ಸೇಡಂ ವಾಸವದತ್ತಾ ಸಿಮೆಂಟ್ ಫ್ಯಾಕ್ಟರಿ ಕ್ಯಾಂಟೀನ್ ಊಟದಲ್ಲಿ ಸತ್ತ ಹಲ್ಲಿ ಪತ್ತೆ; ಕಂಗಾಲಾದ ಕಾರ್ಮಿಕರು
ಕಲಬುರಗಿ ಜಿಲ್ಲೆಯ ಸೇಡಂನಲ್ಲಿರುವ ವಾಸವದತ್ತಾ ಸಿಮೆಂಟ್ ಫ್ಯಾಕ್ಟರಿ ಕ್ಯಾಂಟೀನ್ ಊಟದಲ್ಲಿ ಸತ್ತ ಹಲ್ಲಿ ಪತ್ತೆಯಾಗಿ ಕಾರ್ಮಿಕರು ಕಂಗಾಲಾದ ಘಟನೆ ನಡೆದಿದೆ. ಕಾರ್ಖಾನೆ ಆಸ್ಪತ್ರೆಯಲ್ಲಿಯೇ ಎಲ್ಲರಿಗೂ ಪ್ರಥಮ ಚಿಕಿತ್ಸೆ ನೀಡಲಾಗಿದೆ.
ಕಲಬುರಗಿ: ಜಿಲ್ಲೆಯ ಸೇಡಂನಲ್ಲಿರುವ ವಾಸವದತ್ತಾ ಸಿಮೆಂಟ್ ಕಾರ್ಖಾನೆಯ ಕಾರ್ಮಿಕರ ಕ್ಯಾಂಟೀನ್ ಊಟದಲ್ಲಿ ಸತ್ತ ಹಲ್ಲಿ ಪತ್ತೆಯಾಗಿದ್ದು, ಕಾರ್ಮಿಕರು ಕಂಗಾಲಾದ ಘಟನೆ ನಡೆದಿದೆ. ಎಂದಿನಂತೆ ಊಟ ಸೇವಿಸುತ್ತಿದ್ದಾಗ ಕಾರ್ಮಿಕನೊಬ್ಬನ ಊಟದ ತಟ್ಟೆಯಲ್ಲಿ ಸತ್ತ ಹಲ್ಲಿ ಕಾಣಸಿಕ್ಕಿತ್ತು. ಆತ ಕೂಡಲೇ ಅಲ್ಲಿ ಊಟ ಮಾಡುತ್ತಿದ್ದ ಇತರ ಕಾರ್ಮಿಕರ ಗಮನಸೆಳೆದಿದ್ದಾನೆ. ಕೂಡಲೇ ಅಲ್ಲಿ ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು.
ಅದಾಗಲೇ ನೂರಾರು ಕಾರ್ಮಿಕರು ಅದೇ ಕ್ಯಾಂಟೀನ್‌ನಲ್ಲಿ ಊಟ ಮಾಡಿ ಹೋಗಿದ್ದರು. ಅವರೆಲ್ಲರೂ ಹಲ್ಲಿ ಸತ್ತು ಬಿದ್ದಿರುವ ಊಟ ಮಾಡಿರುವ ಕಾರಣ, ಇನ್ನೇನಾಗುವುದೋ ಎಂದು ಆತಂಕಕ್ಕೆ ಒಳಗಾಗಿದ್ದರು ಎಂದು ಉದಯವಾಣಿ ಇಂದು (ಮೇ 26) ವರದಿ ಮಾಡಿದೆ.
ಸೇಡಂ ವಾಸವದತ್ತಾ ಸಿಮೆಂಟ್ ಫ್ಯಾಕ್ಟರಿ ಕ್ಯಾಂಟೀನ್ ಊಟದಲ್ಲಿ ಹಲ್ಲಿ
ವಾಸವದತ್ತಾ ಸಿಮೆಂಟ್ ಫ್ಯಾಕ್ಟರಿ ಕ್ಯಾಂಟೀನ್‌ನಲ್ಲಿ ಕಾರ್ಮಿಕರಿಗೆ ಬಹಳ ವರ್ಷಗಳಿಂದ ಊಟ ನೀಡಲಾಗುತ್ತಿದೆ. ಕಾರ್ಮಿಕರು ಇಲ್ಲಿ ಟೋಕನ್ ನೀಡಿ ಊಟ ಮಾಡುವುದು ರೂಢಿ. ಎಂದಿನಂತೆ ಕಾರ್ಮಿಕರು ಮಧ್ಯಾಹ್ನ ಊಟ ಮಾಡಲಾರಂಭಿಸಿದ್ದರು. ಅನೇಕರು ಅದಾಗಲೇ ಊಟ ಮಾಡಿ ಹೋಗಿದ್ದರು. ಈ ನಡುವೆ, ಒಬ್ಬ ಕಾರ್ಮಿಕ ಊಟ ಮಾಡುತ್ತಿದ್ದಾಗ ತಟ್ಟೆಯಲ್ಲಿ ಸತ್ತ ಹಲ್ಲಿ ಕಾಣಸಿಕ್ಕಿದೆ.
ಗಾಬರಿ ಬಿದ್ದ ಆತ, ಕೂಡಲೇ ಅಲ್ಲಿ ಊಟ ಮಾಡುತ್ತಿದ್ದ ಉಳಿದವರ ಗಮನಕ್ಕೆ ತಂದಿದ್ದಾರೆ. ಅವರು ಊಟ ಬಿಟ್ಟು ಕೈತೊಳೆದು, ಕೆಲವರು ವಾಂತಿ ಮಾಡಿಕೊಳ್ಳಲು ಪ್ರಯತ್ನಿಸಿದ್ದರು. ಆ ಕ್ಷಣ ಅಲ್ಲಿ ಗೊಂದಲದ ವಾತಾವರಣ ಉಂಟಾಗಿತ್ತು. ಕೂಡಲೇ ಕಂಪನಿ ಆವರಣದಲ್ಲಿರುವ ಆಸ್ಪತ್ರೆಗೆ ಎಲ್ಲರನ್ನೂ ಕರೆಯಿಸಿ ಅಲ್ಲಿ ಪ್ರಥಮ ಚಿಕಿತ್ಸೆಯನ್ನೂ ಒದಗಿಸಲಾಗಿದೆ. ಎಲ್ಲರ ಆರೋಗ್ಯವೂ ಸ್ಥಿರವಾಗಿದೆ ಎಂದು ವರದಿ ಹೇಳಿದೆ.
ತಾಲೂಕು ವೈದ್ಯಾಧಿಕಾರಿಗಳಿಂದ ಪರಿಶೀಲನೆ
ಸೇಡಂ ವಾಸವದತ್ತಾ ಸಿಮೆಂಟ್ ಕಾರ್ಖಾನೆಯ ಕ್ಯಾಂಟೀನ್ ಊಟದಲ್ಲಿ ಹಲ್ಲಿ ಪತ್ತೆಯಾದ ವಿಚಾರ ತಿಳಿಯುತ್ತಲೇ ತಾಲೂಕು ಆರೋಗ್ಯ ಅಧಿಕಾರಿ ಡಾ. ಸಂಜೀವ ಕುಮಾರ್ ಪಾಟೀಲ ಸ್ಥಳಕ್ಕೆ ಭೇಟಿ ನೀಡಿದ್ದರು. ಕ್ಯಾಂಟೀನ್ ಪರಿಶೀಲನೆ ಮಾಡಿದ ಅವರು, ಆಹಾರ ಪರಿಶೀಲಿಸಿದ್ದು, ಮುಂದಿನ ಕ್ರಮ ಜರುಗಿಸಿದ್ದರು. ತಾಲೂಕು ಹಿರಿಯ ಆರೋಗ್ಯ ನಿರೀಕ್ಷಣಾ ಅಧಿಕಾರಿ ಶಿವಯೋಗಿ ಸತ್ಪಾಲ್, ಪ್ರಾಥಮಿಕ ಆರೋಗ್ಯ ಸುರಕ್ಷಣಾ ಅಧಿಕಾರಿ ಸುಧಾ ವಿಭೂತಿ ಹಾಗೂ ಕಾರ್ಮಿಕರ ಸಂಘದ ಪದಾಧಿಕಾರಿಗಳು ಕೂಡ ಜೊತೆಗಿದ್ದರು.
ಎಲ್ಲರೂ ಆರೋಗ್ಯವಾಗಿದ್ದಾರೆ. ಯಾರಿಗೂ ಏನೂ ತೊಂದರೆ ಆಗಿಲ್ಲ ಎಂದು ತಾಲೂಕು ಆರೋಗ್ಯ ಅಧಿಕಾರಿ ಡಾ. ಸಂಜೀವ ಕುಮಾರ್ ಪಾಟೀಲ ಹೇಳಿರುವುದಾಗಿ ವರದಿ ವಿವರಿಸಿದೆ.
ಉದನೂರು ಗ್ರಾಮದಲ್ಲಿದ್ದ ಪಾಲಿಕೆಯ ಕಸವಿಲೇವಾರಿ ಶೆಡ್ ನಾಶ
ಕಲಬುರಗಿ ನಗರದ ಹೊರವಲಯದ ಉದನೂರು ಗ್ರಾಮದ ಬಳಿ 4 ಎಕರೆ ಪ್ರದೇಶದಲ್ಲಿ ಮಹಾನಗರ ಪಾಲಿಕೆ ನಿರ್ಮಿಸಿರುವ ಕಸ ವಿಲೇವಾರಿ ಜಾಗದಲ್ಲಿ 16 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ್ದ ಶೆಡ್ ನಾಶವಾಗಿದೆ. 178 ಸಿಮೆಂಟ್ ಕಂಬಗಳ ಶೆಡ್ ಗುರುವಾರ ರಾತ್ರಿ ಸುರಿದ ಗಾಳಿ ಮಳೆಗೆ ಭಾಗಶಃ ನೆಲಸಮವಾಗಿದೆ. ಗಾಳಿಗೆ 16 ಕಾಲಂಗಳು ಮುರಿದು ಬಿದ್ದಿದ್ದು, ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.
ಕಲಬುರಗಿ ನಗರದ ವಿವಿಧ ಪ್ರದೇಶಗಳಿಂದ ಸಂಗ್ರಹ ವಾಗುವ ಕಸವನ್ನು ಈ ಪ್ರದೇಶದಲ್ಲಿ ಗುಡ್ಡೆ ಹಾಕಲಾಗುತ್ತಿತ್ತು. ಈ ಕಸವನ್ನು ವಿಂಗಡಣೆ ಮಾಡಿ ಕಾಂಪೋಸ್ಟ್ ಗೊಬ್ಬರ ತಯಾರಿಸಲು ವರ್ಷದ ಹಿಂದಷ್ಟೇ ಶೆಡ್ ನಿರ್ಮಿಸಲಾಗಿತ್ತು. ಶೆಡ್ ಅನ್ನು ಗುತ್ತಿಗೆದಾರರು ಪುನರ್ ನಿರ್ಮಾಣ ಮಾಡಿಕೊಡಲಿದ್ದಾರೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ಕಳಪೆ ಕಾಮಗಾರಿ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.