ಕನ್ನಡ ಸುದ್ದಿ  /  Karnataka  /  Kalburgi News 3 Members From Kalburgi Stuck On Russia Ukraine Border Return Home Soon Minister S Jaishankar Mkk

ರಷ್ಯಾ-ಉಕ್ರೇನ್ ಗಡಿಯಲ್ಲಿ ಸಿಲುಕಿರುವ ಕಲಬುರಗಿಯ ಯುವಕರು ಶೀಘ್ರ ತಾಯ್ನಾಡಿಗೆ; ಸಚಿವ ಜೈಶಂಕರ್‌ ಭರವಸೆ

ಕೆಲಸ ಹುಡುಕಿಕೊಂಡು ರಷ್ಯಾಕ್ಕೆ ತೆರಳಿದ್ದ ಕಲಬುರಗಿಯ ಮೂವರು ಯುವಕರು ರಷ್ಯಾ-ಉಕ್ರೇನ್‌ ಗಡಿಯಲ್ಲಿ ಅಪಾಯಕಾರಿ ಸ್ಥಿತಿಯಲ್ಲಿದ್ದಾರೆ. ಅವರನ್ನು ಮರಳಿ ತಾಯ್ನಾಡಿಗೆ ಕರೆ ತರುವ ಎಲ್ಲಾ ಕಾರ್ಯಗಳು ಭರದಿಂದ ಸಾಗುತ್ತಿದ್ದು, ಅವರು ಶೀಘ್ರದಲ್ಲೇ ದೇಶಕ್ಕೆ ಮರಳುವ ಸಾಧ್ಯತೆ ಇದೆ. (ವರದಿ: ಮಹೇಶ್‌ ಕುಲಕರ್ಣಿ)

ರಷ್ಯಾ-ಉಕ್ರೇನ್ ಗಡಿಯಲ್ಲಿ ಸಿಲುಕಿರುವ ಕಲಬುರಗಿಯ ಯುವಕರು ಶೀಘ್ರ ತಾಯ್ನಾಡಿಗೆ; ಸಚಿವ ಜೈಶಂಕರ್‌ ಭರವಸೆ
ರಷ್ಯಾ-ಉಕ್ರೇನ್ ಗಡಿಯಲ್ಲಿ ಸಿಲುಕಿರುವ ಕಲಬುರಗಿಯ ಯುವಕರು ಶೀಘ್ರ ತಾಯ್ನಾಡಿಗೆ; ಸಚಿವ ಜೈಶಂಕರ್‌ ಭರವಸೆ

ಕಲಬುರಗಿ: ಕೆಲಸ ಹುಡುಕಿಕೊಂಡು ರಷ್ಯಾಗೆ ತೆರಳಿರುವ ಕಲಬುರಗಿ ಜಿಲ್ಲೆಯ ಯುವಕರು ಬಾಡಿಗೆ ಯೋಧರಾಗಿ ಉಕ್ರೇನ್-ರಷ್ಯಾ ಗಡಿಯಲ್ಲಿ ಅಪಾಯದ ಸ್ಥಿತಿಯಲ್ಲಿದ್ದಾರೆ. ಅವರನ್ನು ಅಲ್ಲಿಂದ ತಾಯ್ನಾಡಿಗೆ ಮರಳಿ ಕರೆ ತರುವ ಪ್ರಯತ್ನ ಒಂದಿಷ್ಟು ದಿನಗಳಿಂದ ನಡೆಯುತ್ತಿದೆ. ಇದೀಗ ಆ ಯುವಕರನ್ನು ಶೀಘ್ರದಲ್ಲಿ ದೇಶಕ್ಕೆ ವಾಪಸ್ ಕರೆ ತರುವ ಯತ್ನಕ್ಕೆ ವೇಗದ ಚಾಲನೆ ದೊರೆತಿದೆ.

ಈ ಕುರಿತು ಖುದ್ದು ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರು ಕಲಬುರಗಿ ಸಂಸದ ಡಾ. ಉಮೇಶ್ ಜಾಧವ್ ಅವರಿಗೆ ಪತ್ರ ಬರೆದಿದ್ದಾರೆ. ಈ ಪ್ರಕಾರ ರಷ್ಯಾ-ಉಕ್ರೇನ್ ಗಡಿಯಲ್ಲಿ ಸಿಲುಕಿರುವ ಕಲಬುರಗಿಯ ಮೂವರು ಯುವಕರು ಬಿಡುಗಡೆಯಾಗಿ ಸ್ವದೇಶಕ್ಕೆ ಹಿಂದಿರುಗುವ ಶುಭ ಸೂಚನೆಗಳು ಸ್ಪಷ್ಟವಾಗಿ ಗೋಚರಿಸುತ್ತಿವೆ.

ಈ ಯುವಕರು ರಷ್ಯಾಕ್ಕೆ ತೆರಳಿದ್ದು ಹೇಗೆ?

ಕಲಬುರಗಿ ಜಿಲ್ಲೆ ಮಾಡಬೂಳ ಪೊಲೀಸ್ ಠಾಣೆಯ ಹೆಡ್ ಕಾನ್ಸ್‌ಟೇಬಲ್ ಸೈಯದ್ ನವಾಜ್ ಅಲಿ ಕಾಳಗಿ ಅವರ ಪುತ್ರ ಸೈಯದ್ ಇಲಿಯಾಸ್ ಹುಸೇನಿ ಹಾಗೂ ಆತನೊಂದಿಗೆ ರಷ್ಯಾ ದೇಶದಲ್ಲಿ ಸೆಕ್ಯುರಿಟಿ ಗಾರ್ಡ್ ಉದ್ಯೋಗಕ್ಕೆ ಸೇರಲು ತೆರಳಿದ್ದ ಜಿಲ್ಲೆಯ ಅಬ್ಬುಲ್ ನಯೀಂ ಮೊಹ್ಮದ್ ಸೂಫಿಯಾನ್, ಮೊಹ್ಮದ್ ಸಮೀರ್ ಅಹ್ಮದ್ ಪ್ರಸ್ತುತ ರಷ್ಯಾ-ಉಕ್ರೇನ್ ಗಡಿಯಲ್ಲಿ ರಷ್ಯಾ ಪರವಾಗಿ ಯುದ್ಧ ಮಾಡಲೇಬೇಕಾದ ಅನಿವಾರ್ಯ ಹಾಗೂ ಅಪಾಯಕಾರಿ ಸ್ಥಿತಿ ಎದುರಿಸುತ್ತಿದ್ದಾರೆ.

ಈ ಮೊದಲು ಸೈಯದ್ ಇಲಿಯಾಸ್ ಹುಸೇನಿ ದುಬೈ ಎಮಿರೇಟ್ಸ್ ವಿಮಾನ ನಿಲ್ದಾಣದಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕಾರ್ಯನಿರ್ವಹಿಸುತ್ತಿದ್ದ ವೇಳೆ ಬಾಬಾ ವ್ಲಾಗ್ ಮೂಲಕ ಮುಂಬೈ ಮೂಲದ ಬಾಬಾ ಎಂಬಾತ ಪರಿಚಯವಾಗಿದ್ದಾನೆ. ಚೀಫ್ ಏಜೆಂಟ್ ಬಾಬಾ ಜೊತೆಗೆ ಇತರ ಏಜೆಂಟ್‍ಗಳಾದ ಸೂಫಿಯಾನ್, ಮೋಯಿನ್ ಹಾಗೂ ಪೂಜಾ ಹೆಸರಿನ ಇತರ ಮೂವರು ಏಜೆಂಟರು ಸಹ ಪರಿಚಯವಾಗಿ ಈ ಅಮಾಯಕ ಯುವಕರನ್ನು ರಷ್ಯಾ ಯುದ್ಧ ಭೂಮಿಗೆ ಕಳುಹಿಸಿದ್ದಲ್ಲದೆ, ಉದ್ಯೋಗ ಕೊಡಿಸಿದ್ದಕ್ಕಾಗಿ ಯುವಕರಿಂದ ತಲಾ ಮೂರು ಲಕ್ಷ ರೂಪಾಯಿ ಪಡೆದಿದ್ದರು.

ಈ ಮಧ್ಯೆ, ಡಿಸೆಂಬರ್ 18, 2023ರಂದು ಚೆನ್ನೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ರಷ್ಯಾ ರಾಜಧಾನಿ ಮಾಸ್ಕೋ ನಗರಕ್ಕೆ ಏರ್ ಅರೇಬಿಯಾ ವಿಮಾನದ ಮೂಲಕ ಈ ಯುವಕರು ಪ್ರಯಾಣಿಸಿದ್ದಾರೆ. ರಷ್ಯಾ ತಲುಪುತ್ತಿದ್ದಂತೆಯೇ ಅಲ್ಲಿನ ಖಾಸಗಿ ವಾಗ್ನರ್ ಸೇನಾ ಗ್ರೂಪ್ ಪರವಾಗಿ ಉಕ್ರೇನ್ ದೇಶಕ್ಕೆ ಕೇವಲ 40 ಕಿ.ಮೀ ಅಂತರದಲ್ಲಿರುವ ಗಡಿ ಭಾಗದಲ್ಲಿ ಸ್ಟೇನ್‍ಗನ್ ಹಿಡಿದು ಯುದ್ಧದಲ್ಲಿ ಪಾಲ್ಗೊಳ್ಳುವಂತೆ ಮಾಡಲಾಗಿದೆ.

ಇಂಥದ್ದೊಂದು ಅಪಾಯಕರ ಸ್ಥಿತಿಯಲ್ಲಿರುವ ಈ ಯುವಕರ ಬಿಡುಗಡೆಗೆ ಈಗ ಕ್ಷಣಗಣನೆ ಆರಂಭವಾಗಿದೆ. ಈ ಯುವಕರ ಪೋಷಕರು ಹಾಗೂ ಊರಿನವರು ಆದಷ್ಟು ಬೇಗ ಇವರು ಮನೆಗೆ ಮರಳುವಂತಾಗಲಿ ಎಂದು ದೇವರನ್ನು ಪ್ರಾರ್ಥಿಸುತ್ತಿದ್ದಾರೆ.

ಇದನ್ನೂ ಓದಿ

Womensday2024:ಅನಾಥ ಯುವತಿಯರ ಪಾಲಿನ ತವರು ಮನೆ ಕಲಬುರಗಿ ಸರಕಾರಿ ಮಹಿಳಾ ನಿಲಯ

ಕರ್ನಾಟಕದ ಹಲವಾರು ಮಹಿಳಾ ವಸತಿ ನಿಲಯಗಳು ಮಹಿಳೆಯರ ಪಾಲಿನ ಆಶಾಕಿರಣಗಳೇ ಆಗಿವೆ. ಕಲಬುರಗಿಯ ಮಹಿಳಾ ವಸತಿ ನಿಲಯವೂ ಏಳು ದಶಕದಲ್ಲಿ ಅದೆಷ್ಟೇ ಮಹಿಳೆಯರಿಗೆ ಬದುಕು ಕಟ್ಟಿಕೊಟ್ಟಿದೆ.

(This copy first appeared in Hindustan Times Kannada website. To read more like this please logon to kannada.hindustantimes.com)