ಕನ್ನಡ ಸುದ್ದಿ  /  ಕರ್ನಾಟಕ  /  Obituary: ಸಣ್ಣ ವಯಸ್ಸಿಗೆ ಹೃದಯಾಘಾತದಿಂದ ನಿಧನರಾದ ಕಲಬುರಗಿ ವಿರಕ್ತ ಮಠದ ಶ್ರೀ ಸಿದ್ದರಾಮ ಸ್ವಾಮೀಜಿ

Obituary: ಸಣ್ಣ ವಯಸ್ಸಿಗೆ ಹೃದಯಾಘಾತದಿಂದ ನಿಧನರಾದ ಕಲಬುರಗಿ ವಿರಕ್ತ ಮಠದ ಶ್ರೀ ಸಿದ್ದರಾಮ ಸ್ವಾಮೀಜಿ

kalburgi News ಕಲಬುರಗಿ ಜಿಲ್ಲೆ ರಟಕಲ್‌ ಗ್ರಾಮದ ವಿರಕ್ತ ಮಠದ ಶ್ರೀ ಸಿದ್ದರಾಮೇಶ್ವರ ಸ್ವಾಮೀಜಿ ಅವರು ಹೃದಯಾಘಾತದಿಂದ ಮೃತಪಟ್ಟಿದ್ಧಾರೆ.

ಹೃದಯಾಘಾತದಿಂದ ನಿಧನರಾದ ರಟಕಲ್‌ ವಿರಕ್ತ ಮಠದ ಸಿದ್ದರಾಮೇಶ್ವರ ಸ್ವಾಮೀಜಿ
ಹೃದಯಾಘಾತದಿಂದ ನಿಧನರಾದ ರಟಕಲ್‌ ವಿರಕ್ತ ಮಠದ ಸಿದ್ದರಾಮೇಶ್ವರ ಸ್ವಾಮೀಜಿ

ಕಲಬುರಗಿ: ಅವರ ವಯಸ್ಸಿನ್ನೂ 35. ಈಗಿನ್ನೂ ಸಾಧನೆಯ ಹಾದಿಯಲ್ಲಿ ತಮ್ಮದೇ ವಿಶಿಷ್ಟ ಛಾಪು ಮೂಡಿಸುತ್ತಿದ್ದರು. ಸಣ್ಣ ವಯಸ್ಸಿನಲ್ಲೇ ಆಧ್ಯಾತ್ಮದೆಡೆ ಆಕರ್ಷಿತರಾಗಿ ಧಾರ್ಮಿಕ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದರು. ಗಮನ ಸೆಳೆದಿದ್ದರು ಕೂಡ. ಸಮಾಜ ಮುಖಿ ಚಟುವಟಿಕೆಗಳಿಂದಲೂ ಗಮನ ಸೆಳೆದಿದ್ದರು. ಆದರೆ ಸಣ್ಣ ವಯಸ್ಸಿನಲ್ಲೇ ಇಹಲೋಕ ತ್ಯಜಿಸುವ ಸನ್ನಿವೇಶ ನಿರ್ಮಾಣವಾಯಿತು. ಇದು ಕಲಬುರಗಿ ಜಿಲ್ಲೆ ಕಾಳಗಿ ತಾಲ್ಲೂಕಿನ ರಟಕಲ್‌ ಗ್ರಾಮದ ಮುರಘೇಂದ್ರ ಶಿವಯೋಗಿಗಳ ವಿರಕ್ತ ಮಠದ ಶ್ರೀ ಸಿದ್ದರಾಮೇಶ್ವರ ಸ್ವಾಮೀಜಿ ಅವರ ಹಠಾತ್‌ ನಿಧನದ ಸುದ್ದಿ. ಸಕ್ರಿಯವಾಗಿ ಓಡಾಡಿಕೊಂಡು ಭಾನುವಾರವಿನ್ನೂ ದೊಡ್ಡ ಕಾರ್ಯಕ್ರಮವನ್ನೇ ಆಯೋಜಿಸಿದ್ದ ಸ್ವಾಮೀಜಿ ಸೋಮವಾರ ಬೆಳಗಿನ ಜಾವ ಹೃದಯಾಘಾತದಿಂದ ನಿಧನರಾಗಿದ್ದಾರೆ.

ರಟಕಲ್‌ ಗ್ರಾಮದಲ್ಲಿ ಭಾನುವಾರ ಯಶಸ್ವಿಯಾಗಿ ನಡೆದು ಜನಮನ ಸೆಳೆದಿದ್ದ ಅದ್ದೂರಿ ವಚನ ಸಂಗಮ ಕಾರ್ಯಕ್ರಮದಲ್ಲಿ ಶ್ರೀ ಸಿದ್ದರಾಮೇಶ್ವರ ಸ್ವಾಮೀಜಿ ಭಾಗಿಯಾಗಿದ್ದರು. ಕಾರ್ಯಕ್ರಮದಲ್ಲಿ ರಾಯಚೂರು ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ್‌ ಪಾಟೀಲ್‌. ಶಾಸಕ ಬಿ.ಆರ್.ಪಾಟೀಲ್‌ ಸೇರಿದಂತೆ ಹಲವರು ಭಾಗಿಯಾಗಿದ್ದರು. ಕಾರ್ಯಕ್ರಮ ಮುಗಿಸಿ ಸಂಜೆ ಮಠಕ್ಕೆ ತೆರಳಿದ್ದ ಸ್ವಾಮೀಜಿ ಸಂಜೆಯ ಪೂಜೆಗಳನ್ನು ಮುಗಿಸಿ ರಾತ್ರಿ ಎಂದಿನಂತೆ ಮಲಗಿದ್ದರು. ಬೆಳಗಿನ ಜಾವ ಹೃದಯಾಘಾತದಿಂದ ಮಲಗಿದಲ್ಲೇ ಮೃತಪಟ್ಟಿದ್ದಾರೆ. ಕಾಳಗಿ ತಾಲ್ಲೂಕಿನ ರಟಕಲ್‌ನಲ್ಲಿರುವ ಮಠದಲ್ಲಿಯೇ ಇದು ನಡೆದಿದೆ. ಸ್ವಾಮೀಜಿ ಬಾರದೇ ಇದ್ದಾಗ ಗಮನಿಸಿದ ಮಠದ ಸಿಬ್ಬಂದಿಗೆ ಸ್ವಾಮೀಜಿ ಮಲಗಿದಲ್ಲೇ ಮೃತಪಟ್ಟಿರುವುದು ಕಂಡು ಬಂದಿದೆ. ಕೂಡಲೇ ವೈದ್ಯರಿಗೆ ಮಾಹಿತಿ ನೀಡಿದರೂ ಅವರು ಬಂದು ತಪಾಸಣೆ ಮಾಡಿದಾಗ ಸ್ವಾಮೀಜಿ ಮೃತಪಟ್ಟಿರುವುದನ್ನು ಘೋಷಿಸಿದರು.

ವಿಷಯ ತಿಳಿದು ರಟಕಲ್‌ ಮಾತ್ರವಲ್ಲದೇ ಸುತ್ತಮುತ್ತಲಿನ ಗ್ರಾಮದ ಭಕ್ತರು ಆಗಮಿಸಿ ಸ್ವಾಮೀಜಿ ಅಂತಿಮ ದರ್ಶನ ಪಡೆದರು. ಸೋಮವಾರ ಸಂಜೆ 5 ಗಂಟೆಗೆ ರಟಕಲ್ ಗ್ರಾಮದಲ್ಲಿ ಧಾರ್ಮಿಕ ವಿಧಿ ವಿಧಾನದ ಪ್ರಕಾರ ಶ್ರೀಗಳ ಅಂತ್ಯಕ್ರಿಯೆ ನಡೆಯಲಿದೆ ಎಂದು ಮಠದ ಭಕ್ತರು ತಿಳಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ