ಕನ್ನಡ ಸುದ್ದಿ  /  Karnataka  /  Kannada Mandatory: Amid Hindi Diwas Row Cm Bommai To Make Kannada Mandatory In Assembly

Kannada mandatory: ಕನ್ನಡ ಕಡ್ಡಾಯಕ್ಕೆ ಕಾನೂನು ಎಂದ ಸಿಎಂ ಬೊಮ್ಮಾಯಿ

ರಾಜ್ಯದಲ್ಲಿ ಕನ್ನಡವೇ ಉಸಿರು. ಅದಕ್ಕೇ ಆದ್ಯತೆ. ಅದನ್ನು ಕಡ್ಡಾಯವಾಗಿ ಬಳಸುವುದಕ್ಕೆ ಅಗತ್ಯ ಕಾನೂನನ್ನು ಇದೇ ಅಧಿವೇಶನದಲ್ಲಿ ಮಂಡಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬುಧವಾರ ಸದನಕ್ಕೆ ತಿಳಿಸಿದರು. ಹಿಂದಿ ದಿವಸ್‌ ಆಚರಣೆ ವಿಚಾರವಾಗಿ ಜೆಡಿಎಸ್‌ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ ವೇಳೆ ಸಿಎಂ ಬೊಮ್ಮಾಯಿ ಈ ವಿಚಾರ ಸದನಕ್ಕೆ ತಿಳಿಸಿದರು.

ಬೆಂಗಳೂರಿನ ವಿಧಾನಸೌಧದಲ್ಲಿ ರಾಜ್ಯ ವಿಧಾನಸಭೆಯ ಮುಂಗಾರು ಅಧಿವೇಶನದ ಮೊದಲ ದಿನ ಸೋಮವಾರ ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ. (Agencies)
ಬೆಂಗಳೂರಿನ ವಿಧಾನಸೌಧದಲ್ಲಿ ರಾಜ್ಯ ವಿಧಾನಸಭೆಯ ಮುಂಗಾರು ಅಧಿವೇಶನದ ಮೊದಲ ದಿನ ಸೋಮವಾರ ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ. (Agencies) (HT_PRINT)

ಬೆಂಗಳೂರು: ರಾಜ್ಯದಲ್ಲಿ ಕನ್ನಡ ಬಳಕೆಯನ್ನು ಹೆಚ್ಚಿಸುವ ಸಲುವಾಗಿ ಕನ್ನಡ ಕಡ್ಡಾಯ ಮಾಡುವಂತಹ ಕಾನೂನನ್ನು ಸರ್ಕಾರ ಜಾರಿಗೊಳಿಸಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬುಧವಾ ಹೇಳಿದರು.

ಅವರು ವಿಧಾನಸಭೆಯಲ್ಲಿ ಈ ವಿಚಾರ ತಿಳಿಸಿದ್ದು, ಕನ್ನಡ ಬಳಕೆಯನ್ನು ಕಡ್ಡಾಯಗೊಳಿಸುವ ಅಗತ್ಯವಿದೆ. ನಮ್ಮ ಪಕ್ಷ ನಮ್ಮ ನೆಲ, ಜಲ ಮತ್ತು ಭಾಷೆಯನ್ನು ರಾಜಕೀಯಕ್ಕೆ ಹೊರತಾಗಿ ಗೌರವಿಸುತ್ತದೆ. ಅದನ್ನು ಬಿಟ್ಟುಕೊಡಲು ಸಾಧ್ಯವಿಲ್ಲ. ರಾಜ್ಯ ಸರ್ಕಾರ ಕನ್ನಡ ಬಳಕೆ ಕಡ್ಡಾಯಗೊಳಿಸಲು ಬದ್ಧವಾಗಿದೆ.

ಹಿಂದಿ ದಿವಸ್ ಆಚರಣೆ ಬಗ್ಗೆ ಸದನದಲ್ಲಿ ಜೆಡಿಎಸ್ ಶಾಸಕರು ಪ್ರಸ್ತಾಪಿಸಿದ ವೇಳೆ ಮಧ್ಯ ಪ್ರವೇಶಿಸಿದ ಮುಖ್ಯಮಂತ್ರಿ, ರಾಜ್ಯದಲ್ಲಿ ಕನ್ನಡ ಅಗ್ರಮಾನ್ಯ ಭಾಷೆಯಾಗಿ ಬಳಕೆಯಾಗಬೇಕು. ಇದುವರೆಗೂ ಕನ್ನಡ ಕಡ್ಡಾಯಗೊಳಿಸಲು ಕಾನೂನು ಬಲ ಇರಲಿಲ್ಲ. ಹೀಗಾಗಿ ಇದೇ ಅವೇಶನದಲ್ಲಿ ಕನ್ನಡ ಕಡ್ಡಾಯಗೊಳಿಸಲು ವಿಧೇಯಕವನ್ನು ತರಲಾಗುವುದು ಎಂದು ಹೇಳಿದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹಾಗೂ ಬೇರೆ ಬೇರೆ ಸಮಿತಿಗಳು ಇದ್ದರೂ ಕನ್ನಡ ಕಡ್ಡಾಯಗೊಳಿಸುವಂತಹ ಕಾನೂನು ಬಲ ಅವುಗಳಿಗೆ ಇಲ್ಲ. ಇನ್ನು ಮುಂದೆ ರಾಜ್ಯದಲ್ಲಿ ಅನ್ಯಭಾಷಿಗರಿಗೂ ಕನ್ನಡ ಕಲಿಯುವುದು ಅನಿವಾರ್ಯವಾಗಲಿದೆ. ಅದಕ್ಕೆ ಒತ್ತು ನೀಡುವುದರ ಜತೆಗೆ ಕನ್ನಡ ಕಲಿಯುವಂತೆ ಅವರನ್ನೂ ಒತ್ತಾಯಿಸುತ್ತೇವೆ ಎಂದು ಸಿಎಂ ಹೇಳಿದರು.

ಗಮನಾರ್ಹ ವಿಚಾರ ಎಂದರೆ ಇಂದು ದೇಶಾದ್ಯಂತ ಹಿಂದಿ ದಿನ ಆಚರಿಸಲ್ಪಡುತ್ತಿದೆ. ದೇಶಾದ್ಯಂತ ಹಿಂದಿ ಭಾಷೆಯನ್ನು ಹೇರಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂಬ ಆರೋಪ ಇಂದು ನಿನ್ನೆಯದಲ್ಲ.

ಹಿಂದಿ ದಿನ ಆಚರಣೆ ಇಂದು ರಾಜ್ಯದಲ್ಲಿ ಸುದ್ದಿಯಾಗಲು ಕಾರಣ ಜೆಡಿಎಸ್‌ ನಾಯಕ, ಮಾಜಿ ಸಿಎಂ ಎಚ್‌.ಡಿ.ಕುಮಾರ ಸ್ವಾಮಿ ಅವರು ನೀಡಿದ ಹೇಳಿಕೆ. ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದು, ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ರಾಜ್ಯದ ತೆರಿಗೆದಾರರ ಹಣ ಬಳಸಿಕೊಂಡು ಹಿಂದಿ ದಿನ ಆಚರಿಸಬಾರದು ಎಂದೂ ಕೇಳಿಕೊಂಡಿದ್ದರು. ಇದಕ್ಕೆ ಪೂರಕವಾಗಿ ಸಿಎಂ ಬೊಮ್ಮಾಯಿ ಅವರು ಇಂದು ಕನ್ನಡ ಕಡ್ಡಾಯಕ್ಕೆ ಕಾನೂನು ಜಾರಿಗೊಳಿಸುವುದಾಗಿ ಹೇಳಿದರು.

ಕಳೆದ ವರ್ಷ ಕರ್ನಾಟಕ ಪರ ಸಂಘಟನೆಗಳು ಹಿಂದಿ ದಿವಸ್‌ಗೆ "ಹಿಂದಿ ಹೇರಿಕೆ" ಎಂದು ಸೋಷಿಯಲ್‌ ಮೀಡಿಯಾಗಳಲ್ಲಿ ತೀವ್ರವಾಗಿ ಪ್ರತಿಭಟಿಸಿದ್ದವು.

ಹಿಂದಿಯ 'ಹೇರಿಕೆ' ಮತ್ತು ಅದನ್ನು ದೇಶದಲ್ಲಿ ಸಾಮಾನ್ಯ ಏಕೀಕರಣ ಭಾಷೆಯಾಗಿ ಸ್ವೀಕರಿಸಬೇಕೇ ಎಂಬ ಬಗ್ಗೆ ಹೊಸ ಚರ್ಚೆಯ ನಡುವೆ ವಿವಾದವು ಉದ್ಭವಿಸಿದೆ. ಈ ಹಿಂದೆ, ಕುಮಾರಸ್ವಾಮಿ ಅವರು ಹಿಂದಿ ದಿವಸ್ ಆಚರಣೆಯನ್ನು ವಿರೋಧಿಸಿ, ʻಅವರ ಮಾತೃಭಾಷೆ ಹಿಂದಿಯಲ್ಲದವರಿಗೆ ಅದರ ಯಾವುದೇ ಅಗತ್ಯವಿಲ್ಲ. ಅದನ್ನು ರದ್ದುಗೊಳಿಸಬೇಕೆಂದು ಒತ್ತಾಯಿಸಿದ್ದರು.

ಈ ವರ್ಷದ ಆರಂಭದಲ್ಲಿ, ಹಿಂದಿ ಭಾಷೆಯ ಬಗ್ಗೆ ಎರಡು ಪ್ರಮುಖ ವಿವಾದಗಳು ಗಮನಸೆಳೆದಿದ್ದವು. ಮೊದಲನೆಯದು ಅಜಯ್ ದೇವಗನ್ ಮತ್ತು ಕಿಚ್ಚ ಸುದೀಪ್ ನಡುವಿನ ಟ್ವಿಟರ್ ಜಗಳ ಮತ್ತು ಎರಡನೆಯದಾಗಿ, ಇಂಗ್ಲಿಷ್‌ಗೆ ಪರ್ಯಾಯವಾಗಿ ಹಿಂದಿಯನ್ನು ಒಪ್ಪಿಕೊಳ್ಳಬೇಕು ಎಂಬ ಅಮಿತ್ ಶಾ ಅವರ ಹೇಳಿಕೆ.

ಇತ್ತೀಚಿನ ಅಂದರೆ, 2011ರ ಜನಗಣತಿಯ ಪ್ರಕಾರ, ಶಾಸ್ತ್ರೀಯ ದ್ರಾವಿಡ ಭಾಷೆ ಕನ್ನಡವನ್ನು 43 ದಶಲಕ್ಷಕ್ಕೂ ಹೆಚ್ಚು ಸ್ಥಳೀಯರು ಮಾತನಾಡುತ್ತಿದ್ದಾರೆ. ಸಂಸ್ಕೃತಿ ಸಚಿವಾಲಯವು ನೇಮಿಸಿದ ಭಾಷಾ ತಜ್ಞರ ಸಮಿತಿಯ ಶಿಫಾರಸುಗಳ ಆಧಾರದ ಮೇಲೆ, ಭಾರತ ಸರ್ಕಾರವು ಕನ್ನಡವನ್ನು ಭಾರತದ ಶಾಸ್ತ್ರೀಯ ಭಾಷೆ ಎಂದು ಘೋಷಿಸಿದೆ.

ಏತನ್ಮಧ್ಯೆ, ಸುಮಾರು 61.5 ಕೋಟಿ ಭಾಷಿಗರನ್ನು ಹೊಂದಿರುವ ಹಿಂದಿ ವಿಶ್ವದ ಮೂರನೇ ಅತಿ ಹೆಚ್ಚು ಮಾತನಾಡುವ ಭಾಷೆಯಾಗಿ ಉಳಿದಿದೆ. ಹಿಂದಿ ಭಾರತದ ರಾಷ್ಟ್ರಭಾಷೆಯೇ ಎಂಬುದು ಮತ್ತೆ ಮತ್ತೆ ಚರ್ಚೆಗೆ ಗ್ರಾಸವಾಗುತ್ತಲೇ ಇದೆ. 1946ರ ಡಿಸೆಂಬರ್‌ನಲ್ಲಿ ಸಂವಿಧಾನ ರಚನಾ ಸಭೆಯು ಮೊದಲ ಬಾರಿಗೆ ಸಭೆ ಸೇರಿದಾಗ, ಸಾಕಷ್ಟು ಚರ್ಚೆ ಮತ್ತು ಚರ್ಚೆಯ ನಂತರ ಸದನದ ಕಲಾಪಗಳನ್ನು ಹಿಂದುಸ್ತಾನಿ ಮತ್ತು ಇಂಗ್ಲಿಷ್‌ನಲ್ಲಿ ನಡೆಸಬೇಕೆಂದು ನಿರ್ಧರಿಸಲಾಯಿತು.

IPL_Entry_Point