ಕನ್ನಡ ಸುದ್ದಿ  /  Karnataka  /  Kannada Language Comprehensive Development Bill Explained

ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ ಮಂಡನೆ, ಉದ್ಯೋಗ ಮತ್ತು ಶಿಕ್ಷಣದಲ್ಲಿ ಕನ್ನಡಿಗರಿಗೆ ಮೊದಲ ಆದ್ಯತೆ, ವಿಧೇಯಕದಲ್ಲೇನಿದೆ?

ಕನ್ನಡ ಮತ್ತು ಕನ್ನಡಿಗರಿಗೆ ಮೊದಲ ಆದ್ಯತೆ ಎಂದಿರುವ ಕರ್ನಾಟಕ ರಾಜ್ಯ ಸರಕಾರವು ಕನ್ನಡ ಅಧಿಕೃತ ಭಾಷೆಯಾಗಿ ಎಲ್ಲಾ ಹಂತಗಳಲ್ಲಿ ಅನುಷ್ಠಾನಗೊಳಿಸಲು ಶಾಸನಾತ್ಮಕ ಬಲ ತುಂಬುವ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕವನ್ನು ಇಂದು ವಿಧಾನಸಭೆಯಲ್ಲಿ ಮಂಡಿಸಿದೆ. ಕನ್ನಡ ಮತ್ತು ಸಂಸ್ಕೃತಿ, ಇಂಧನ ಸಚಿವರಾದ ವಿ. ಸುನಿಲ್‌ ಕುಮಾರ್‌ ಈ ವಿಧೇಯಕವನ್ನು ಮಂಡಿಸಿದ್ದಾರೆ.

ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ, ಕನ್ನಡಿಗರಿಗೆ ಗುಡ್‌ನ್ಯೂಸ್‌
ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ, ಕನ್ನಡಿಗರಿಗೆ ಗುಡ್‌ನ್ಯೂಸ್‌

ಬೆಂಗಳೂರು: ಕನ್ನಡ ಮತ್ತು ಕನ್ನಡಿಗರಿಗೆ ಮೊದಲ ಆದ್ಯತೆ ಎಂದಿರುವ ಕರ್ನಾಟಕ ರಾಜ್ಯ ಸರಕಾರವು ಕನ್ನಡ ಅಧಿಕೃತ ಭಾಷೆಯಾಗಿ ಎಲ್ಲಾ ಹಂತಗಳಲ್ಲಿ ಅನುಷ್ಠಾನಗೊಳಿಸಲು ಶಾಸನಾತ್ಮಕ ಬಲ ತುಂಬುವ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕವನ್ನು ಇಂದು ವಿಧಾನಸಭೆಯಲ್ಲಿ ಮಂಡಿಸಿದೆ. ಕನ್ನಡ ಮತ್ತು ಸಂಸ್ಕೃತಿ, ಇಂಧನ ಸಚಿವರಾದ ವಿ. ಸುನಿಲ್‌ ಕುಮಾರ್‌ ಈ ವಿಧೇಯಕವನ್ನು ಮಂಡಿಸಿದ್ದಾರೆ.

ಏನಿದೆ ವಿಧೇಯಕದಲ್ಲಿ?

- ರಾಜ್ಯದ ವಿಧಾನಮಂಡಲದಲ್ಲಿ ಮಂಡಿಸಲಾಗುವವ ಎಲ್ಲಾ ವಿಧೇಯಕಗಳಲ್ಲಿ ಹಾಗೂ ಅಂಗೀಕರಿಸಲಾಗುವ ಎಲ್ಲಾ ಅಧಿನಿಯಮಗಳಲ್ಲಿ ಮತ್ತು ಸರಕಾರ, ಎಲ್ಲಾ ಸ್ಥಳೀಯ ಸಂಸ್ಥೆಗಳು, ಮಂಡಳಿಗಳು, ನಿಗಮಗಳು ಶಾನಬದ್ಧ ಮತ್ತು ಶಾನಬದ್ಧವಲ್ಲದ ನಿಕಾಯಗಳು ಅಥವಾ ಉದ್ಯಮಗಳು ಮತ್ತು ನೋಂದಾಯಿತ ಸಹಕಾರಿ ಸಂಘಗಳು ಹೊರಡಿಸುವ ಎಲ್ಲಾ ಆದೇಶಗಳಲ್ಲಿ, ನಿಯಮಗಳಲ್ಲಿ, ಉಪವಿಧಿಗಳಲ್ಲಿ ಅಧಿಕೃತ ಭಾಷೆಯಾಗಿ ಕನ್ನಡವನ್ನು ಬಳಸಬೇಕು.

- ರಾಜ್ಯ ಅಥವಾ ಸ್ಥಳೀಯ ಪ್ರಾಧಿಕಾರಗಳು ತಮ್ಮ ಎಲ್ಲಾ ಅಧಿಕೃತ ಹಾಗೂ ಆಡಳಿತಾತ್ಮಕ ಉದ್ದೇಶಗಳಿಗಾಗಿ ಮತ್ತು ಪತ್ರವ್ಯವಹಾರಕ್ಕಾಗಿ ಕನ್ನಡ ಭಾಷೆಯನ್ನು ಬಳಸಬೇಕು.

- ಭಾರತ ಸರಕಾರ, ವಿದೇಶಗಳು, ಇತರೆ ರಾಜ್ಯಗಳು, ಉಚ್ಚ ನ್ಯಾಯಾಲಯಗಳು, ಸರ್ವೋಚ್ಚ ನ್ಯಾಯಾಲಗಳು, ಇವುಗಳ ಕಚೇರಿಗಳ ಜತೆ ಪತ್ರ ವ್ಯವಹಾರಕ್ಕಾಗಿ ಮತ್ತು ಕಾನೂನಿನ ಮೂಲಕ ಆಂಗ್ಲ ಭಾಷೆಯನ್ನು ಬಳಸುವುದು ಕಡ್ಡಾಯವಿರುವ ಯಾವುದೇ ಸನ್ನಿವೇಶದಲ್ಲಿ ಆಂಗ್ಲ ಭಾಷೆಯನ್ನು ಬಳಸಬಹುದು.

- ಭಾಷಾ ಅಲ್ಪಾ ಸಂಖ್ಯಾತರು, ಸರಕಾರ ಅಥವಾ ಇಲಾಖೆಗಳೊಂದಿಗೆ ಮತ್ತು ಇತರೆ ಸರಕಾರಿ ಕಚೇರಿಗಳೊಂದಿಗೆ ಸಾಧ್ಯವಾದಷ್ಟು ಮಟ್ಟಿಗೆ ಕನ್ನಡ ಭಾಷೆಯನ್ನು ಅಥವಾ ಆಂಗ್ಲ ಭಾಷೆಯನ್ನು ಬಳಸಬಹುದು.

- ಆಡಳಿತಾತ್ಮಕ ಕಾರಣಗಳಿಗಾಗಿ ಇಂಗ್ಲಿಷ್‌ ಭಾಷೆಯನ್ನು ಬಳಸುವುದು ಅನಿವಾರ್ಯವಾಗಿದ್ದಲ್ಲಿ ಅಥವಾ ವೈಜ್ಞಾನಿಕ, ತಾಂತ್ರಿಕ ವ್ಯವಹಾರಗಳಿಗೆ ಸಂಬಧಿಸಿದಂತೆ ಆಂಗ್ಲ ಭಾಷೆಯನ್ನು ಬಳಸಬಹುದು.

ರಾಜಭಾಷಾ ಆಯೋಗ ರಚನೆಗೆ ಸೂಚನೆ

- ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನಾ ಇಲಾಖೆಯ ನಿವೃತ್ತ ಕಾರ್ಯದರ್ಶಿಯು ಅಧ್ಯಕ್ಷರಾಗಿ, ಭಾಷಾಂತರ ಜ್ಞಾನವುಳ್ಳ ಮತ್ತು ಕಾನೂನು ಪದವಿ ಪಡೆದಿರುವ ಒಬ್ಬರು ನಿವೃತ್ತ ಅಧಿಕಾರಿ ಅಥವಾ ನಿವೃತ್ತ ಪ್ರಾಧ್ಯಾಪಕ, ಉಪನಿರ್ದೇಶಕ ಹುದ್ದೆಗಿಂತ ಕಡಿಮೆಯಿಲ್ಲದ ಭಾಆಂತ ಇಲಾಖೆಯ ಒಬ್ಬ ನಿವೃತ್ತ ಅಧಿಕಾರಿಯು ಸದಸ್ಯರಾಗಿ ಮತ್ತು ಭಾಷಾಂತ ಇಲಾಖೆಯ ಅಪಾರ ನಿರ್ದೇಶಕರು ಸದಸ್ಯ ಕಾರ್ಯದರ್ಶಿಯಾಗಿ ಉಳ್ಳ ರಾಜಾಭಾಷಾ ಆಯೋಗ ರಚಿಸಬೇಕು.

- ಜಾರಿ ಅಧಿಕಾರಿಗಳ ನಿಯೋಜನೆ

- ಅಧಿಕೃತ ಭಾಷಾ ಜಾರಿ ನಿರ್ದೇಶನಾಲಯ.- ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯವು, ಅಧಿಕೃತ ಭಾಷಾ ಜಾರಿ ನಿರ್ದೇಶನಾಲಯವೂ ಸಹ ಆಗಿರತಕ್ಕದ್ದು.

ಶಿಕ್ಷಣದಲ್ಲಿ ಕನ್ನಡ ಭಾಷೆ

- ರಾಜ್ಯದಲ್ಲಿರುವ ಎಲ್ಲಾ ಶಾಲೆಗಳಲ್ಲಿನ ಶಿಕ್ಷಣಕ್ಕೆ ಸಂಬಂಧಿಸಿದಂತೆ ಕನ್ನಡ ಭಾಷಾ ಕಲಿಕಾ ಅಧಿನಿಯಮ, 2015 (2015ರ ಕರ್ನಾಟಕ ಅಧಿನಿಯಮ ಸಂಖ್ಯೆ 22)ರ 'ಉಪಬಂಧಗಳ ಅನ್ವಯವಾಗುವುದು ಮುಂದುವರೆಯುತ್ತವೆ.

- ಉನ್ನತ ಶಿಕ್ಷಣ, ತಾಂತ್ರಿಕ ಶಿಕ್ಷಣ ಹಾಗೂ ವೃತ್ತಿ ಶಿಕ್ಷಣದಲ್ಲಿ ಕನ್ನಡ ಭಾಷೆ.- (1) ನೂತನ ಶಿಕ್ಷಣ ನೀತಿಯ ಅನುಸಾರ, ಉನ್ನತ, ತಾಂತ್ರಿಕ, ವೃತ್ತಿ ಶಿಕ್ಷಣ ವ್ಯಾಸಂಗದಲ್ಲಿ ಸಂಬಂಧಪಟ್ಟ ವಿಶ್ವವಿದ್ಯಾಲಯಗಳು ನಿಯಮಿಸಲಾದಂತೆ ವೃತ್ತಿಪರ ವ್ಯಾಸಂಗಕ್ಕೆ ಸಂಬಂಧಿಸಿದ ಕನ್ನಡ ಭಾಷೆಯ ಪ್ರಾಯೋಗಿಕ ಹಾಗೂ ಕಾರ್ಯಾತ್ಮಕ ಜ್ಞಾನವನ್ನು ವಿದ್ಯಾರ್ಥಿಗಳಿಗೆ ಬೋಧಿಸತಕ್ಕದ್ದು.

- ಎಸ್.ಎಸ್.ಎಲ್.ಸಿ ಮಟ್ಟದಲ್ಲಿ ಕನ್ನಡವನ್ನು ಒಂದು ಭಾಷೆಯಾಗಿ ಕಲಿಯದ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾನಿಲಯದ ಪಠ್ಯಕ್ರಮದಲ್ಲಿ ನಿಯಮಿಸಲಾದಂತೆ ಮೂಲ ಕನ್ನಡ ಭಾಷೆಯನ್ನೂ ಸಹ ಒಂದು ವಿಷಯವಾಗಿ ಬೋಧಿಸತಕ್ಕದ್ದು.

- ಉನ್ನತ, ತಾಂತ್ರಿಕ ಹಾಗೂ ವೃತ್ತಿಪರ ಶಿಕ್ಷಣದಲ್ಲಿ ಮೀಸಲಾತಿ. ಕರ್ನಾಟಕದಲ್ಲಿ ಅಥವಾ ಇತರ ಯಾವುದೇ ರಾಜ್ಯದಲ್ಲಿ ಕನ್ನಡ ಮಾಧ್ಯಮದಲ್ಲಿ 1ನೇ ತರಗತಿಯಿಂದ 10ನೇ ತರಗತಿಯವರೆಗೆ ಓದಿದ ವಿದ್ಯಾರ್ಥಿಗಳಿಗೆ ಉನ್ನತ ತಾಂತ್ರಿಕ ಹಾಗೂ ವೃತ್ತಿಪರ ಶಿಕ್ಷಣದಲ್ಲಿ ರಾಜ್ಯ ಸರ್ಕಾರವು ಅಧಿಸೂಚಿಸಬಹುದಾದಂಥ ಶೇಕಡಾವಾರು ಪ್ರಮಾಣದಲ್ಲಿ ಮೀಸಲಾತಿಯನ್ನು ಒದಗಿಸತಕ್ಕದ್ದು.

ಉದ್ಯೋಗದಲ್ಲಿ ಕನ್ನಡ ಭಾಷೆ

- ರಾಜ್ಯ ಸರ್ಕಾರ, ಸ್ಥಳೀಯ ಪ್ರಾಧಿಕಾರಗಳು, ಮಂಡಳಿಗಳು, ನಿಗಮಗಳು ಮತ್ತು ರಾಜ್ಯ ಸರ್ಕಾರದ ಶಾಸನಬದ್ಧ ಅಥವಾ ಶಾಸನಬದವಲ್ಲದ ನಿಕಾಯಗಳು, ಸಹಕಾರಿ ಸಂಘಗಳು ಹಾಗೂ ಸಂಸ್ಥೆಗಳಲ್ಲಿ ಉದ್ಯೋಗ ಪಡೆಯುವುದಕ್ಕಾಗಿ ಕನ್ನಡ ಭಾಷಾಜ್ಞಾನ ಅವಶ್ಯಕ. ರಾಜ್ಯ ಸರ್ಕಾರಿ ಉದ್ಯೋಗ ಅಥವಾ ರಾಜ್ಯ ಸರ್ಕಾರದ ಯಾವುದೇ ಸ್ಥಳೀಯ ಪ್ರಾಧಿಕಾರಗಳು, ಮಂಡಳಿಗಳು, ನಿಗಮಗಳು, ಶಾಸನಬದ ಅಥವಾ ಶಾಸನಬದ್ಧವಲ್ಲದ ನಿಕಾಯಗಳು ಅಥವಾ ನೋಂದಾಯಿತ ಸಹಕಾರ ಸಂಘಗಳು ಹಾಗೂ ಇತರ ಸಂಸ್ಥೆಗಳಲ್ಲಿ ಉದ್ಯೋಗವನ್ನು ಕೋರುವ ಪ್ರತಿಯೊಬ್ಬ ವ್ಯಕ್ತಿಯು ನಿಯಮಿಸಿದ ಇತರ ವಿದ್ಯಾರ್ಹತೆಗಳು ಅಥವಾ ಷರತ್ತುಗಳ ಜೊತೆಗೆ ಕರ್ನಾಟಕ ಲೋಕಸೇವಾ ಆಯೋಗ ಅಥವಾ ಈ ಬಗ್ಗೆ ಸರ್ಕಾರವು ಅಧಿಸೂಚಿಸಿದ ಯಾವುದೇ ಪ್ರಾಧಿಕಾರವು ನಡೆಸುವ, 10ನೇ ತರಗತಿ ಅಥವಾ ಎಸ್.ಎಸ್.ಎಲ್.ಸಿ.ಯ ಪಥಮ ಭಾಷೆ ಅಥವಾ ದ್ವಿತೀಯ ಭಾಷೆಗ ತತ್ಸಮಾನವಾದ ಕನ್ನಡ ಭಾಷಾ ಪರೀಕ್ಷೆಯಲ್ಲಿ ಉತ್ತೀರ್ಣನಾಗತಕ್ಕದ್ದು

ಯಾವುದೇ ವ್ಯಕ್ತಿಯು ಎಸ್.ಎಸ್.ಎಲ್.ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಕನ್ನಡ ಭಾಷೆಯನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯನ್ನಾಗಿ ತೆಗೆದುಕೊಂಡು ಉತ್ತೀರ್ಣರಾಗಿದ್ದರೆ, ಅಂಥ ಕನ್ನಡ ಪರೀಕ್ಷೆಯಿಂದ ವಿನಾಯಿತಿಯನ್ನು ನೀಡಿಲಾಗುವುದು.

ನ್ಯಾಯಾಲಯಗಳಲ್ಲಿ ಕನ್ನಡ ಭಾಷೆ.

- ಜಿಲ್ಲಾ ನ್ಯಾಯಾಲಯಗಳು ಅಥವಾ ಅಧಿವಿಚಾರಣಾ ನ್ಯಾಯಾಲಯಗಳು ಸಂದರ್ಭಾನುಸಾರ ಮತ್ತು ನ್ಯಾಯಾಧಿಕರಣಗಳು ತಮ್ಮ ಕಲಾಪಗಳನ್ನು ಕಡ್ಡಾಯವಾಗಿ ಕನ್ನಡದಲ್ಲಿ ನಡೆಸತಕ್ಕದ್ದು ಹಾಗೂ ಆದೇಶಗಳು ಮತ್ತು ತೀರ್ಪುಗಳನ್ನು ಕನ್ನಡ ಭಾಷೆಯಲ್ಲಿ ಘೋಷಿಸತಕ್ಕದ್ದು. ಅಂಥ ಯಾವುದೇ ನ್ಯಾಯಾಲಯ ಅಥವಾ ನ್ಯಾಯಾಧಿಕರಣದ ಪೀಠಾಸೀನ ಅಧಿಕಾರಿಗಳು ಸಾಕ್ಷ್ಯವನ್ನು ಕನ್ನಡ ಭಾಷೆಯಲ್ಲಿ ದಾಖಲಿಸುವಾಗ ಅಗತ್ಯವಿರುವ ಕಡೆಗಳಲ್ಲಿ, ಅಂಗ ಪದಗಳು ಅಥವಾ ಪದಪುಂಜಗಳನ್ನು ಬಳಸಬಹುದು: ಮತ್ತು ಉಚ್ಚ ನ್ಯಾಯಾಲಯವು ಸಾಮಾನ್ಯ ಅಥವಾ ವಿಶೇಷ ಆದೇಶದ ಮೂಲಕ ಆಂಗ್ಲ ಭಾಷೆಯಲ್ಲಿ ಸಾಕ್ಷ್ಯವನ್ನು ದಾಖಲಿಸಲು ಅಧಿಕಾರಿಗಳಿಗೆ ಅನುಮತಿಯನ್ನು ನೀಡಹುದು. (2) ಇತರ ಯಾವುದೇ ಅಧಿನಿಯಮದಲ್ಲಿ ಏನೇ ಒಳಗೊಂಡಿದ್ದರೂ, ರಾಜ್ಯ ಸರ್ಕಾರದ ಎಲ್ಲಾ ಅರನಾಯಿಕ ಕಾರ್ಯನಿರ್ವಾಹಕರ ಎಲ್ಲಾ ಆದೇಶಗಳು ಕನ್ನಡದಲ್ಲಿರತಕ್ಕದ್ದು.

ಕನ್ನಡ ಭಾಷೆಯ ವ್ಯಾಪಕ ಬಳಕೆ ಮತ್ತು ಪ್ರಸಾರಕ್ಕಾಗಿ ಕೈಗೊಳ್ಳಬೇಕಾದ ಸಾಮಾನ್ಯ ಕ್ರಮಗಳು

- ರಾಜ್ಯ ಸರ್ಕಾರದ ಇಲಾಖೆಗಳು, ಉದ್ಯಮಗಳು ಅಥವಾ ಸ್ವಾಯತ್ತ ಸಂಸ್ಥೆಗಳು, ಸಹಕಾರ ಮತ್ತು ಸಾರ್ವಜನಿಕ ಉದ್ಯಮಗಳು, ಶೈಕ್ಷಣಿಕ ಸಂಸ್ಥೆಗಳು, ಬ್ಯಾಂಕುಗಳು, ಖಾಸಗಿ ಕೈಗಾರಿಕೆಗಳು, ಮತ್ತು ವಿಶ್ವವಿದ್ಯಾಲಯಗಳ ಫಲಕಗಳಲ್ಲಿರುವ ಹೆಸರುಗಳು, ಮತ್ತು ಸದರಿ ಸಂಸ್ಥೆಗಳಲ್ಲಿ, ಕಾರ್ಯನಿರ್ವಹಿಸುವ ಅಧಿಕಾರಿಗಳ ಹೆಸರು ಮತ್ತು ಪದನಾಮಗಳನ್ನು ಸೂಚಿಸುವ ಫಲಕಗಳು ವುಮುಖವಾಗಿ ಕನ್ನಡದಲ್ಲಿ ಇರತಕ್ಕದ್ದು.

- ರಸ್ತೆಗಳು ಮತ್ತು ಬಡಾವಣೆ ಹೆಸರುಗಳೂ ಸೇರಿದಂತೆ ರಾಜ್ಯದ ವಿವಿಧ ಸರ್ಕಾರಿ ಇಲಾಖೆಗಳ ಮತ್ತು ಸ್ಥಳೀಯ ಪ್ರಾಧಿಕಾರಗಳ ಮೇಲ್ವಿಚಾರಣೆಯಲ್ಲಿ ಹಾಕಲಾಗಿರುವ ಫಲಕಗಳ ಮೇಲೆ ಪ್ರದರ್ಶಿಸಲಾಗುವ ವಿವರಗಳು ಪ್ರಮುಖವಾಗಿ ಕನ್ನಡದಲ್ಲಿ ಇರತಕ್ಕದ್ದು.

- ಕರ್ನಾಟಕದಲ್ಲಿ ಸರ್ಕಾರ ಅಥವಾ ಸ್ಥಳೀಯ ಪ್ರಾಧಿಕಾರ ಪ್ರಕಟಣೆಗಾಗಿ ಹೊರಡಿಸಿದ ಎಲ್ಲಾ ಟೆಂಡ‌ರ್ ಅಧಿಸೂಚನೆ, ಜಾಹೀರಾತು, ಅರ್ಜಿ ನಮೂನೆ, ಡಿಜಿಟಲ್ ನಮೂನೆ, ಪ್ರಮಾಣ ಪತ್ರ ಮತ್ತು ಅಧಿಸೂಚನೆಗಳು ಪ್ರಮುಖವಾಗಿ ಕನ್ನಡದಲ್ಲಿ ಇರತಕ್ಕದ್ದು.

- ಸರ್ಕಾರ, ಸ್ಥಳೀಯ ಪ್ರಾಧಿಕಾರ, ಅನುದಾನಿತ, ಅಥವಾ ಅನುದಾನರಹಿತ ಸಂಸ್ಥೆ ನಡೆಸುವ ಕಾರ್ಯಕ್ರಮಗಳ ಕುರಿತ ಕರಪತ್ರ ಬ್ಯಾನರು, ಫ್ಲೆಕ್ಸು, ಎಲೆಕ್ಟ್ರಾನಿಕ್ ಪ್ರದರ್ಶನ ಫಲಕ ಮಾಹಿತಿಗಳು, ನೋಟೀಸುಗಳು ಇತ್ಯಾದಿ ಪ್ರಮುಖವಾಗಿ ಕನ್ನಡದಲ್ಲಿ ಇರತಕ್ಕದ್ದು.

- ಸರ್ಕಾರವು ಕೈಗೊಂಡಂತಹ ಅಥವಾ ಸರ್ಕಾರ ಅಥವಾ ಸಂಬಂಧಿತ ಸಂಸ್ಥೆಗಳು ಅಥವಾ ಸ್ಥಳೀಯ ಪ್ರಾಧಿಕಾರಗಳಿಂದ ಯಾವುದೇ ರೀತಿಯ ಪ್ರತಿಫಲ, ಅನುದಾನ, ರಿಯಾಯಿತಿ ಪಡೆದು ಅನುಷ್ಠಾನಗೊಳಿಸುತ್ತಿರುವ ಯಾವುದೇ ಯೋಜನೆಗೆ ಸಂಬಂಧಿಸಿದ ಫಲಕ, ಜಾಹೀರಾತು, ರಸೀದಿ, ಬಿಲ್ಲು, ನೋಟೀಸುಗಳು ಇತ್ಯಾದಿ ಪ್ರಮುಖವಾಗಿ ಕನ್ನಡದಲ್ಲಿ ಇರತಕ್ಕದ್ದು.

- ಸರ್ಕಾರದ ಅಥವಾ ಸ್ಥಳೀಯ ಪ್ರಾಧಿಕಾರಗಳ ಅನುಮೋದನೆ ಮತ್ತು ಮಂಜೂರಾತಿಯೊಂದಿಗೆ ಕಾರ್ಯನಿರ್ವಹಿಸುತ್ತಿರುವ ವಾಣಿಜ್ಯ, ಕೈಗಾರಿಕೆ ಮತ್ತು ವ್ಯಾಪಾರ ಸಂಸ್ಥೆ, ನ್ಯಾಸಗಳು, ಸಮಾಲೋಚನಾ ಕೇಂದ್ರಗಳು, ಆಸ್ಪತ್ರೆಗಳು, ಪುಯೋಗಾಲಯಗಳು, ಮನೋರಂಜನಾ ಕೇಂದ್ರಗಳು ಮತ್ತು ಹೋಟೆಲ್ ಮುಂತಾದವುಗಳ ಹೆಸರನ್ನು ಪುದರ್ಶಿಸುವ ಫಲಕಗಳ ಮೇಲಿನ ಅರ್ಧ ಭಾಗವು ಕನ್ನಡದಲ್ಲಿ ಇರತಕ್ಕದ್ದು ಮತ್ತು ಕಳಗಿನ ಅರ್ಧ ಭಾಗವು ಬೇರೆ ಯಾವುದೇ ಭಾಷೆಯಲ್ಲಿ ಇರಬಹುದು.

- ರಾಜ್ಯದೊಳಗೆ ತಯಾರಿಸಿದ ಮತ್ತು ಮಾರಾಟವಾಗುವ ಎಲ್ಲಾ ಕೈಗಾರಿಕಾ ಮತ್ತು ಇತರ ಗ್ರಾಹಕ ಉತ್ಪನ್ನಗಳ ಹೆಸರು ಮತ್ತು ಅವುಗಳ ಬಳಕೆಯ ಕುರಿತಾದ ನಿರ್ದೇಶನಗಳು ಯಾವುದಾದ ಇತರ ಭಾಷೆಯ ಜೊತೆಗೆ ಕನ್ನಡದಲ್ಲಿ ಇರತಕ್ಕದ್ದು.

- ರಾಜ್ಯದಲ್ಲಿ ಸಾರ್ವಜನಿಕರ ಮಾಹಿತಿಗಾಗಿ ಪುಕಟಿಸಲಾದ ಜಾಹೀರಾತು ಮತ್ತು ಸೂಚನೆಗಳನ್ನು ಪ್ರದರ್ಶಿಸುವ ಎಲ್ಲಾ ಫಲಕಗಳಲ್ಲಿ ವಿಷಯಗಳ ನಿಗದಿತ ಶೇಕಡಾವಾರು ಪ್ರಮಾಣವು ಕನ್ನಡ ಭಾಷೆಯಲ್ಲಿರತಕ್ಕದ್ದು. ಜಾಹೀರಾತುಗಳ ವರ್ಗೀಕರಣ ಮತ್ತು ಕನ್ನಡದಲ್ಲಿ ಪುದರ್ಶಿಸಬೇಕಾದ ಜಾಹೀರಾತು ವಿಷಯಗಳ ಶೇಕಡಾವಾರು ಪ್ರಮಾಣವು ರಾಜ್ಯ ಸರ್ಕಾರದಿಂದ ನಿಗದಿಪಡಿಸಿದಂತೆ ಇರತಕ್ಕದ್ದು,

- ರಾಜ್ಯದೊಳಗಿನ 100ಕ್ಕಿಂತಲೂ ಹೆಚ್ಚಿನ ಉದ್ಯೋಗಿಗಳನ್ನು ಹೊಂದಿರುವ ರಾಜ್ಯ ಮತ್ತು ಕೇಂದ್ರ ಸರ್ಕಾರದ ಒಡೆತನದ ಪ್ರತಿಯೊಂದು ಕೈಗಾರಿಕಾ ಸಂಸ್ಥೆ, ಸಾರ್ವಜನಿಕ ವಲಯ ಉದ್ಯಮ, ಬ್ಯಾಂಕ್ ಮತ್ತು ಖಾಸಗಿ ಕೈಗಾರಿಕೆಗಳು

- ಸಂಸ್ಥೆಯ ದಿನನಿತ್ಯದ ಕಾರ್ಯ ಅಥವಾ ಪ್ರಕಾರ್ಯಗಳ ಹಾಗೂ ನಿಯಮಿಸಬಹುದಾದಂಥ ಇತರ ಪ್ರಕಾರ್ಯಗಳ ನಿರ್ವಹಣೆಯಲ್ಲಿ ಕನ್ನಡ ಭಾಷೆಯ ಬಳಕೆಯ ಉದ್ದೇಶಕ್ಕಾಗಿ ಕನ್ನಡ ಕೋಶ'ವನ್ನು ಸ್ನಾಪಿಸತಕ್ಕದ್ದು ಇದರ ಮುಖ್ಯಸ್ಥ ಕನ್ನಡ ಜ್ಞಾನವನ್ನು ಹೊಂದಿರುವ ಸಂಸ್ಥೆಯ ಹಿರಿಯ ಉದ್ಯೋಗಿಯಾಗಿರಬೇಕು.

- ಕನ್ನಡ ಭಾಷೆ ಮಾತನಾಡಲು ಬಾರದಿರುವ ಉದ್ಯೋಗಿಗಳಿಗಾಗಿ ವ್ಯವಹಾರಿಕ ಕನ್ನಡ ಭಾಷೆ ಪರಿಚಯಿಸಲು "ಕನ್ನಡ ಕಲಿಕಾ ಘಟಕ" (ಪ್ರಾಥಮಿಕ ಕನ್ನಡ ಬೋಧನಾ ಘಟಕ) ವನ್ನು ಸ್ಥಾಪಿಸತಕ್ಕದು ಇದಕ್ಕಾಗಿ ಬೋಧಕ ಸಿಂದಿ ಮತ್ತು ಕಲಿಕಾ ಸಾಮಗ್ರಿಯನ್ನು ಒದಗಿಸತಕ್ಕದು.

- ಕರ್ನಾಟಕ ರಾಜ್ಯದೊಳಗಿನ ಬ್ಯಾಂಕುಗಳಲ್ಲಿ ಮತ್ತು ಇತರ ಹಣಕಾಸು ಸಂಸ್ಥೆಗಳಲ್ಲಿ ಉದ್ಯೋಗಿಯಾಗಿರುವ ಪುತಿಯೊಬ್ಬ ವ್ಯಕ್ತಿಯು ಸಾರ್ವಜನಿಕರೊಂದಿಗಿನ ತನ್ನ ಎಲ್ಲಾ ಸಂಪರ್ಕ ಹಾಗೂ ಪತ್ರ ವ್ಯವಹಾರದಲ್ಲಿ ಕನ್ನಡ ಭಾಷೆಯನ್ನು ಬಳಸತಕ್ಕದ್ದು.

- ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕನ್ನಡ ಭಾಷೆಯ ಬಳಕೆಗಾಗಿ ಕೈಗೊಳ್ಳಬೇಕಾದ ಕ್ರಮಗಳು. (1) ಇ-ಆಡಳಿತ ಇಲಾಖೆಯು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕನ್ನಡ ಭಾಷೆಯ ಸಮರ್ಥ ಬಳಕೆಗಾಗಿ ಮುಕ್ತ ಮೂಲ ತಂತ್ರಾಂಶ ಮತ್ತು ಪರಿಕರಗಳನ್ನು ಅಭಿವೃದ್ಧಿಪಡಿಸತಕ್ಕದ್ದು

- ಸರ್ಕಾರದ ವಿವಿಧ ಇಲಾಖೆಗಳ, ಸ್ಥಳೀಯ ಪ್ರಾಧಿಕಾರಗಳ, ಅರ-ಸರ್ಕಾರಿ ಸಂಸ್ಥೆಗಳ, ಸಾರ್ವಜನಿಕ ವಲಯದ ಉದ್ಯಮಗಳ, ಸ್ವಾಯತ್ತ ಸಂಸ್ಥೆಗಳ, ಸಹಕಾರ ಸಂಘ ಇತ್ಯಾದಿಗಳ ಜಾಲತಾಣಗಳಲ್ಲಿ ಮಾಹಿತಿಯನ್ನು ಯುವ ಕೋಡ್ ಅಥವಾ ಕಾಲಕಾಲದಲ್ಲಿ ಲಭ್ಯವಿರುವ ತಂತ್ರಜ್ಞಾನದಲ್ಲಿ, ಕನ್ನಡದಲ್ಲಿಯೂ ಲಭ್ಯವಾಗುವಂತೆ ಮಾಡತಕ್ಕದ್ದು, ಮತ್ತು ಅದರೊಂದಿಗೆ ಬಳಸಲಾಗುವ ಯಾವುದೇ ಭಾಷೆಯನ್ನು ಆಯ್ಕೆ ಮಾಡಿಕೊಳ್ಳಲು ಸಾಧ್ಯವಾಗುವಂತೆ ಜಾಲತಾಣವನ್ನು ಮಾರ್ಪಾಡು ಮಾಡತಕ್ಕದ್ದು. (3) ಸರ್ಕಾರಿ ಇಲಾಖೆಗಳಲ್ಲಿ ಅನುಷ್ಠಾನಗೊಳಿಸುತ್ತಿರುವ ಇ-ಟೆಂಡರು ಮತ್ತು ಇ-ಆಡಳಿತ ಯೋಜನೆಗಳಲ್ಲಿ ಕನ್ನಡದ ಬಳಕೆಗಾಗಿ ಸೌಲಭ್ಯವನ್ನು ಸಹ ಲಭ್ಯವಿರುವಂತೆ ಮಾಡತಕ್ಕದ್ದು.

- ಸರ್ಕಾರ ಮತ್ತು ಸ್ಥಳೀಯ ಪ್ರಾಧಿಕಾರಗಳು ಅಭಿವೃದ್ಧಿಪಡಿಸಿದ ಎಲ್ಲಾ ವಿದ್ಯುನ್ಮಾನ (ಎಲೆಕ್ಟ್ರಾನಿಕ್) ಅನ್ವಯಿಕೆಗಳು ಕನ್ನಡದಲ್ಲಿಯೂ ಇರತಕ್ಕದ್ದು ಎಲ್ಲಾ ವಿದ್ಯುನ್ಮಾನ ಅರ್ಜಿ ನಮೂನೆಗಳು, ಸಂದೇಶಗಳು, ಪತ್ರ ಮುಂತಾದವುಗಳು ಸಹ ಕನ್ನಡದಲ್ಲಿ ಇರತಕ್ಕದ್ದು.

- ಕನ್ನಡ ಭಾಷೆಯ ಅಭಿವೃದ್ಧಿಗೆ ಪ್ರೋತ್ಸಾಹಕಗಳು. ಇ-ಆಡಳಿತ ಇಲಾಖೆಯಿಂದ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕನ್ನಡ ಭಾಷೆಯ ಪರಿಣಾಮಕಾರಿ ಅಭಿವೃದ್ಧಿಗಾಗಿ ಸರ್ಕಾರಕ, ಸೃಜನಾತ್ಮಕ ಸಲಹೆಗಳನ್ನು ನೀಡುವ ವ್ಯಕ್ತಿಗಳಿಗೆ ಪ್ರೋತ್ಸಾಹವನ್ನು ನೀಡಲು ಯೋಜನೆಯನ್ನು ರೂಪಿಸತಕ್ಕದ್ದು.

- ವಿನಾಯಿತಿ ಮತ್ತು ತೆರಿಗೆ ರಿಯಾಯತಿ ಅಥವಾ ತೆರಿಗೆ ಮುಂದೂಡಿಕೆ ಪಡೆಯುವ ಹಕ್ಕು.. (1) ಯಾವುದೇ ಖಾಸಗಿ ಉದ್ಯಮ, ಕಾರ್ಯಸಂಸ್ಥೆ ಅಥವಾ ಸಂಸ್ಥೆಯು, ರಾಜ್ಯ ಸರ್ಕಾರವು ಅಧಿಸೂಚಿಸಿದ ಕೈಗಾರಿಕಾ ನೀತಿಯ ಅನುಸಾರವಾಗಿ ಕನ್ನಡಿಗರಿಗೆ ನಿಗದಿಪಡಿಸಿದ ಶೇಕಡಾವಾರು ಪ್ರಮಾಣಕ್ಕಿಂತ ಕಡಿಮೆಯಲ್ಲದ ಮೀಸಲಾತಿಯನ್ನು ಕಲ್ಪಿಸಿದ ಹೊರತು, ಭೂ-ರಿಯಾಯಿತಿ, ಯಾವುದೇ ಇತರ ವಿನಾಯಿತಿ ಅಥವಾ ತೆರಿಗೆ ರಿಯಾಯಿತಿ ಅಥವಾ ತೆರಿಗೆ ಮುಂದೂಡಿಕೆಯನ್ನು ಅಥವಾ ಯಾವುದೇ ಬಗೆಯ ಸಹಾಯಾನುದಾನವನ್ನು ಪಡೆಯಲು ಹಕ್ಕುಳ್ಳವರಾಗಿರತಕ್ಕದ್ದಲ್ಲ.

- ಉದ್ಯೋಗದಲ್ಲಿ, ಕನ್ನಡಿಗರಿಗೆ ಮೀಸಲಾತಿ ನೀಡುವುದಕ್ಕಾಗಿ ಗೊತ್ತುಪಡಿಸಿದ ರಾಜ್ಯದ ಕೈಗಾರಿಕಾ ನೀತಿಯನ್ನು ಪಾಲಿಸುವುದಕ್ಕೆ ಬದ್ಧವಾದ ಯಾವುದೇ ಉದ್ಯಮವು ತನ್ನ ಬಾಧ್ಯತೆಯನ್ನು ಈಡೇರಿಸಲು ವಿಫಲವಾದಲ್ಲಿ, ಎಲ್ಲಾ ಸೌಲಭ್ಯಗಳನ್ನು ಎಂದರೆ, ವಿನಾಯಿತಿಗಳು ಮತ್ತು ತೆರಿಗೆ ರಿಯಾಯಿತಿ ಅಥವಾ ತೆರಿಗೆ ಮುಂದೂಡಿಕೆ ಅಥವಾ ಯಾವುದೇ ರೀತಿಯ ಸಹಾಯಾನುದಾನವನ್ನು ನಿಲ್ಲಿಸಲಾಗುತ್ತದೆ.

ಹೀಗೆ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕಕ್ಕೆ ಅಂಗೀಕಾರದಲ್ಲಿ ಹಲವು ಅಂಶಗಳಿದ್ದು, ಕನ್ನಡಿಗರಿಗೆ ನಿಜಕ್ಕೂ ಶುಭಸುದ್ದಿಯಾಗಿದೆ.