Kalburagi News: ಕೇಂದ್ರ-ರಾಜ್ಯ ಅಕ್ಕಿ ಗದ್ದಲದ ನಡುವೆ ಬೆಳಕಿಗೆ ಬಂತು ಅಕ್ರಮ ಸಾಗಾಟ; ಕಲಬುರಗಿಯಲ್ಲಿ 39,200 ಕೆಜಿ ಅಕ್ಕಿ ವಶಕ್ಕೆ
ಕನ್ನಡ ಸುದ್ದಿ  /  ಕರ್ನಾಟಕ  /  Kalburagi News: ಕೇಂದ್ರ-ರಾಜ್ಯ ಅಕ್ಕಿ ಗದ್ದಲದ ನಡುವೆ ಬೆಳಕಿಗೆ ಬಂತು ಅಕ್ರಮ ಸಾಗಾಟ; ಕಲಬುರಗಿಯಲ್ಲಿ 39,200 ಕೆಜಿ ಅಕ್ಕಿ ವಶಕ್ಕೆ

Kalburagi News: ಕೇಂದ್ರ-ರಾಜ್ಯ ಅಕ್ಕಿ ಗದ್ದಲದ ನಡುವೆ ಬೆಳಕಿಗೆ ಬಂತು ಅಕ್ರಮ ಸಾಗಾಟ; ಕಲಬುರಗಿಯಲ್ಲಿ 39,200 ಕೆಜಿ ಅಕ್ಕಿ ವಶಕ್ಕೆ

Kalburagi News: ಕಲಬುರಗಿಯಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ 39,200 ಕೆಜಿ ಪಡಿತರ ಅಕ್ಕಿಯನ್ನು ಪೊಲೀಸರು ಮತ್ತು ಆಹಾರ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಕಾಳ ಸಂತೆಯಲ್ಲಿ ಸಾಗಾಟ ಮಾಡುತ್ತಿದ್ದ ಅಕ್ಕಿಯನ್ನು ವಶಕ್ಕೆ ಪಡೆದಿರುವುದು.
ಕಾಳ ಸಂತೆಯಲ್ಲಿ ಸಾಗಾಟ ಮಾಡುತ್ತಿದ್ದ ಅಕ್ಕಿಯನ್ನು ವಶಕ್ಕೆ ಪಡೆದಿರುವುದು.

ಕಲಬುರಗಿ: ಒಂದೆಡೆ ರಾಜ್ಯ ಸರ್ಕಾರ ಅನ್ನಭಾಗ್ಯ ಯೋಜನೆಯಡಿ ನಾಡಿನ ಜನತೆಗೆ ಅಕ್ಕಿ ವಿತರಿಸಲು ಎಲ್ಲಿಲ್ಲದ ಕಸರತ್ತು ನಡೆಸುತ್ತಿದ್ದರೆ, ಮತ್ತೊಂದೆಡೆ ಕಲಬುರಗಿ ಜಿಲ್ಲೆಯಲ್ಲಿ ಸಾವಿರಾರು ಕೆಜಿ ಅಕ್ಕಿ ಕಾಳ ಸಂತೆಯಲ್ಲಿ ಸಾಗಾಟ ಮಾಡುತ್ತಿರುವ ಪ್ರಕರಣ ನಡೆಯುತ್ತಿರುವುದು ಅಚ್ಚರಿ ಮೂಡಿಸಿದೆ.

ಜಿಲ್ಲೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ನಡೆದಿದ್ದು, ಕಲಬುರಗಿ ಚೌಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೂರು ದಿನಗಳ ಹಿಂದೆ ಪ್ರಕರಣ ದಾಖಲಾಗಿತ್ತು. ಇಂದು (ಜೂನ್ 23) ನಡೆದ ಪ್ರಕರಣವು ಆಳಂದ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಪೊಲೀಸರು ಮತ್ತು ಆಹಾರ ಇಲಾಖೆಯ ಕಾರ್ಯಾಚರಣೆಯಿಂದ ಎರಡು ಪ್ರಕರಣಗಳಿಂದ ಒಟ್ಟು 39,200 ಕೆಜಿ ಅಕ್ಕಿಯನ್ನು ವಶಕ್ಕೆ ಪಡೆಯಲಾಗಿದೆ.

ಬಿಜೆಪಿ, ಕಾಂಗ್ರೆಸ್​ ಕಾರ್ಯಕರ್ತರಿಗೆ ಸೇರಿದ್ದು

ಮೊದಲ ಪ್ರಕರಣದಲ್ಲಿ ಆಳಂದ ಪಟ್ಟಣದಿಂದ ಮಹಾರಾಷ್ಟ್ರದತ್ತ ಹೋಗುತ್ತಿದ್ದ ಟಾಟಾ ಟರ್ಬೋ ವಾಹನದಲ್ಲಿ 12460 ಕೆಜಿ ಅಕ್ಕಿ ಮತ್ತು ಆಳಂದ ಪಟ್ಟಣದ ವಿದ್ಯಾನಗರ ಗೋಡೌನ್​ನಲ್ಲಿದ್ದ 3,740 ಕೆಜಿ ಅಕ್ಕಿ ವಶಕ್ಕೆ ಪಡೆಯಲಾಗಿದೆ. ಈ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ 1 ಕಾಂಗ್ರೆಸ್, ಇನ್ನೊಂದು ಬಿಜೆಪಿ ಕಾರ್ಯಕರ್ತರಿಗೆ ಸೇರಿರುವ ಅಕ್ಕಿ ಎಂದು ಶಂಕಿಸಲಾಗಿದೆ. ಅಕ್ರಮವಾಗಿ ಸಾಗಾಟ ಮತ್ತು ಗೋಡೌನ್​ನಲ್ಲಿ ಸಂಗ್ರಹಿಸಿಟ್ಟಿದ್ದ ಅಕ್ಕಿ ಯಾರಿಗೆ ಸೇರಿದ್ದು ಎಂಬುದರ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಚಾಲಕನನ್ನು ವಶಕ್ಕೆ ಪಡೆಯಲಾಗಿದೆ.

23 ಸಾವಿರ ಕೆಜಿ ಅಕ್ಕಿ ವಶ

3 ದಿನಗಳ ಹಿಂದೆಯೂ ಕಲಬುರಗಿಯ ಫಿಲ್ಟರ್ ಬೇಡ್ ಪ್ರದೇಶದ ಗೋಡಾನ್​ ಮೇಲೂ ಆಹಾರ ಇಲಾಖಾ ಅಧಿಕಾರಿಗಳು ಮತ್ತು ಪೊಲೀಸರು ಕಾರ್ಯಾಚರಣೆ ನಡೆಸಿ ಸಂಗ್ರಹಿಸಿಟ್ಟಿದ 23 ಸಾವಿರ ಕೆಜಿ ಅಕ್ಕಿ ವಶಕ್ಕೆ ಪಡೆದಿದ್ದರು. ಮಹಾರಾಷ್ಟ್ರಕ್ಕೆ ಪಡಿತರ ಅಕ್ಕಿ ಸಾಗಿಸಲು ಯೋಜನೆ ರೂಪಿಸಲಾಗಿತ್ತು. ಲೋಡ್​ ಮಾಡಲಾಗಿದ್ದ ಅಕ್ಕಿ ಕಂಟೆನರ್​ ಅನ್ನು ಪೊಲೀಸರ ವಶಕ್ಕೆ ಪಡೆದಿದ್ದರು. 

ಆಹಾರ ಇಲಾಖೆಯಿಂದ‌ 23 ಸಾವಿರ ಕೆಜಿ ಅಕ್ಕಿ ಖರೀದಿಸಿದ ಕುರಿತು ವಾರಸುದಾರರು ಬೀಲ್ ನೀಡಿದ್ದರು. ಆದರೆ ಬಿಲ್​ನಲ್ಲಿ ನಮೂದಿಸಿದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಅಕ್ಕಿ ಇತ್ತು. ಬಳಿಕ ಅಕ್ಕಿ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದರು.

ಸಚಿವರ ಜಿಲ್ಲೆಯಲ್ಲೇ ಹೀಗಾದ್ರೆ ಹೇಗೆ?

ಸರ್ಕಾರ ಜನತೆಗೆ ಅಕ್ಕಿ ನೀಡಲು ಕಸರತ್ತು ನಡೆಸುತ್ತಿದೆ. ಆದರೆ, ಅದೇ ಸರ್ಕಾರದ ಅದರಲ್ಲೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ತವರು ಜಿಲ್ಲೆಯಲ್ಲಿ ಹೀಗೆ ವ್ಯಾಪಕ ಅಕ್ರಮ ಅಕ್ಕಿ ಸಾಗಾಟ ದಂಧೆ ನಡೆಯುತ್ತಿರುವುದು ನಾಗರಿಕರ ಮತ್ತು ಪ್ರತಿಪಕ್ಷದ ಕೆಂಗಣ್ಣಿಗೆ ಗುರಿಯಾಗಿದೆ.

ಸಚಿವ ಪ್ರಿಯಾಂಕ್ ಖರ್ಗೆ ಅವರು ಪೊಲೀಸ್ ಮತ್ತು ಆಹಾರ ಇಲಾಖೆಯ ಅಧಿಕಾರಿಗಳಿಗೆ ಕಟ್ಟು ನಿಟ್ಟಿನ ಸೂಚನೆ ನೀಡಿ, ಅಕ್ರಮ ಮರಳುಗಾರಿಕೆೆ ಜೊತೆಗೆ ಅಕ್ರಮ ಅಕ್ಕಿ ಸಾಗಾಟಕ್ಕೂ ಬ್ರೇಕ್ ಹಾಕಬೇಕಿದೆ.

ವರದಿ: ಎಸ್.ಬಿ.ರೆಡ್ಡಿ

Whats_app_banner