Breaking news: ಕಲಬುರಗಿ ಡಿಸಿ ಕಚೇರಿ ಬಳಿಯೇ ಖಾಲಿ ಬ್ಯಾಗ್ ಸೃಷ್ಟಿಸಿದ ಆತಂಕ
kalaburgi news ಕಲಬುರಗಿ ನಗರದ ಡಿಸಿ ಕಚೇರಿ ಎದುರಿನ ಬಸ್ ತಂಗುದಾಣದಲ್ಲಿ ಅನಾಮಿಕ ಬ್ಯಾಗ್ ಪತ್ತೆಯಾಗಿ ಆತಂಕ ಹುಟ್ಟು ಹಾಕಿತ್ತು. ಪೊಲೀಸರು ಬ್ಯಾಗ್ ಕುರಿತು ತನಿಖೆ ಕೈಗೊಂಡಿದ್ದಾರೆ.ವರದಿ: ಮಹೇಶ್ ಕುಲಕರ್ಣಿ, ಕಲಬುರಗಿ

ಕಲಬುರಗಿ: ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಪೋಟಗೊಂಡ ಪ್ರಕರಣ ಮಾಸುವ ಮುನ್ನವೇ ಕಲಬುರಗಿಯಲ್ಲೂ ಆತಂಕ ನಿರ್ಮಾಣವಾಗಿತ್ತು. ಕಲಬುರಗಿ ಜಿಲ್ಲಾಧಿಕಾರಿಗಳ ಕಚೇರಿ ಎದುರಿನ ಬಸ್ ನಿಲುಗಡೆ ತಾಣದಲ್ಲಿ ಬುಧವಾರ ಮಧ್ಯಾಹ್ನ ಬ್ಯಾಗ್ ವೊಂದು ಪತ್ತೆಯಾದ ಹಿನ್ನೆಲೆಯಲ್ಲಿ ಕೆಲ ಹೊತ್ತು ಆತಂಕ ಸೃಷ್ಟಿಯಾಗಿತ್ತು.
ಬಸ್ ತಾಣದಲ್ಲಿ ನಿಂತಿದ್ದ ಪ್ರಯಾಣಿಕರ ಪೈಕಿ ಒಬ್ಬರು ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡುತ್ತಿದ್ದಂತೆಯೇ ಬಾಂಬ್ ನಿಷ್ಕ್ರಿಯ ದಳ ಸಮೇತ ಸ್ಥಳಕ್ಕೆ ಆಗಮಿಸಿದ ಎಸಿಪಿ (ಕ್ರೈಂ) ಸರ್ದಾರ್ ಅವರು ಸ್ಥಳದಲ್ಲಿದ್ದ ಪ್ರಯಾಣಿಕರನ್ನು ಅಲ್ಲಿಂದ ತೆರವುಗೊಳಿಸಿ ಬ್ಯಾಗ್ ತಪಾಸಣೆ ಕೈಗೊಂಡರು.
ಈ ವೇಳೆ ಬ್ಯಾಗಿನಲ್ಲಿ ಕೇವಲ ಒಂದೆರಡು ಕಾಗದ ಪತ್ರಗಳು ಮಾತ್ರ ಪತ್ತೆಯಾಗಿದ್ದು, ತಪಾಸಣೆ ಬಳಿಕ ಪೊಲೀಸರು ನಿಟ್ಟುಸಿರು ಬಿಟ್ಟು ಬ್ಯಾಗ್ ಸಮೇತ ಸ್ಥಳದಿಂದ ನಿರ್ಗಮಿಸಿದರು.
ಬಹುಶಃ ತರಾತುರಿಯಲ್ಲಿ ಯಾರೋ ಪ್ರಯಾಣಿಕರು ಬ್ಯಾಗ್ ಮರೆತು ಹೋಗಿರುವ ಸಾಧ್ಯತೆಯಿದೆ. ಆದರೂ ಈ ನಿಟ್ಟಿನಲ್ಲಿ ತನಿಖೆ ನಡೆಸಲಾಗುವುದು ಎಂದು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಪೊಲೀಸ್ ಅಧಿಕಾರಿಗಳು ತಿಳಿಸಿದರು.
ಈ ಕುರಿತು ಕಲಬುರಗಿ ನಗರ ಸ್ಟೇಷನ್ ಬಜಾರ್ ಪೊಲೀಸರು ಸಿಸಿ ಕ್ಯಾಮರಾ ಪರಿಶೀಲನೆ ಸೇರಿದಂತೆ ಎಲ್ಲಾ ಆಯಾಮದಲ್ಲೂ ತನಿಖೆ ಕೈಗೊಂಡಿದ್ದಾರೆ.
(ವರದಿ: ಮಹೇಶ್ ಕುಲಕರ್ಣಿ, ಕಲಬುರಗಿ)
