ಭಾರತೀಯ ಸಂಸ್ಕೃತಿ ಉತ್ಸವಕ್ಕೆ ಸೇಡಂ ಸಜ್ಜು; ಜ 29ರಿಂದ ಅದ್ಧೂರಿ ಕಾರ್ಯಕ್ರಮ, 25 ಲಕ್ಷ ಜನ ಭಾಗಿಯಾಗುವ ನಿರೀಕ್ಷೆ
ಕಲಬುರಗಿಯ ಸೇಡಂನಲ್ಲಿ ಜನವರಿ 29ರಿಂದ 9 ದಿನಗಳ ಕಾಲ ನಡೆಯಲಿರುವ ಅದ್ದೂರಿ ಭಾರತೀಯ ಸಂಸ್ಕೃತಿ ಉತ್ಸವವನ್ನು ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ 25 ಲಕ್ಷ ಜನರು ಭಾಗಿಯಾಗುವ ನಿರೀಕ್ಷೆ ಇದೆ.

ಕಲಬುರಗಿ : ಜಿಲ್ಲೆಯ ಸೇಡಂನಲ್ಲಿ ‘ಭಾರತೀಯ ಸಂಸ್ಕೃತಿ ಉತ್ಸವ’ ನಡೆಯಲಿದೆ. ಜನವರಿ 29ರಿಂದ ಫೆಬ್ರುವರಿ 6ರವರೆಗೆ ನಡೆಯಲಿರುವ ಅದ್ಧೂರಿ ಕಾರ್ಯಕ್ರಮಕ್ಕೆ ಅಂತಿಮ ಹಂತದ ಸಿದ್ಧತೆ ನಡೆಯುತ್ತಿದೆ. ಸೇಡಂ ಹೊರವಲಯದ ಬೀರನಹಳ್ಳಿ ಕ್ರಾಸ್‌ನಲ್ಲಿ ಉತ್ಸವ ನಡೆಯಲಿದ್ದು, ಸುಮಾರು 240 ಎಕರೆ ಪ್ರದೇಶದಲ್ಲಿ ಕಾರ್ಯಕ್ರಮಕ್ಕೆ ಸಿದ್ಧತೆ ನಡೆದಿದೆ. ಸಿದ್ದೇಶ್ವರ ಸ್ವಾಮೀಜಿಯ ನೆನಪಿನಲ್ಲಿ ಉತ್ಸವ ನಡೆಯುತ್ತಿದ್ದು, ಕಾರ್ಯಕ್ರಮದ ಸ್ಥಳಕ್ಕೆ 'ಪ್ರಕೃತಿ ನಗರ' ಎಂದು ಹೆಸರಿಡಲಾಗಿದೆ. ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ, ಸೇಡಂ ಭಾರತ ವಿಕಾಸ ಸಂಗಮ ಹಾಗೂ ವಿಕಾಸ ಅಕಾಡೆಮಿ ಸಹಯೋಗದಲ್ಲಿ ಉತ್ಸವ ನಡೆಯಲಿದೆ.
ಹಾರಕೂಡ ಮಠದ ಚನ್ನವೀರ ಶಿವಾಚಾರ್ಯರ ಅಧ್ಯಕ್ಷತೆಯಲ್ಲಿ 9 ದಿನಗಳ ಕಾಲ ನಡೆಯಲಿರುವ ಅದ್ದೂರಿ ಉತ್ಸವವನ್ನು ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮಕ್ಕಾಗಿ ಬೀರನಹಳ್ಳಿ ರಸ್ತೆ ಬದಿಯ 240 ಎಕರೆ ಜಾಗದಲ್ಲಿ ಬೃಹತ್ ವೇದಿಕೆ ನಿರ್ಮಿಸಲಾಗಿದ್ದು, ಸಾವಿರಾರು ಜನರು ಕೂರಲು ಆಸನಗಳನ್ನು ಹಾಕಲಾಗುತ್ತಿದೆ. ವಸ್ತುಪ್ರದರ್ಶನ ಹಾಗೂ ಮಾರಾಟ ಮಳಿಗೆಗಳನ್ನು ಹಾಕಲಾಗುತ್ತಿದೆ. ನೂರಾರು ಮಳಿಗೆಗಳು ಹಾಗೂ ವಸತಿ ಟೆಂಟ್‌ಗಳನ್ನೂ ಸಿದ್ಧಪಡಿಸಲಾಗಿದೆ.
“9 ದಿನಗಳ ಕಾಲ ನಡೆಯಲಿರುವ ಅದ್ದೂರಿ ಉತ್ಸವವನ್ನು ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ದೇಶ-ವಿದೇಶಗಳಿಂದ 25 ಲಕ್ಷ ಜನರು ಭಾಗಿಯಾಗುವ ನಿರೀಕ್ಷೆ ಇದೆ” ಎಂದು ಉತ್ಸವ ಮೇಲ್ವಿಚಾರಣಾ ಸಮಿತಿಯ ಮುಖ್ಯ ಸಂಯೋಜಕ ಬಸವರಾಜ ಪಾಟೀಲ ಸೇಡಂ ತಿಳಿಸಿದ್ದಾರೆ.
60 ಎಕರೆ ಪ್ರದೇಶದಲ್ಲಿ ವಾಹನ ಪಾರ್ಕಿಂಗ್
‘ಅನುಭವ ಮಂಟಪ’ ಮುಖ್ಯ ವೇದಿಕೆ ಮುಂಭಾಗ 70 ಸಾವಿರ ಜನರು ಕುಳಿತು ಕಾರ್ಯಕ್ರಮ ವೀಕ್ಷಿಸಬಹುದು. ಇದೇ ವೇದಿಕೆಯಲ್ಲಿ ಮುಖ್ಯ ಅತಿಥಿಗಳ ಉಪನ್ಯಾಸ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಕಲಬುರಗಿ– ಸೇಡಂ ರಸ್ತೆಯ ಬಲ ಬದಿಯ 60 ಎಕರೆ ಪ್ರದೇಶವನ್ನು ವಾಹನಗಳ ನಿಲುಗಡೆಗೆ ಮೀಸಲಿಡಲಾಗಿದೆ.
ಅತ್ತ ಯಾನಗುಂದಿ ಮಾತೆ ಮಾಣಿಕೇಶ್ವರಿ ಮಂಟಪದಲ್ಲಿ ಉಪನ್ಯಾಸಗಳು ಹಾಗೂ ಚಿಂತನಾ ಸಭೆಗಳು ನಡೆಯಲಿವೆ. 2000 ಜನರು ಕೂತು ಈ ವೇದಿಕೆ ಕಾರ್ಯಕ್ರಮ ವೀಕ್ಷಿಸಬಹುದು. ಸಿದ್ದರಾಮ ಜಂಬಲದಿನ್ನಿ ಮಂಟಪದಲ್ಲಿ ಸಂಗೀತ ಕಾರ್ಯಕ್ರಮಗಳು ಜರುಗಲಿವೆ. ವಿಜ್ಞಾನ ಲೋಕದಲ್ಲಿ ಶಾಲಾ ಮಕ್ಕಳಿಗಾಗಿ ವಿಜ್ಞಾನಕ್ಕೆ ಸಂಬಂಧಿಸಿದ ವಸ್ತು ಪ್ರದರ್ಶನ ಏರ್ಪಡಿಸಲಾಗುತ್ತಿದೆ. 2 ಎಕರೆ ಪ್ರದೇಶದಲ್ಲಿ ಕರ್ನಾಟಕದ ಬಹು ಆಹಾರ ಪದ್ಧತಿ ಮತ್ತು ಶಾಪಿಂಗ್ ಮಳಿಗೆಗಳು ಇರಲಿವೆ.
ಕೃಷಿ ಲೋಕ, ತಾತ್ಕಾಲಿಕ ಟೌನ್
11 ಎಕರೆ ಪ್ರದೇಶದಲ್ಲಿ ಕೃಷಿ ಲೋಕ ಅನಾವರಣಗೊಳ್ಳಲಿದೆ. ವಿವಿಧ ಬಗೆಯ ತರಕಾರಿಗಳು, ಪುಷ್ಪಗಳ ಪ್ರತ್ಯಕ್ಷಿಕೆ ಇರಲಿದೆ. 2 ಎಕರೆ ಪ್ರದೇಶದಲ್ಲಿ ದೃಶ್ಯಕಲಾ ಲೋಕ ನಿರ್ಮಿಸಲಾಗುತ್ತಿದ್ದು, ವಿವಿಧ ಕಲೆಗಳ ಪ್ರದರ್ಶನ, ಚಿತ್ರಕಲಾ ಸ್ಪರ್ಧೆಗಳು ನಡೆಯಲಿವೆ. 6,000 ಜನರು ಉಳಿದುಕೊಳ್ಳಲು ತಾತ್ಕಾಲಿಕ ಟೌನ್ ಸಹ ನಿರ್ಮಾಣ ಮಾಡಲಾಗುತ್ತಿದೆ.
ಸಿದ್ದೇಶ್ವರ ಸ್ವಾಮೀಜಿ ಜೀವನ ಕುರಿತ ಛಾಯಚಿತ್ರ ಪ್ರದರ್ಶನ, ವಿವಿಧ ಗ್ರಾಮ ವಿಕಾಸ ಮಾದರಿಗಳು, ಸ್ವದೇಶಿ ಉತ್ಪನ್ನಗಳು ಹಾಗೂ ಗೃಹೋಪಯೋಗಿ ವಸ್ತುಗಳ ಮಾರಾಟ ಮಳಿಗೆಗಳು ಕೂಡಾ ಇರಲಿವೆ. ಅಂತಿಮ ಹಂತದ ಸಿದ್ಧತೆ ನಡೆಯುತ್ತಿದ್ದು, ಲಕ್ಷಾಂತರ ಜನರು ಕಾರ್ಯಕ್ರಮಕ್ಕೆ ಹಾಜರಾಗುವ ನಿರೀಕ್ಷೆ ಇದೆ.
