Kalburgi News:ತುಮಕೂರು ಬಳಿ ಅಪಘಾತ: ವರ್ಗಾವಣೆ ಖುಷಿಯಲ್ಲಿ ಕಲಬುರಗಿಗೆ ಬರುತ್ತಿದ್ದ ಬಸ್ ಚಾಲಕ, ತಾಯಿ ಸಾವು
Tumkur Accident ಬೆಂಗಳೂರಿನಿಂದ ಕಲಬುರಗಿಗೆ ವರ್ಗಗೊಂಡ ಹಿನ್ನೆಲೆಯಲ್ಲಿ ಕುಟುಂಬದವರೊಂದಿಗೆ ಬರುತ್ತಿದ್ದಾಗ ತುಮಕೂರು ಬಳಿ ಸಂಭವಿಸಿದ ಅಪಘಾತದಲ್ಲಿ ಬಸ್ ಚಾಲಕ, ಆತನ ತಾಯಿ ಮೃತಪಟ್ಟಿದ್ದಾರೆ. ಕುಟುಂಬದವರು ಗಾಯಗೊಂಡಿದ್ದಾರೆ.
ಕಲಬುರಗಿ: ತುಮಕೂರಿನ ಜಿಲ್ಲೆಯ ಶಿರಾ ತಾಲೂಕಿನ ಚಿಕ್ಕನಹಳ್ಳಿ ಬಳಿ ಶನಿವಾರ ಬೆಳಗಿನ ಜಾವ ಟಾಟಾ ಏಸ್, ಕ್ಯಾಂಟರ್ ಮತ್ತು ಖಾಸಗಿ ಬಸ್ ನಡುವೆ ಸಂಭವಿಸಿದ ಸರಣಿ ಅಪಘಾತದಲ್ಲಿ ಟಾಟಾ ಏಸ್‌ನಲ್ಲಿದ್ದ ಕಲಬುರಗಿ ಮೂಲದ ಸಾರಿಗೆ ಸಂಸ್ಥೆಯ ಬಸ್ ಚಾಲಕನಾಗಿದ್ದ ಮಗ ಮತ್ತು ತಾಯಿ ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ.
ಕಲಬುರಗಿ ಜಿಲ್ಲೆಯ ಅರಳಗುಂಡಗಿ ಗ್ರಾಮದ ನಿವಾಸಿಯಾಗಿರುವ ಬಿಎಂಟಿಸಿ ಚಾಲಕನಾಗಿದ್ದ ಮಹಾಂತಪ್ಪ (50) ಮತ್ತು ಅವರ ತಾಯಿ ಭೀಮಬಾಯಿ (70) ಎಂಬುವರು ಮೃತಪಟ್ಟವರು.
ಕುಟುಂಬ ಸಮೇತ ಪಯಣ
ಮಹಾಂತಪ್ಪ ಅವರು ಬಿಎಂಟಿಸಿಯಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದನು. ಇತ್ತೀಚೆಗೆ ಕಲಬುರಗಿ ಜಿಲ್ಲೆಯ ಸೇಡಂ ಡಿಪೋಗೆ ವರ್ಗಾವಣೆಗೊಂಡ ಹಿನ್ನೆಲೆಯಲ್ಲಿ ಮಹಾಂತಪ್ಪ ಪತ್ನಿ, ಮಕ್ಕಳು ಮತ್ತು ತಾಯಿಯೊಂದಿಗೆ ಕಲಬುರಗಿ ಜಿಲ್ಲೆಯಅರಳಗುಂಡಗಿಯ ಸ್ವಗ್ರಾಮಕ್ಕೆ ಮನೆ ಸಾಮಾನುಗಳ ಸಮೇತ ಟಾಟಾ ಏಸ್‌ನಲ್ಲಿ ಬರುತ್ತಿದ್ದರು.
ಚಿಕ್ಕನಹಳ್ಳಿ ಬಳಿ ಮೇಲ್ಸೇತುವೆ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಭಾರಿ ವಾಹನ ದಟ್ಟಣೆ ಇದ್ದು ಈ ವೇಳೆ ಮುಂದೆ ಹೋಗುತ್ತಿದ್ದ ಟ್ಯಾಂಕರ್‌ಗೆ ಟಾಟಾ ಏಸ್ ಡಿಕ್ಕಿ ಹೊಡೆದಿದೆ. ನಂತರ ಹಿಂಬದಿಯಿಂದ ಟಾಟಾ ಏಸ್‌ಗೆ ಖಾಸಗಿ ಬಸವೊಂದು ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ನಡೆದಿದೆ. ಘಟನೆಯಲ್ಲಿ ಮಹಾಂತಪ್ಪ ಹಾಗೂ ಅವರ ತಾಯಿ ಗಂಭೀರ ಗಾಯಗೊಂಡಿದ್ದರು.
ಸ್ಥಳದಲ್ಲೇ ಮೃತಪಟ್ಟ ತಾಯಿ
ತಾಯಿ ಸ್ಥಳದಲ್ಲಿಯೇ ಮೃತಪಟ್ಟರೆ, ಮಹಾಂತಪ್ಪ ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ಕೊನೆಯುಸಿರೆಳೆದಿದ್ದಾರೆ. ಸ್ಥಳೀಯರು ಹಾಗೂ ಪೊಲೀಸರು ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಲು ನೆರವಾದರು.
ಇನ್ನು ಅವರ ಹೆಂಡತಿ ಮತ್ತು ಇಬ್ಬರು ಮಕ್ಕಳು ಸೇರಿದಂತೆ ಇತರೆ ವಾಹನದಲ್ಲಿದ್ದವರಿಗೂ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಪಘಾತವಾದ ಹಿನ್ನೆಲೆಯಲ್ಲಿ ಹೆದ್ದಾರಿಯಲ್ಲಿ ಕೆಲ ಸಮಯ ಸಂಚಾರ ವ್ಯತ್ಯಯ ಉಂಟಾಗಿತ್ತು. ಬಳಿಕ ಅಪಘಾತಕ್ಕೀಡಾದ ವಾಹನಗಳನ್ನು ತೆರವುಗೊಳಿಸಿ ಸಂಚಾರ ಸುಗಮಗೊಳಿಸಿದ್ದಾರೆ ಪೊಲೀಸರು. ಕಳ್ಳಂಬೆಳ್ಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಟುಂಬದವರ ಬೇಸರ
ಕೆಲ ವರ್ಷದಿಂದ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಮಹಾಂತಪ್ಪ ಅವರಿಗೆ ಸ್ವಂತ ಊರಿಗೆ ವರ್ಗವಾಗಿತ್ತು. ಇದೇ ಕಾರಣದಿಂದ ಇಡೀ ಕುಟುಂಬ ಊರಿಗೆ ಬರುವ ಖುಷಿಯಲ್ಲಿತ್ತು. ಊರು ತಲುಪುವ ಮುನ್ನವೇ ಈ ರೀತಿ ಅಪಘಾತ ಸಂಭವಿಸಿದ್ದು ಬೇಸರದಾಯಕ ಎಂದು ಅವರ ಸಂಬಂಧಿಕರು ಬೇಸರ ವ್ಯಕ್ತಪಡಿಸಿದ್ದಾರೆ.
ಪ್ರೀತಿ ವೈಫಲ್ಯ:ಪೇದೆ ಆತ್ಮಹತ್ಯೆ
ಪೊಲೀಸ್ ಪೇದೆಯೊಬ್ಬರು ನೇಣಿ ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೀದರ್ ಜಿಲ್ಲೆಯ ಬಸವಕಲ್ಯಾಣ ಪಟ್ಟಣದ ಟೂರಿಸ್ಟ್ ಲಾಡ್ಜ್‌ನಲ್ಲಿ ನಡೆದಿದೆ.
ಉಮೇಶ್ ನಾಯ್ಕ್ (25) ಆತ್ಮಹತ್ಯೆ ಮಾಡಿಕೊಂಡ ಪೊಲೀಸ್ ಪೇದೆ ಎಂದು ತಿಳಿದು ಬಂದಿದೆ. ಆತ್ಮಹತ್ಯೆಗೆ ಪ್ರೇಮ ವೈಫಲ್ಯವೇ ಕಾರಣ ಎಂದು ಹೇಳಲಾಗುತ್ತಿದೆ. 2021 ರಲ್ಲಿ ಪೊಲೀಸ್ ಪೇದೆಯಾಗಿ ಆಯ್ಕೆಯಾಗಿದ್ದ ಉಮೇಶ ನಾಯ್ಕ್, ಬೀದರ್ ಜಿಲ್ಲೆಯ ಬಸವಕಲ್ಯಾಣ ನಗರ ಠಾಣೆಯಲ್ಲಿ ಹಲವು ತಿಂಗಳಿನಿಂದ ಕರ್ತವ್ಯ ನಿರ್ವಹಿಸುತ್ತಿದ್ದರು. ಮೂಲತಃ ವಿಜಯನಗರ ಜಿಲ್ಲೆಯವರಾದ ನಾಯ್ಕ್ ಸದ್ಯ ಪ್ರೇಮ ವೈಫಲ್ಯದಿಂದ ಆತ್ಮಹತ್ಯೆಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದೆ.
ವಿಷಯ ತಿಳಿದು ಪೋಷಕರು ಸ್ಥಳಕ್ಕೆ ಬಂದಿದ್ದಾರೆ. ಮಗನ ಸಾವಿನ ಕುರಿತು ಮಾಹಿತಿಯನ್ನು ಕುಟುಂಬದವರು ಕಲೆ ಹಾಕುತ್ತಿದ್ದು, ಈ ಬಗ್ಗೆ ಪೊಲೀಸರಿಗೆ ದೂರು ನೀಡಬಹುದು ಎನ್ನಲಾಗಿದೆ.
ಬಸವಕಲ್ಯಾಣ ನಗರ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆಯಾಗಿದೆ. ಹುಮನಾಬಾದ್ ಎಎಸ್ಪಿ ಶಿವಾಂಶು ರಾಜಪುತ, ಪಿಎಸ್ಐ ಅಬ್ದೀಷ್ ವಾಘಮೋಡೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.