Kalaburagi: ತುಂಬಿ ಹರಿಯುತ್ತಿರುವ ಮುಲ್ಲಾಮಾರಿ ಜಲಾಶಯ, ಸೇತುವೆ ಜಲಾವೃತ; ಮುಂಜಾಗ್ರತಾ ಕ್ರಮ ಕೈಕೊಳ್ಳಲು ಜಿಪಂ ಸಿಇಓ ಮೀನಾ ಸೂಚನೆ
ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಗಾರಂಪಳ್ಳಿ ಗ್ರಾಮದ ಸೇತುವೆ ಮೇಲೆ ಮುಲ್ಲಾಮಾರಿ ಜಲಾಶಯದ ಪ್ರವಾಹ ನೀರು ಮೂರು ದಿನಗಳಿಂದ ಹರಿಯುತ್ತಿದೆ ಸೇತುವೆಗಳು ಜಲಾವೃತವಾಗಿವೆ. ಮಳೆಯಿಂದಾಗಿ ಹಾನಿಯಾಗಿರುವ ಗ್ರಾಮಗಳಿಗೆ ಕಲಬುರಗಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭವನಸಿಂಗ್ ಮೀನಾ ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕಲಬುರಗಿ: ಜಿಲ್ಲೆಯ ಚಿಂಚೋಳಿ ತಾಲೂಕಿನಲ್ಲಿ ಸತತವಾಗಿ ಕಳೆದ ಐದು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಹಾನಿಯಾಗಿರುವ ಗ್ರಾಮಗಳಿಗೆ ಕಲಬುರಗಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭವನಸಿಂಗ್ ಮೀನಾ ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ತಾಲೂಕಿನ ಗಾರಂಪಳ್ಳಿ ಗ್ರಾಮದ ಸೇತುವೆ ಮೇಲೆ ಮುಲ್ಲಾಮಾರಿ ಜಲಾಶಯದ ಪ್ರವಾಹ ನೀರು ಮೂರು ದಿನಗಳಿಂದ ಹರಿಯುತ್ತಿದೆ ಸೇತುವೆಗಳು ಜಲಾವೃತವಾಗಿವೆ. ಗ್ರಾಮಸ್ಥರು ಹೊರಗೆ ಬಾರದಂತಹ ಪರಿಸ್ಥಿತಿ ಪ್ರತಿ ವರ್ಷ ಮಳೆಗಾಲದಲ್ಲಿ ಸಾಕಷ್ಟು ತೊಂದರೆ ಅನುಭವಿಸಬೇಕಾಗಿದೆ. ಹೊಸ ಸೇತುವೆ ನಿರ್ಮಾಣದ ಅಗತ್ಯವಿದೆ ಎಂದು ಗ್ರಾಮ ಮುಖಂಡ ಮಹೇಶ್ ಗುತ್ತೇದಾರ, ಹಣಮಂತ ಭೋವಿ ಸಿಇಒ ಅವರ ಗಮನಕ್ಕೆ ತಂದರು.
ಗಾರಂಪಳ್ಳಿ ಗ್ರಾಮದ ಸೇತುವೆ ಜಲಾವೃತವಾಗಿರುವುದರಿಂದ ಆಗುತ್ತಿರುವ ತೊಂದರೆ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸುತ್ತೇನೆ ಎಂದು ಗ್ರಾಮಸ್ಥರಿಗೆ ಭರವಸೆ ನೀಡಿದರು.
ಚಿಮ್ಮನಚೋಡ ಗ್ರಾಮದಲ್ಲಿ ಕಳೆದ ಒಂದು ವಾರದ ಹಿಂದೆ ವಾಂತಿಭೇದಿ ಪ್ರಕರಣ ಬಗ್ಗೆ ಪರಿಶೀಲನೆ ನಡೆಸಿದರು. ತಾಪಂ, ಗ್ರಾಪಂ ಪಿಡಿಇ ಮತ್ತು ತಾಲೂಕು ಆರೋಗ್ಯ ಅಧಿಕಾರಿಗಳು ಗ್ರಾಮದಲ್ಲಿ ಉಂಟಾಗುವ ಕಾಲರಾ, ವಾಂತಿ ಭೇದಿ, ಮಲೇರಿಯಾ, ಡೆಂಗ್ಯು ಚಿಕುನಗುನ್ಯಾ ರೋಗದ ಬಗ್ಗೆ ಜನರಿಗೆ ಜಾಗೃತಿ ಮೂಡಿಸಬೇಕು ಎಂದು ಸೂಚನೆ ನೀಡಿದರು.
ಕೆಳದಂಡೆ ಮುಲ್ಲಾಮಾರಿ ಜಲಾಶಯ ಭೇಟಿ ನೀಡಿದ ಸಿಇಎ ತಾಲೂಕಿನಲ್ಲಿ ವ್ಯಾಪಕವಾಗಿ ಮಳೆ ಆಗುತ್ತಿದೆ ಜಲಾಶಯದಲ್ಲಿ ಒಳಹರಿವು ಉಂಟಾಗುವ ಸಂದರ್ಭದಲ್ಲಿ ಆಣೆಕಟ್ಟು ಸುರಕ್ಷತೆ ಕಾಪಾಡಲು ಹೆಚ್ಚುವರಿಯಾಗಿರುವ ಮಳೆ ನೀರು ಹೊರಗೆ ಬಿಡಬೇಕು. ಜಲಾಶಯದಲ್ಲಿ ಒಳಹರಿವು ಬಗ್ಗೆ ಸಿಬ್ಬಂದಿಗಳು ಗಮನ ಹರಿಸಲು ಸೂಚನೆ ನೀಡಿದರು.
ಜಿಲ್ಲೆಯಲ್ಲಿ ವ್ಯಾಪಕವಾಗಿ ಕೇವಲ ಒಂದೇ ವಾರದಲ್ಲಿಯೇ ಕೆಳದಂಡೆ ಮುಲ್ಲಾಮಾರಿ ಜಲಾಶಯ ಮತ್ತು ಚಂದ್ರಂಪಳ್ಳಿ ಜಲಾಶಯ ತುಂಬಿ ಹರಿಯುತ್ತಿವೆ ಇವುಗಳು ಜಿಲ್ಲೆಯಲ್ಲಿ ಮೊದಲದಾಗಿವೆ. ಜಲಾಶಯ ಕೆಳಭಾಗದಲ್ಲಿ ಇರುವ ಗ್ರಾಮಸ್ಥರಿಗೆ ಸೂಚನೆ, ಡಂಗೂರ ಸಾರಿ ಸೂಚನೆ ನೀಡಿ ಎಚ್ಚರಿಕೆ ನೀಡಬೇಕು. ಯಾವುದೇ ಜನಜಾನುವಾರುಗಳ ಜೀವ ಹಾನಿಯಾಗದಂತೆ ತಾಲೂಕಿನ ಎಲ್ಲಾ ಅಧಿಕಾರಿಗಳು ಗಮನಹರಿಸಬೇಕು ಎಂದು ಎಚ್ಚರಿಕೆ ನೀಡಿದರು.
ತಾಲೂಕು ಮಟ್ಟದ ಎಲ್ಲಾ ಹಿರಿಯ ಅಧಿಕಾರಿಗಳು ತಮ್ಮ ಕೇಂದ್ರ ಸ್ಥಾನದಲ್ಲಿದ್ದುಕೊಂಡು ಪ್ರವಾಹ ಪರಿಸ್ಥಿತಿ ಗಮನಿಸಿ ಮುಂಜಾಗ್ರತಾ ಕ್ರಮಗಳನ್ನು ಕೈಕೊಳ್ಳಬೇಕು. ಗ್ರಾಪಂ ಪಿಡಿಓ, ಕಾರ್ಯದರ್ಶಿಗಳು ಗ್ರಾಪಂ ಕಚೇರಿಯಲ್ಲಿ ಇರಬೇಕು ಶುದ್ದ ನೀರು ಪೂರೈಕೆ, ಚರಂಡಿ ಸ್ವಚ್ಚತೆ, ವಿದ್ಯುತ್ ಸಂಪರ್ಕ ಬಗ್ಗೆ ಗಮನಿಸಬೇಕು ಎಂದು ಸಿಇಒ ಹೇಳಿದರು.
ಚಿಂಚೋಳಿ ತಾಲೂಕಿನ ಚಿಮ್ಮನಚೋಡ ಗ್ರಾಮದ ಹರಿಜನವಾಡ, ಪ್ರಾಥಮಿಕ ಆರೋಗ್ಯ ಕೇಂದ್ರ,ಕೆಳದಂಡೆ ಮುಲ್ಲಾಮಾರಿ ಜಲಾಶಯ ಹಾಗೂ ಗಾರಂಪಳ್ಳಿ ಸುಲೇಪೇಟ ಗ್ರಾಪಂಗಳಿಗೆ ಮತ್ತು ತಾಜಲಾಪುರ ಗ್ರಾಮದ ಅರಣ್ಯ ಇಲಾಖೆಯ ನರ್ಸರಿ ಭೇಟಿ ಸಸಿಗಳ ಬಗ್ಗೆ ಮಾಹಿತಿಯನ್ನು ಪಡೆದರು.
ಕೋರವಾರ ಗ್ರಾಪಂಗೆ ಜಿಪಂ ಸಿಇಓ ಭೇಟಿ
ಜಿಪಂ ಸಿಇಓ ಭವನಸಿಂಗ್ ಮೀನಾ ಅವರು ಕಾಳಗಿ ತಾಲೂಕಿನ ಕೋರವಾರ ಗ್ರಾಪಂ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಗ್ರಾಪಂನಲ್ಲಿ ಗೃಹಲಕ್ಷ್ಮಿ ಯೋಜನೆಯ ಅರ್ಜಿಗಳನ್ನು ಭರ್ತಿ ಮಾಡಲು ಸಾರ್ವಜನಿಕರು ಬಂದಿದ್ದು ಕಂಪ್ಯೂಟರ ಆಪರೇಟರ ಗೈರು ಹಾಜರಾಗಿದ್ದರು ಸದರಿ ಸಿಬ್ಬಂದಿಗೆ ನೋಟೀಸ್ ನೀಡಲು ಸಂಬಂಧಪಟ್ಟ ಅಧಿಕಾರಿಗೆ ಸೂಚನೆ ನೀಡಿ ಗ್ರಾಪಂ ಆವರಣದಲ್ಲಿರುವ ಗ್ರಂಥಾಲಯಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿ ನಂತರ ನರೇಗಾ ಯೋಜನೆಯ ಟ್ರೆಂಚ್ ಕಾಮಗಾರಿ ವೀಕ್ಷಣೆ ನಡೆಸಿದರು.
ಶಾಲೆಯಲ್ಲಿ ಹೊಸದಾಗಿ ನಿರ್ಮಾಣ ಮಾಡಿರುವ ಶೌಚಾಲಯ ಕಾಮಗಾರಿ ವೀಕ್ಷಣೆ ಮಾಡಿದರು. ನಂತರ ಕೊಡ್ಲಿ ಗ್ರಾಮ ಪಂಚಾಯತ ಭೇಟಿ ನೀಡಿ ಬಾಪುಜಿ ಸೇವಾ ಕೇಂದ್ರದಲ್ಲಿ ಗೃಹಲಕ್ಷ್ಮಿ ಯೋಜನೆಯ ಅರ್ಜಿಗಳನ್ನು ಭರ್ತಿ ಮಾಡಲು ಬಂದ ಮಹಿಳೆಯರ ಜೊತೆ ಚರ್ಚಿಸಿ ಸಮಸ್ಯೆ ಆಗದಂತೆ ಕ್ರಮವಹಿಸಲಾಗುವುದು ಎಂದು ತಿಳಿಸಿದರು. ನಂತರ ಕನಕಪುರ ಗ್ರಾಮ ಪಂಚಾಯತ ವ್ಯಾಪ್ತಿಯ ತಾಜಲಾಪುರ ಗ್ರಾಮದ ನರ್ಸರಿ ವೀಕ್ಷಣೆ ಮಾಡಿ ಗ್ರಾಮದ ರಸ್ತೆ ಬದಿ ಅರಣ್ಯ ಇಲಾಖೆಯವರು ಮಾಡಿರುವ ಪ್ಲಾಂಟೇಷನ್ ವೀಕ್ಷಿಣೆ ಮಾಡಿದರು.
ಈ ಸಂದರ್ಭದಲ್ಲಿ ಕಾಳಗಿ ಹಾಗೂ ಚಿಂಚೋಳಿ ತಾಲೂಕಿನ ತಾಪಂ ಸಿಇಓ ರೇವಣಸಿದ್ದಪ್ಪ,ಸಹಾಯಕ ನಿರ್ದೇಶಕರಾದ ಶಿವಶಂಕರಯ್ಯ ಪಂಚಾಯತ್ ರಾಜ್ ಇಲಾಖೆಯ ರಾಜೇಶ, ಗ್ರಾಮೀಣ ಕುಡಿಯುವ ನೀರು ಇಲಾಖೆಯ ರಾಹುಲ, ತಾಲೂಕ ಆರೋಗ್ಯ ಅಧಿಕಾರಿ ಡಾ. ಗಫರ್ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.