ಕನ್ನಡ ಸುದ್ದಿ  /  Karnataka  /  Kannada Sahitya Sammelana Haveri Invitation Released By Cm Basavaraj Bommai

Kannada Sahitya Sammelana: ಹಾವೇರಿ ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆ ಬಿಡುಗಡೆ, ಜ. 6ರಿಂದ ಕಾರ್ಯಕ್ರಮ, ಎಲ್ಲರಿಗೂ ಸುಸ್ವಾಗತ

ಜನವರಿ 6, 7 ಮತ್ತು 8ರಂದು 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಹಾವೇರಿಯಲ್ಲಿ ನಡೆಯಲಿದೆ.

86ನೇ ಸಾಹಿತ್ಯ ಸಮ್ಮೇಳನದ ಲಾಂಛನ
86ನೇ ಸಾಹಿತ್ಯ ಸಮ್ಮೇಳನದ ಲಾಂಛನ

ಹಾವೇರಿ: 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಹಾವೇರಿಯಲ್ಲಿ 2023ರ ಜನವರಿ 6ರಂದು ಆರಂಭಗೊಳ್ಳಲಿದ್ದು, ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಬಿಡುಗಡೆ ಮಾಡಿದ್ದಾರೆ. ಜನವರಿ 6, 7 ಮತ್ತು 8ರಂದು ಸಮ್ಮೇಳನ ನಡೆಯಲಿದೆ.

"ಸಮ್ಮೇಳನದ ಯಶಸ್ಸಿಗೆ ಎಲ್ಲರೂ ಸಹಕರಿಸಬೇಕು. ಎಲ್ಲೆಡೆ ಕನ್ನಡದ ಕಂಪು ಹರಡಬೇಕು. ಇತರೆ ಸಮ್ಮೇಳನಗಳಿಗೆ ಹೋಲಿಸಿದರೆ ಕನ್ನಡ ಸಾಹಿತ್ಯ ಸಮ್ಮೇಳನದ ಕಂಪೇ ಬೇರೆ. ಕನ್ಡ ಭಾಷೆ, ನೆಲಜಲ, ಜನರನ್ನು ಯಾರಿಗೂ ಮುಟ್ಟಲು ಸಾಧ್ಯವಿಲ್ಲ. ಕನ್ನಡ ನಾಡು ಶ್ರೀಮಂತ ನಾಡುʼʼ ಎಂದು ಈ ಸಂದರ್ಭದಲ್ಲಿ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟಿದ್ದಾರೆ.

"ಕನ್ನಡ ಮತ್ತು ಕನ್ನಡಿಗರ ಸಮಸ್ಯೆಗಳನ್ನು 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಚರ್ಚಿಸಿ ಪರಿಹಾರ ಕಂಡುಕೊಳ್ಳಲಾಗುವುದು. ಇದು ಕನ್ನಡಿಗರ ಕಾರ್ಯಕ್ರಮ, ನಮ್ಮೆಲ್ಲರ ಕಾರ್ಯಕ್ರಮ. ಈ ಕಾರ್ಯಕ್ರಮದ ಯಶಸ್ಸಿಗೆ ಎಲ್ಲರೂ ಸಹಕರಿಸಬೇಕುʼʼ ಎಂದು ಸಿಎಂ ಹೇಳಿದ್ದಾರೆ.

ಜನವರಿಯಲ್ಲಿ ನಡೆಯುವ ಈ ಸಮ್ಮೇಳನಕ್ಕೆ ಈಗ ಕೊರೊನಾ ಆತಂಕವೂ ಎದುರಾಗಿದೆ. ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕರೋನಾ ದಿಂದ ತೊಡಕುಂಟಾಗುವುದೇ ಎಂಬ ಪ್ರಶ್ನೆಗೆ ಸಿಎಂ ಬಸವರಾಜ ಬೊಮ್ಮಾಯಿ ಹೀಗೆ ಉತ್ತರಿಸಿದ್ದಾರೆ. "ಸಮ್ಮೇಳನ ಬಯಲು ಪ್ರದೇಶದಲ್ಲಿ ಆಗುವುದರಿಂದ, ತೊಂದರೆಯ ಸಾಧ್ಯತೆ ಇಲ್ಲ. ಆದರೂ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವ ಮಾರ್ಗಸೂಚಿಗಳನ್ನು ಸೂಚಿಸಲಾಗುವುದು" ಎಂದರು.

ಡಿಸೆಂಬರ್‌ 23, 24 ಮತ್ತು 25ರಂದು ಹಾವೇರಿಯಲ್ಲಿ 86ನೇಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ನಡೆಸಲು ಯೋಜಿಸಲಾಗಿತ್ತು. ಆದರೆ, ಆ ದಿನಾಂಕಗಳಂದು ಪೂರ್ವನಿಯೋಜಿತ ಕಾರ್ಯಕ್ರಮಗಳು ಇರುವ ಕಾರಣ ಸಾಹಿತ್ಯ ಸಮ್ಮೇಳನ ಮುಂದೂಡಲಾಗಿತ್ತು.

ಹಾವೇರಿಯಲ್ಲಿ ನಡೆಯಬೇಕಿದ್ದ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ನಾನಾ ಕಾರಣಗಳಿಂದ ಅನೇಕ ಬಾರಿ ಮುಂದೂಡಲಾಗಿದ್ದು, ಈ ದಿನಾಂಕಗಳು ನಿಶ್ಚಿತವಾಗಿದ್ದು, ಮತ್ತೆ ಬದಲಾವಣೆ ಇಲ್ಲವೆಂಬ ತೀರ್ಮಾನವನ್ನು ಸಭೆಯಲ್ಲಿ ಕೈಗೊಳ್ಳಲಾಯಿತು. ಯಾವುದೇ ಕಾರಣಕ್ಕೂ ಈಗ ನಿರ್ಧಾರವಾಗಿರುವ ದಿನಾಂಕಗಳನ್ನು ಬದಲಾಯಿಸಬಾರದು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ ಮಹೇಶ ಜೋಷಿ ಸ್ಪಷ್ಟವಾದ ನಿಲುವನ್ನು ಸಭೆಯಲ್ಲಿ ತೆಗೆದುಕೊಂಡಿದ್ದರು. ಆದರೆ, ಈಗ ಕೊರೊನಾಂತಕ ಎದುರಾಗಿದ್ದು, ಇನ್ನೆರಡು ವಾರದಲ್ಲಿ ಹೊಸ ರೂಲ್ಸ್‌ಗಳನೇದರೂ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ತಡೆ ಒಡ್ಡುವುದೇ ಎಂಬ ಆತಂಕ ಎದುರಾಗಿದೆ.

ಹಾವೇರಿ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಆರಂಭದಿಂದಲೇ ಕೊರೊನಾ ಅಡ್ಡಿಯಾಗಿತ್ತು. ಹೇಗೆಂದರೆ, 2020ರ ಫೆಬ್ರವರಿಯಲ್ಲಿ ಕಲಬುರಗಿಯಲ್ಲಿ ಜರುಗಿದ 85ನೇ ಸಾಹಿತ್ಯ ಸಮ್ಮೇಳನದಲ್ಲಿ 86ನೇ ಸಾಹಿತ್ಯ ಸಮ್ಮೇಳನದ ಆತಿಥ್ಯವನ್ನು ಹಾವೇರಿಗೆ ನೀಡಲಾಗಿತ್ತು. ಅದೇ ವರ್ಷಾಂತ್ಯದಲ್ಲಿ 86ನೇ ಕನ್ನಡ ಸಾಹಿತ್ಯ ಸಮ್ಮೇಳನ ಹಾವೇರಿಯಲ್ಲಿ ನಡೆಯಬೇಕಿತ್ತು. ಆದರೆ, 2020 ಮತ್ತು 2021ರಲ್ಲಿ ಕೊರೊನಾದಿಂದಾಗಿ ಸಾಹಿತ್ಯ ಸಮ್ಮೇಳನ ನಡೆಸಲು ಆಗಿರಲಿಲ್ಲ. ಕೊರೊನಾ ಒಂದನೇ ಮತ್ತು ಎರಡನೇ ಅಲೆಯು ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ಅವಕಾಶ ನೀಡಿರಲಿಲ್ಲ.

ಈ ವರ್ಷದ ದ್ವಿತೀಯಾರ್ಧದಲ್ಲಿ ಕೊರೊನಾಂತಕ ಕಡಿಮೆಯಾಗಿದ್ದರೂ ನಾನಾ ಕಾರಣಗಳಿಂದ ಕಾರ್ಯಕ್ರಮ ಮುಂದೂಡುತ್ತ ಬಂದಿತ್ತು. ಇದೀಗ ಅಂತಿಮವಾಗಿ ಜನವರಿ 2023ರಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ಉದ್ದೇಶಿಸಲಾಗಿದೆ.

IPL_Entry_Point