Kalaburagi News: ಕಲಬುರಗಿ ಜಿಲ್ಲೆಯಲ್ಲಿ ಭಾರಿ ಮಳೆ; ಕಲಬುರಗಿ-ಸೇಡಂ-ಹೈದರಾಬಾದ್ ರಸ್ತೆ ಸಂಪರ್ಕ ಕಡಿತ
ಜಿಲ್ಲಾದ್ಯಂತ ಭರ್ಜರಿ ಮಳೆ ಆಗುತ್ತಿರುವ ಹಿನ್ನೆಲೆ ಹಲವೆಡೆ ಅವಾಂತರಗಳಾಗಿವೆ. ಭಾರಿ ಮಳೆಯಿಂದ ಕಾಗಿನಾ ನದಿ ಉಕ್ಕಿ ಹರಿಯುತ್ತಿದ್ದು, ಮಳಖೇಡ ಸೇತುವೆ ಸಂಪೂರ್ಣ ಜಲಾವೃತವಾಗಿದೆ.
ಕಲಬುರಗಿ: ಬಿಸಿಲನಾಡು ಕಲಬುರಗಿ ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ಬಾರಿ ಮಳೆಯಾಗುತ್ತಿದೆ. ಅದರಲ್ಲೂ ಕಳೆದ ರಾತ್ರಿಯಿಂದ ಜಿಲ್ಲೆಯ ಬಹುತೇಕ ಕಡೆ ಭಾರಿ ಮಳೆಯಾಗುತ್ತಿದ್ದು, ನಿರಂತರ ಮಳೆಯಿಂದ ಜಿಲ್ಲೆಯ ಜನಜೀವನ ಅಸ್ತವ್ಯಸ್ತವಾಗಿದೆ.
ಜಿಲ್ಲಾದ್ಯಂತ ಭರ್ಜರಿ ಮಳೆ ಆಗುತ್ತಿರುವ ಹಿನ್ನೆಲೆ ಹಲವೆಡೆ ಅವಾಂತರಗಳಾಗಿವೆ. ಭಾರಿ ಮಳೆಯಿಂದ ಕಾಗಿನಾ ನದಿ ಉಕ್ಕಿ ಹರಿಯುತ್ತಿದ್ದು, ಮಳಖೇಡ ಸೇತುವೆ ಸಂಪೂರ್ಣ ಜಲಾವೃತವಾಗಿದೆ. ಈ ಸಂಬಂಧ ಕಲಬುರಗಿ-ಸೇಡಂ-ಹೈದ್ರಾಬಾದ್ ರಸ್ತೆ ಸಂಪರ್ಕ ಕಡಿತವಾಗಿದೆ. ಇನ್ನು ಸೇಡಂ ತಾಲೂಕಿನ ಕಾಗಿನಾ ನದಿಗೆ ಅಡ್ಡಲಾಗಿ ಮಳಖೇಡ ಸೇತುವೆಯನ್ನು ನಿರ್ಮಾಣ ಮಾಡಲಾಗಿತ್ತು. ಇದೀಗ ಸೇತುವೆ ನೀರಿನಿಂದ ತುಂಬಿದ್ದು, ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಬೆಳಗ್ಗೆ ನಾಲ್ಕು ಗಂಟೆಯಿಂದ ಸಂಚಾರ ಸ್ಥಗಿತಗೊಳಿಸಿದ್ದಾರೆ.
ಮುಲ್ಲಾಮಾರಿ ಜಲಾಶಯದಿಂದ 2 ಸಾವಿರ ಕ್ಯೂಸೆಕ್ ನೀರು ಬಿಡುಗಡೆ
ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ನಾಗರಾಳ ಬಳಿಯಿರುವ ಮುಲ್ಲಾಮಾರಿ ಜಲಾಶಯದಿಂದ 2 ಸಾವಿರ ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡಿದ್ದು, ಇದರಿಂದ ಕೆಳ ಬಾಗದಲ್ಲಿರುವ ಗ್ರಾಮಗಳಿಗೆ ಸಂಚಾರ ಸ್ಥಗಿತವಾಗುವ ಆತಂಕ ಎದುರಾಗಿದೆ. ಜೊತೆಗೆ ಚಿಂಚೋಳಿ ತಾಲೂಕಿನ ಗರಗಪಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಬ್ರಿಡ್ಜ್ ಕಂ ಬ್ಯಾರೇಜ್ ಮೇಲೆ ನೀರು ಹರಿಯುತ್ತಿರೋದರಿಂದ ರಸ್ತೆ ಸಂಚಾರ ಸ್ಥಗಿತ ಮಾಡಲಾಗಿದೆ.
ಪ್ರಸಕ್ತ ವರ್ಷದ ಮುಂಗಾರು ಆರಂಭವಾಗಿ ಎರಡು ತಿಂಗಳು ಕಳೆಯುವ ಸಮಯದಲ್ಲಿ ಕಳೆದ ಎರಡು ದಿನಗಳಿಂದ ಅಫಜಲಪುರ ತಾಲೂಕಿನಾದ್ಯಂತ ಸಾಧಾರಣ ಮಳೆಯಾಗುತ್ತಿರುವ ಹಿನ್ನೆಲೆ ತಾಲೂಕಿನ ಜೀವನದಿಯಾಗಿರುವ ಭೀಮಾ ನದಿಯಲ್ಲಿ 150 ಕ್ಯೂಸೆಕ್ಸ್ ನಷ್ಟು ಅಲ್ಪ ಪ್ರಮಾಣದ ಒಳ ಹರಿವು ಕಂಡು ಬಂದಿದೆ.
ಸೊನ್ನ ಗ್ರಾಮದಲ್ಲಿರುವ ಭೀಮಾ ಏತ ನೀರಾವರಿ ಬ್ಯಾರೇಜ್ನಲ್ಲಿ ಒಟ್ಟು ಸಂಗ್ರಹ ಸಾಮರ್ಥ್ಯ 3.166 ಟಿಎಂಸಿ ಇದ್ದು ಬ್ಯಾರೇಜ್ ನಲ್ಲಿ ಈಗ ಗ್ರಾಸ್ ಸ್ಟೋರೇಜ್ 0.818 ಟಿಎಂಸಿ ಹಾಗೂ ಲೈವ್ ಸ್ಟೋರೇಜ್ 0.138 ಟಿಎಂಸಿ ಇದೆ. ಕಳೆದ 24 ಗಂಟೆಗಳಲ್ಲಿ ನದಿಗೆ 150 ಕ್ಯೂಸೆಕ್ಸ್ ನಷ್ಟು ಒಳ ಹರಿವು ಬಂದಿದ್ದು ಮುಂದಿನ ದಿನಗಳಲ್ಲಿ ಉತ್ತಮ ಮಳೆಯಾದರೆ ಒಳ ಹರಿವು ಹೆಚ್ಚಾಗಿ ಬ್ಯಾರೇಜನಲ್ಲಿ ನೀರಿನ ಸಂಗ್ರಹ ಹೆಚ್ಚಳವಾಗಬಹುದಾಗಿದೆ.
ಮಹಾರಾಷ್ಟ್ರದ ಯಾವುದೇ ಜಲಾಶಯಗಳಿಂದ ನೀರು ನದಿಗೆ ಹರಿಬಿಟ್ಟಿಲ್ಲ ಎಂದು ಕೆಎನ್ಎನ್ಎಲ್ ಅಧಿಕಾರಿ ಸಂತೋಷ ಸಜ್ಜನ್ ಮಾಹಿತಿ ನೀಡಿದ್ದಾರೆ.
(ವರದಿ: ಎಸ್.ಬಿ.ರೆಡ್ಡಿ, ಕಲಬುರಗಿ)