ಕನ್ನಡ ಸುದ್ದಿ  /  Karnataka  /  Kalaburagi News Rahul Gandhi Address Congress Rally In The Rain Karnataka Assembly Elections Mgb

Rain at Congress Rally: ಕಾಂಗ್ರೆಸ್‌ ಸಮಾವೇಶಕ್ಕೆ ವರುಣ ಅಡ್ಡಿ: ಕಲಬುರಗಿಯಲ್ಲಿ ಮಳೆಯಲ್ಲಿಯೇ ರಾಹುಲ್ ಗಾಂಧಿ​ ಭಾಷಣ

Rain at Congress Rally: ಗುಡುಗು ಸಿಡಿಲು ಮಳೆ ಆರ್ಭಟದ ಮಧ್ಯೆಯೂ ಹಳ್ಳಿಗಳಿಂದ ಜನ ಬಂದಿದ್ದಾರೆ. ಅವರಿಗೆ ತೊಂದರೆಯಾಗಿದ್ದು ನಾನು ಮೊದಲು ಅವರಲ್ಲಿ ಕ್ಷಮೆಯಾಚಿಸುತ್ತೇನೆ ಎಂದು ಕಲಬುರಗಿಯಲ್ಲಿ ರಾಹುಲ್​ ಗಾಂಧಿ ತಮ್ಮ ಭಾಷಣ ಆರಂಭಿಸಿದರು.

ಕಾಂಗ್ರೆಸ್​ ಸಮಾವೇಶದಲ್ಲಿ ಮಳೆ
ಕಾಂಗ್ರೆಸ್​ ಸಮಾವೇಶದಲ್ಲಿ ಮಳೆ

ಕಲಬುರಗಿ: ಕರ್ನಾಟಕ ವಿಧಾನಸಭೆ ಚುನಾವಣೆ (Karnataka Assembly Elections) ಸಮೀಪಿಸುತ್ತಿದ್ದು, ಕಾಂಗ್ರೆಸ್​ ಪಕ್ಷ ಭರ್ಜರಿ ಪ್ರಚಾರ ನಡೆಸುತ್ತಿದೆ. ಇಂದು ( ಏ 28) ಕಲಬುರಗಿ ಜಿಲ್ಲೆಯ ಜೇರ್ವಗೀ ವಿಧಾನಸಭಾ ಕ್ಷೇತ್ರದಲ್ಲಿ ಸಾರ್ವಜನಿಕ ಸಭೆಯನ್ನು (Congress public rally) ಆಯೋಜಿಸಲಾಗಿತ್ತು. ಆದರೆ ಕಾರ್ಯಕ್ರಮಕ್ಕೆ ಮಳೆ ಅಡ್ಡಿಯಾಗಿದೆ. ಆದರೂ ಮಳೆಯಲ್ಲಿಯೇ ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ (Rahul Gandhi) ಭಾಷಣ ಮಾಡಿದ್ದಾರೆ.

ಗುಡುಗು ಸಿಡಿಲು ಮಳೆ ಆರ್ಭಟದ ಮಧ್ಯೆಯೂ ಹಳ್ಳಿಗಳಿಂದ ಜನ ಬಂದಿದ್ದಾರೆ. ಅವರಿಗೆ ತೊಂದರೆಯಾಗಿದ್ದು ನಾನು ಮೊದಲು ಅವರಲ್ಲಿ ಕ್ಷಮೆಯಾಚಿಸುತ್ತೇನೆ. ಧಾರಕಾರ ಮಳೆ ಸುರಿಯುತ್ತಿದ್ದರೂ ಇಷ್ಟೊಂದು ಬೃಹತ್ ಸಂಖ್ಯೆಯಲ್ಲಿ ಹಳ್ಳಿಯಿಂದ ಬಂದ ನಿಮಗೆಲ್ಲರಿಗೂ ನನ್ನ ಕೃತಜ್ಞತೆಯ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಎಂದು ಹೇಳುತ್ತಾ ರಾಹುಲ್​ ಗಾಂಧಿ ತಮ್ಮ ಭಾಷಣ ಆರಂಭಿಸಿದರು.

ನಮ್ಮ ಕಾಂಗ್ರೆಸ್ ಪಕ್ಷದ ಸರ್ಕಾರ ಈ ರಾಜ್ಯದಲ್ಲಿ ಅಧಿಕಾರಕ್ಕೆ ಬರೋದು ನಿಶ್ಚಿತ. ಇದನ್ನು ಯಾರಿಂದಲೂ ಯಾವ ಕಾರಣಕ್ಕೂ ತಡೆಯಲು ಸಾಧ್ಯವಿಲ್ಲ. ಬಿಜೆಪಿ ಅವರಿಗೆ 40 ಸಂಖ್ಯೆ ಎಂಬುದು ಬಹಳ ಇಷ್ಟವಾದ ಮತ್ತು ಪ್ರೀತಿಯ ಸಂಖ್ಯೆ. ರಾಜ್ಯದ ಜನತೆ ಈ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಕೇವಲ 40 ಸೀಟು ಮಾತ್ರ ನೀಡುತ್ತಾರೆ. ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ರಾಜ್ಯದಲ್ಲಿ 150 ಸೀಟು ಖಂಡಿತವಾಗಿಯೂ ಕರ್ನಾಟಕದ ಜನತೆ ನೀಡುತ್ತಾರೆ ಎಂದರು.

ಕರ್ನಾಟಕದಲ್ಲಿರುವ ಬಿಜೆಪಿ ಸರ್ಕಾರ ಭ್ರಷ್ಟ ಸರ್ಕಾರ. ಇದು ಜನಾಭಿಪ್ರಾಯದ ಮೂಲಕ ಬಂದ ಸರ್ಕಾರವಲ್ಲ. ನಮ್ಮ ಕಾಂಗ್ರೆಸ್ ಶಾಸಕರನ್ನು ವಾಮಾ ಮಾರ್ಗದ ಮೂಲಕ ಖರೀದೀಸಿ ಬಿಜೆಪಿ ಸರ್ಕಾರ ರಚಿಸಿದೆ. ರಾಜ್ಯದಲ್ಲಿ ಸರ್ಕಾರದ ಪ್ರತಿಯೊಂದು ಕೆಲಸದಲ್ಲೂ ಬಿಜೆಪಿ ಸರ್ಕಾರ 40% ಭ್ರಷ್ಟಾಚಾರವನ್ನು ಮಾಡಿದೆ. ಇದೇ ಕಾರಣಕ್ಕೆ ಇಡೀ ದೇಶದಲ್ಲಿ ಕರ್ನಾಟಕದ ಬಿಜೆಪಿ ಸರ್ಕಾರಕ್ಕೆ 40% ಕಮಿಷನ್ ಸರ್ಕಾರ ಎಂದು ಹೆಸರು ಬಂದಿದೆ. ಗುತ್ತಿಗೆದಾರರ ಸಂಘ ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದು ಇದೊಂದು 40% ಕಮಿಷನ್ ಸರ್ಕಾರ ಅಂತ ನೇರವಾಗಿ ಆರೋಪಿಸಿದ್ದಾರೆ. ಆದರೆ ಪ್ರಧಾನಿ ಅವರು ಮಾತ್ರ ಈ ಪತ್ರಕ್ಕೆ ಇದುವರೆಗೂ ಉತ್ತರಿಸಿಲ್ಲ ಎಂದು ಹೇಳಿದರು.

ಕಳೆದ ಮೂರು ವರ್ಷಗಳ ರಾಜ್ಯವನ್ನು ಬಿಜೆಪಿ ಲೂಟಿ ಹೊಡೆಯುತ್ತಿದೆ. ಪ್ರತಿ ಕೆಲಸದಲ್ಲೂ 40% ಕಮಿಷನ್ ಪಡೆದಿದ್ದಾರೆ. ನಿಮಗೆ ಗೊತ್ತಿರಬಹುದು 1999 ರಲ್ಲಿ ಆರ್ಟಿಕಲ್ 371J ಗೆ ತಿದ್ದುಪಡಿಯನ್ನು ಮಾಡಲು ಅಂದಿನ ಉಪಪ್ರಧಾನಿ ಅಡ್ವಾಣಿ ಅವರು ಅಂದು ವಿರೋಧಿಸಿದ್ದರು. ನಮ್ಮ ಸರ್ಕಾರ ಬಂದ ತಕ್ಷಣವೇ ಆರ್ಟಿಕಲ್ 371J ತಿದ್ದುಪಡಿ ಮಾಡಿದ್ದೇವೆ. ನಾವು ನುಡಿದಂತೆ ನಡೆದಿದ್ದೇವೆ. ಅದರಿಂದ ನಾವು ಈ ಭಾಗದಲ್ಲಿ ಸಾವಿರಾರು ಡಾಕ್ಟರ್ಸ್ , ಇಂಜಿನಿಯರ್ಸ್, ವಕೀಲರು ಸೇರಿ ಅನೇಕ ವೃತ್ತಿಪರರಿಗೆ ಬಹಳಷ್ಟು ಉದ್ಯೋಗವಾಕಶಗಳನ್ನು ಸೃಷ್ಟಿ ಮಾಡಿದ್ದೇವೆ. ಆರ್ಟಿಕಲ್ 371J ತಿದ್ದುಪಡಿಯನ್ನು ನಮ್ಮ ಕಾಂಗ್ರೆಸ್ ಸರ್ಕಾರ ಜಾರಿ ಮಾಡಿದಂತೆ ಭ್ರಷ್ಟ ಬಿಜೆಪಿ ಸರ್ಕಾರ ಅನುಷ್ಠಾನವನ್ನು ಮಾಡಿಲ್ಲ. ಕಲ್ಯಾಣ ಕರ್ನಾಟಕ ಭಾಗಕ್ಕೆ ಬಜೆಟ್ ನಲ್ಲಿ ನೀಡಿದ್ದ 3000 ಕೋಟಿ ಏನು ಅವರು ಅನುದಾನದಲ್ಲಿ ಅವರು ಕೇವಲ 1100 ಕೋಟಿ ಮಾತ್ರ ಬಳಕೆ ಮಾಡಿದ್ದಾರೆ ಎಂದು ವಿವರಿಸಿದರು.

ಈ ಭಾಗದ ಜನರಿಗೆ ಸಿಗಬೇಕಿದ್ದ ಸುಮಾರು 50,000 ಹುದ್ದೆಗಳನ್ನು ಇನ್ನೂ ಭರ್ತಿ ಮಾಡಿಲ್ಲ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ 50,000 ಹುದ್ದೆಗಳನ್ನು ಭರ್ತಿ ಮಾಡುತ್ತೇವೆ. ಈ ಭಾಗದಲ್ಲಿ ವಿಶೇಷವಾಗಿ ಶೈಕ್ಷಣಿಕ ವಲಯಗಳನ್ನು ಸ್ಥಾಪಿಸುತ್ತೇವೆ. ಈ ಭಾಗದಲ್ಲಿ ಐಐಟಿ ಮತ್ತು ಐಐಎಂಗಳ ಪ್ರತಿಷ್ಠಿತ ವಿದ್ಯಾ ಸಂಸ್ಥೆಗಳನ್ನು ಈ ಭಾಗದಲ್ಲಿ ನಾವು ತರುತ್ತೇವೆ. ಪ್ರತಿ ವರ್ಷ ನಮ್ಮ ಸರ್ಕಾರದಿಂದ ಈ ಭಾಗಕ್ಕೆ 5000 ಕೋಟಿ ರೂ. ಅನುದಾನವನ್ನು ನೀಡುತ್ತೇವೆ. ಪ್ರತಿ ಗ್ರಾಮ ಪಂಚಾಯತಿಗೆ ನಾವು 1 ಕೋಟಿ ಅನುದಾನ ಕೊಟ್ಟು ಪಂಚಾಯತ್ ರಾಜ್ ವ್ಯವಸ್ಥೆಯನ್ನು ಬಲಪಡಿಸುತ್ತೇವೆ ಎಂದರು.

ನಮ್ಮ ಸರ್ಕಾರ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರುತ್ತದೆ. ನಾವು ನಮ್ಮ ಐದೂ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡುತ್ತೇವೆ. ಈಗಾಗಲೇ ಕಾಂಗ್ರೆಸ್ ಪಕ್ಷ ಗೃಹಜ್ಯೋತಿ - 200 ಯೂನಿಟ್ ವಿದ್ಯುತ್ ಉಚಿತ, ಗೃಹಲಕ್ಷ್ಮಿ - ಪ್ರತಿ ಮನೆ ಯಜಮಾನಿಗೆ ಮಾಸಿಕ 2000 ರೂ., ಅನ್ನಭಾಗ್ಯ- ಪ್ರತಿ ವ್ಯಕ್ತಿಗೆ 10 ಕೆಜಿ ಅಕ್ಕಿ, ಯುವ ನಿಧಿ - ಪದವೀಧರರಿಗೆ 3000 ರೂ ಹಾಗೂ ಡಿಪ್ಲೋಮಾ ಪದವೀಧರರಿಗೆ 1500 ರೂ ನಿರುದ್ಯೋಗ ಭತ್ಯೆ, ರಾಜ್ಯದ ಸರ್ಕಾರಿ ಬಸ್ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯ ಕಲ್ಪಿಸುತ್ತೇವೆ. ಈ ಐದೂ ಯೋಜನೆಗಳನ್ನು ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೊದಲ ಸಚಿವ ಸಂಪುಟದಲ್ಲೇ ಜಾರಿ ಮಾಡಲಾಗುತ್ತದೆ. ಕಾಂಗ್ರೆಸ್ ಬಿಟ್ರೆ ಬೇರೆ ಯಾರಿಗೂ ಈ ಆಶ್ವಾಸನೆಯನ್ನು ಈಡೇರಿಸಲು ಸಾಧ್ಯವಿಲ್ಲ. ನಮ್ಮ ಪಕ್ಷ ದೀನದಲಿತರ , ಬಡವರ, ರೈತರ ಮತ್ತು ಅಲ್ಪಸಂಖ್ಯಾತರ ಮತ್ತು ಹಿಂದುಳಿದವರ ಜನಪರ ಸರ್ಕಾರವಾಗಿರುತ್ತದೆ ಎಂದು ಹೇಳಿದರು.

ಈ ಬಾರಿಯ ಚುನಾವಣೆಯಲ್ಲಿ 150 ಸೀಟುಗಳನ್ನು ಗೆದ್ದೇ ಗೆಲ್ಲುತ್ತೇವೆ. ಬಿಜೆಪಿಗೆ ಅಧಿಕಾರ ಕೊಟ್ಟರೆ, 40% ಪರ್ಸೆಂಟ್ ಭ್ರಷ್ಠಾಚಾರಕ್ಕೆ ಮತ್ತೇ ಅವಕಾಶ ಮಾಡಿಕೊಟ್ಟಂತೆ. ಬಿಜೆಪಿ ದುಡ್ಡು, ಆಮಿಷವನ್ನು ಓಡ್ಡುತ್ತಾರೆ. ಆ ಎಲ್ಲ ಆಮಿಷಕ್ಕೆ ನೀವು ಬಲಿಯಾಗಬೇಡಿ. ಸಿಎಂ ಹುದ್ದೆ 2500 ಕೋಟಿಗೆ ಮಾರಾಟಕ್ಕಿದೆ ಎಂದು ಬಿಜೆಪಿ ಶಾಸಕರೊಬ್ಬರು ಹಿಂದೆ ಹೇಳಿದ್ದರು. ಇದು ಇವರ ಭ್ರಷ್ಟಾಚಾರಕ್ಕೆ ಹಿಡಿದ ಕೈಗನ್ನಡಿ. ತಾವು ಬಿಜೆಪಿ ಅವರಿಗೆ 40 ಸೀಟುಗಳು ಮಾತ್ರ ಗೆಲ್ಲಿಸಿ ಆದರೆ ಕಾಂಗ್ರೆಸ್ ಪಕ್ಷಕ್ಕೆ150 ಸೀಟುಗಳನ್ನು ಗೆಲ್ಲಿಸುವ ಮೂಲಕ ಆಶೀರ್ವಾದ ಮಾಡಿ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಇದು ಬಡಜನರ , ರೈತರ, ಬೀದಿವ್ಯಾಪಾರಿಗಳ, ದೀನದಲಿತರ ಅಲ್ಪಸಂಖ್ಯಾತರ ಮತ್ತು ಹಿಂದುಳಿದ ವರ್ಗಗಳ ಸರ್ಕಾರವಾಗಿರುತ್ತದೆ ಎಂಬುದರಲ್ಲಿ ನಿಸ್ಸಂದೇಹ ಎಂದರು.

IPL_Entry_Point