ಕಲಬುರಗಿ, ಯಾದಗಿರಿಯಲ್ಲಿ ದಿಢೀರ್ ದಾಳಿ: ಬಾಲ ಕಾರ್ಮಿಕರ ರಕ್ಷಣೆ
Child labours rescue: ಕಾರ್ಮಿಕ ಇಲಾಖೆ, ಕಲಬುರಗಿ ಜಿಲ್ಲಾ ಬಾಲ ಕಾರ್ಮಿಕ ಯೋಜನೆಯ ತಂಡ ಹಾಗೂ ಯಾದಗಿರಿ ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿ ವತಿಯಿಂದ ವಿವಿಧೆಡೆ ನಡೆಸಿದ ದಿಢೀರ್ ದಾಳಿಯಲ್ಲಿ ಬಾಲ ಕಾರ್ಮಿಕರನ್ನು ರಕ್ಷಿಸಲಾಗಿದೆ.
ಕಲಬುರಗಿ/ಯಾದಗಿರಿ: ಕಾರ್ಮಿಕ ಇಲಾಖೆ, ಕಲಬುರಗಿ ಜಿಲ್ಲಾ ಬಾಲ ಕಾರ್ಮಿಕ ಯೋಜನೆಯ ತಂಡ ಹಾಗೂ ಯಾದಗಿರಿ ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿ ವತಿಯಿಂದ ವಿವಿಧೆಡೆ ನಡೆಸಿದ ದಿಢೀರ್ ದಾಳಿಯಲ್ಲಿ ಬಾಲ ಕಾರ್ಮಿಕರನ್ನು ರಕ್ಷಿಸಲಾಗಿದೆ.
ಕಲಬುರಗಿ ನಗರ ಹೋರ ವಲಯದ ಇಟ್ಟಿಗೆ ಭಟ್ಟಿಗಳಲ್ಲಿ ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕ ಮಕ್ಕಳ ರಕ್ಷಣಾ ಕಾರ್ಯಾಚರಣೆ ಕೈಗೊಳ್ಳಲಾಯಿತು. ಕಾರ್ಯಾಚರಣೆಗೆ ಮೂರು ತಂಡಗಳನ್ನು ಹಿರಿಯ ಕಾರ್ಮಿಕ ನಿರೀಕ್ಷಕರ ನೇತೃತ್ವದಲ್ಲಿ ನಗರದ ಸುಲ್ತಾನಪೂರ ರಸ್ತೆ, ಸೈಯದ್ ಚಿಂಚೋಳಿ ರಸ್ತೆ, ಬಬಲಾದ ರಸ್ತೆ ಹೀರಾಪೂರ, ಶರಣಶಿರಸಗಿ ಮತ್ತು ಶಾಹಾಬಾದ ರೋಡ್‌ದಲ್ಲಿರುವ ಇಟ್ಟಿಗೆ ಭಟ್ಟಿಗಳಲ್ಲಿ ಹಠಾತ ದಾಳಿ ಕೈಗೊಂಡು 3 ಮಕ್ಕಳನ್ನು ರಕ್ಷಿಸಿ, (1 ಬಾಲಕ ಮತ್ತು 2 ಬಾಲಕಿ) ಬಾಲಕರ ಮತ್ತು ಬಾಲಕಿರ ಮಂದಿರದಲ್ಲಿ ತಾತ್ಕಾಲಿಕವಾಗಿ ದಾಖಲಿಸಲಾಯಿತು.
ಈ ಮಕ್ಕಳನ್ನು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಎದುರು ಹಾಜರುಪಡಿಸಿ ಮುಂದಿನ ಕಾನೂನು ಕ್ರಮಕೈಗೊಳ್ಳಲಾಗುವುದು ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಹಾಯಕ ಕಾರ್ಮಿಕ ಆಯುಕ್ತರು ಡಾ.ಅವಿನಾಶ ನಾಯ್ಕ ಅವರು ತಿಳಿಸಿದ್ದಾರೆ.
ಮಕ್ಕಳನ್ನು ನೇಮಿಸಿಕೊಂಡ ಮಾಲಿಕರ ಮೇಲೆ ಎಫ್.ಐ.ಆರ್ ಅಥವಾ ಘನ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿ, ಬಾಲಕಾರ್ಮಿಕ ಮತ್ತು ಕಿಶೋರ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ 1986 ತಿದ್ದುಪಡಿ 2016ರ ಅನ್ವಯ ಕಾನೂನು ಕ್ರಮ ಮಾಲೀಕರಿಗೆ 6 ತಿಂಗಳಿಂದ 2 ವರ್ಷಗಳ ವರೆಗೆ ಜೈಲು ಶಿಕ್ಷೆ ಅಥವಾ 20,000 ರಿಂದ 50.000 ರೂ.ಗಳವರೆಗೆ ದಂಡ ಅಥವಾ ಎರಡನ್ನೂ ವಿಧಿಸಲು ಅವಕಾಶವಿರುತ್ತದೆ. ಭಾರತದ ಸವೋಚ್ಛ ನ್ಯಾಯಾಲಯವು ರೀಟ್ ಅರ್ಜಿ (ಸಿವಿಲ್) ಸಂಖ್ಯೆ 465/1986ರಲ್ಲಿ ನೀಡಿರುವ ನಿರ್ದೇಶನದ್ವಯ ತಪ್ಪಿತಸ್ಥ ಮಾಲೀಕರು ತಾವು ನಿಯೋಜನೆಗೊಂಡ ಪ್ರತಿ ಮಗುವಿಗೆ 20.000 ರೂ.ಪರಿಹಾರವನ್ನು ಮಕ್ಕಳ ಪುನರ್ವಸತಿಗೆ ಜಮೆಮಾಡುವ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿರುತ್ತದೆ.
ಹಠಾತ ದಾಳಿಯಲ್ಲಿ ಸಹಾಯಕ ನಿರ್ದೇಶಕರಾದ ಗಿರೀಶ ರಂಜೋಳಕರ, ಹಿರಿಯ ಕಾರ್ಮಿಕ ನಿರೀಕ್ಷಕರಾದ ಶಿವಕುಮಾರ ರೆಶ್ಮೀ, ರವೀಂದ್ರಕುಮಾರ, ಕವಿತಾ, ಯೋಜನಾ ನಿರ್ದೇಶಕರಾದ ವಿಠ್ಠಲ್ ಚಿಕಣಿ, ಪಾಂಡು ರಂಗ ಕೋಟ್ರೆ, ಸಂತೋಷ ಕುಲಕರ್ಣಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಮಕ್ಕಳ ಸಹಾಯವಾಣಿ ಸಿಬ್ಬಂದಿಗಳಾದ ಭರತೇಶ ಶಿಲವಂತರ, ಮಂಜುಳಾ ರೆಡ್ಡಿ, ಬಸವರಾಜ ಟೆಂಗಳಿ, ಶಿಕ್ಷಣ ಇಲಾಖೆ ಶಿಕ್ಷಣ ಸಂಯೋಜಕರು ಮತ್ತು ಪೋಲಿಸ್ ಇಲಾಖೆಯ ಸಿಬ್ಬಂದಿಗಳು ಭಾಗವಹಿಸಿದರು.
ಯಾದಗಿರಿಯಲ್ಲಿ ಮಕ್ಕಳನ್ನು ಕೆಲಸಕ್ಕೆ ಕರೆದುಕೊಂಡು ಹೋಗುತ್ತಿದ್ದ ವಾಹನಗಳ ಮೇಲೆ ದಾಳಿ
ಯಾದಗಿರಿ ತಾಲೂಕಿನ ಸೈದಾಪೂರ ನಗರದಲ್ಲಿ ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕರ ರಕ್ಷಣೆಗೆ ದಿಢೀರ್ ದಾಳಿ ಕೈಗೊಳ್ಳಲಾಯಿತು. ಶಾಲೆ ಬಿಟ್ಟು ಕೆಲಸಕ್ಕೆ ತೆರಳುತ್ತಿದ್ದ 10 ಕಿಶೋರ ಕಾರ್ಮಿಕ ಮಕ್ಕಳನ್ನು ತಡೆದು ಅವರ ಪೋಷಕರಿಗೆ ಬಾಲ್ಯಾವಸ್ಥೆ ಹಾಗೂ ಕಿಶೋರಾವಸ್ಥೆಯ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ 1986, ತಿದ್ದುಪಡಿ 2016ರ ಕುರಿತು ಜಾಗೃತಿಯನ್ನು ಮೂಡಿಸಿ ಪಾಲಕರಿಗೆ ಮಕ್ಕಳನ್ನು ಕೆಲಸಕ್ಕೆ ಕಳುಹಿಸಬಾರದು ಎಂದು ಎಚ್ಚರಿಕೆಯ ಜೊತೆಗೆ ಮಕ್ಕಳನ್ನು ಪುನಃ ಶಾಲೆಗೆ ಸೇರಿಸುವಂತೆ ಗ್ರಾಮಕ್ಕೆ ಕಳುಹಿಸಲಾಯಿತು. ಕಟ್ಟಡ ಕೆಲಸಕ್ಕಾಗಿ ತೆರಳುತ್ತಿದ್ದ ಒಬ್ಬ ಬಾಲಕಾರ್ಮಿಕನನ್ನು ಜಿಲ್ಲಾ ಬಾಲಕರ ಕಲ್ಯಾಣ ಸಮಿತಿಗೆ ಮತ್ತು 1 ಬಾಲ ಕಾರ್ಮಿಕಳನ್ನು ಜಿಲ್ಲಾ ಬಾಲಕಿಯರ ಕಲ್ಯಾಣ ಸಮಿತಿಗೆ ಒಪ್ಪಿಸಲಾಯಿತು.
ಬಾಲಕಾರ್ಮಿಕ ಮತ್ತು ಕಿಶೋರ ಕಾರ್ಮಿಕ ಮಕ್ಕಳನ್ನು ಟಂಟಂ, ಆಟೋ, ಜೀಪ್ ವಾಹನಗಳಲ್ಲಿ ಕೆಲಸಕ್ಕೆ ಕರೆದುಕೊಂಡು ಹೋಗುತ್ತಿದ್ದ ವಾಹನ ಚಾಲಕರ ವಿರುದ್ಧ ಹಠಾತ್ ದಾಳಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ಜಿಲ್ಲಾ ಪ್ರಾದೇಶಿಕ ಆಯುಕ್ತರಾದ ಮಿಲಿಂದಕುಮಾರ್ ಅವರು ಚಾಲಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡರು.
ಯಾದಗಿರಿ ತಾಲೂಕು ಕಾರ್ಮಿಕ ನಿರೀಕ್ಷಕರಾದ ಸಾಬೇರಾ ಬೇಗಂ ಮಾತನಾಡಿದ, ಬಾಲಕಾರ್ಮಿಕ ಮತ್ತು ಕಿಶೋರ ಕಾರ್ಮಿಕ ಮಕ್ಕಳನ್ನು ಕೆಲಸಕ್ಕೆ ಇಟ್ಟುಕೊಂಡಲ್ಲಿ ಅಂತಹ ಅಂಗಡಿ ಮಾಲೀಕರ ವಿರುದ್ಧ 20,000 ರೂ.ಗಳಿಂದ 50,000 ರೂ.ಗಳ ವರೆಗೆ ದಂಡ ಮತ್ತು 6 ತಿಂಗಳಿಂದ 2 ವರ್ಷದ ವರೆಗೆ ಜೈಲು ಶಿಕ್ಷೆ ಅಥವಾ ಎರಡನ್ನು ಸಹ ವಿಧಿಸಲಾಗುವುದು ಮತ್ತು ವಾಹನಗಳಲ್ಲಿ ಮಕ್ಕಳನ್ನು ಕೆಲಸಕ್ಕೆ ಕರೆದುಕೊಂಡು ಹೋಗುವ ಚಾಲಕರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆಯನ್ನು ನೀಡಿದರು.
ಜಿಲ್ಲಾ ಬಾಲಕಾರ್ಮಿಕ ಯೋಜನಾ ನಿರ್ದೇಶಕರಾದ ರಿಯಾಜ್ ಪಟೇಲ್ ವರ್ಕನಳ್ಳಿ ಮಾತನಾಡಿ, ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆ ಮಾಡಲು ಗ್ರಾಮೀಣ ಭಾಗದಲ್ಲಿ ಈಗಾಗಲೇ ಕಾರ್ಮಿಕ ಇಲಾಖೆಯಿಂದ ಅನೇಕ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗಿದೆ. ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆ ಆಗಲು ಸಾರ್ವಜನಿಕರು, ಪೋಷಕರು ಸಹಕರಿಸಿದಾಗ ಮಾತ್ರ ಈ ಪದ್ಧತಿಯನ್ನು ಸಮಾಜದಿಂದ ದೂರ ಇಡಬಹುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಪ್ರಾದೇಶಿಕ ಸಾರಿಗೆ ಆಯುಕ್ತರು ಮಿಲಿಂದಕುಮಾರ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ (ಸಾಂಸ್ಥಿಕ) ಗೋವಿಂದ ರಾಠೋಡ್ ಆರ್.ಟಿ.ಐ. ತಾಲೂಕು ನಿರೀಕ್ಷಕರಾದ ಅಯ್ಯಳಪ್ಪ ಸಮಾಜ ಕಲ್ಯಾಣ ಇಲಾಖೆ ಹನುಮಂತಪ್ಪ, ಮಕ್ಕಳ ಸಹಾಯವಾಣಿ 1098ನ ಶರಣಪ್ಪ ಕಲಾಲ್, ಪೊಲೀಸ್ ಇಲಾಖೆಯ ಎ.ಎಸ್.ಐ ಭೀಮರೆಡ್ಡಿ, ಶಾಂತಮ್ಮ, ಮಾಳಮ್ಮ, ಕಾರ್ಮಿಕ ಇಲಾಖೆ ಬಾಲು ನಾಯಕ ಉಪಸ್ಥಿತರಿದ್ದರು.
ವರದಿ: ಎಸ್.ಬಿ.ರೆಡ್ಡಿ, ಕಲಬುರಗಿ