ಕನ್ನಡ ಸುದ್ದಿ  /  Karnataka  /  Kalaburagi News Minister Sharan Prakash Patil Assures Crop Loss Compensation In Kalaburagi Jra

Kalaburagi News: ತೊಗರಿ ನೆಟೆ ರೋಗಕ್ಕೆ ಪರಿಹಾರ ನೀಡಲು ಶೀಘ್ರ ಕ್ರಮ; ಸಚಿವ ಶರಣಪ್ರಕಾಶ ಪಾಟೀಲ್‌

ರೈತರಿಗೆ ಹತ್ತಾರು ಮಾಹಿತಿಗಳನ್ನು ಒದಗಿಸುವ ಕೃಷಿ ಇಲಾಖೆಯ "ಕೃಷಿ ಮಾಹಿತಿ ರಥ" ಸಂಚಾರಿ ವಾಹನಗಳಿಗೆ ಬುಧವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿ ಅವರಣದಲ್ಲಿ ಚಾಲನೆ ನೀಡಲಾಗಿದೆ.

ಮಾಹಿತಿ ರಥಕ್ಕೆ ಚಾಲನೆ
ಮಾಹಿತಿ ರಥಕ್ಕೆ ಚಾಲನೆ

ಕಲಬುರಗಿ: ಕಳೆದ‌ ವರ್ಷ ಜಿಲ್ಲೆಯಲ್ಲಿ ನೆಟೆ ರೋಗದಿಂದ‌ ಬಹಳಷ್ಟು ತೊಗರಿ ಬೆಳೆ ಹಾನಿಯಾಗಿದೆ. ಈ ಹಿಂದಿನ ಸರ್ಕಾರ ಪರಿಹಾರ ಮಾತ್ರ ಘೋಷಿಸಿದ್ದು, ರೈತರ ಕೈಗೆ ನೀಡಿರಲಿಲ್ಲ. ಇದೀಗ ನಮ್ಮ‌ ಸರ್ಕಾರ‌ ಅಸ್ತಿತ್ವಕ್ಕೆ ಬಂದಿದ್ದು, ಪರಿಹಾರ ನೀಡುವ ನಿಟ್ಟಿನಲ್ಲಿ ಸರ್ಕಾರದ ಹಂತದಲ್ಲಿ‌ ಶೀಘ್ರ ಚರ್ಚೆ ಮಾಡಲಾಗುವುದು ಎಂದು ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವ ಡಾ.ಶರಣಪ್ರಕಾಶ ಪಾಟೀಲ್‌ ಭರವಸೆ ನೀಡಿದ್ದಾರೆ. (ಕಲಬುರಗಿ ಸುದ್ದಿಗಳಿಗೆ ಇಲ್ಲಿ ಕ್ಲಿಕ್‌ ಮಾಡಿ)

ಪ್ರಸಕ್ತ ಮುಂಗಾರು ಹಂಗಾಮಿನ‌ ಕೃಷಿ‌ ಚಟುವಟಿಕೆ, ತೊಗರಿ ನೆಟೆ ರೋಗ ನಿರ್ವಹಣೆ, ಬಸವನ ಹುಳು ನಿಯಂತ್ರಣ ಸೇರಿದಂತೆ ರೈತ ಬಾಂಧವರಿಗೆ ಹತ್ತಾರು ಮಾಹಿತಿಗಳನ್ನು ಒದಗಿಸುವ ಕೃಷಿ ಇಲಾಖೆಯ "ಕೃಷಿ ಮಾಹಿತಿ ರಥ" ಸಂಚಾರಿ ವಾಹನಗಳಿಗೆ ಬುಧವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿ ಅವರಣದಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು.

ಪರ್ಯಾಯ ಬೆಳೆ ಬಿತ್ತನೆಗೆ ಸಲಹೆ

ಕಳೆದ ವರ್ಷ ಈ ಭಾಗದ ಪ್ರಮುಖ ಬೆಳೆ‌ ತೊಗರಿ ನೆಟೆ ರೋಗದಿಂದ ತತ್ತರಿಸಿ ಬಹಳಷ್ಟು ಹಾನಿಯಾಗಿತ್ತು. ಈ ವರ್ಷ ಅದನ್ನು ಮರುಕಳಿಸದಂತೆ ಹೊಸ ತಳಿಯ ಬೀಜ ನೀಡಲಾಗುತ್ತಿದೆ. ಜೊತೆಗೆ ನೆಟೆ ರೋಗ ನಿರ್ವಹಣಾ ಕ್ರಮಗಳು, ಪರ್ಯಾಯ ಬೆಳೆ‌ ಬಿತ್ತನೆಗೆ ಸಲಹೆ, ಬಸವನ ಹುಳು ನಿಯಂತ್ರಣ ಸಂಬಂಧ ರೈತಾಪಿ ವರ್ಗಕ್ಕೆ ಹಳ್ಳಿಗಳಿಗೆ ಹೋಗಿ ಈ ಸಂಚಾರಿ ವಾಹನಗಳು ಮಾಹಿತಿ ನೀಡಲಿವೆ. ರೈತರು ಇದರ ಪ್ರಯೋಜನೆ ಪಡೆಯಬೇಕು. ತಾಂತ್ರಿಕ ಮಾಹಿತಿಗೆ ರೈತ ಸಂಪರ್ಕ ಅಧಿಕಾರಿಗಳನ್ನು‌ ಸಂಪರ್ಕಿಸಬೇಕು ಎಂದರು.

ಕಳೆದ ವರ್ಷ ಶೇ. 70 ತೊಗರಿ ಹಾಳಾಗಿದೆ. ಅದಕ್ಕೆ ಸಂಬಂಧಿಸಿದ ಅಧಿಕಾರಿಗಳು ಶೇ. 30 ಎಂದು ವರದಿ ಸಲ್ಲಿಸಿದ್ದಾರೆ. ಇದರಿಂದ ರೈತರಿಗೆ ನ್ಯಾಯಯುತವಾಗಿ ಸಿಗಬೇಕಾದ ಪರಿಹಾರ ಸಿಗದೆ ಅನ್ಯಾಯವಾಗಿದೆ. ಹಾಗಾಗಿ ಈ ಕುರಿತು ಸಮಗ್ರ ತನಿಖೆ ನಡೆಸಿ ಎಂದು‌ ಜಿಲ್ಲಾಧಿಕಾರಿಗೆ ಸೂಚಿಸಿದರು.

ಜಿಲ್ಲೆಯಲ್ಲಿ ಮುಂಗಾರು ಮಳೆ ಆರಂಭವಾಗಲಿದ್ದು, ರೈತರಿಗೆ ಯಾವುದೇ ಕಾರಣಕ್ಕೂ ಬೀಜ, ರಸಗೊಬ್ಬರದ ಕೊರತೆ ಆಗದಂತೆ ನೀಗಾ ವಹಿಸಬೇಕು. ಜೊತೆಗೆ ಕಳಪೆ ಮಟ್ಟದ ಪೂರೈಕೆ ಪ್ರಕರಣಗಳು ಕಂಡು ಬರದಂತೆ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು ಎಂದು ಸೂಚಿಸಿದರು.

ಮಾಹಿತಿ ರಥದ ಸಂಚಾರದ ವಿವರ

ಕೃಷಿ ಮಾಹಿತಿ ರಥಗಳು ಒಟ್ಟು 14 ಇವೆ. ಪ್ರತಿ ತಾಲೂಕಿಗೆ 2ರಂತೆ ಜಿಲ್ಲೆಯ 32 ಹೋಬಳಿಗಳಲ್ಲಿ ವಾಹನ‌ಗಳು ಸಂಚರಿಸಲಿವೆ. ಈ ರಥಗಳು ಪ್ರತಿ ತಾಲೂಕಿನ ಹೋಬಳಿ ವ್ಯಾಪ್ತಿಯ ಎಲ್ಲಾ ಗ್ರಾಮಗಳಲ್ಲಿ‌ ಸಂಚರಿಸಿ ಮುಂಗಾರು ಹಂಗಾಮಿನ ಪೂರ್ವ ಸಿದ್ಧತೆ, ನೆಟೆ ರೋಗ, ಬಸವನ ಹುಳು ನಿಯಂತ್ರಣ ಮತ್ತು ಹತೋಟಿ ಕ್ರಮದ ಕುರಿತು ಧ್ವನಿವರ್ಧಕ ಮೂಲಕ ಜಿಂಗಲ್ಸ್ ಪ್ರಸಾರದ ಜೊತೆಗೆ ಕರಪತ್ರಗಳನ್ನು ರೈತರಿಗೆ ಹಂಚುವ ಮೂಲಕ ಮಾಹಿತಿ ನೀಡಲಾಗುತ್ತದೆ.

ಇದೇ ಸಂದರ್ಭದಲ್ಲಿ ರೈತರಿಗೆ ದೊರೆಯುವ ಯೋಜನೆಗಳು, ಬೀಜೋಪಚಾರ, ಪಿಎಂ- ಕಿಸಾನ್ ಈ-ಕೆವೈಸಿ, ತೊಗರಿ ನೆಟ ರೋಗ ಹಾಗೂ ಬಸವನ ಹುಳು ನಿಯಂತ್ರಣದ ಕುರಿತು ಕರಪತ್ರಗಳನ್ನು ಸಹ ಸಚಿವರು ಬಿಡುಗಡೆಗೊಳಿಸಿದರು.

ವರದಿ: ಎಸ್‌.ಬಿ.ರೆಡ್ಡಿ