Kalburgi News: ಕಲಬುರಗಿಯಲ್ಲಿ ಇಂದು ಕರ್ನಾಟಕ ಸಚಿವ ಸಂಪುಟ ಸಭೆ; ಕಲ್ಯಾಣ ಕರ್ನಾಟಕದ ಪ್ರಮುಖ 10 ನಿರೀಕ್ಷೆಗಳೇನು-kalburgi news karnataka government cabinet meeting in kalburgi major 10 expectations of kalyan karnataka kub ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  Kalburgi News: ಕಲಬುರಗಿಯಲ್ಲಿ ಇಂದು ಕರ್ನಾಟಕ ಸಚಿವ ಸಂಪುಟ ಸಭೆ; ಕಲ್ಯಾಣ ಕರ್ನಾಟಕದ ಪ್ರಮುಖ 10 ನಿರೀಕ್ಷೆಗಳೇನು

Kalburgi News: ಕಲಬುರಗಿಯಲ್ಲಿ ಇಂದು ಕರ್ನಾಟಕ ಸಚಿವ ಸಂಪುಟ ಸಭೆ; ಕಲ್ಯಾಣ ಕರ್ನಾಟಕದ ಪ್ರಮುಖ 10 ನಿರೀಕ್ಷೆಗಳೇನು

Kalaburgi News ಕಲಬುರಗಿ ನಗರದಲ್ಲಿ ಕರ್ನಾಟಕ ಸಚಿವ ಸಂಪುಟದ ಸಭೆ ಮಂಗಳವಾರ ಸಿಎಂ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಈ ಭಾಗದ ಪ್ರಮುಖ ನಿರೀಕ್ಷೆಗಳ ಪಟ್ಟಿ ಇಲ್ಲಿದೆ.

ಕಲ್ಯಾಣ ಕರ್ನಾಟಕದ ಜಿಲ್ಲೆಗಳ ಅಭಿವೃದ್ದಿ ಅಜೆಂಡಾ ದೊಡ್ಡದೇ ಇದೆ.
ಕಲ್ಯಾಣ ಕರ್ನಾಟಕದ ಜಿಲ್ಲೆಗಳ ಅಭಿವೃದ್ದಿ ಅಜೆಂಡಾ ದೊಡ್ಡದೇ ಇದೆ.

ಕರ್ನಾಟಕ ಸರ್ಕಾರದ ಆಡಳಿತ ಕೇಂದ್ರ ಬೆಂಗಳೂರು ಆದರೂ ಉತ್ತರ ಕರ್ನಾಟಕದಲ್ಲೂ ಆಗಾಗ ಸಚಿವ ಸಂಪುಟ ಸಭೆ ನಡೆಸಿ ಅಲ್ಲಿನ ಭಾಗದ ಬೇಡಿಕೆಗಳಿಗೆ ಸ್ಪಂದಿಸುವುದು ಉಂಟು.ಈ ಹಿಂದೆಯೂ ಕಲಬುರಗಿಯಲ್ಲಿ ಹಲವು ಬಾರಿ ಸಂಪುಟ ಸಭೆಗಳು ನಡೆದಿವೆ. ಈ ಕಾರಣದಿಂದಲೇ ಬೆಳಗಾವಿಯಲ್ಲಿ ಪ್ರತ್ಯೇಕ ಆಡಳಿತ ಸೌಧವನ್ನೇ ನಿರ್ಮಿಸಿ ಅಧಿವೇಶವನ್ನೂ ನಡೆಸುವುದು ಒಂದೂವರೆ ದಶಕದಿಂದ ನಡೆದಿದೆ. ಸಚಿವ ಸಂಪುಟ ಸಭೆಗಳು ಆಗಾಗ ನಡೆದರೂ ನೀಡಿದ ಭರವಸೆಗಳು ಎಷ್ಟು ಜಾರಿಯಾದವು ಎನ್ನುವ ಪ್ರಶ್ನೆ ಇದ್ದೇ ಇದೆ. ಕಲ್ಯಾಣ ಕರ್ನಾಟಕ ಉತ್ಸವವನ್ನು ನಿಜಾಮನ ಆಳ್ವಿಕೆಯಿಂದ ಈ ಪ್ರದೇಶದ ವಿಮೋಚನೆ ಮತ್ತು ಈ ಪ್ರದೇಶಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿದ ಸಂವಿಧಾನದ 371 (ಜೆ) ವಿಧಿಯ 10ನೇ ವಾರ್ಷಿಕೋತ್ಸವದ ಅಂಗವಾಗಿ ಆಚರಿಸಲಾಗುತ್ತದೆ.ಇದರ ನಡುವೆ ಕಲ್ಯಾಣ ಕರ್ನಾಟಕ ಉತ್ಸವದ ಜತೆಗೆ ಸಚಿವ ಸಂಪುಟ ಸಭೆಯೂ ಕಲಬುರಗಿಯಲ್ಲಿ ಮಂಗಳವಾರ ನಿಗದಿಯಾಗಿದೆ. ಈ ಭಾಗದ ಮುಖ್ಯ ಬೇಡಿಕೆಗಳ ಹತ್ತು ಅಂಶಗಳು ಇಲ್ಲಿವೆ

  1. ಕಲ್ಯಾಣ ಕರ್ನಾಟಕದ ಜಿಲ್ಲೆಗಳಾದ ಬೀದರ್‌, ಕಲಬುರಗಿ, ಯಾದಗಿರಿ, ರಾಯಚೂರು, ಬಳ್ಳಾರಿ, ಕೊಪ್ಪಳ ಹಾಗೂ ವಿಜಯನಗರ ಜಿಲ್ಲೆಗಳ ಅಭಿವೃದ್ದಿಗೆ ಪ್ರತ್ಯೇಕ ಅನುದಾನವನ್ನು ಮೀಸಲಿಡಬೇಕು. ವಿಶೇಷವಾಗಿ ಕಲ್ಯಾಣ ಕರ್ನಾಟಕ ಅಭಿವೃದ್ದಿ ಮಂಡಳಿಗೆ ಅನುದಾನವನ್ನು ಒದಗಿಸುತ್ತಿದ್ದರೂ ಪ್ರಮಾಣವನ್ನು ಹೆಚ್ಚಿಸಿ ಅಭಿವೃದ್ದಿಗೆ ಹೆಚ್ಚಿನ ಒತ್ತನ್ನು ನೀಡಲೇಬೇಕು. ಇದರಿಂದ ಏಳು ಜಿಲ್ಲೆಗಳಲ್ಲಿ ಮಂಡಳಿ ಮೂಲಕ ಚಟುವಟಿಕೆ ರೂಪಿಸಲು ಸಹಕಾರಿಯಾಗಲಿದೆ.
  2. ಶೈಕ್ಷಣಿಕವಾಗಿ ಹಿಂದುಳಿದಿರುವ ಈ ಜಿಲ್ಲೆಗಳಲ್ಲಿ ವಿಶೇಷವಾಗಿ ಕಾರ್ಯಕ್ರಮಗಳನ್ನು ರೂಪಿಸಬೇಕು. ಸರ್ಕಾರಿ ಶೈಕ್ಷಣಿಕ ಜಾಲವನ್ನು ಇನ್ನಷ್ಟು ಬಲಪಡಿಸಬೇಕು. ಶಿಥಿಲಾವಸ್ಥೆಯ ಶಾಲಾ ಕಟ್ಟಡಗಳ ದುರಸ್ತಿಗೆ ಮುಂದಾಗಬೇಕು.
  3. ಹಿಂದುಳಿದ ವರ್ಗಗಳ ಜಿಲ್ಲೆಗಳು ಎಂಬ ಹಣೆಪಟ್ಟಿ ಕಟ್ಟಿಕೊಂಡಿರುವ ಈ ಭಾಗದ ಪ್ರತಿ ಜಿಲ್ಲಾಸ್ಪತ್ರೆಗಳನ್ನು ಉನ್ನತೀಕರಿಸಿ ಆರೋಗ್ಯ ವ್ಯವಸ್ಥೆ ಸುಧಾರಿಸಬೇಕು. ತಾಲ್ಲೂಕು ಆಸ್ಪತ್ರೆಗಳನ್ನೂ ಬಲಪಡಿಸಬೇಕು
  4. ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಕಾರ್ಯಗಳ ಸಮರ್ಪಕ ಅನುಷ್ಠಾನಕ್ಕಾಗಿ ಪ್ರತ್ಯೇಕ ಸಚಿವಾಲಯ ಸ್ಥಾಪನೆ ಮಾಡಬೇಕು ಎನ್ನುವ ಬೇಡಿಕೆಯೂ ಇದೆ. ಇದರಿಂದ ಅಭಿವೃದ್ದಿಗೆ ವೇಗ ಸಿಗಲಿದೆ
  5. ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ಪ್ರವಾಸೋದ್ಯಮ ಅಭಿವೃದ್ದಿಗೆ ವಿಪುಲ ಅವಕಾಶವಿದೆ. ಈ ಭಾಗದ ಬೀದರ್‌, ಕಲಬುರಗಿ, ರಾಯಚೂರು, ಬಳ್ಳಾರಿ, ವಿಜಯನಗರ ಜಿಲ್ಲೆಗಳ ಐತಿಹಾಸಿಕ ತಾಣಗಳ ಮಹತ್ವಕ್ಕೆ ಪೂರಕವಾಗಿ ಮೂಲಸೌಕರ್ಯ ಒದಗಿಸಬೇಕು. ಪ್ರವಾಸೋದ್ಯಮ ಬೆಳವಣಿಗೆಗೆ ಆದ್ಯತೆಯನ್ನು ನೀಡಬೇಕು
  6. ಈ ಭಾಗದ ಮುಖ್ಯ ಬೇಡಿಕೆ ಅಪೌಷ್ಟಿಕತೆ ನಿವಾರಣೆಗೆ ವಿಶೇಷ ಒತ್ತು. ಆರೇಳು ಜಿಲ್ಲೆಗಳಲ್ಲಿ ಈಗಲೂ ಅಪೌಷ್ಠಿಕತೆ ಹೊಂದಿದ ಮಕ್ಕಳ ಸಂಖ್ಯೆ ಅಧಿಕವಾಗಿದೆ. ಇದಕ್ಕೆ ವಿಶೇಷ ಪ್ಯಾಕೇಜ್‌ ರೂಪಿಸಿ ಅನುದಾನ ಒದಗಿಸಬೇಕು
  7. ಕಲ್ಯಾಣ ಕರ್ನಾಟಕ ಭಾಗದಲ್ಲಿ ಹುದ್ದೆಗಳ ನೇಮಕದಲ್ಲೂ ಸಾಕಷ್ಟು ವ್ಯತ್ಯಾಸಗಳಾಗಿವೆ. ಏಳು ಜಿಲ್ಲೆಗಳಲ್ಲೂ ವಿವಿಧ ಇಲಾಖೆಗಳಲ್ಲಿ ಹುದ್ದೆಗಳು ಖಾಲಿ ಇವೆ. ಇವುಗಳನ್ನು ತುಂಬಲು ಗಮನ ನೀಡುವುದು.371 (ಜೆ) ಮೀಸಲಾತಿಯಡಿ ನೇಮಕವಾದ ನೌಕರರಿಗೆ ದಶಕ ಕಳೆದರೂ ಬಡ್ತಿ ಸಿಗದಿರುವುದೂ ಕೂಡ ಪ್ರಮುಖ ಬೇಡಿಕೆ.
  8. ಉನ್ನತ ಶಿಕ್ಷಣಕ್ಕೆಂದೇ ಈ ಭಾಗದಲ್ಲಿ ಇದ್ದ ಕಲಬುರಗಿ ವಿಶ್ವವಿದ್ಯಾನಿಲಯ ಇಂದೇ ಈಗ ನಾಲ್ಕು ವಿವಿಯಾಗಿ ಮಾರ್ಪಟ್ಟಿದೆ. ರಾಯಚೂರು, ಬಳ್ಳಾರಿ ಹಾಗೂ ಕೊಪ್ಪಳ ವಿಶ್ವವಿದ್ಯಾನಿಲಯ ರೂಪುಗೊಂಡಿದ್ದು ವಿಶ್ವವಿದ್ಯಾಲಯದಲ್ಲಿ ಖಾಲಿ ಇರುವ ಬೋಧಕ, ಬೋಧಕೇತರ ಹುದ್ದೆಗಳ ನೇಮಕಾತಿಗೆ ಅನುಮೋದನೆ ನೀಡಬೇಕು.
  9. ನೀರಾವರಿ ಈ ಭಾಗದ ಪ್ರಮುಖ ಬೇಡಿಕೆ. ಹಲವಾರು ನೀರಾವರಿ ಹಾಗೂ ಏತ ನೀರಾವರಿ ಯೋಜನೆಗಳನ್ನು ಜಾರಿಗೊಳಿಸಿದ್ದರೂ ಪ್ರತ್ಯೇಕ ಅನುದಾನದೊಂದಿಗೆ ಜಾರಿಯಲ್ಲಿರುವ ಯೋಜನೆಗಳನ್ನು ಮುಗಿಸಬೇಕು
  10. ಬಂಡವಾಳ ಆಕರ್ಷಿಸಲು ಕಲ್ಯಾಣ ಕರ್ನಾಟಕಕ್ಕೆ ಪ್ರತ್ಯೇಕ ಕೈಗಾರಿಕಾ ನೀತಿ ಬೇಕು. ಇದರಿಂದ ಈ ಭಾಗದಲ್ಲಿ ಸ್ಥಳೀಯ ಉತ್ಪಾದನೆ ಹಾಗೂ ಬೇಡಿಕೆಗೆ ಅನುಗುಣವಾಗಿ ಉದ್ಯಮಗಳು ಆರಂಭಗೊಂಡರೆ ಉದ್ಯೋಗವೂ ಸಿಗಲಿದೆ.

mysore-dasara_Entry_Point