ಕನ್ನಡ ಸುದ್ದಿ  /  Karnataka  /  Kalburgi News Karnataka Former Cm Congress Leader Veerendra Patil If Alive Completed 100 Year Today Kub

Veerendra Patil: ಕರ್ನಾಟಕ ರಾಜಕಾರಣದಲ್ಲಿ ಮಿಂಚಿದ ವೀರೇಂದ್ರ ಪಾಟೀಲ್‌ ಬದುಕಿದ್ದರೆ ಇಂದಿಗೆ ನೂರು ವರ್ಷ!

Karnataka Politics ಕರ್ನಾಟಕದ ರಾಜಕಾರಣದಲ್ಲಿ ಹಲವು ನಾಯಕರ ಪ್ರಭಾವ ಇದ್ದೇ ಇದೆ. ಅದರಲ್ಲಿ ಕೆಲವರ ಹೆಸರನ್ನು ತೆಗೆದು ಹಾಕುವುದೇ ಇಲ್ಲ ಎನ್ನುವಷ್ಟರ ಮಟ್ಟಿಗೆ ಅವರ ಛಾಪು ಈಗಲೂ ಇದೆ. ಇದರಲ್ಲಿ ವೀರೇಂದ್ರಪಾಟೀಲ್‌ ಕೂಡ ಒಬ್ಬರು.

ಕರ್ನಾಟಕ ಕಂಡ ಹಿರಿಯ ರಾಜಕಾರಣಿ ವೀರೇಂದ್ರ ಪಾಟೀಲರು. ಅವರು ಬದುಕಿದ್ದರೆ ಇಂದಿಗೆ ನೂರು ವರ್ಷ
ಕರ್ನಾಟಕ ಕಂಡ ಹಿರಿಯ ರಾಜಕಾರಣಿ ವೀರೇಂದ್ರ ಪಾಟೀಲರು. ಅವರು ಬದುಕಿದ್ದರೆ ಇಂದಿಗೆ ನೂರು ವರ್ಷ

ವೀರೇಂದ್ರ ಪಾಟೀಲ್‌ ಕರ್ನಾಟಕ ಕಂಡ ಪ್ರಮುಖ ರಾಜಕಾರಣಿ. ನೇರ, ನಿಷ್ಠುರತೆಗೆ ಹೆಸರಾದ ವೀರೇಂದ್ರ ಪಾಟೀಲ್‌ ಅವರು ನಾಲ್ಕು ದಶಕಕ್ಕೂ ಹೆಚ್ಚು ಕಾಲ ರಾಜಕೀಯ, ಸಾರ್ವಜನಿಕ ಜೀವನದಲ್ಲಿದ್ದವರು. ಎರಡು ಬಾರಿ ಕರ್ನಾಟಕದ ಮುಖ್ಯಮಂತ್ರಿಯಾಗಿ, ಕೇಂದ್ರದ ಸಚಿವರಾಗಿಯೂ ಕೆಲಸ ಮಾಡಿದವರು. ಕಾಂಗ್ರೆಸ್‌, ಜನತಾಪಕ್ಷದಲ್ಲೂ ರಾಜಕಾರಣ ಮಾಡಿದವರು.

ವೀರೇಂದ್ರ ಬಸಪ್ಪ ಪಾಟೀಲರು ಜನಿಸಿದ್ದು ಗುಲ್ಬರ್ಗ ಜಿಲ್ಲೆಯ ಚಿಂಚೋಳಿಯ ಸಾಮಾನ್ಯ ಕುಟುಂಬದಲ್ಲಿ. ಇಂದಿಗೆ ಸರಿಯಾಗಿ ನೂರು ವರ್ಷದ ಹಿಂದೆ ಅಂದರೆ 1924ರ ಫೆಬ್ರವರಿ 6ರಂದು ಜನಿಸಿದರು. ಚಿಂಚೋಳಿಯಲ್ಲಿಯೇ ಶಿಕ್ಷಣ ಪಡೆದ ಯುವ ವೀರೇಂದ್ರಪಾಟೀಲರು ನಂತರ ಉನ್ನತ ಶಿಕ್ಷಣಕ್ಕಾಗಿ ಆಯ್ಕೆ ಮಾಡಿಕೊಂಡಿದ್ದು ಉಸ್ಮಾನಿಯ ವಿಶ್ವವಿದ್ಯಾಲಯವನ್ನು. ಅಲ್ಲಿ ನ್ಯಾಯಶಾಸ್ತ್ರ ಪದವಿ ಮುಗಿಸಿದರು. ಆಗ ಭಾರತಕ್ಕೆ ಸ್ವಾತಂತ್ರ್ಯ ಬರುವ ಕ್ಷಣ. 1947ರ ಮಹತ್ವದ್‌ ವರ್ಷದಲ್ಲಿಯೇ ಪಾಟೀಲರು ವಕೀಲ ವೃತ್ತಿಯನ್ನು ಆರಂಭಿಸಿದರು. ಜತೆಗೆ ಕಾಂಗ್ರೆಸ್‌ನಲ್ಲೂ ಗುರುತಿಸಿಕೊಂಡರು. ಯುವಕರಾಗಿದ್ದ ಪಾಟೀಲರು ವಕೀಲರಾಗಿ ಚಿಂಚೋಳಿ, ಕಲಬುರಗಿಯಲ್ಲಿ ಹೆಸರು ಮಾಡಿದರು. ಇವರಲ್ಲಿ ಯುವ ನಾಯಕನನ್ನು ಜನರೂ ಕಂಡರು ಎನ್ನಿಸುತ್ತದೆ.

ರಾಜಕೀಯದಲ್ಲಿ ಪ್ರವರ್ಧಮಾನಕ್ಕೆ

ವೀರೇಂದ್ರ ಪಾಟೀಲರು ಹೈದರಾಬಾದ್ ಗೇಣಿದಾರಿ ಕೃಷಿ ಕಾನೂನು ಸಮಿತಿಯೇ ಮುಂತಾದ ಅನೇಕ ಸಮಿತಿಗಳ ಸದಸ್ಯರಾಗಿದ್ದರು. ವಿಶಾಲ ಮೈಸೂರು ರಾಜ್ಯ ನಿರ್ಮಾಣವಾದ ಮೇಲೆ, 1957ರಲ್ಲಿ ಚಿಂಚೋಳಿ ಕ್ಷೇತ್ರದಿಂದ ಮೈಸೂರು ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯಕಾರಿ ಸಮಿತಿ ಹಾಗೂ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಸದಸ್ಯರಾಗಿ ಆಯ್ಕೆಯಾಗಿ ರಾಜಕೀಯದಲ್ಲೇ ಸಕ್ರಿಯರಾದರು. 1960ರವರೆಗೆ ಮೈಸೂರು ಪ್ರದೇಶ ಕಾಂಗ್ರೆಸ್ ಸಮಿತಿಯ ವ್ಯವಸ್ಥಾಪಕ ಕಾರ್ಯದರ್ಶಿಗಳಾಗಿಯೂ, 1960-61ರಲ್ಲಿ ಗುಲ್ಬರ್ಗ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರೂ ಆಗಿ ಬಡ್ತಿ ಪಡೆದು ಹಂತ ಹಂತವಾಗಿ ಬೆಳೆಯುತ್ತಾ ಹೋದರು.

ಇದರೊಟ್ಟಿಗೆ ಜನಪ್ರತಿನಿಧಿಯಾಗಿಯೂ ನಿರಂತರವಾಗಿ ಅಧಿಕಾರದಲ್ಲಿದ್ದವರು ಪಾಟೀಲರು. ಇಂದಿರಾಗಾಂಧಿ ವಿರುದ್ದ ಒಮ್ಮೆ ಸೋತಿದ್ದು ಬಿಟ್ಟರೇ ಅವರು ವಿಧಾನಸಭೆ, ಲೋಕಸಭೆ ಚುನಾವಣೆಯಲ್ಲಿ ಗೆಲ್ಲುತ್ತಲೇ ಬಂದರು. ಅದು ಅವರಲ್ಲಿದ್ದ ರಾಜಕೀಯ ನೈಪುಣ್ಯತೆಗೆ ಸಾಕ್ಷಿ.

ಮೊದಲು ಎಸ್‌.ನಿಜಲಿಂಗಪ್ಪ ಅವರ ಬೆಂಬಲದಿಂದ ಬೆಳೆಯುತ್ತಾ ಹೋದ ವೀರೇಂದ್ರಪಾಟೀಲರಿಗೆ ಸಚಿವ ಸ್ಥಾನ, ಸಿಎಂ ಗಾದಿಯೂ ದೊರೆಯಿತು. ಅದೇ ಅವರಿಗೆ ಮುಳುವಾಯಿತು ಎನ್ನಿಸುತ್ತದೆ. ಕಾಂಗ್ರೆಸ್‌ ಬಿಡುವ ಸನ್ನಿವೇಶ ನಿರ್ಮಾಣವಾಯಿತು. ಕೆಲವೇ ವರ್ಷ ಜನತಾಪಕ್ಷಕ್ಕೆ ಹೋದರೂ ಕಾಂಗ್ರೆಸ್‌ಗೆ ವೀರೇಂದ್ರ ಪಾಟೀಲ್‌ ಬೇಕು ಎಂದು ಅವರನ್ನು ಮರಳಿ ಕರೆ ತರಲಾಯಿತು. ಅದಕ್ಕೆ ತಕ್ಕುನಾಗಿ ಅವರು ಕೆಲಸ ಮಾಡಿ ಕಾಂಗ್ರೆಸ್‌ಗೆ ಶಕ್ತಿ ತುಂಬಿದ್ದು ನಿಜವೇ.

ಸಚಿವರಾಗಿ ಗಟ್ಟಿ ಕೆಲಸ

ವೀರೇಂದ್ರ ಪಾಟೀಲರು ಕರ್ನಾಟಕದಲ್ಲಿ ಸಚಿವರಾಗಿ, ಕೇಂದ್ರದಲ್ಲಿ ಸಚಿವರಾಗಿ ಚೆನ್ನಾಗಿಯೇ ಕೆಲಸ ಮಾಡಿದವರು. ಕಾವೇರಿ ಜಲಾನಯನ ಪ್ರದೇಶದ ನೀರಾವರಿ ಯೋಜನೆಗಳಿಗೆ ತಮಿಳುನಾಡು ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಶತಮಾನದಷ್ಟು ಹಳೆಯದಾದ ಕಾವೇರಿ ಜಲ ವಿವಾದವನ್ನು ಒಂದು ಹಂತದಲ್ಲಿ ಬಗೆಹರಿಸಿದ್ದು ವೀರೇಂದ್ರ ಪಾಟೀಲರೇ. ತಮಿಳುನಾಡಿಗೆ ಗಟ್ಟಿ ದನಿಯಲ್ಲಿ ಉತ್ತರ ನೀಡಿ ಹೇಮಾವತಿ, ಹಾರಂಗಿ ನೀರಾವರಿ ಯೋಜನೆಗಳನ್ನು ಜಾರಿಗೊಳಿಸಿದ್ದರು. ಕೇಂದ್ರ ಜಲ ಆಯೋಗದ ಆದೇಶಗಳನ್ನೂ ಧಿಕ್ಕರಿಸಿ ಕರ್ನಾಟಕದ ಪರವಾಗಿ ಕೆಲಸ ಮಾಡಿದ್ದ ಛಾತಿ ಪಾಟೀಲರದ್ದು.

ರ್ನಾಟಕ ಪವರ್ ಕಾರ್ಪೊರೇಷನ್ ಗೆ ಉತ್ತೇಜನ ನೀಡಿ ರಾಜ್ಯ ವಿದ್ಯುಚ್ಛಕ್ತಿ ಮಂಡಳಿಯನ್ನು ವಿದ್ಯುತ್ ಉತ್ಪಾದನೆಯ ಜವಾಬ್ದಾರಿಯಿಂದ ಬೇರ್ಪಡಿಸಿ ವಿದ್ಯುತ್‌ ಉತ್ಪಾದನೆ, ಸರಬರಾಜಿಗೆ ಪ್ರತ್ಯೇಕ ರೂಪ ನೀಡಿದರು.

ಎರಡನೇ ಬಾರಿ ಮುಖ್ಯಮಂತ್ರಿಯಾದಾಗ ಆರ್ಥಿಕ ಸಚಿವರಾಗಿದ್ದ ಮೈಸೂರಿನ ಎಂ.ರಾಜಶೇಖರಮೂರ್ತಿ ಅವರೊಂದಿಗೆ ಸೇರಿ ಅಬಕಾರಿ ನೀತಿ ಗಟ್ಟಿಗೊಳಿಸಿ ಆದಾಯವನ್ನು ತಂದಿದ್ದರು.

ಲವ ಕುಶ ಜೋಡಿ

ಕಾಂಗ್ರೆಸ್‌ ನಲ್ಲಿ ಎಸ್‌.ನಿಜಲಿಂಗಪ್ಪ ಅವರ ಶಿಷ್ಯರಲ್ಲಿ ರಾಮಕೃಷ್ಣ ಹೆಗಡೆ ಹಾಗೂ ವೀರೇಂದ್ರ ಪಾಟೀಲ್‌ ಜೋಡಿ. ಇಬ್ಬರನ್ನು ಲವಕುಶ ಜೋಡಿ ಎಂದು ಕರೆಯುವಷ್ಟರ ಮಟ್ಟಿಗೆ ಇಬ್ಬರು ಪ್ರಭಾವಿಗಳಾಗಿ ಬೆಳೆದವರು. ರಾಜಕೀಯದಲ್ಲಿ ಎತ್ತರಕ್ಕೆ ಬೆಳೆದವರು. ಕಾಂಗ್ರೆಸ್‌ ನಲ್ಲಿದ್ದರೂ ಲಿಂಗಾಯಿತ ನಾಯಕರಾಗಿ ಮಾತ್ರ ಬೆಳೆದರು ಎನ್ನುವ ಮಾತುಗಳು ಅವರ ಬಗ್ಗೆ ಕೇಳಿ ಬರುತ್ತಲೇ ಇತ್ತು. ಆದರೂ ಸಮರ್ಥ ನಾಯಕರಾಗಿ ಅವರು ಗುರುತಿಸಿಕೊಂಡು ನಿಜ.

ಸೋಲಿನ ಚುನಾವಣೆ

ಕಾಂಗ್ರೆಸ್‌ ಬಿಟ್ಟಿದ್ದ ವೀರೇಂದ್ರ ಪಾಟೀಲರಿಗೆ ಜನತಾಪಕ್ಷ ಶಕ್ತಿ ತುಂಬಿತ್ತು. 1977ರ ಚುನಾವಣೆಯಲ್ಲಿ ಹಿನ್ನಡೆ ಅನುಭವಿಸಿದ್ದ ಇಂದಿರಾಗಾಂಧಿ ಅವರು ಕರ್ನಾಟಕದ ಚಿಕ್ಕಮಗಳೂರಿನಲ್ಲಿ ಉಪಚುನಾವಣೆ ಎದುರಿಸಿದ್ದರು. ಆಗ ಇಂದಿರಾ ವಿರುದ್ದ ಕಣಕ್ಕೆ ಇಳಿದವರು ವೀರೇಂದ್ರ ಪಾಟೀಲರೇ. ದೇವರಾಜ ಅರಸು ಅವರ ತಂತ್ರಗಾರಿಕೆ ಫಲವಾಗಿ ಇಂದಿರಾ ಗೆದ್ದರು. ಪಾಟೀಲರು 70,000 ಮತಗಳ ಅಂತರದಲ್ಲಿ ಸೋತರು. ಮರು ವರ್ಷವೇ ಅವರನ್ನು ಇಂದಿರಾ ಮತ್ತೆ ಕಾಂಗ್ರೆಸ್‌ಗೆ ಬರ ಮಾಡಿಕೊಂಡರು. ಲೋಕಸಭೆ ಚುನಾವಣೆಯಲ್ಲಿ ಗೆದ್ದು ಇಂದಿರಾಗಾಂಧಿ ಅವರೊಂದಿಗೆ ಸಚಿವರಾಗಿದ್ದು ಇತಿಹಾಸ!.

ಮುಳುವಾದ ಆರೋಗ್ಯ,ರಥೆಯಾತ್ರೆ

ಜನತಾಪಕ್ಷದ ಪ್ರಭಾವಗಳ ನಡುವೆ ಸೊರಗಿ ಹೋಗಿದ್ದ ಕಾಂಗ್ರೆಸ್‌ಗೆ ಪುನಶ್ಚೇತನ ನೀಡಲು ವೀರೇಂದ್ರ ಪಾಟೀಲರೇ ಬರಬೇಕಾಯಿತು. ಸತತ 17 ವರ್ಷ ರಾಜ್ಯರಾಜಕಾರಣದಿಂದ ದೂರವಾಗಿದ್ದ ಪಾಟೀಲರನ್ನು ರಾಜೀವ್‌ ಗಾಂಧಿ ಅವರೇ ಕರೆ ತಂದರು. ಪ್ರತಿ ಹಳ್ಳಿಗೆ ನೀರು ಮತ್ತು ಸಾರಿಗೆ ಸೌಲಭ್ಯ ಎಂಬ ಭರವಸೆಗಳ ಮೇಲೆ ಚುನಾವಣಾ ಪ್ರಚಾರವನ್ನು ಪಾಟೀಲರು ನಡೆಸಿದರು. ಜನತಾಪಕ್ಷದ ನಾಯಕರ ಕಿತ್ತಾಟ, ಕಾಂಗ್ರೆಸ್‌ಗೆ ಹೊಸ ನಾಯಕತ್ವದ ಫಲವಾಗಿ 1989ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ದಾಖಲೆಯ 179 ಕ್ಷೇತ್ರಗಳಲ್ಲಿ ಗೆದ್ದು ಅಧಿಕಾರಕ್ಕೆ ಬಂದಿತು. ಅವರನ್ನೇ ಸಿಎಂ ಆಗಿ ನೇಮಿಸಲಾಯಿತು. ಆದರೆ ಅವರಿಗೆ ಆರೋಗ್ಯ ಕೈಕೊಟ್ಟಿತು. ಸದನಕ್ಕೆ ಬರುವ ಸ್ಥಿತಿಯೂ ಅವರಿಗೆ ಇಲ್ಲದಾಯಿತು. ಮನೆಯಿಂದಲೇ ಮುಖ್ಯಮಂತ್ರಿ ಕೆಲಸ ಮಾಡತೊಡಗಿದರು. ಕಾಂಗ್ರೆಸ್‌ನಲ್ಲಿ ಭಿನ್ನಮತ ಬಿರುಸುಗೊಂಡಿತು. ಇದೇ ವೇಳೆ ಕರ್ನಾಟಕದಲ್ಲಿ ಬಿಜೆಪಿಯ ರಥಯಾತ್ರೆಯೂ ಆರಂಭಗೊಂಡು ಅಲ್ಲಲ್ಲಿ ಹಿಂಸಾಚಾರಗಳು ನಡೆದವು. ಈ ಕಾರಣದಿಂದ ಅವರು ಅನಿವಾರ್ಯವಾಗಿ ಅಧಿಕಾರ ಕಳೆದುಕೊಳ್ಳಬೇಕಾಯಿತು. ಸಿಎಂ ಸ್ಥಾನ ಬಿಟ್ಟುಕೊಡಲು ಒಪ್ಪದೇ ಇದ್ದಾಗ ಅವರನ್ನು ಕೆಳಕ್ಕಿಳಿಸಿ ಬಂಗಾರಪ್ಪ ಅವರಿಗೆ ಸಿಎಂ ಹುದ್ದೆ ನೀಡಲಾಯಿತು.

ಅದರಲ್ಲೂ ರಾಜೀವ್‌ಗಾಂಧಿ ಬೆಂಗಳೂರಿನಲ್ಲಿ ವೀರೇಂದ್ರ ಪಾಟೀಲರನ್ನು ಭೇಟಿ ಮಾಡಿದ್ದರು. ಆನಂತರ ವಿಮಾನ ನಿಲ್ದಾಣಕ್ಕೆ ಬಂದು ಸಿಎಂ ಬದಲಾವಣೆ ಘೋಷಣೆ ಮಾಡಿದ್ದರು. ವೀರೇಂದ್ರ ಪಾಟೀಲರನ್ನು ಅಧಿಕಾರದಿಂದ ಕೆಳಕ್ಕಿಳಿಸಿದ್ದ ರೀತಿಯಿಂದ ಕಾಂಗ್ರೆಸ್‌ ಮುಂದಿನ ಚುನಾವಣೆಯಲ್ಲಿ ಭಾರೀ ಹೊಡೆತ ತಿಂದಿತು. ಈಗಲೂ ಅದು ಕಾಂಗ್ರೆಸ್‌ಗೆ ಬಾಧಿಸುತ್ತಲೇ ಇದೆ. ಅವರ ಪುತ್ರ ಕೈಶಾಲನಾಥ ಪಾಟೀಲ ಒಮ್ಮೆ ಶಾಸಕರಾದರೆ, ಅಳಿಯ ಬಿ.ಜಿ.ಪಾಟೀಲ ಎರಡು ಬಾರಿ ಕಲಬುರಗಿ ಸಂಸದರಾಗಿದ್ದರು. ಈಗಲೂ ಅವರ ಕುಟುಂಬ ಕಾಂಗ್ರೆಸ್‌ ನಂಟು ಬಿಟ್ಟಿಲ್ಲ.

ಪಾಟೀಲರ ರಾಜಕೀಯ ಹಾದಿ..

ಶಾಸಕ 5 ಬಾರಿ: ಹೈದರಾಬಾದ್ ವಿಧಾನ ಸಭೆಗೆ ಅಳಂದದಿಂದ1952-56, ಮೈಸೂರು (ಈಗಿನ ಕರ್ನಾಟಕ) ವಿಧಾನ ಸಭೆಯಲ್ಲಿ ಚಿಂಚೋಳಿಯಿಂದ ನಾಲ್ಕು ಬಾರಿ 1957-71,1989.

ಸಚಿವ: 1957ರ ಏಪ್ರಿಲ್‍ನಿಂದ 1958ರ ಮೇ 16ರ ವರೆಗೆ ಮೈಸೂರು ರಾಜ್ಯದ ಗೃಹ ಮತ್ತು ಕೈಗಾರಿಕಾ ಖಾತೆಗಳ ಉಪ ಮಂತ್ರಿ. 1961ರ ಫೆಬ್ರವರಿಯಿಂದ 1962ರ ಮಾರ್ಚ್ ವರೆಗೆ ಅಬಕಾರಿ, ಪಾನನಿರೋಧ ಮತ್ತು ಗ್ರಾಮೀಣ ಕೈಗಾರಿಕಾ ಖಾತೆಗಳ ಮಂತ್ರಿ. 1962ರಿಂದ 1967ರವರೆಗಿನ ಲೋಕೋಪಯೋಗಿ,ಸಾರಿಗೆ ಮತ್ತು ವಿದ್ಯುತ್ ಇಲಾಖೆಗಳ ಮಂತ್ರಿ. 1967ರಲ್ಲಿ ಮತ್ತೊಮ್ಮೆ ಲೋಕೋಪಯೋಗಿ ಇಲಾಖೆಯ ಮಂತ್ರಿ.

ಲೋಕಸಭಾ ಸದಸ್ಯ: ಎರಡು ಬಾರಿ, ಒಮ್ಮೆ ಕಲಬುರಗಿ( 1980-84), ಬಾಗಲಕೋಟೆ( 1980), ಸೋಲು ಚಿಕ್ಕಮಗಳೂರು(1978)

ರಾಜ್ಯಸಭಾ ಸದಸ್ಯ: ಒಂದು ಬಾರಿ: 1972-78

ಕೇಂದ್ರದಲ್ಲಿ ಸಚಿವ: ಕೇಂದ್ರ ಪೆಟ್ರೊಲಿಯಂ ಮತ್ತು ರಾಸಾಯನಿಕ ಸಚಿವ , ಮಾರ್ಚ್ 1980-ಸೆಪ್ಟೆಂಬರ್, 1980 , ಕೇಂದ್ರ ಕಾರ್ಮಿಕ ಮತ್ತು ಪುನರ್ವಸತಿ ಸಚಿವ 1982-1984.

ಕೆಮಿಕಲ್ಸ್ ಆಂಡ್ ಫರ್ಟಿಲೈಸರ್ಸ್ & ಇಂಡಸ್ಟ್ರಿ ಮತ್ತು ಕಂಪನಿ ವ್ಯವಹಾರಗಳ ಹೆಚ್ಚುವರಿ ಸಚಿವ 1984

ಮುಖ್ಯಮಂತ್ರಿ: 1968-1971ರ ಅವಧಿಯಲ್ಲಿ ವೀರೇಂದ್ರ ಪಾಟೀಲ್ ಅವರು ರಾಜ್ಯದ 7ನೇ ಮುಖ್ಯಮಂತ್ರಿಯಾಗಿದ್ದರು.ಮೊದಲ ಬಾರಿ 33 ತಿಂಗಳು 10 ದಿನ ರಾಜ್ಯದ ಸಿಎಂ ಆಗಿ ಆಡಳಿತ ನಡೆಸಿದ್ದರು. 1989-1990ರ ಅವಧಿಯಲ್ಲಿ ಸಿಎಂ. ಒಟ್ಟು 10 ತಿಂಗಳ ಎರಡನೇ ಅವಧಿ.

IPL_Entry_Point