Vande Bharat Express: ಕಲಬುರಗಿ-ಬೆಂಗಳೂರು ಮಧ್ಯೆ ಮಾರ್ಚ್ 12ರಿಂದ ವಂದೇ ಭಾರತ್ ಎಕ್ಸ್‌ಪ್ರೆಸ್ ಸಂಚಾರ
ಕಲಬುರಗಿ ಬೆಂಗಳೂರು ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಚಾರ ಮಾರ್ಚ್ 12ರಿಂದ ಆರಂಭಗೊಳ್ಳಲಿದೆ.
ಕಲಬುರಗಿ: ಬೆಂಗಳೂರಿನಿಂದ ಮಧ್ಯೆ ಕರ್ನಾಟಕ, ಮೈಸೂರು, ಚೆನ್ನೈ, ಹೈದ್ರಾಬಾದ್, ಕೊಯಮತ್ತೂರು, ಮಂಗಳೂರಿನಿಂದ ಗೋವಾ, ತಿರುವನಂತಪುರಂ ಸಂಪರ್ಕ ಕಲ್ಪಿಸುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಚಾರ ಆರಂಭಗೊಂಡಿವೆ. ಆದರೆ ಬಹುಬೇಡಿಕೆಯಾದ ಕಲ್ಯಾಣ ಕರ್ನಾಟಕ ಸಂಪರ್ಕಿಸುವ ವಂದೇಭಾರತ್ ಎಕ್ಸ್ ಪ್ರೆಸ್ ರೈಲು ಈಗ ಶುರುವಾಗುತ್ತಿದೆ. ಅದೂ ಕಲ್ಯಾಣ ಕರ್ನಾಟಕದ ಪ್ರಮುಖ ನಗರಿ ಕಲಬುರಗಿ ಹಾಗೂ ರಾಜಧಾನಿ ಬೆಂಗಳೂರು ಮಧ್ಯೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಚಾರಕ್ಕೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ ಒಪ್ಪಿಗೆ ನೀಡಿದ್ದಾರೆ.
ಈ ಕುರಿತು ಕಲಬುರಗಿ ಸಂಸದ ಡಾ.ಉಮೇಶ್ ಜಾಧವ್ ಅವರಿಗೆ ಪತ್ರ ನೀಡಿರುವ ಅವರು, ಮಾರ್ಚ್ 12ರಂದು ಕಲಬುರಗಿ ರೈಲು ನಿಲ್ದಾಣದಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದೆ ಎಂದು ಹೇಳಿದ್ದಾರೆ. ವರ್ಚುವಲ್ ಮೋಡ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ನೂತನ ರೈಲಿಗೆ ಹಸಿರು ನಿಶಾನೆ ತೋರಲಿದ್ದಾರೆ ಎಂದು ಕಲಬುರಗಿ ಸಂಸದ ಉಮೇಶ್ ಜಾಧವ್ ತಿಳಿಸಿದ್ದಾರೆ.
ಮಾರ್ಚ್ 9ರಿಂದ ಕಲಬುರಗಿ-ಬೆಂಗಳೂರು ಮಧ್ಯೆ ನೇರ ಎಕ್ಸ್‌ಪ್ರೆಸ್ ರೈಲು ಸಂಚಾರಕ್ಕೂ ಇತ್ತೀಚೆಗೆ ಕೇಂದ್ರ ರೈಲ್ವೆ ಇಲಾಖೆ ಅಭಯ ನೀಡಿದ್ದು, ಆರಂಭದಲ್ಲಿ ಪ್ರತಿ ಶನಿವಾರ ಮಾತ್ರ ಸಂಚರಿಸಲಿರುವ ಈ ಎಕ್ಸ್‌ಪ್ರೆಸ್, ಏ.5ರಿಂದ ವಾರದಲ್ಲಿ ಮೂರು ದಿನ ಓಡಾಟ ನಡೆಸಲಿದೆ ಎಂದು ಸ್ವತಃ ರೈಲ್ವೆ ಸಚಿವ ಅಶ್ವಿನಿ ವೈಷ್ಣವ ತಿಳಿಸಿದ್ದಾರೆ.
ಈ ಮಧ್ಯೆ, ಈಗ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಚಾರ ಆರಂಭಿಸುವ ಮೂಲಕ ಕಲ್ಯಾಣ ಕರ್ನಾಟಕದ ಕೇಂದ್ರ ಸ್ಥಾನವಾಗಿರುವ ಕಲಬುರಗಿ ನಗರಕ್ಕೆ ಕೇಂದ್ರ ಸರಕಾರ ಮತ್ತೊಂದು ಭರ್ಜರಿ ಕೊಡುಗೆ ನೀಡಿದೆ ಎಂದು ಸಂಸದ ಡಾ.ಜಾಧವ್ ಸಂತಸ ವ್ಯಕ್ತಪಡಿಸಿದ್ದಾರೆ.
ಕಲಬುರಗಿಯಿಂದ ಬೆಳಿಗ್ಗೆ ಹೊರಟು ರಾತ್ರಿ ರೈಲು ವಾಪಾಸಾಗಬಹುದು. ಇಲ್ಲದೇ ಬೆಂಗಳೂರಿನಿಂದ ಕಲಬುರಗಿಗೆ ಆಗಮಿಸಿ ಮಧ್ಯಾಹ್ನದ ನಂತರ ಹೊರಡಬಹುದು ಎನ್ನಲಾಗುತ್ತಿದೆ. ಈ ರೈಲು ಮಾರ್ಗ, ನಿಲುಗಡೆ ಸ್ಥಳಗಳು, ದರ ಸಹಿತ ಎಲ್ಲ ವಿವರಗಳು ಒಂದೆರಡು ದಿನದಲ್ಲಿ ಪ್ರಕಟಿಸುವ ಸಾಧ್ಯತೆಯಿದೆ. ಆಗ ಎಲ್ಲ ವಿವರಗಳು ಲಭ್ಯವಾಗಲಿವೆ.
ಸದ್ಯ ಕರ್ನಾಟಕದಲ್ಲಿ ಆರು ವಂದೇ ಭಾರತ್ ರೈಲು ಸಂಚರಿಸುತ್ತಿವೆ. ಈಗ ಆರಂಭಗೊಂಡರೆ ಏಳನೇ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಇದಾಗಲಿದೆ. ಸದ್ಯ ಚೆನ್ನೈ-ಬೆಂಗಳೂರು- ಮೈಸೂರು, ಬೆಂಗಳೂರು- ಧಾರವಾಡ- ಬೆಳಗಾವಿ, ಬೆಂಗಳೂರು- ಹೈದ್ರಾಬಾದ್, ಬೆಂಗಳೂರು-ಕೊಯಮತ್ತೂರು, ಮಂಗಳೂರು- ಗೋವಾ, ಮಂಗಳೂರು-ತಿರುವನಂತಪುರಂ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲುಗಳು ಸಂಚರಿಸುತ್ತಿವೆ.
ವರದಿ: ಮಹೇಶ್ ಕುಲಕರ್ಣಿ. ಕಲಬುರಗಿ