Womensday2024:ಅನಾಥ ಯುವತಿಯರ ಪಾಲಿನ ತವರು ಮನೆ ಕಲಬುರಗಿ ಸರಕಾರಿ ಮಹಿಳಾ ನಿಲಯ
ಕರ್ನಾಟಕದ ಹಲವಾರು ಮಹಿಳಾ ವಸತಿ ನಿಲಯಗಳು ಮಹಿಳೆಯರ ಪಾಲಿನ ಆಶಾಕಿರಣಗಳೇ ಆಗಿವೆ. ಕಲಬುರಗಿಯ ಮಹಿಳಾ ವಸತಿ ನಿಲಯವೂ ಏಳು ದಶಕದಲ್ಲಿ ಅದೆಷ್ಟೇ ಮಹಿಳೆಯರಿಗೆ ಬದುಕು ಕಟ್ಟಿಕೊಟ್ಟಿದೆ.ವಿಶೇಷ ವರದಿ: ಮಹೇಶ್ ಕುಲಕರ್ಣಿ ಕಲಬುರಗಿ

ಕಲಬುರಗಿ: ಅವರು ನಮಗ್ಯಾರು ಇಲ್ಲ ಎಂದು ರೋಧಿಸುವ ಹಾಗೆಯೇ ಇಲ್ಲ. ಇಲ್ಲಿನ ನಿಲಯವೇ ಅವರಿಗೆ ಎಲ್ಲಾ. ಯಾರೂ ಇಲ್ಲ ಎನ್ನುವ ಕೊರಗನ್ನು ನೀಗಿಸಿ ಅವರಿಗೊಂದು ಬದುಕನ್ನು ಕಟ್ಟಿಕೊಟ್ಟಿದೆ. ಕಲಬುರಗಿ ನಗರದ ಆಳಂದ ರಸ್ತೆಯಲ್ಲಿರುವ ಸರಕಾರಿ ಮಹಿಳಾ ನಿಲಯ ಅನಾಥ ಯುವತಿಯರ ಪಾಲಿಗೆ ಅಕ್ಷರಶಃ ತವರು ಮನೆಯಾಗಿದೆ. ಕಳೆದ 2015ರಿಂದ ಇಲ್ಲಿಯವರೆಗೆ 30 ಅನಾಥ ಯುವತಿಯರಿಗೆ ನಿಲಯದ ಮುಖೇನ ಕಂಕಣಭಾಗ್ಯ ದೊರಕಿದ್ದು, ಈ ಪೈಕಿ ಎಲ್ಲರೂ ಸುಂದರ ಹಾಗೂ ಸುಭದ್ರ ಬದುಕು ಕಟ್ಟಿಕೊಂಡಿದ್ದಾರೆ. ಇಲ್ಲಿದ್ದು ಹೋಗಿರುವ ಅದೆಷ್ಟೋ ಮಹಿಳೆಯರ ಬದುಕಿನ ಕಥಾನಕಗಳು ಹತ್ತು ಹಲವು.
1956ರಲ್ಲಿ ಆರಂಭಗೊಂಡ ಈ ನಿಲಯದಲ್ಲಿ 1980ರಿಂದ ಆಗೊಮ್ಮೆ ಈಗೊಮ್ಮೆ ಅನಾಥ ಯುವತಿಯರ ಕಂಕಣ ಭಾಗ್ಯ ಶುರುವಾಯಿತಾದರೂ, 2015ರಿಂದ ವಿವಾಹಗಳ ಪ್ರಮಾಣ ಹೆಚ್ಚಾಗಿದೆ. 2015 ರಿಂದ 2023ರವರೆಗೆ ನಿಲಯದ 22 ಅನಾಥ ಯುವತಿಯರಿಗೆ ಮದುವೆ ನೆರವೇರಿದ್ದು, 2022-23ನೇ ಸಾಲಿನಲ್ಲಿ ಎಂಟು ಯುವತಿಯರಿಗೆ ಕಂಕಣ ಭಾಗ್ಯ ಕೂಡಿಬಂದಿದೆ.
ಗಮನಾರ್ಹ ಅಂಶವೆಂದರೆ, ಇಲ್ಲಿ ಗಟ್ಟಿಮೇಳದ ಮೂಲಕ ಕಲ್ಯಾಣ ಬಂಧಕ್ಕೆ ಒಳಪಡುವ ಯುವತಿಯರಿಗೆ ಉತ್ತಮ ಭದ್ರತೆಯ ಜೊತೆಗೆ ಸಂಪೂರ್ಣ ಕಾನೂನು ಸುರಕ್ಷತೆಯೂ ಇರುತ್ತದೆ ಎಂದು ನಿಲಯದ ಮುಖ್ಯಸ್ಥೆ ಅನುರಾಧಾ ಹೇಳುತ್ತಾರೆ.
ವಿವಾಹಪೂರ್ವ ಪ್ರಕ್ರಿಯೆ
ರಾಜ್ಯ ಮಹಿಳಾ ನಿಲಯದ ಅನಾಥ ಯುವತಿಯರನ್ನು ಮದುವೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಸಾಕಷ್ಟು ಅರ್ಜಿಗಳು ಸಲ್ಲಿಕೆ ಆಗುತ್ತಿರುತ್ತವೆ. ಆದರೆ ಈ ಪೈಕಿ ಅರ್ಜಿ ಸಲ್ಲಿಸಿರುವ ಯುವಕರ ವಿದ್ಯಾರ್ಹತೆ, ಔದ್ಯೋಗಿಕ ಭದ್ರತೆ, ಆರ್ಥಿಕ ಭದ್ರತೆ ಹಾಗೂ ಸಾಮಾಜಿಕ ಅಂತಸ್ತು ಪ್ರಮುಖ ಮಾನದಂಡವಾಗಿ ಪರಿಗಣಿಸುವ ನಿಟ್ಟಿನಲ್ಲಿ ಮೂರು ಹಂತದ ಪರಿಶೀಲನೆ ನಡೆಸಲಾಗುತ್ತದೆ.
ಅದಕ್ಕೂ ಮುನ್ನ ಯಾವ ಯುವತಿಗೆ ಯಾವ ವರ ಸೂಕ್ತ ಎನಿಸುತ್ತಾನೆ ಎಂಬುದನ್ನು ನಿರ್ಧರಿಸಿದ ಬಳಿಕ ಆತನನ್ನು ವರಿಸುವ ಯುವತಿಗೆ ಮದುವೆ ಇಷ್ಟವಿದೆಯೋ ಇಲ್ಲವೋ ಎಂಬುದನ್ನು ಮೊದಲೇ ಖಾತ್ರಿಪಡಿಸಿಕೊಳ್ಳಲಾಗುತ್ತದೆ.
ಯುವತಿಯ ಇಚ್ಛೆ ಖಾತ್ರಿಪಡಿಸಿಕೊಂಡ ಬಳಿಕ ಯುವಕನ ಕುಟುಂಬದ ಕುರಿತು ಪೊಲೀಸ್ ವರದಿ, ಸದೃಢ ಆರೋಗ್ಯ ವರದಿ ಹಾಗೂ ಆರ್ಥಿಕ ಭದ್ರತಾ ವರದಿ ತರಿಸಿಕೊಳ್ಳುವುದರ ಜೊತೆಗೆ ಜಿಲ್ಲಾ ಪರಿವೀಕ್ಷಣಾಧಿಕಾರಿಗಳ ಮೂಲಕ ಯುವಕನ ಕುಟುಂಬದ ಸಾಮಾಜಿಕ ಅಂತಸ್ತು ಖಾತ್ರಿಪಡಿಸಿಕೊಳ್ಳಲಾಗುತ್ತದೆ.
ಈ ಮೂರೂ ವರದಿಗಳು ಸಮಾಧಾನ ಮೂಡಿಸುವಂತಿದ್ದರೆ ಮಾತ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಿಗೆ ನಿಲಯದ ಯುವತಿಯ ಮದುವೆಯ ಪ್ರಸ್ತಾವನೆ ಸಲ್ಲಿಸಲಾಗುತ್ತದೆ. ಉಪನಿರ್ದೇಶಕರು ತಮ್ಮ ಹಂತದಲ್ಲಿ ಮತ್ತೊಂದು ಸುತ್ತಿನ ಪರಿಶೀಲನೆ ಕೈಗೊಂಡ ಬಳಿಕ ಮಹಿಳಾ ನಿಲಯದ ವ್ಯವಸ್ಥಾಪಕ ಸಮಿತಿ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿಗಳಿಗೆ ಕಡತ ಸಲ್ಲಿಸುತ್ತಾರೆ.
ಜಿಲ್ಲಾಧಿಕಾರಿಗಳು ವರದಿಯ ಅಂಶಗಳನ್ನು ಖಾತ್ರಿಪಡಿಸಿಕೊಂಡು ಮದುವೆಗಾಗಿ ಮೂರು ದಿನಾಂಕಗಳನ್ನು ನಿಗದಿಪಡಿಸಿ ಆದೇಶ ಹೊರಡಿಸುತ್ತಾರೆ. ಇದಾದ ಬಳಿಕ ಈ ಮೂರು ದಿನಾಂಕಗಳ ಪೈಕಿ ಯಾವುದು ಸೂಕ್ತ ಎಂಬುದನ್ನು ನಿಲಯದ ಮುಖ್ಯಸ್ಥರು ಹಾಗೂ ವರನ ಕುಟುಂಬದವರು ಸಮಾಲೋಚಿಸಿ ನಿರ್ಧಾರ ಕೈಗೊಂಡ ನಂತರ ದಿನಾಂಕ ಆಖೈರುಗೊಳಿಸಿ ಲಗ್ನಪತ್ರ ಸಿದ್ದಪಡಿಸಲಾಗುತ್ತದೆ ಎಂದು ಅನುರಾಧಾ ಅವರು ಪೂರ್ಣ ಪ್ರಕ್ರಿಯೆ ಮೇಲೆ ಬೆಳಕು ಚೆಲ್ಲುತ್ತಾರೆ.
ಜಾತಿ-ಧರ್ಮ ಇಲ್ಲಿ ನಗಣ್ಯ
ಕಲಬುರಗಿಯ ರಾಜ್ಯ ಮಹಿಳಾ ನಿಲಯದಲ್ಲಿ ನೆರವೇರುವ ಮದುವೆಗಳು ಜಾತಿ ಮತ್ತು ಧರ್ಮದ ಗೊಡವೆಯಿಂದ ಸಂಪೂರ್ಣ ಮುಕ್ತವಾಗಿರುತ್ತವೆ. ಇಲ್ಲಿ ಏನಿದ್ದರೂ ವಿವಾಹ ಬಂಧನಕ್ಕೆ ಒಳಪಡುವ ಯುವತಿಯ ಪೂರ್ವಸಮ್ಮತಿ ಹಾಗೂ ಆಕೆಗೆ ಒದಗಿಸಬೇಕಾದ ಕಾನೂನು ಸುರಕ್ಷತೆಯೇ ಪ್ರಧಾನ ಮಾನದಂಡವಾಗಿರುತ್ತದೆ. ಹಾಗಾಗಿ, ಈ ನಿಲಯದಲ್ಲಿ ಈವರೆಗೆ ಬಹುತೇಕ ಎಲ್ಲ ಧರ್ಮಗಳ ಯುವತಿಯರು ಜಾತ್ಯತೀತ ಮದುವೆಯ ಮೂಲಕ ಸುಂದರ ಹಾಗೂ ಸುಭದ್ರ ಬದುಕು ರೂಪಿಸಿಕೊಂಡಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಹಾಗೂ ನ್ಯಾಯವಾದಿ ಚಂದು ರಾಠೋಡ್ ಹೇಳುತ್ತಾರೆ.
ಮಹಿಳಾ ನಿಲಯದಲ್ಲಿ ನಡೆಯುವ ಅನಾಥ ಯುವತಿಯರ ಮದುವೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು, ಪೊಲೀಸ್ ಇಲಾಖೆ ಹಾಗೂ ಒಮ್ಮೊಮ್ಮೆ ನ್ಯಾಯಾಂಗ ಇಲಾಖೆಯ ಅಧಿಕಾರಿಗಳು ಸಹ ಪಾಲ್ಗೊಂಡು ಈ ಜಾತ್ಯತೀತ ಮದುವೆಗೆ ಸಾಕ್ಷಿಯಾಗುವುದಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಯೊಬ್ಬರು ಹೇಳುತ್ತಾರೆ.
(ವಿಶೇಷ ವರದಿ: ಮಹೇಶ್ ಕುಲಕರ್ಣಿ ಕಲಬುರಗಿ)

ವಿಭಾಗ