Kalburgi News: ಕಲಬುರಗಿ ಭಾಗದ ಜನರಿಗೆ ಖುಷಿ ಸುದ್ದಿ, ಕುಡಿಯಲು ನಾರಾಯಣಪುರ ಡ್ಯಾಂನಿಂದ 1000 ಕ್ಯುಸೆಕ್ ನೀರು ಬಿಡುಗಡೆ-kalburgi news good news to kalburgi people as summer raising drinking water released from narayana pura dam mkk ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  Kalburgi News: ಕಲಬುರಗಿ ಭಾಗದ ಜನರಿಗೆ ಖುಷಿ ಸುದ್ದಿ, ಕುಡಿಯಲು ನಾರಾಯಣಪುರ ಡ್ಯಾಂನಿಂದ 1000 ಕ್ಯುಸೆಕ್ ನೀರು ಬಿಡುಗಡೆ

Kalburgi News: ಕಲಬುರಗಿ ಭಾಗದ ಜನರಿಗೆ ಖುಷಿ ಸುದ್ದಿ, ಕುಡಿಯಲು ನಾರಾಯಣಪುರ ಡ್ಯಾಂನಿಂದ 1000 ಕ್ಯುಸೆಕ್ ನೀರು ಬಿಡುಗಡೆ

Drinking water ಕಲಬುರಗಿ ಜನರ ಕುಡಿಯುವ ನೀರಿಗಾಗಿ ನಾರಾಯಣಪುರ ಜಲಾಶಯದಿಂದ 1000 ಕ್ಯುಸೆಕ್ ನೀರನ್ನು ಹರಿಬಿಡಲಾಗಿದೆ.(ವರದಿ: ಮಹೇಶ್‌ ಕುಲಕರ್ಣಿ, ಕಲಬುರಗಿ)

ನಾರಾಯಣಪುರ ಜಲಾಶಯದಿಂದ ಕಲಬುರಗಿ ನಗರಕ್ಕೆ ಕುಡಿಯುವ ನೀರು ಹರಿಸಲಾಗಿದೆ.
ನಾರಾಯಣಪುರ ಜಲಾಶಯದಿಂದ ಕಲಬುರಗಿ ನಗರಕ್ಕೆ ಕುಡಿಯುವ ನೀರು ಹರಿಸಲಾಗಿದೆ.

ಕಲಬುರಗಿ: ಈಗಾಗಲೇ ಬಿಸಿಲ ತಾಪದಿಂದ ಬಳಲುತ್ತಿರುವ ಕಲ್ಯಾಣ ಕರ್ನಾಟಕದ ಕಲಬುರಗಿ ನಗರದ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಕಲ್ಪಿಸುವ ಭಾಗವಾಗಿ ನಾರಾಯಣಪುರ ಡ್ಯಾಂನಿಂದ 1000 ಕ್ಯುಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಗುರುವಾರವೇ ನೀರನ್ನು ನದಿ ಮೂಲಕ ಹರಿಸಲಾಗಿದೆ. ಇದರಿಂದ ಈ ಭಾಗದ ಜನ ಕುಡಿಯುವ ನೀರಿನ ಸಮಸ್ಯೆ ಸದ್ಯದ ಮಟ್ಟಿಗೆ ಬಗೆಹರಿದು ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದೆ. ಈಗ ಹರಿಸಿರುವ ನೀರು ಮಾರ್ಚ್‌ ಅಂತ್ಯದವರೆಗೂ ಬಳಕೆ ಮಾಡಬಹುದು. ಮಾರ್ಗಮಧ್ಯೆ ನೀರು ಕದಿಯುವ ಯತ್ನಗಳಿಗೆ ಕಡಿವಾಣ ಹಾಕಲು ಅಧಿಕಾರಿಗಳ ತಂಡ ರಚಿಸಿ ಹದ್ದುಗಣ್ಣು ಇರಿಸಲಾಗಿದೆ.

ನಾರಾಯಣಪುರ ಡ್ಯಾಂನಿಂದ ಹೊರಟ ನೀರು ಜೇವರ್ಗಿ ತಾಲೂಕಿನ ಸೊನ್ನ ಕ್ರಾಸ್ ದಾಟಿ ಹರವಾಳ ಸಮೀಪದ ಹಳ್ಳಕ್ಕೆ ಸೇರ್ಪಡೆಗೊಂಡ ಬಳಿಕ ಕಲಬುರಗಿ ಸಮೀಪದ ಸರಡಗಿ ಬ್ಯಾರೇಜ್ ತಲುಪಲು ಸುಮಾರು 20 ಕಿ.ಮೀ ಕ್ರಮಿಸಬೇಕಾಗುತ್ತದೆ. ಈ ಮಧ್ಯೆ ಇರುವ ರೈತರು ಪಂಪ್‍ಸೆಟ್ ಮೂಲಕ ನೀರೆತ್ತದಂತೆ ನಿಗಾ ವಹಿಸಲು ಪ್ರತಿ 10 ಕಿ.ಮೀ.ಗೆ ಒಬ್ಬ ಅಧಿಕಾರಿಯನ್ನು ನಿಯೋಜಿಸಲಾಗಿದೆ ಎಂದು ಕಲಬುರಗಿ ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ಮಂಡಳಿ ಅಧಿಕಾರಿ ಶಿವಕುಮಾರ್ ಮಾಹಿತಿ ಹಂಚಿಕೊಂಡರು.

ತಿಂಗಳ ಹಿಂದೆ ಬಿಡುಗಡೆ

ಈ ಹಿಂದೆ ಜನವರಿ ತಿಂಗಳಲ್ಲಿ ನಾರಾಯಪುರ ಡ್ಯಾಂನಿಂದ 0.5 ಟಿಎಂಸಿ ನೀರು ಬಿಡುಗಡೆ ಮಾಡಿದ್ದರಿಂದ ಇದುವರೆಗೆ ಕಲಬುರಗಿ ನಗರದ ನೀರಿನ ದಾಹ ತಣಿಸಲು ಸಾಧ್ಯವಾಗಿತ್ತು. ಮಾರ್ಚ್ 10ರ ಬಳಿಕ ನೀರಿನ ಸಮಸ್ಯೆ ಕಾಡುವ ಆತಂಕದ ಮುನ್ಸೂಚನೆ ಕಂಡುಬಂದ ಹಿನ್ನೆಲೆಯಲ್ಲಿ 0.9 ಟಿಎಂಸಿ ನೀರು ಬಿಡುಗಡೆಗೆ ಕ್ರಮಕೈಗೊಳ್ಳುವಂತೆ ಪ್ರಾದೇಶಿಕ ಆಯುಕ್ತರು ನಾರಾಯಣಪುರ ಡ್ಯಾಂ ಮುಖ್ಯ ಇಂಜಿನಿಯರ್ ಗೆ ಪತ್ರ ಬರೆದಿದ್ದರು. ಈ ಹಿನ್ನೆಲೆಯಲ್ಲಿ ಗುರುವಾರ ನಾರಾಯಣಪುರ ಡ್ಯಾಂನಿಂದ 1000 ಕ್ಯುಸೆಕ್ ನೀರು ಬಿಡುಗಡೆ ಮಾಡಿರುವ ಬಗ್ಗೆ ಮಾಹಿತಿ ಬಂದಿದೆ ಎಂದು ಅವರು ಹೇಳಿದರು.

ಈ ಮಧ್ಯೆ, ನಾರಾಯಣಪುರ ಡ್ಯಾಂನಿಂದ 0.7 ಟಿಎಂಸಿ ನೀರು ಬಿಡುಗಡೆಗೊಳಿಸಿದರೆ ನೀರು ಪಯಣಿಸುವ ಮಾರ್ಗ ಮಧ್ಯದ ಹಳ್ಳ ಮತ್ತು ನದಿಗಳ ತಗ್ಗುಗಳು ತುಂಬುವುದರಿಂದ ಹಿಡಿದು ನೀರು ಇಂಗುವಿಕೆಯ ಪ್ರಕ್ರಿಯೆ ಬಳಿಕ ಕಲಬುರಗಿ ನಗರಕ್ಕೆ ಕೇವಲ 0.2 ಟಿಎಂಸಿ ನೀರು ತಲುಪುತ್ತದೆ. ವಾಸ್ತವ ಸ್ಥಿತಿ ಹೀಗಿರುವಾಗ ಮಾರ್ಗಮಧ್ಯೆ ರೈತರು ತಮ್ಮ ಹೊಲಗಳಲ್ಲಿ ಬೆಳೆದು ನಿಂತಿರುವ ಬೆಳೆಗೆ ನೀರುಣಿಸಲು ಪಂಪ್‍ಸೆಟ್ ಮೂಲಕ ನೀರೆತ್ತಿದ್ದಾದರೆ ಬೇಸಿಗೆ ಅವಧಿಯ ನೀರಿನ ದಾಹ ಹಿಂಗಿಸುವುದು ಕಷ್ಟವಾಗುತ್ತದೆ. ಈ ಹಿನ್ನೆಲೆಯಲ್ಲಿ ಅತ್ಯಂತ ಕಟ್ಟುನಿಟ್ಟಾಗಿ ನದಿ ತೀರದ ಪಂಪ್‍ಸೆಟ್‍ಗಳ ಮೇಲೆ ಹದ್ದಿನಗಣ್ಣು ಇಡಲಾಗಿದೆ ಎಂದು ಅವರು ಹೇಳುತ್ತಾರೆ.

ಈಗಾಗಲೇ ನದಿ ತೀರದ ರೈತರಿಗೆ ಈ ನಿಟ್ಟಿನಲ್ಲಿ ಅಗತ್ಯ ಸಂದೇಶ ರವಾನಿಸಲಾಗಿದ್ದು, ಒಂದುವೇಳೆ, ಬೇಸಿಗೆ ಅವಧಿಯಲ್ಲಿ ನೀರೆತ್ತುವ ಯತ್ನಕ್ಕೆ ಕೈ ಹಾಕಿದರೆ ಮುಲಾಜಿಲ್ಲದೆ ಪಂಪ್‍ಸೆಟ್ ಮೋಟಾರು ಜಪ್ತು ಮಾಡಿಕೊಳ್ಳುವ ಖಡಕ್ ಎಚ್ಚರಿಕೆ ನೀಡಲಾಗಿದೆ. ಆ ಮೂಲಕ ಜನರ ದಾಹ ತಣಿಸುವ ಸದುದ್ದೇಶದಿಂದ ಬಿಡುಗಡೆ ಮಾಡಿರುವ ನೀರು ಮಾರ್ಗ ಮಧ್ಯೆ ಪೋಲಾಗದಂತೆ ಮುಂಜಾಗ್ರತೆ ವಹಿಸಲಾಗುತ್ತಿದೆ.

ಸಮಯಕ್ಕೆ ಸರಬರಾಜು

ಮುಂಗಾರು ಮಳೆಯ ಕೊರತೆ ಹಿನ್ನೆಲೆಯಲ್ಲಿ ಪ್ರಸಕ್ತ ಬೇಸಿಗೆ ಅವಧಿಗೆ ಕಲಬುರಗಿ ನಗರಕ್ಕೆ ಕುಡಿಯುವ ನೀರಿನ ಸಮಸ್ಯೆ ಕಾಡಬಹುದು ಎಂಬ ಅಂದಾಜಿನ ಮೇರೆಗೆ ಕಳೆದ ಅಕ್ಟೋಬರ್ ತಿಂಗಳಲ್ಲೇ ನಾರಾಯಣಪುರ ಡ್ಯಾಂ ಚೀಫ್ ಇಂಜಿನಿಯರ್ ಅವರಿಗೆ ಪತ್ರ ಬರೆದು ಕುಡಿಯುವ ನೀರಿನ ಉದ್ದೇಶಕ್ಕಾಗಿ ಎರಡು ಟಿಎಂಸಿ ನೀರು ಕಾಯ್ದಿರಿಸುವಂತೆ ಜಿಲ್ಲಾಧಿಕಾರಿಗಳು ಹಾಗೂ ಪ್ರಾದೇಶಿಕ ಆಯುಕ್ತರ ಮೂಲಕ ಕೋರಲಾಗಿತ್ತು.

ಈ ಮನವಿಗೆ ಪೂರಕವಾಗಿ ಕಳೆದ ಜನವರಿಯಲ್ಲಿ ನಾರಾಯಣಪುರ ಡ್ಯಾಂನಿಂದ 0.5 ಟಿಎಂಸಿ ನೀರು ಬಿಡುಗಡೆಯಾಗಿತ್ತು. ಇದರಿಂದಾಗಿ, ಈವರೆಗೆ ಕಲಬುರಗಿ ನಗರಕ್ಕೆ ಆತಂಕ ಸೃಷ್ಟಿಸುವ ಪ್ರಮಾಣದಲ್ಲಿ ನೀರಿನ ಸಮಸ್ಯೆ ತಲೆದೋರಿಲ್ಲ. ಇದೀಗ ಪುನಃ 1000 ಕ್ಯುಸೆಕ್ ನೀರು ಬಿಡುಗಡೆ ಮಾಡಿರುವುದರಿಂದ ಏಪ್ರಿಲ್ ಮಧ್ಯಭಾಗದವರೆಗೆ ಕಲಬುರಗಿ ನಗರದ ದೈನಂದಿನ ನೀರು ಪೂರೈಕೆಯ ಬೇಡಿಕೆಯನ್ನು ತಕ್ಕಮಟ್ಟಿಗಾದರೂ ಈಡೇರಿಸಲು ಸಾಧ್ಯವಾಗಬಹುದು ಎಂದು ಮಂಡಳಿಯ ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ.

(ವರದಿ: ಮಹೇಶ್‌ ಕುಲಕರ್ಣಿ, ಕಲಬುರಗಿ)

mysore-dasara_Entry_Point