Kalaburagi News: ಕಲಬುರಗಿ ಜಿಲ್ಲೆಯಲ್ಲಿ ನೀರಿಗೆ ಬರ; 282 ಗ್ರಾಮಗಳಿಗೆ ಟ್ಯಾಂಕರ್‌ ನೀರೇ ಗತಿ, ಪರ್ಯಾಯ ಕ್ರಮಕ್ಕೆ ಇಲಾಖೆ ಸನ್ನದ್ಧ-kalaburgi news water problem in kalaburagi district water supply to villages through tankers karnataka water crisis mnk ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  Kalaburagi News: ಕಲಬುರಗಿ ಜಿಲ್ಲೆಯಲ್ಲಿ ನೀರಿಗೆ ಬರ; 282 ಗ್ರಾಮಗಳಿಗೆ ಟ್ಯಾಂಕರ್‌ ನೀರೇ ಗತಿ, ಪರ್ಯಾಯ ಕ್ರಮಕ್ಕೆ ಇಲಾಖೆ ಸನ್ನದ್ಧ

Kalaburagi News: ಕಲಬುರಗಿ ಜಿಲ್ಲೆಯಲ್ಲಿ ನೀರಿಗೆ ಬರ; 282 ಗ್ರಾಮಗಳಿಗೆ ಟ್ಯಾಂಕರ್‌ ನೀರೇ ಗತಿ, ಪರ್ಯಾಯ ಕ್ರಮಕ್ಕೆ ಇಲಾಖೆ ಸನ್ನದ್ಧ

ಕಲಬುರಗಿ ಜಿಲ್ಲೆಯಲ್ಲಿ ಕುಡಿವ ನೀರಿಗೆ ಹಾಹಾಕಾರ ಶುರುವಾಗಿದೆ. ಕಲಬುರಗಿ ನಗರ ಸೇರಿ ಗ್ರಾಮೀಣ ಭಾಗದಲ್ಲಿಯೂ ಈ ಸಲ ನೀರಿನ ಅಭಾವದ ಬಿಸಿ ತಟ್ಟಿದೆ. ಈ ಬಾರಿ ಜಿಲ್ಲೆಯ 282 ಗ್ರಾಮಗಳು ನೀರಿನ ಕೊರತೆ ಎದುರಿಸುತ್ತಿದ್ದು, ಟ್ಯಾಂಕರ್‌ ಮೂಲಕ ಗ್ರಾಮೀಣ ಭಾಗಕ್ಕೂ ನೀರು ಒದಗಿಸುವ ಪ್ಲಾನ್‌ ಸಿದ್ಧವಾಗುತ್ತಿದೆ.

Kalaburagi News: ಕಲಬುರಗಿ ಜಿಲ್ಲೆಯಲ್ಲಿ ನೀರಿಗೆ ಬರ; 282 ಗ್ರಾಮಗಳಿಗೆ ಟ್ಯಾಂಕರ್‌ ನೀರೇ ಗತಿ, ಪರ್ಯಾಯ ಕ್ರಮಕ್ಕೆ ಇಲಾಖೆ ಸನ್ನದ್ಧ
Kalaburagi News: ಕಲಬುರಗಿ ಜಿಲ್ಲೆಯಲ್ಲಿ ನೀರಿಗೆ ಬರ; 282 ಗ್ರಾಮಗಳಿಗೆ ಟ್ಯಾಂಕರ್‌ ನೀರೇ ಗತಿ, ಪರ್ಯಾಯ ಕ್ರಮಕ್ಕೆ ಇಲಾಖೆ ಸನ್ನದ್ಧ

Kalaburgi News: ಕಲಬುರಗಿ ಜಿಲ್ಲೆಯಲ್ಲಿ ಕಳೆದ ಸಾಲಿನ ಮುಂಗಾರು ಮಳೆ ಕೊರತೆಯಿಂದಾಗಿ ಪ್ರಸಕ್ತ ಬೇಸಿಗೆ ಕುಡಿಯುವ ನೀರಿನ ಭೀಕರ ಸಮಸ್ಯೆ ಎದುರಿಸಬೇಕಾದ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ. ಈಗಾಗಲೇ ಜಿಲ್ಲೆಯಾದ್ಯಂತ 282 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಬಹುದು ಎಂದು ಗ್ರಾಮೀಣ ಕುಡಿಯುವ ಸರಬರಾಜು ಇಲಾಖೆ ನಡೆಸಿದ ಸಮೀಕ್ಷೆಯಿಂದ ಗೊತ್ತಾಗಿದೆ. ಈ ಪೈಕಿ ಬಹುತೇಕ ಗ್ರಾಮಗಳಲ್ಲಿ ಕಳೆದ ಡಿಸೆಂಬರ್‌ನಿಂದಲೇ ಕುಡಿಯುವ ನೀರಿನ ಸಮಸ್ಯೆ ತಲೆದೋರಿದ್ದು, ಈ ನಿಟ್ಟಿನಲ್ಲಿ ಅಗತ್ಯ ಮುಂಜಾಗ್ರತೆ ವಹಿಸಲು ಇಲಾಖೆ ಸಕಾರಾತ್ಮಕ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ.

ಕಳೆದ ವರ್ಷಕ್ಕಿಂತಲೂ ಭೀಕರ: ಕಳೆದ ಸಾಲಿನ ಬೇಸಿಗೆ ಅವಧಿಯಲ್ಲಿ ಜಿಲ್ಲೆಯ 170 ಗ್ರಾಮಗಳು ನೀರಿನ ಸಮಸ್ಯೆ ಎದುರಿಸಿದ್ದವು. ಈ ಬಾರಿ 282 ಗ್ರಾಮಗಳು ನೀರಿನ ಕೊರತೆ ಎದುರಿಸುತ್ತಿದ್ದು, ಇದಕ್ಕಾಗಿ ಟ್ಯಾಂಕರ್ ನೀರಿನ ವ್ಯವಸ್ಥೆ, ಖಾಸಗಿ ಮಾಲೀಕತ್ವದ ನೀರಿನ ಮೂಲಗಳನ್ನು ಬಳಸಿಕೊಳ್ಳಲು ಇಲಾಖೆ ಮುಂದಾಗಿದೆ.

ಇನ್ನು ಕಳೆದ ಮುಂಗಾರಿನ ಮುನಿಸಿನಿಂದಾಗಿ ಅಂತರ್ಜಲ ಮಟ್ಟ ಈಗಾಗಲೇ ಪಾತಾಳದ ಕಡೆಗೆ ಮುಖ ಮಾಡಿರುವುದರಿಂದ ಹೊಸದಾಗಿ ಬೋರ್ ವೆಲ್ ಕೊರೆಸುವ ಸಾಹಸಕ್ಕೂ ಕೈ ಹಾಕದಂತಹ ಅಸಹಾಯಕತೆ ಇಲಾಖೆಯನ್ನು ಕಾಡುತ್ತಿದೆ. ಹಾಗಾಗಿ, ಆದಷ್ಟೂ ಖಾಸಗಿ ನೀರಿನ ಮೂಲಗಳನ್ನು ಬಳಸಿಕೊಳ್ಳುವುದು ಸೇರಿದಂತೆ ಟ್ಯಾಂಕರ್ ಮೂಲಕ ನೀರು ಪೂರೈಕೆಯ ಸಾಧ್ಯತೆಗಳನ್ನು ಪರಿಶೀಲಿಸಲಾಗುತ್ತಿದೆ. ಈ ಮಧ್ಯೆ ಜಿಲ್ಲೆಯ ಆಳಂದ ತಾಲೂಕಿನ ತೀರ್ಥ, ಸರಸಂಬಾ, ಸಕ್ಕರಗಾ ಹಾಗೂ ಝಳಕಿ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಕೆ ಆರಂಭಿಸಲಾಗಿದೆ ಎಂದು ಗ್ರಾಮೀಣ ನೀರು ಸರಬರಾಜು ಇಲಾಖೆಯ (ಆರ್.ಡಬ್ಲ್ಯು.ಎಸ್) ಹಿರಿಯ ಅಧಿಕಾರಿಗಳು ಹೇಳುತ್ತಾರೆ.

ತಾಲೂಕುವಾರು ಗ್ರಾಮಗಳಲ್ಲಿ ನೀರಿನ ಅಭಾವ

ಇದರ ಜೊತೆಗೆ, ಜಿಲ್ಲೆಯ ಅಫಜಲ್‌ಪುರ ತಾಲೂಕಿನಲ್ಲಿ 86, ಆಳಂದ - 45, ಚಿಂಚೋಳಿ-15, ಚಿತ್ತಾಪುರ-14, ಕಲಬುರಗಿ-40, ಜೇವರ್ಗಿ- 5, ಸೇಡಂ-28, ಕಾಳಗಿ-17, ಕಮಲಾಪುರ-23, ಯಡ್ರಾಮಿ-4 ಹಾಗೂ ಶಹಾಬಾದ್ ತಾಲೂಕಿನ 5 ಗ್ರಾಮಗಳಲ್ಲಿ ನೀರಿನ ಸಮಸ್ಯೆ ಎದುರಾಗಬಹುದು ಎಂದು ಅಂದಾಜಿಸಲಾಗಿದೆ. ಈ ಗ್ರಾಮಗಳ ನೀರಿನ ಸಮಸ್ಯೆ ಮೇಲೆ ಕಣ್ಣಿಟ್ಟು ಪರಿಹಾರೋಪಾಯಗಳನ್ನು ಸೂಚಿಸಲು ಟಾಸ್ಕ್ ಫೋರ್ಸ್ ಕಮಿಟಿಗಳನ್ನು ಸಹ ಸಕ್ರಿಯ ಸ್ಥಿತಿಯಲ್ಲಿ ಇರಿಸಲಾಗಿದೆ.

ಗ್ರಾಮಗಳಿಗೆ ಟ್ಯಾಂಕರ್‌ ನೀರೇ ಗತಿ

ಕಳೆದ ಡಿಸೆಂಬರ್ ತಿಂಗಳಲ್ಲಿ ಕೆಲವು ಗ್ರಾಮಗಳಲ್ಲಿ ಎದುರಾದ ನೀರಿನ ಸಮಸ್ಯೆ ಗಮನದಲ್ಲಿಟ್ಟುಕೊಂಡು ಪೂರಕ ಕ್ರಮವಾಗಿ ಜಿಲ್ಲೆಯಾದ್ಯಂತ ಇರುವ 1279 ಕೊಳವೆ ಬಾವಿಗಳ ಪೈಕಿ 413 ಕೊಳವೆಬಾವಿಗಳನ್ನು ಫ್ಲಶ್ ಮಾಡಲಾಗಿದೆ. ಜೊತೆಗೆ, ಈ ಪೈಕಿ 364 ಬೋರ್ ವೆಲ್ ಗಳು ಕೆಟ್ಟು ಹೋಗಿದ್ದು ನೀರುಗುಳುವುದನ್ನು ನಿಲ್ಲಿಸಿವೆ. ಇನ್ನು, 91 ಗ್ರಾಮಗಳಿಗೆ ತುರ್ತಾಗಿ ಟ್ಯಾಂಕರ್ ಮೂಲಕ ನೀರು ಪೂರೈಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಮಾರ್ಚ್ 15ರ ಬಳಿಕ ನೀರಿನ ಸಮಸ್ಯೆಯ ನೈಜ ಚಿತ್ರಣ ಲಭ್ಯವಾಗಲಿದೆ. ಹಾಗಾಗಿ, ಮುಂಜಾಗ್ರತಾ ಕ್ರಮವಾಗಿ 157 ಖಾಸಗಿ ಕೊಳವೆಬಾವಿಗಳನ್ನು ಗುರುತಿಸಲಾಗಿದ್ದು, ಈ ಮೂಲಗಳಿಂದ ನೀರು ಪಡೆಯಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಆರ್‌ಡಬ್ಲ್ಯುಎಸ್ ಎಕ್ಸಿಕ್ಯುಟಿವ್ ಇಂಜಿನಿಯರ್ ಶಿವಾನಂದ ವಸ್ತುಸ್ಥಿತಿ ವಿವರಿಸಿದರು.

ಕಲಬುರಗಿ ಜಿಲ್ಲೆಯ 282 ಗ್ರಾಮಗಳಲ್ಲಿ ಈ ಬೇಸಿಗೆ ಅವಧಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರುವ ಲಕ್ಷಣಗಳಿವೆ. ಇದಕ್ಕೆ ಪರಿಹಾರವಾಗಿ ಈಗಾಗಲೇ 1 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ. ಮೇಲಾಗಿ, ನೀರಿನ ಬರ ಸಮಸ್ಯೆ ಸಮರ್ಥವಾಗಿ ನಿಭಾಯಿಸಲು ಸರಕಾರ ಅದಾಗಲೇ ಪ್ರತಿ ತಾಲೂಕಿಗೆ ತಲಾ 25 ಲಕ್ಷ ರೂಪಾಯಿ ಬಿಡುಗಡೆ ಮಾಡಿದೆ. ಪರಿಸ್ಥಿತಿಯ ತೀವ್ರ ನಿಗಾ ಇರಿಸಲಾಗಿದೆ ಎನ್ನುತ್ತಾರೆ ಆರ್.ಡಬ್ಲ್ಯು.ಎಸ್ ಎಕ್ಸಿಕ್ಯುಟಿವ್ ಇಂಜಿನಿಯರ್ ಶಿವಾನಂದ್‌.

ಕಲಬುರಗಿ ನಗರದ್ದೂ ಅದೇ ಗತಿ

ಕಲಬುರಗಿ ನಗರಕ್ಕೆ ನೀರು ಪೂರೈಸುವ ಸರಡಗಿ ಬ್ಯಾರೇಜ್ ಹಾಗೂ ಬೆಣ್ಣೆತೊರಾ ಜಲಾಶಯದಲ್ಲಿ ದಿನೇದಿನೆ ನೀರಿನ ಸಂಗ್ರಹ ಕುಸಿಯುತ್ತಿದೆ. ನಿತ್ಯ ಸರಡಗಿ ಬ್ಯಾರೇಜಿನಿಂದ 52 ಎಂ.ಎಲ್‌ಡಿ ಹಾಗೂ ಬೆಣ್ಣೆತೊರಾ ಜಲಾಶಯದಿಂದ 20 ಎಂ.ಎಲ್.ಡಿ ನೀರು ಪೂರೈಸಲಾಗುತ್ತಿದ್ದರೂ, ಪ್ರತಿದಿನ 20 ಎಂ.ಎಲ್.ಡಿ ನೀರಿನ ಕೊರತೆ ಕಾಡುತ್ತಿದೆ ಎಂದು ನಗರ ನೀರು ಸರಬರಾಜು ಮಂಡಳಿಯ ಎಕ್ಸಿಕ್ಯುಟಿವ್ ಇಂಜಿನಿಯರ್ ಶಿವಕುಮಾರ್ ವಾಸ್ತವ ಸ್ಥಿತಿ ವಿವರಿಸಿದರು.

ನಗರಕ್ಕೆ ನಿತ್ಯ 110 ಎಂ.ಎಲ್.ಡಿ ನೀರು ಅಗತ್ಯವಿದೆ. ಉಭಯ ನೀರಿನ ಮೂಲಗಳಲ್ಲಿ ಕೇವಲ ಒಂದು ವಾರಕ್ಕೆ ಆಗುವಷ್ಟು ಮಾತ್ರ ನೀರಿನ ಸಂಗ್ರಹವಿದೆ. ಹಾಗಾಗಿ, ನಾರಾಯಣಪುರ ಜಲಾಶಯದಿಂದ ನೀರು ಬಿಡುಗಡೆ ಮಾಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಜಿಲಾಧಿಕಾರಿಗಳು ಪ್ರಾದೇಶಿಕ ಆಯುಕ್ತರಿಗೆ ಬರೆದ ಪತ್ರದಿಂದಾಗಿ ಜನವರಿ ತಿಂಗಳಲ್ಲಿ ನಾರಾಯಣಪುರ ಜಲಾಶಯದಿಂದ 0.5 ಟಿಎಂಸಿ ನೀರು ಪಡೆಯಲಾಗಿದೆ. ಮಾರ್ಚ್ 15ರ ಬಳಿಕ ಪುನಃ 0.9 ಟಿಎಂಸಿ ಬಿಡುಗಡೆಗೆ ಕೋರಿ ಈಗಾಗಲೇ ಪ್ರಾದೇಶಿಕ ಆಯುಕ್ತರು ಮತ್ತೊಂದು ಪತ್ರ ಬರೆದಿದ್ದಾರೆ ಎಂದು ಅವರು ಹೇಳಿದರು.

ವರದಿ: ಮಹೇಶ್ ಕುಲಕರ್ಣಿ, ಕಲಬುರಗಿ