Kalburgi News:ವಿದ್ಯಾರ್ಥಿನಿಯರು, ಶಿಕ್ಷಕಿಗೆ ಲೈಂಗಿಕ ಕಿರುಕುಳ: ವಾಡಿ ಶಾಲೆ ಮುಖ್ಯಗುರು ಪೊಲೀಸ್ ವಶಕ್ಕೆ
Kalburgi Crime News ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲ್ಲೂಕಿನ ವಾಡಿ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮಕ್ಕಳು ಹಾಗೂ ಶಿಕ್ಷಕಿಗೆ ಲೈಂಗಿಕ ಕಿರುಕುಳ ನೀಡುವ ಕುರಿತು ಆತನ ವಿರುದ್ದ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಕಲಬುರಗಿ: ವಿದ್ಯಾರ್ಥಿನಿಯರು ಮಾತ್ರವಲ್ಲದೇ ಅತಿಥಿ ಶಿಕ್ಷಕರಿಗೂ ಲೈಂಗಿಕ ಕಿರುಕುಳ ನೀಡುತ್ತಿದ್ದ ಕಲಬುರಗಿ ಜಿಲ್ಲೆಯ ಮುಖ್ಯೋಪಾಧ್ಯಾಯನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕಳೆದ ಹಲವು ದಿನಗಳಿಂದ ನಿರಂತರವಾಗಿ ವಿದ್ಯಾರ್ಥಿನಿಯರು ಮತ್ತು ಅತಿಥಿ ಶಿಕ್ಷಕಿಗೆ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ವಾಡಿಯ ಸರ್ಕಾರಿ ಪ್ರೌಢಶಾಲೆಯ ಪ್ರಭಾರಿ ಮುಖ್ಯೋಪಾಧ್ಯಾಯ ಲೈಂಗಿಕ ಕಿರುಕುಳ ನೀಡಿದ್ದು, ಆತನನ್ನು ವಿಚಾರಣೆಗೆ ಒಳಪಡಿಸಲಾಗಿದೆ.
ಸರ್ಕಾರಿ ಪ್ರೌಢ ಶಾಲೆಯ ಪ್ರಭಾರಿ ಮುಖ್ಯೋಪಾಧ್ಯಾಯ ವಿದ್ಯಾರ್ಥಿನಿಯರ ಜೊತೆ ಅಸಭ್ಯವಾಗಿ ವರ್ತಿಸುವುದು, ಮೈ ಮುಟ್ಟುವುದು ಮಾಡುತ್ತಿದ್ದ. ನಾನು ನಿಮ್ಮ ಸೋದರ ಮಾವ, ನನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡುವಂತೆ ಹೇಳುತ್ತಿದ್ದ ಅತಿಥಿ ಶಿಕ್ಷಕಿಗೂ ಆತ ಕಿರುಕುಳ ನೀಡುತ್ತಿದ್ದ ಎನ್ನುವುದು ಸ್ಥಳೀಯರ ಆರೋಪ.
ಈ ಕುರಿತು ಮಕ್ಕಳು ಪೋಷಕರ ಗಮನಕ್ಕೆ ತಂದಿದ್ದರು. ಬಳಿಕ ಅಧಿಕಾರಿಗಳು ಮುಖ್ಯ ಶಿಕ್ಷಕರಿಗೆ ಎಚ್ಚರಿಕೆಯನ್ನೂ ನೀಡಿದ್ದರು. ಹಾಗಿದ್ದರೂ ಆತ ಲೈಂಗಿಕವಾಗಿ ಕಿರುಕುಳ ನೀಡುವುದನ್ನು ನಿಲ್ಲಿಸಿರಲಿಲ್ಲ.
ಕಿರುಕುಳದಿಂದ ಬೇಸತ್ತ ವಿದ್ಯಾರ್ಥಿನಿಯರು ಕ್ಷೇತ್ರ ಶಿಕ್ಷಣಾಧಿಕಾರಿಗೆ ದೂರು ನೀಡಿದ್ದರು. ಚಿತ್ತಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ವಾಡಿ ಪೊಲೀಸ್ ಠಾಣೆಗೆ ದೂರು ನೀಡಿರುವ ಹಿನ್ನೆಲೆಯಲ್ಲಿ ವಾಡಿ ಪೊಲೀಸರು ಸದ್ಯ ಆರೋಪಿ ಪ್ರಭಾರಿ ಮುಖ್ಯೋಪಾಧ್ಯಾಯನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಮುಖ್ಯ ಶಿಕ್ಷಕನ ವಿರುದ್ದ ಹಲವು ದಿನಗಳಿಂದ ದೂರುಗಳಿದ್ದವು. ಈಗ ಮಕ್ಕಳಿಂದ ಅಧಿಕೃತ ದೂರು ಬಂದ ನಂತರ ಪೊಲೀಸರಿಗೆ ದೂರು ನೀಡಲಾಗಿದೆ. ಆತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಿಚಾರಣೆ ನಂತರ ಮುಂದಿನ ಕ್ರಮ ಆಗಲಿದೆ. ಈ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೂ ತರಲಾಗಿದೆ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿರಿ..