Free Bus For Women: ಬಸ್‌ಗಳೇ ಕಾಣದ ಕಲ್ಯಾಣ ಕರ್ನಾಟಕದ 80 ಗ್ರಾಮದ ಮಹಿಳೆಯರಿಗೆ ಶಕ್ತಿ ಯೋಜನೆ ಗಗನ ಕುಸುಮವೇ ಸರಿ
Kalyana Karnataka Road Transport Corporation: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯೂ ಸಹ ತನ್ನ ವ್ಯಾಪ್ತಿಯ 8 ಜಿಲ್ಲೆಗಳಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಒದಗಿಸುವ ಶಕ್ತಿ ಯೋಜನೆಗೆ ಬೇಕಾದ ಸಕಲ ಸಿದ್ಧತೆ ಮಾಡಿಕೊಂಡಿದೆ. ಆದರೆ ಕೆಕೆಆರ್‌ಟಿಸಿ (KKRTC) ವ್ಯಾಪ್ತಿಯಲ್ಲಿ ಬರುವ 8 ಜಿಲ್ಲೆಗಳ 80 ಗ್ರಾಮಗಳಲ್ಲಿ ಬಸ್ ಸಂಚಾರವೇ ಇಲ್ಲ.
ಕಲಬುರಗಿ: ಕಾಂಗ್ರೆಸ್ ಸರಕಾರದ ಐದು ಗ್ಯಾರಂಟಿಗಳಲ್ಲಿ ಮಹತ್ವದ ಗ್ಯಾರಂಟಿಯಾಗಿರುವ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಒದಗಿಸುವ ಶಕ್ತಿ ಯೋಜನೆ ರಾಜ್ಯದಲ್ಲಿ ಇಂದು (ಜೂನ್ 11, ಭಾನುವಾರ) ಅಧಿಕೃತವಾಗಿ ಚಾಲನೆಗೊಂಡಿದೆ. ನಮ್ಮ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯೂ (Kalyana Karnataka Road Transport Corporation) ಸಹ ತನ್ನ ವ್ಯಾಪ್ತಿಯ 8 ಜಿಲ್ಲೆಗಳಲ್ಲಿ ಅದಕ್ಕೆ ಬೇಕಾದ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಆದರೆ, ಲಭ್ಯವಾದ ಮಾಹಿತಿ ಪ್ರಕಾರ ಕೆಕೆಆರ್‌ಟಿಸಿ (KKRTC) ವ್ಯಾಪ್ತಿಯಲ್ಲಿ ಬರುವ 8 ಜಿಲ್ಲೆಗಳ 80 ಗ್ರಾಮಗಳಲ್ಲಿ ಬಸ್ ಸಂಚಾರವೇ ಇಲ್ಲದೇ ಇರುವುದು ಸೂಜಿಗದ ಸಂಗತಿಯಾಗಿದ್ದು, ಇಲ್ಲಿನ ಮಹಿಳೆಯರಿಗೆ ಈ ಶಕ್ತಿ ಯೋಜನೆ ಗಗನ ಕುಸುಮವಾದಂತಾಗಿದೆ.
ಸಮರ್ಪಕ ರಸ್ತೆ ಇಲ್ಲದೆ ಇರುವುದು ಬಸ್‌ಗಳ ಕೊರತೆ ಹೀಗೆ ನಾನಾ ಕಾರಣಗಳಿಂದ ಕೆಕೆಆರ್‌ಟಿಸಿ ವ್ಯಾಪ್ತಿಯ ಕಲಬುರಗಿ, ಯಾದಗಿರಿ, ಬೀದರ್, ರಾಯಚೂರು, ಬಳ್ಳಾರಿ, ಕೊಪ್ಪಳ, ವಿಜಯನಗರ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಬಸ್‌ಗಳು ಸಂಚರಿಸುವುದೇ ಇಲ್ಲ. ಹೀಗಾಗಿ ಇಲ್ಲಿನ ಮಹಿಳೆಯರು ಕಾಂಗ್ರೆಸ್ ಸರಕಾರದ ಶಕ್ತಿ ಯೋಜನೆಯಿಂದ ವಂಚಿತರಾಗಲಿದ್ದಾರೆ.
ಕೆಕೆಆರ್‌ಟಿಸಿ ವ್ಯಾಪ್ತಿಯಲ್ಲಿ 200 ಚಾಲಕ-ನಿರ್ವಾಹಕರ ಹುದ್ದೆಗಳು ಖಾಲಿಯಿವೆ. ಅಲ್ಲದೇ 800 ಬಸ್‌ಗಳ ಕೊರತೆಯೂ ಇದೆ, ಇಂಥ ಸ್ಥಿತಿಯಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಮಾಡಿಕೊಡುವುದರಿಂದ ಸಂಸ್ಥೆಗೆ ಆರ್ಥಿಕ ಹೊಡೆತವೂ ಬೀಳಲಿದೆ.
ಒಂದೊಮ್ಮೆ ಈಗಿರುವ ಬಸ್‌ಗಳನ್ನೇ ಬಳಸಿಕೊಂಡು ಯೋಜನೆ ಜಾರಿಗೊಳಿಸಲು ಮುಂದಾದರೆ ಬಸ್‌ಗಳು ಜನಜಂಗುಳಿಯಿಂದ ತುಂಬಲಿವೆ. ಅಲ್ಲದೇ ಈಗಾಗಲೇ ಶಾಲಾ ಕಾಲೇಜುಗಳು ಕೂಡ ಆರಂಭವಾಗಿದ್ದು, ಬೆಳಿಗ್ಗೆ ಮತ್ತು ಸಂಜೆ ಸಂಚರಿಸುವ ಬಸ್‌ಗಳಲ್ಲಿ ವಿದ್ಯಾರ್ಥಿಗಳು, ಹಿರಿಯ ನಾಗರಿಕರು ಪ್ರಯಾಣಕ್ಕೆ ಪರದಾಡುವುದಂತೂ ನಿಶ್ಚಿತ.
ಗ್ರಾಮಾಂತರ ಪ್ರದೇಶದಲ್ಲಿ ಸಮಯಕ್ಕೆ ಸರಿಯಾಗಿ ಬಸ್‌ಗಳು ಬಾರದ್ದರಿಂದ ಪ್ರಯಾಣಿಕರು ಟಂಟಂ, ಜೀಪ್‌ಗಳಲ್ಲಿ ಬಸ್ ದರಕ್ಕಿಂತ ಹೆಚ್ಚಿನ ದರ ಕೊಟ್ಟು ಪ್ರಯಾಣಿಸುತ್ತಲಿದ್ದಾರೆ. ಆದರೆ ಇದೀಗ ಮಹಿಳೆಯರಿಗೆ ಉಚಿತವಾಗಿರುವುದರಿಂದ ಬಸ್‌ನಲ್ಲಿಯೇ ಹೆಚ್ಚು ಪ್ರಯಾಣಿಸುವ ಸಾಧ್ಯತೆಗಳಿವೆ. ಇದರಿಂದ ಸಾಲ ಮಾಡಿ ವಾಹನ ಖರೀದಿಸಿರುವ ಖಾಸಗಿ ವಾಹನ ಮಾಲೀಕರ ಸ್ಥಿತಿ ಅತಂತ್ರವಾಗಲಿದೆ.
ಕೆಕೆಆರ್‌ಟಿಸಿ ವ್ಯಾಪ್ತಿಯ 8 ಜಿಲ್ಲೆಗಳಲ್ಲಿ ದಿನಾಲು 14 ಲಕ್ಷ ಜನ ಪ್ರಯಾಣ ಮಾಡುತ್ತಿದ್ದು, ಇದರಲ್ಲಿ ಸುಮಾರು 7 ಲಕ್ಷ ಮಹಿಳೆಯರು ಈ ಶಕ್ತಿ ಯೋಜನೆಯ ಲಾಭ ಪಡೆಯಲಿದ್ದಾರೆ. ಕೆಕೆಆರ್‌ಟಿಸಿ ವ್ಯಾಪ್ತಿಯಲ್ಲಿ ಶಕ್ತಿ ಯೋಜನೆ ಜಾರಿಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಅಧಿಕಾರಿಗಳಿಂದ ಹಿಡಿದು ನಿರ್ವಾಹಕವರೆಗೂ ತರಬೇತಿ ನೀಡಲಾಗಿದೆ. ನಿರ್ವಾಹಕರು ಮಹಿಳಾ ಪ್ರಯಾಣಿಕರೊಂದಿಗೆ ಸೌಜನ್ಯದಿಂದ ವರ್ತಿಸುವಂತೆಯೂ ಸೂಚಿಸಲಾಗಿದೆ ಎಂದು ಕೆಕೆಆರ್‌ಟಿಸಿಯ ವ್ಯವಸ್ಥಾಪಕರಾದ ಎಂ.ರಾಜಪ್ಪ ಹೇಳುತ್ತಾರೆ.
ಸಂಸ್ಥೆ ವ್ಯಾಪ್ತಿಯಲ್ಲಿ ಪ್ರಸ್ತುತ 4330 ಬಸ್‌ಗಳಿದ್ದು, ಇದರಲ್ಲಿ 155 ಪ್ರೀಮಿಯಂ, 790 ಅಂತಾರಾಜ್ಯ ಸಂಚರಿಸುವ ಬಸ್‌ಗಳಿವೆ. ಹೀಗಾಗಿ ಮಹಿಳೆಯರು 3115 ಬಸ್‌ಗಳಲ್ಲಿ ಉಚಿತ ಸೇವೆ ಪಡೆಯಬಹುದಾಗಿದೆ. ಅಂದಾಜಿನ ಪ್ರಕಾರ ಒಟ್ಟು ಬಸ್‌ಗಳಲ್ಲಿ ಶೇ.88ರಲ್ಲಿ ಮಹಿಳೆಯರಿಗೆ ಉಚಿತ ಸೇವೆ ಸಿಗಲಿದೆ. ಸಂಸ್ಥೆಗೆ ಹೊಸದಾಗಿ 800 ಬಸ್ ಮಂಜೂರಾಗಿದ್ದು, ಈ ಪೈಕಿ 172 ಬಸ್ ಬಂದಿವೆ. ಮಹಿಳೆಯರ ಉಚಿತ ಪ್ರಯಾಣದಿಂದಾಗಿ ಬಸ್ ಗಳ ಬೇಡಿಕೆ ಗಣನೀಯ ಹೆಚ್ಚಳವಾಗುವ ಸಾಧ್ಯತೆ ಇದೆ. ಹೀಗಾಗಿ ಸರಕಾರ ಹೊಸ ಬಸ್ ಖರೀದಿಸಬೇಕಿದೆ. ಕಳೆದ ಹತ್ತು ವರ್ಷಗಳಿಂದ ನಿಗಮಕ್ಕೆ ಹೊಸ ಬಸ್ ಬಂದಿಲ್ಲ. ಈ ಯೋಜನೆ ಜಾರಿ ಹಿನ್ನೆಲೆಯಲ್ಲಿ ಹೊರ ಗುತ್ತಿಗೆ ಆಧಾರದ ಮೇಲೆ 500 ಚಾಲಕರ ನೇಮಕಕ್ಕೆ ಸಂಸ್ಥೆ ಮುಂದಾಗಿದೆ.
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಈಗಾಗಲೇ ನಷ್ಟದಲ್ಲಿದೆ. 2022-23ರಲ್ಲಿ 72 ಕೋಟಿ ರೂ. ನಷ್ಟ ಇದ್ದರೆ. 2023-24ರಲ್ಲಿ 269 ಕೋಟಿ ರೂ. ನಷ್ಟವಾಗುವುದು ಎಂದು ಅಂದಾಜಿಸಲಾಗಿದೆ. ಕಳೆದ ಸಾಲಿನಲ್ಲಿ ಸರಕಾರ 205 ಕೋಟಿ ರೂ. ವಿಶೇಷ ಅನುದಾನ ನೀಡಿತ್ತು. ಜತೆಗೆ ಬಸ್ ಪಾಸ್‌ಗಳ ಮೊತ್ತ 239 ಕೋಟಿ ರೂ. ಸರಕಾರ ಬಿಡುಗಡೆ ಮಾಡಿತ್ತು. ಈಗ ಶಕ್ತಿ ಯೋಜನೆಯಡಿಯಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದಿಂದಾಗಿ ಸಂಸ್ಥೆ ಇನ್ನೂ ಹೆಚ್ಚಿನ ನಷ್ಟ ಅನುಭವಿಸಲಿದೆ ಎಂದು ಹೇಳಲಾಗುತ್ತಿದೆ.
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವ್ಯಾಪ್ತಿಯಲ್ಲಿ ಸರಕಾರದ ಈ ಶಕ್ತಿ ಯೋಜನೆ ಸಮರ್ಪಕವಾಗಿ ಅನುಷ್ಠಾನವಾಗಬೇಕಾದರೆ ಕೊರತೆ ಇರುವ ಚಾಲಕ, ನಿರ್ವಾಹಕ ಸಿಬ್ಬಂದಿ ನೇಮಕ, ಬಸ್ ಗಳ ಖರೀದಿ ಜೊತೆಗೆ ಬಸ್‌ಗಳನ್ನೆ ಕಾಣದ ಸುಮಾರು 80 ಗ್ರಾಮಗಲ್ಲಿ ಬಸ್ ಸಂಚರಿಸಲು ಅಗತ್ಯವಾಗಿ ಬೇಕಾಗಿರುವ ರಸ್ತೆ, ಇತರ ಮೂಲ ಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಸರಕಾರ ಯೋಜನೆ ರೂಪಿಸಬೇಕಾಗಿದೆ. ಕಲ್ಯಾಣ ಕರ್ನಾಟಕ ಭಾಗದ 8 ಸಚಿವರು ತಮ್ಮ ತಮ್ಮ ಜಿಲ್ಲೆಯಲ್ಲಿ ಭಾನುವಾರ ಈ ಶಕ್ತಿ ಯೋಜನೆಗೆ ಚಾಲನೆಯೇನೋ ನೀಡಿದ್ದಾರೆ ಅದರ ಜೊತೆಗೆ ಈ ಯೋಜನೆ ಲಾಭ ಎಲ್ಲ ಮಹಿಳೆಯರು ಪಡೆದುಕೊಳ್ಳಲು ಮುತುವರ್ಜಿ ವಹಿಸಬೇಕಾಗಿದೆ.
ವರದಿ: ಎಸ್.ಬಿ.ರೆಡ್ಡಿ