ಕನ್ನಡ ಸುದ್ದಿ  /  Karnataka  /  Kannada Sahitya Sammelana 2023: Countdown To 86th Kannada Sahitya Sammelana In Cm S Home District Haveri Check Details Here

Kannada Sahitya Sammelana 2023: ಸಿಎಂ ತವರು ಜಿಲ್ಲೆ ಹಾವೇರಿಯಲ್ಲಿ ಕನ್ನಡ ಹಬ್ಬಕ್ಕೆ ಕ್ಷಣಗಣನೆ; ಕಾರ್ಯಕ್ರಮದ ಸ್ವರೂಪ ಹೀಗಿರಲಿದೆ ನೋಡಿ

Kannada Sahitya Sammelana 2023: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ತವರು ಜಿಲ್ಲೆ ಹಾವೇರಿಯಲ್ಲಿ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ವೇದಿಕೆ ಸಿಂಗಾರ ಕಾರ್ಯ ಅಂತಿಮ ಹಂತದಲ್ಲಿದೆ. ಸಮ್ಮೇಳನ ಸಿದ್ಧತಾ ಕಾರ್ಯದ ವಿವರ ಇಲ್ಲಿದೆ.

86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ
86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ತವರು ಜಿಲ್ಲೆ ಹಾವೇರಿಯಲ್ಲಿ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಭರದ ಸಿದ್ಧತೆ ನಡೆಯುತ್ತಿದೆ. ಹಾವೇರಿ-ಹುಬ್ಬಳ್ಳಿ ರಸ್ತೆಯ ಶ್ರೀ ಅಜ್ಜಯ್ಯ ದೇವಸ್ಥಾನದ ಎದುರು ಈಗಾಗಲೇ ವೇದಿಕೆ ಸಿದ್ಧವಾಗಿದ್ದು, ಅಲಂಕಾರಕ್ಕೆ ಅಂತಿಮ ಸ್ಪರ್ಶ ನೀಡಲಾಗುತ್ತಿದೆ.

ಹಾವೇರಿಯಲ್ಲಿ ಜ. 6ರಿಂದ 8ರವರೆಗೆ ಮೂರು ದಿನ ಸಮ್ಮೇಳನ ನಡೆಯಲಿದ್ದು, ಇಡೀ ನಗರ ಕನ್ನಡ ಬಾವುಟ ಹಾಗೂ ಸಾಹಿತಿಗಳು, ಮಹಾಪುರುಷರ ಕಟೌಟ್‍ಗಳಿಂದ ರಾರಾಜಿಸುತ್ತಿದೆ. ಅಕ್ಷರ ಜಾತ್ರೆಗೆ ಲಕ್ಷಾಂತರ ಜನ ಭೇಟಿ ನೀಡುವ ಸಾಧ್ಯತೆ ಇರುವುದರಿಂದ ಅವರಿಗೆ ಆತಿಥ್ಯ ಮತ್ತು ಕನ್ನಡ ಮನಸ್ಸುಗಳಿಗೆ ಮುದ ನೀಡಲು ಹಲವು ಕಾರ್ಯಕ್ರಮಗಳನ್ನು ಕನ್ನಡ ಸಾಹಿತ್ಯ ಪರಿಷತ್ ಆಯೋಜಿಸಿದೆ. ಕಸಾಪ ರಾಜ್ಯ ಅಧ್ಯಕ್ಷ ಮಹೇಶ್ ಜೋಷಿ ಈಗಾಗಲೇ ರಾಜ್ಯಾದ್ಯಂತ ಸಂಚರಿಸಿ ಪ್ರಚಾರ ಮಾಡಿದ್ದರು.

ಸಮ್ಮೇಳನ ಉದ್ಘಾಟನಾ ಕಾರ್ಯಕ್ರಮದ ಸ್ವರೂಪ ಹೀಗಿರಲಿದೆ..

ಹುತಾತ್ಮ ಮಹದೇವ ಮೈಲಾರ ಮಹಾದ್ವಾರ ನಿಜಶರಣ ಅಂಬಿಗರ ಚೌಡಯ್ಯ ಮಂಟಪದ ಸಮೀಪ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಅರಬೈಲ್ ಶಿವರಾಮ ಹೆಬ್ಬಾರ ಅವರು ಶುಕ್ರವಾರ ಬೆಳಗ್ಗೆ 7 ಗಂಟೆಗೆ ರಾಷ್ಟ್ರಧ್ವಜಾರೋಹಣ ಮಾಡಲಿದ್ದು, ನಾಡೋಜ ಡಾ. ಮಹೇಶ್ ಜೋಷಿ ಅವರು ಪರಿಷತ್‍ನ ಧ್ವಜಾರೋಹಣ ಮಾಡಲಿದ್ದಾರೆ.

ಜಿಲ್ಲಾ ಕಸಾಪ ಅಧ್ಯಕ್ಷ ಲಿಂಗಯ್ಯ ಬಿ. ಹಿರೇಮಠ ನಾಡಧ್ವಜಾರೋಹಣ ಮಾಡಿ ಅಕ್ಷರ ಜಾತ್ರೆಗೆ ಅಧಿಕೃತವಾಗಿ ಚಾಲನೆ ನೀಡಲಿದ್ದಾರೆ. ನಂತರ ಬೆಳಗ್ಗೆ 7.30ಕ್ಕೆ ಸಮ್ಮೇಳನಾಧ್ಯಕ್ಷ ಪದ್ಮಶ್ರೀ ಡಾ. ದೊಡ್ಡರಂಗೇಗೌಡರನ್ನು ಭವ್ಯ ಮೆರವಣಿಗೆಯ ಮೂಲಕ ಬರಮಾಡಿಕೊಳ್ಳುವ ಕಾರ್ಯಕ್ರಮವನ್ನು ಹಾವೇರಿ ನಗರ ಸಭೆ ಅಧ್ಯಕ್ಷ ಸಂಜೀವ ಕುಮಾರ ನೀಲರಗಿ ಉದ್ಘಾಟಿಸಲಿದ್ದಾರೆ.

ಮಾಜಿ ಸಚಿವ ಬಸವರಾಜ ಶಿವಣ್ಣ ಅಧ್ಯಕ್ಷತೆ ವಹಿಸಲಿದ್ದು, ಇದರಲ್ಲಿ ಜಿಲ್ಲಾಕಾರಿ ರಘುನಂದನ ಮೂರ್ತಿ, ಜಿಪಂ ಸಿಇಒ ಮೊಹಮ್ಮದ್ ರೋಷನ್, ಎಸ್‍ಪಿ ಹನುಮಂತರಾಯ ಸೇರಿ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ. ಹಾವೇರಿಯ ಪುರಸಿದ್ದೇಶ್ವರ ದೇವಸ್ಥಾನದಿಂದ ಮೆರವಣಿಗೆ ಹೊರಟು ಬಸ್ ನಿಲ್ದಾಣ, ಆರ್‌ಟಿಒ ಕಚೇರಿ ಮಾರ್ಗವಾಗಿ ಸಮ್ಮೇಳನ ವೇದಿಕೆಯ ಸಮೀಪ ತಲುಪಲಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಂತರ ಬೆಳಗ್ಗೆ 10.30ಕ್ಕೆ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ, ಕುಮಾರಸ್ವಾಮಿ, ಸಚಿವರಾದ ಸುನೀಲ್ ಕುಮಾರ್, ಬಿಸಿ ಪಾಟೀಲ್, ಬಿಸಿ ನಾಗೇಶ್, ಸಂಸದ ಶಿವಕುಮಾರ ಉದಾಸಿ, ಶಾಸಕರಾದ ವಿರೂಪಾಕ್ಷಪ್ಪ ಬಳ್ಳಾರಿ, ಅರುಣಕುಮಾರ ಪೂಜಾರ, ಶ್ರೀನಿವಾಸ ಮಾನೆ, ಪರಿಷತ್ ಸದಸ್ಯರಾದ ಸಂಕನೂರ, ಸಲೀಂ ಅಹಮದ್, ಆರ್. ಶಂಕರ್, ಪ್ರದೀಪ್ ಶೆಟ್ಟರ್ ಸೇರಿ ಹಲವು ಗಣ್ಯರು ಸಮ್ಮೇಳನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಮೈಸೂರು ದಸರಾ ಮಾದರಿ ದೀಪಾಲಂಕಾರ

ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುವ ದಿನಗಳಲ್ಲಿ ಹಾವೇರಿ ನಗರಕ್ಕೆ ದಸರಾ ವೇಳೆ ಮೈಸೂರು ದೀಪಾಲಂಕಾರ ಮಾಡಿದಂತೆ ದೀಪಾಲಂಕಾರ ಇರಲಿದೆ. ಗೊಂದಲ ಸೃಷ್ಟಿಯಾಗದ ಹಾಗೆ, ಕನ್ನಡದ ಹಿರಿಮೆಯನ್ನು ರಾಜ್ಯ, ದೇಶಕ್ಕೆ ತಲುಪಿಸುವ ಪ್ರಯತ್ನ ಮಾಡುತ್ತೇವೆ. ಸಿದ್ಧತೆ ವಿಚಾರದಲ್ಲಿ ಹಲವಾರು ಸಮಿತಿಗಳನ್ನು ರಚಿಸಿ ಪ್ರತ್ಯೇಕ ಜವಾಬ್ದಾರಿ ಹಂಚಿಕೆ ಮಾಡಲಾಗಿದೆ. ಎಲ್ಲವೂ ಸಮನ್ವಯದ ಮೂಲಕ ಯಶಸ್ವಿ ಆಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್‌ ಇತ್ತೀಚೆಗೆ ಹೇಳಿದ್ದರು.

ರಾಜ್ಯದಲ್ಲಿ 2020 ಮತ್ತು 2021ರಲ್ಲಿ ಕೊರೊನಾ ಕಾರಣದಿಂದಾಗಿ ಸಾಹಿತ್ಯ ಸಮ್ಮೇಳನ ನಡೆದಿರಲಿಲ್ಲ. ಕೊರೊನಾ ಒಂದನೇ ಮತ್ತು ಎರಡನೇ ಅಲೆಯು ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ಅವಕಾಶ ನೀಡಿರಲಿಲ್ಲ. 2022ರಲ್ಲಿ ಸಮ್ಮೇಳನ ನಡೆಯಬೇಕಾಗಿತ್ತು. ಆದರೆ ಕಾರಣಾಂತರಗಳಿಂದ ಮುಂದೂಡಲ್ಪಟ್ಟಿತ್ತು.

IPL_Entry_Point