೆ ಹೊಂದಿದೆ. ಈ ಸಮಾಜದಲ್ಲಿ ಪ್ರಸ್ತುತ ಪ್ರಭಾವಿ ನಾಯಕ ಎನಿಸಿಕೊಂಡಿದ್ದವರಲ್ಲಿ ಒಬ್ಬರು ಬಾಬುರಾವ್ ಚಿಂಚನಸೂರ್​, ಮತ್ತೊಬ್ಬರು ತಿಪ್ಪಣ್ಣಪ್ಪ ಕಮಕನೂರ. ಬಾಬುರಾವ್ ಕಾಂಗ್ರೆಸ್​ನಿಂದ ಗುರುಮಠಕಲ್‌ ಕ್ಷೇತ್ರದಲ್ಲಿ 2 ಬಾರಿ, ಚಿತ್ತಾಪುರ ಕ್ಷೇತ್ರದಿಂದ 3 ಬಾರಿ ಶಾಸಕರಾಗಿದ್ದರು. ಒಮ್ಮೆ ಸಪ್ತ ಖಾತೆಗಳ ಸಚಿವರಾಗಿ ಕೆಲಸ ಮಾಡಿದ್ದರು.

ಪಕ್ಷ ತೊರೆದಿದ್ದ ಬಾಬುರಾವ್

ಆದರೆ, 2018ರ ವಿಧಾನಸಭೆ ಚುನಾವಣೆಯಲ್ಲಿ ಸೋತ ಬಳಿಕ ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿದ್ದರು. ರಾಜಕೀಯ ಗುರುವೆಂದೇ ಕರೆಯಲ್ಪಡುವ ಈಗಿನ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರನ್ನು ಲೋಕಸಭೆ ಚುನಾವಣೆಯಲ್ಲಿ ಸೋಲಿಸಲು ಪ್ರಮುಖ ಪಾತ್ರವಹಿಸಿದ್ದರು ಎಂಬ ಕಾರಣಕ್ಕೆ ಬಾಬುರಾವ್​ ಅವರನ್ನು ಬಿಜೆಪಿ, ವಿಧಾನ ಪರಿಷತ್‌ ಸ್ಥಾನಕ್ಕೆ ಆಯ್ಕೆ ಮಾಡಿತ್ತು. ಹಾಗೆಯೇ ಅಂಬಿಗರ ಚೌಡಯ್ಯ ನಿಗಮ ಮಂಡಳಿ ಅಧ್ಯಕ್ಷರನ್ನಾಗಿಯೂ ನೇಮಕ ಮಾಡಿತ್ತು.

ಮರಳಿಗೂಡಿಗೆ

ಆ ಬಳಿಕ ಪಕ್ಷದಲ್ಲಿ ಒಂದು ಸಲ ಎಂಎಲ್‌ಸಿ ಆದವರಿಗೆ ಮತ್ತೆ ಪರಿಷತ್‌ ಟಿಕೆಟ್‌ ನೀಡುವುದಿಲ್ಲ ಎಂದು ತಿಳಿಯುತ್ತಿದ್ದಂತೆ ಬಾಬುರಾವ್, ಬಿಜೆಪಿ ವಿರುದ್ಧವೇ ತಿರುಗಿ ಬಿದ್ದು ಪಕ್ಷ ತೊರೆದು ಪುನಃ ಹಳೆಯ ಗಂಡನ ಪಾದವೇ ಗತಿ ಎಂಬಂತೆ ಕಾಂಗ್ರೆಸ್‌ ಸೇರಿದರು. ಒಲ್ಲದ ಮನಸ್ಸಿನಿಂದ ಬರಮಾಡಿಕೊಂಡ ಕಾಂಗ್ರೆಸ್ ಹೈಕಮಾಂಡ್, ಕೊನೆಗೂ ಗುರುಮಠಕಲ್‌ ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್‌ ಸಹ ನೀಡಿತ್ತು.

ದುರಾದೃಷ್ಟದಿಂದ ಪರಾಭವಗೊಂಡರೂ ಬಾಬುರಾವ್​ ಎಂಎಲ್‌ಸಿ ಮಾಡುವಂತೆ ಪಟ್ಟು ಹಿಡಿದರು. ಆದರೆ, ಮಲ್ಲಿಕಾರ್ಜುನ ಖರ್ಗೆ ಈ ಅವಕಾಶವಾದಿ ರಾಜಕಾರಣಿಗೆ ಮಣೆ ಹಾಕದೆ ಪಕ್ಷದ ಶಿಸ್ತಿನ ಸಿಪಾಯಿ ತಿಪ್ಪಣ್ಣಪ್ಪ ಕಮಕನೂರ ಅವರನ್ನು ಎಂಎಲ್‌ಸಿ ಮಾಡುವಲ್ಲಿ ಯಶಸ್ವಿಯಾದರು ಎಂದು ಹೇಳಲಾಗುತ್ತಿದೆ.

ತಿಪ್ಪಣ್ಣಪ್ಪ ಪರಿಚಯ

ಕೋಲಿ ಸಮಾಜದ ಪ್ರಭಾವಿ ನಾಯಕ ತಿಪ್ಪಣ್ಣಪ್ಪ ಕಲಬುರಗಿಯ ಚಿತ್ತಾಪುರ ತಾಲೂಕಿನ ಕಮಕನೂರ ಗ್ರಾಮದವರು. 1952ರ ಜೂನ್‌ 6ರಂದು ಜನಿಸಿದ ಇವರು, ಕಲಬುರಗಿ ಸರ್ಕಾರಿ ಕಾಲೇಜಿನಲ್ಲಿ ಬಿಎ ಪದವಿ ಪೂರೈಸಿದ್ದಾರೆ. ರಾಜಕೀಯದಲ್ಲಿ ಅನೇಕ ಏಳುಬೀಳು ಕಂಡಿರುವ ಅವರು, ತಾಲೂಕು ಅಭಿವೃದ್ಧಿ ಮಂಡಳಿ ಸದಸ್ಯರಾಗಿ, ಪಿಎಲ್‌ಡಿ ಬ್ಯಾಂಕ್‌ ಅಧ್ಯಕ್ಷರಾಗಿ, ಡಿಸಿಸಿ ಬ್ಯಾಂಕ್‌ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದಾರೆ.

ಅಷ್ಟೇ ಅಲ್ಲದೆ ಕಲಬುರಗಿ ಮಹಾನಗರ ಪಾಲಿಕೆ ಸದಸ್ಯರಾಗಿ, ಶಾಶ್ವತ ಹಿಂದುಳಿದ ವರ್ಗಗಳ ಅಯೋಗದ ಸದಸ್ಯರಾಗಿ, ಕೆಪಿಸಿಸಿ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. 2019ರಲ್ಲಿ ವಿಧಾನ ಪರಿಷತ್‌ ಸದಸ್ಯರಾಗಿ 11 ತಿಂಗಳು ಅವಧಿ ಪೂರೈಸಿದ್ದರು. ರಾಜ್ಯ ಕೋಲಿ ಸಮಾಜದ ಗೌರವಾಧ್ಯಕ್ಷ, ಜಿಲ್ಲಾ ಕಾಂಗ್ರೆಸ್‌ ಸಮಿತಿ ಹಿಂದುಳಿದ ವರ್ಗಗಳ ಘಟಕದ ಅಧ್ಯಕ್ಷರಾಗಿಯೂ ಕೆಲಸ ಮಾಡಿದ್ದಾರೆ.

ಖರ್ಗೆ ಅವರ ಕಟ್ಟಾ ಶಿಷ್ಯ ತಿಪ್ಪಣ್ಣಪ್ಪ

ಕೋಲಿ, ಕಬ್ಬಲಿಗ ಸಮಾಜದ ಹಿರಿಯ ಮುಖಂಡರಾಗಿದ್ದ ದಿ.ವಿಠ್ಠಲ್‌ ಹೇರೂರ್‌, ಮಾಜಿ ಸಚಿವ ಚಿಂಚನಸೂರ್​ ಬಿಜೆಪಿ ಸೇರ್ಪಡೆ ಬಳಿಕ ಸಮಾಜದಲ್ಲಿ ಪ್ರಭಾವಿ ನಾಯಕರಾಗಿ ಗುರುತಿಸಿಕೊಂಡಿರುವ ತಿಪ್ಪಣ್ಣಪ್ಪ, ಮಲ್ಲಿಕಾರ್ಜುನ ಖರ್ಗೆ ಕಟ್ಟಾ ಬೆಂಬಲಿಗ, ಶಿಷ್ಯರಾಗಿ ಪಕ್ಷದ ಬಲವರ್ಧನೆಗೆ ದುಡಿದರು. ಅವರು ಪಕ್ಷಕ್ಕೆ ತೋರಿದ ನಿಷ್ಠೆಗಾಗಿ ಮತ್ತೊಮ್ಮೆ ಎಂಎಲ್​ಸಿ ಪಟ್ಟ ಹುಡುಕಿಕೊಂಡು ಬಂದಿದೆ.

ಈ ಹಿಂದೆ 11 ತಿಂಗಳು ಅಧಿಕಾರದಲ್ಲಿದ್ದ ಕಾರಣ, ಸಮಾಜಕ್ಕೆ ಸಿಗಬೇಕಾಗಿರುವ ಸೌಲಭ್ಯ ಕಲ್ಪಿಸಲು ಸಾಧ್ಯವಾಗಿರಲಿಲ್ಲ. ಈಗ 2026ರವರೆಗೂ ಎಂಎಲ್‌ಸಿ ಆಗಿ ಆಯ್ಕೆಯಾಗಿರುವ ಕಮಕನೂರ, ಬಹುದಿನದ ಬೇಡಿಕೆಯಾಗಿರುವ ಕೋಲಿ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಮಹತ್ವ ಜವಾಬ್ದಾರಿ ಇವರ ಮೇಲಿದೆ.

ವರದಿ: ಎಸ್.ಬಿ.ರೆಡ್ಡಿ

Whats_app_banner