ಕನ್ನಡ ಸುದ್ದಿ  /  Karnataka  /  Kannada Shala Makkala Habba: Kannada Medium Schools Fostered Activism Among Kannada Students Said Vishweshwar Hegade Kageri

Kannada Shala Makkala habba: ಕನ್ನಡ ನಾಡಿನ ಸಾಧಕರಲ್ಲಿ ಕ್ರಿಯಾಶೀಲತೆ ಬೆಳೆಸಿದ್ದೇ ಕನ್ನಡ ಮಾಧ್ಯಮ ಶಾಲೆಗಳು: ವಿಶ್ವೇಶ್ವರ ಹೆಗಡೆ ಕಾಗೇರಿ

Kannada Shala Makkala habba 2022: ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳು ಕಡಿಮೆ ಇರಬಹುದು. ಆದರೆ ಗುಣಮಟ್ಟ ಇಂದಿಗೂ ಚೆನ್ನಾಗಿಯೇ ಇದೆ ಎಂದು ವಿಧಾನಸಭಾ ಸಭಾಪತಿ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ಕೇಶವ ಸ್ಮೃತಿ ಸಂವರ್ಧನ ಸಮಿತಿ ಮಂಗಳೂರಿನ ಸಂಘನಿಕೇತನದಲ್ಲಿ ಆಯೋಜಿಸಿದ ಎರಡು ದಿನಗಳ ಕನ್ನಡ ಶಾಲಾ ಮಕ್ಕಳ ಹಬ್ಬ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಭಾನುವಾರ ವಿಧಾನಸಭಾ ಸಭಾಪತಿ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿದರು.
ಕೇಶವ ಸ್ಮೃತಿ ಸಂವರ್ಧನ ಸಮಿತಿ ಮಂಗಳೂರಿನ ಸಂಘನಿಕೇತನದಲ್ಲಿ ಆಯೋಜಿಸಿದ ಎರಡು ದಿನಗಳ ಕನ್ನಡ ಶಾಲಾ ಮಕ್ಕಳ ಹಬ್ಬ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಭಾನುವಾರ ವಿಧಾನಸಭಾ ಸಭಾಪತಿ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿದರು.

ಮಂಗಳೂರು: ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳು ಕಡಿಮೆ ಇರಬಹುದು. ಆದರೆ ಗುಣಮಟ್ಟ ಇಂದಿಗೂ ಚೆನ್ನಾಗಿಯೇ ಇದೆ. ಕನ್ನಡ ಶಾಲೆಗಳ ಕುರಿತಾದ ಕೀಳರಿಮೆ ಮತ್ತು ಆಂಗ್ಲ ಭಾಷೆಯೆಂದರೆ ಪ್ರತಿಷ್ಠೆಯೆಂಬ ಭ್ರಮೆಯಿಂದ ಜನತೆ ಹೊರಬರಬೇಕು. ಏಕೆಂದರೆ ಕನ್ನಡ ನಾಡಿನ ಬಹುತೇಕ ಸಾಧಕರಲ್ಲಿ ಕ್ರಿಯಾಶೀಲತೆಯನ್ನು ಬೆಳೆಸಿದ್ದೇ ಕನ್ನಡ ಮಾಧ್ಯಮ ಶಾಲೆಗಳು ಎಂದು ಕರ್ನಾಟಕದ ವಿಧಾನಸಭೆಯ ಸಭಾಪತಿ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ಅವರು ಕೇಶವ ಸ್ಮೃತಿ ಸಂವರ್ಧನ ಸಮಿತಿ ಮಂಗಳೂರಿನ ಸಂಘನಿಕೇತನದಲ್ಲಿ ಆಯೋಜಿಸಿದ ಎರಡು ದಿನಗಳ ಕನ್ನಡ ಶಾಲಾ ಮಕ್ಕಳ ಹಬ್ಬ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಭಾನುವಾರ ಮಾತನಾಡಿದರು.

ಆಡು ಭಾಷೆ, ಮಾತೃಭಾಷೆ ಮತ್ತು ರಾಷ್ಟ್ರಭಾಷೆಗೆ ಸರಿಸಮವಾಗಿ ಗೌರವಕೊಡಬೇಕು. ಮಾತೃಭಾಷೆ ಕೇವಲ ಪಠ್ಯದ ವಿಷಯವಾಗಿರದೆ ಸಂಸ್ಕಾರ ನೀಡುವ, ಸಂಸ್ಕೃತಿಯನ್ನು ಪರಿಚಯಿಸುವ ಶಕ್ತಿಯನ್ನು ಹೊಂದಿದೆ‌. ಭಾಷೆಯ ಅಭಿವೃದ್ಧಿಯ ದೃಷ್ಟಿಯಿಂದ ಇಂತಹ ಕನ್ನಡ ಶಾಲಾ ಮಕ್ಕಳ ಹಬ್ಬ ಎಂಬ ಚಟುವಟಿಕೆಯುಕ್ತ ಕಾರ್ಯಕ್ರಮ ಉದಾತ್ತ ಪರಿಕಲ್ಪನೆಗಳನ್ನೊಳಗೊಂಡ ಪರಿವರ್ತನಾಶೀಲ ಮಾದರಿಯನ್ನು ನಾಡಿನ ಎದುರಿಗಿರಿಸಿದೆ ಎಂದು ನುಡಿದರು.

ಹೆತ್ತವರು ತಮ್ಮ ನಿರೀಕ್ಷೆಗಳನ್ನು ಮಕ್ಕಳ ಮೇಲೆ ಹೊರಿಸಬಾರದು. ವಿದ್ಯಾರ್ಥಿಗಳು ಹಣ ಗಳಿಸುವುದಕ್ಕಿರುವ ಯಂತ್ರಗಳಲ್ಲ. ಅವರಲ್ಲಿ ಸಾಧಿಸುವ ಅಪಾರವಾದ ಶಕ್ತಿ ಇದೆ. ಮಕ್ಕಳ ಸಾಮರ್ಥ್ಯವನ್ನು ಗುರುತಿಸುವ ಕೆಲಸ ಶಾಲೆ ಮತ್ತು ಮನೆಗಳ ಮೂಲಕ ಆಗಬೇಕು. ವಿದ್ಯಾರ್ಥಿಗಳ ಆಸಕ್ತಿಗನುಸಾರವಾಗಿ ಪ್ರೋತ್ಸಾಹ ನೀಡಬೇಕು. ಹಾಗಾದಾಗ ಮಕ್ಕಳ ವ್ಯಕ್ತಿತ್ವ ವಿಕಸನವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಕರ್ನಾಟಕ ಬ್ಯಾಂಕ್ ನ ವ್ಯವಸ್ಥಾಪನಾ ನಿರ್ದೇಶಕ ಮಹಾಬಲೇಶ್ವರ ರಾವ್ ಮಾತನಾಡಿ ಭಾರತ ವಿವಿಧ ಭಾಷೆಗಳ ಹೂದೋಟ. ಯಾವುದೇ ಭಾಷೆಯನ್ನು ಅವಗಣಿಸದೆ ಕನ್ನಡದ ಮನಸ್ಸು ಬೆಳೆಸಿಕೊಳ್ಳುವುದು ಮುಖ್ಯ. ಮಕ್ಕಳಿಗೆ ಆರಂಭದ ವಿದ್ಯಾಭ್ಯಾಸ ಕನ್ನಡದಲ್ಲೇ ಸಿಗುವಂತಹ ಪ್ರಯತ್ನಗಳಾಗಬೇಕು. ನಮ್ಮತನವನ್ನು ಗಟ್ಟಿಗೊಳಿಸುವುದಕ್ಕೆ ಇಂತಹ ಕ್ರಿಯಾಶೀಲ ಕಾರ್ಯಕ್ರಮಗಳು ಸಹಕಾರಿ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಪಿ.ಎಸ್. ಯಡಪಡಿತ್ತಾಯ ಮಾತನಾಡಿ ಅಂಕಗಳು ಜೀವನ ನಡೆಸುವ ಮಾನದಂಡವಲ್ಲ. ಸಾಮರ್ಥ್ಯ, ಇಚ್ಛಾಶಕ್ತಿ, ಕೌಶಲ, ಅಭ್ಯಾಸ, ನೈತಿಕ ಮೌಲ್ಯ‌ ಎಂಬ ಐದು ಅಂಶಗಳ ಸಮ್ಮಿಶ್ರಣ ವಿದ್ಯಾರ್ಥಿಗಳಿಗೆ ಲಭಿಸಿದರೆ ಅವರ ಸರ್ವಾಂಗೀಣ ಬೆಳವಣಿಗೆಗೆ ಸಹಕಾರಿಯಾಗುತ್ತವೆ. ವಿದ್ಯಾರ್ಥಿಗಳು ಸಮಸ್ಯೆಗಳನ್ನು ಸವಾಲುಗಳಾಗಿ ಸ್ವೀಕರಿಸಿ, ಸವಾಲುಗಳನ್ನು ಅವಕಾಶಗಳಾಗಿ ಪರಿವರ್ತಿಸಿಕೊಳ್ಳುವ ಮನೋಧರ್ಮದ ರಚನೆಗೆ ಇಂತಹ ಕಾರ್ಯಕ್ರಮಗಳು ಉಪಯುಕ್ತ ಎಂದು ಹೇಳಿದರು.

ವೇದಿಕೆಯಲ್ಲಿ ಕೇಶವ ಸ್ಮೃತಿ ಸಂವರ್ಧನ ಸಮಿತಿ (ನೋಂ.)ಯ ಅಧ್ಯಕ್ಷ ವಾಮನ ಶೆಣೈ ಉಪಸ್ಥಿತರಿದ್ದರು‌. ಕನ್ನಡ ಉಪನ್ಯಾಸಕ ಕೇಶವ ಬಂಗೇರ ಸ್ವಾಗತಿಸಿ, ಉಪನ್ಯಾಸಕಿ ಸ್ಮಿತಾ ವಂದಿಸಿದರು. ಗೋವಿಂದದಾಸ ಕಾಲೇಜಿನ ಉಪನ್ಯಾಸಕಿ ಅಕ್ಷತಾ ಕಾರ್ಯಕ್ರಮ ನಿರೂಪಿಸಿದರು.

IPL_Entry_Point