ಕಲಬುರಗಿಯ ಚಂದ್ರಂಪಳ್ಳಿ, ಬೀದರ್ ಜಿಲ್ಲೆಯ ಕಾರಂಜಾ ಜಲಾಶಯಗಳಿಂದ ನೀರು ಬಿಡುಗಡೆ; ನದಿಪಾತ್ರದ ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸಲು ಸೂಚನೆ
ಕಲಬುರಗಿಯ ಚಂದ್ರಂಪಳ್ಳಿ, ಬೀದರ್ ಜಿಲ್ಲೆಯ ಕಾರಂಜಾ ಜಲಾಶಯಗಳಿಂದ ನದಿಗಳಿಗೆ ನೀರು ಬಿಡುಗಡೆ ಮಾಡಿರುವ ಹಿನ್ನೆಲೆಯಲ್ಲಿ ನದಿಪಾತ್ರದ ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸಬೇಕೆಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಲಬುರಗಿ: ಕಲ್ಯಾಣ ಕರ್ನಾಟಕ (Kalyan Karnataka) ಭಾಗದ ಕಲಬುರಗಿ (Kalaburagi), ಬೀದರ್ (Bidar) ಮತ್ತು ಯಾದಗಿರಿ (Yadagiri) ಜಿಲ್ಲೆಗಳಲ್ಲಿ ಕಳೆದ ನಾಲ್ಕು ದಿನಗಳಿಂದ ಧಾರಕಾರವಾಗಿ ಮಳೆಯಾಗುತ್ತಿದ್ದು (Heavy Rain), ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಚಂದ್ರಂಪಳ್ಳಿ ಜಲಾಶಯದಿಂದ (Chandrampalli Dam) ಮತ್ತು ಬೀದರ್ ಜಿಲ್ಲೆಯ ಕಾರಂಜಾದಿಂದ (Karanja Dam) ನದಿಗಳಿಗೆ ನೀರು ಬಿಡುಗಡೆ ಮಾಡಲಾಗಿದೆ.
ಜಲಾಶಯಗಳಿಂದ ನದಿಗಳಿಗೆ ನೀರು ಬಿಡುಗಡೆ ಮಾಡಿರುವುದರಿಂದ ನದಿಪಾತ್ರದಲ್ಲಿನ ಜನರು ಮುನ್ನಚ್ಚರಿಕೆ ವಹಿಸಬೇಕು ಎಂದು ಎರಡು ಜಿಲ್ಲೆಯ ಜಲಾಶಯದ ಅಧಿಕಾರಿಗಳು ಪ್ರಕಟಣೆ ಹೊರಡಿಸಿದ್ದಾರೆ.
ಕಲಬುರಗಿಯ ಜಿಲ್ಲೆಯ ಚಿಂಚೋಳಿ ತಾಲೂಕಿನ ಚಂದ್ರಂಪಳ್ಳಿ ಜಲಾಶಯದ ಜಲಾನಯನ ಪ್ರದೇಶದಲ್ಲಿ ವ್ಯಾಪಕವಾಗಿ ಮಳೆಯಾಗುತ್ತಿರುವುದರಿಂದ ಜಲಾಶಯಕ್ಕೆ ನಿರಂತರವಾಗಿ ಒಳಹರಿವು ಬರುತ್ತಿದೆ. ಈ ಜಲಾಶಯವು ಯಾವುದೇ ಕ್ಷಣದಲ್ಲಿ ಭರ್ತಿಯಾಗುವ ಹಂತದಲ್ಲಿದ್ದು, ಗರಿಷ್ಠ ಮಟ್ಟದ ನಂತರ ಬಂದ ಒಳಹರಿವಿನ ನೀರನ್ನು ಆಣೆಕಟ್ಟಿನ ಕೋಡಿಯ ಗೇಟ್‌ಗಳ ಮೂಲಕ ನದಿಗೆ ಹರಿಬಿಡಲಾಗುತ್ತದೆ. ಹೀಗಾಗಿ ಸಾರ್ವಜನಿಕರು ಮುನ್ನಚ್ಚರಿಕೆಯಿಂದ ಇರಬೇಕು ಎಂದು ಕರ್ನಾಟಕ ನೀರಾವರಿ ನಿಗಮ ನಿಯಮಿತ ಚಂದ್ರಂಪಳ್ಳಿ ಯೋಜನೆಯ ಚಂದಾಪುರ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ತಿಳಿಸಿದ್ದಾರೆ.
ಚಂದ್ರಂಪಳ್ಳಿ ಆಣೆಕಟ್ಟಿನ ನದಿ ಪಾತ್ರದ ರೈತರು, ಸಾರ್ವಜನಿಕರು, ರೈತ ಮಹಿಳೆಯರು ಹಾಗೂ ದನಕರುಗಳನ್ನು ಮೇಯಿಸುವವರು ಹಳಕ್ಕೆ ಇಳಿದು ದನಕರುಗಳಿಗೆ ನೀರು ಕುಡಿಸಬಾರದು. ಮೀನು ಹಿಡಿಯಬಾರದು, ಬಟ್ಟೆ ಒಗೆಯುವುದಾಗಲಿ ಮಾಡಬಾರದು. ಇನ್ನಿತರ ಯಾವುದೇ ಕಾರ್ಯಕ್ಕಾಗಿ ನದಿಯಲ್ಲಿ ಇಳಿಯಬಾರದು. ನದಿ ಪಾತ್ರದಲ್ಲಿರುವ ಸಣ್ಣ ನೀರಾವರಿ ಇಲಾಖೆ ಮತ್ತು ಸಾರ್ವಜನಿಕ ಆಸ್ತಿಗಳಿದ್ದಲ್ಲಿ ಮುಂಜಾಗೃತೆಯಾಗಿ ಸುರಕ್ಷಿತ ಕ್ರಮ ಕೈಗೊಳ್ಳಬೇಕೆಂದು ಅವರು ತಿಳಿಸಿದ್ದಾರೆ.
ಕಾರಂಜಾ ಜಲಾಶಯದಿಂದ ನದಿಗೆ ನೀರು ಬಿಡುಗಡೆ
ಬೀದರ್ ಜಿಲ್ಲೆಯಲ್ಲಿರುವ ಕಾರಂಜಾ ಜಲಾಶಯ ಮೇಲ್ಭಾಗದ ಪ್ರದೇಶದಲ್ಲಿ ವ್ಯಾಪಕವಾಗಿ ನಿರಂತರವಾಗಿ ಮಳೆಯಾಗುತ್ತಗಿರುವುದರಿಂದ ಜಲಾಶಯದ ಒಳಹರಿವು ಹೆಚ್ಚಾಗುತ್ತಲಿರುವುದರಿಂದ ಜಲಾಶಯವು ಯಾವುದೇ ಕ್ಷಣದಲ್ಲಿ ಭರ್ತಿಯಾಗುವ ಹಂತದಲ್ಲಿದೆ. ಸದರಿ ಜಲಾಶಯದ ಗರಿಷ್ಠ ಮಟ್ಟ ತಲುಪುವ ಸಂಭವ ಕಂಡಲ್ಲಿ ತಕ್ಷಣ ಕಾರಂಜಾ ಜಲಾಶಯದ ಗೇಟ್‌ಗಳನ್ನು ತೆರೆದು ನದಿಗೆ ನೀರು ಬಿಡಲಾಗುವುದು.
ಜಲಾಶಯದ ಕೆಳಭಾಗದ ಗ್ರಾಮಗಳಲ್ಲಿ ನದಿ ಪ್ರವಾಹದಿಂದ ತೊಂದರೆ ಉಂಟಾಗಬಹುದಾಗಿದೆ. ನದಿಪಾತ್ರದ ಅಕ್ಕಪಕ್ಕದ ಜನರು, ಸಾರ್ವಜನಿಕರು ನದಿಯಲ್ಲಿ ಇಳಿಯುವುದಾಗಲಿ, ಬಟ್ಟೆ ಒಗೆಯುವುದಾಗಲಿ, ಈಜುವುದಾಗಲಿ, ದನಕರುಗಳಿಗೆ ನೀರು ಕುಡಿಸುವುದಾಗಲಿ ಮಾಡಬಾರದು. ನದಿ ಪಾತ್ರದಲ್ಲಿರುವ ಸಣ್ಣ ನೀರಾವರಿ ಇಲಾಖೆ ಮತ್ತು ಇನ್ನೀತರ ಯಾವುದೇ ಇಲಾಖೆಗಳಿಗೆ ಸಂಬಂಧಪಟ್ಟ ಆಸ್ತಿಗಳಿದ್ದಲ್ಲಿ ಸಂರಕ್ಷಿಸಿಕೊಳ್ಳಲು ಮುಂಜಾಗೃತೆ ವಹಿಸಿಕೊಳ್ಳುವಂತೆ ಬೀದರ್ ವಿಭಾಗದ ಕರ್ನಾಟಕ ನೀರಾವರಿ ನಿಗಮ ನಿಯಮಿತ ಕಾರ್ಯಪಾಲಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮುಲ್ಲಾಮಾರಿ ಜಲಾಶಯ ಭರ್ತಿ
ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನಲ್ಲಿ ಕಳೆದ ನಾಲ್ಕು ದಿನಗಳಿಂದ ಮಳೆ ಅಬ್ಬರವಾಗಿ ಸುರಿಯುತ್ತಿರುವುದರಿಂದ ಕೆಳದಂಡೆ ಮುಲ್ಲಾಮಾರಿ ಜಲಾಶಯ ಭರ್ತಿಯಾಗಿರುವುದರಿಂದ ಎರಡು ಗೇಟುಗಳಿಂದ 736.6 ಕ್ಯೂಸೆಕ್ ನೀರು ನದಿಗೆ ಬಿಡಲಾಗಿದೆ ಎಂದು ಕೆಳದಂಡೆ ಮುಲ್ಲಾಮಾರಿ ಯೋಜನೆ ಎಇಇ ಅರುಣ ತಿಳಿಸಿದ್ದಾರೆ.
ಮುಲ್ಲಾಮಾರಿ ನದಿಗೆ ಅಪಾರ ಪ್ರಮಾಣದ ನೀರು ಹೊರಗಡೆ ಬಿಟ್ಟಿರುವುದರಿಂದ ಚಿಮ್ಮನಚೋಡ, ತಾಜಲಾಪುರ, ಗಾರಂಪಳ್ಳಿ,ಗೌಡನಹಳ್ಳಿ,ಚಿಂಚೋಳಿ, ಪೊಲಕಪಳ್ಳಿ, ಗರಗಪಳ್ಳಿ ಗ್ರಾಮಗಳಲ್ಲಿ ಬ್ಯಾರೇಜ್ ಸೇತುವೆಗಳು ಜಲಾವೃತವಾಗಿ ರಸ್ತೆ ಸಂಪರ್ಕ ಕಡಿತಗೊಂಡಿದ್ದರಿಂದ ಗ್ರಾಮಸ್ಥರಿಗೆ ತೊಂದರೆಯಾಗಿದೆ.
ಚಂದ್ರಂಪಳ್ಳಿ ಜಲಾಶಯ ಅಚ್ಚುಕಟ್ಟುಪ್ರದೇಶದಲ್ಲಿ ವ್ಯಾಪಕವಾಗಿ ಮಳೆ ಆಗುತ್ತಿರುವುದರಿಂದ 411 ಕ್ಯೂಸೆಕ್ ಒಳ ಹರಿವು ಹೆಚ್ಚುತ್ತಿದೆ. ಮುಂದಿನ ಕೆಲವು ದಿನಗಳಲ್ಲಿ ಜಲಾಶಯ ಭರ್ತಿಯಾಗುವ ಸಾಧ್ಯತೆ ಇದೆ.
ಗಡಿ ಪದೇಶ ಲಚಮಾಸಾಗರ, ಲಿಂಗಾನಗರ, ಬೊನಸಪುರ, ಮಗದಮಪುರ, ಶಿವರಾಮಪುರ ಗ್ರಾಮಗಳಲ್ಲಿ ಭಾರಿ ಬಿರುಸಿನ ಮಳೆಯಾಗಿದೆ. ಲಚಮಾಸಾಗರ ಗ್ರಾಮದಲ್ಲಿ ಜೋರಾದ ಮಳೆಯಿಂದಾಗಿ ಸಣ್ಣ ನಾಲಾದ ನೀರು ಗ್ರಾಮದಲ್ಲಿ ನುಗ್ಗಿದ್ದರಿಂದ ಗ್ರಾಮದೊಳಗೆ ಸಣ್ಣ ವಾಹನಗಳ ಸಂಚಾರಕ್ಕೆ ಅಡ್ಡಿಯಾಯಿತು ಎಂದು ಸ್ಥಳೀಯರಾದ ರವಿಕುಮಾರ್ ತಿಳಿಸಿದ್ದಾರೆ.
ತಾಲೂಕಿನ ಶಾದಿಪುರ, ಬೂತಪುರ, ಸಲಗರಬಸಂತಪುರ, ರುದನೂರ ಗ್ರಾಮದಲ್ಲಿ ಸಣ್ಣಪುಟ್ಟ ನಾಲೆಗಳ ಉಕ್ಕಿಹರಿಯುತ್ತಿದ್ದವು. ಬೂತಪುತ ಮತ್ತು ರುದನೂರ ಗ್ರಾಮಗಳ ಮಧ್ಯೆ ನಾಲಾ ಉಕ್ಕಿ ಹರಿದ ಪರಿಣಾಮ ಸೇಡಂ- ಚಿಂಚೋಳಿ ರಸ್ತೆ ಮಧ್ಯೆ ಇರುವ ಸೇತುವೆ ಮೇಲೆ ನೀರು ಹರಿದಿದೆ. ಹೊಲಗದ್ದೆಗಳಲ್ಲಿ ಕೆಲಸ ಮಾಡಲು ಹೋದ ಕೃಷಿ ಕಾರ್ಮಿಕರ ನಾಲಾ ದಾಟಲು ತೊಂದರೆ ಪಡಬೇಕಾಯಿತು ಎಂದು ಗ್ರಾಮಸ್ಥರಾದ ಮಲ್ಲಿಕಾರ್ಜುನ ಕೊಡದೂರ ತಿಳಿಸಿದ್ದಾರೆ.
ಕೊಳ್ಳುರ ಗ್ರಾಮದಲ್ಲಿ ನಾಲೆ ತುಂಬಿ ಹರಿಯುತ್ತಿರುವುದರಿಂದ ಅನೇಕ ಮನೆಗಳಲ್ಲಿ ನೀರು ನುಗ್ಗಿದೆ. ತಾಲೂಕಿನಲ್ಲಿ ವ್ಯಾಪಕವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಅನೇಕ ಗ್ರಾಮದಲ್ಲಿ ವಿದ್ಯುತ್ ಸಂಪರ್ಕ ತೊಂದರೆ ಉಂಟಾಗಿದ್ದರಿಂದ ಜನರು ಕತ್ತಲೆಯಲ್ಲಿ ಜೀವನ ಕಳೆಯಬೇಕಾಯಿತು ಎಂದು ಸ್ಥಳೀಯರು ಮಳೆಯಿಂದಾದ ಸಮಸ್ಯೆಗಳನ್ನು ವಿವರಿಸಿದ್ದಾರೆ. ಮಳೆ ಇಲ್ಲವೆಂದು ಕೊರಗುತ್ತಿರುವ ಜನರಿಗೆ ಈಗ ಧಾರಾಕಾರ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. (ವರದಿ: ಎಸ್.ಬಿ.ರೆಡ್ಡಿ, ಕಲಬುರಗಿ)
ಸಂಬಂಧಿತ ಲೇಖನ
ವಿಭಾಗ