ಕನ್ನಡ ಸುದ್ದಿ  /  Karnataka  /  Kannada Shala Makkala Habba: Shala Makkala Kannada Habba Second Day Report Chakravarthi Sulibele And Others Participated

Kannada Shala Makkala habba: ಕನ್ನಡ ನಮ್ಮ ಸಂಸ್ಕೃತಿಯನ್ನು ಅರ್ಥೈಸುವ ಭಾಷೆ: ಚಕ್ರವರ್ತಿ ಸೂಲಿಬೆಲೆ

Kannada Shala Makkala habba 2022: ಮಂಗಳೂರಿನ ಸಂಘ ನಿಕೇತನದಲ್ಲಿ ಎರಡು ದಿನಗಳ ಕನ್ನಡ ಶಾಲಾ ಮಕ್ಕಳ ಹಬ್ಬ ನಿನ್ನೆ ಸಂಪನ್ನವಾಗಿದೆ. ಎರಡನೇ ದಿನ ಏನೇನಾಯಿತು? ಇಲ್ಲಿದೆ ವರದಿ.

ಕನ್ನಡ ಶಾಲಾ ಮಕ್ಕಳ ಹಬ್ಬದಲ್ಲಿ 'ಕನ್ನಡ ಎಂದರೆ ಬರಿ ನುಡಿಯಲ್ಲ' ಎಂಬ ವಿಷಯದ ಕುರಿತು ಚಕ್ರವರ್ತಿ ಸೂಲಿಬೆಲೆ ಅವರು ಮಾತನಾಡಿದರು.
ಕನ್ನಡ ಶಾಲಾ ಮಕ್ಕಳ ಹಬ್ಬದಲ್ಲಿ 'ಕನ್ನಡ ಎಂದರೆ ಬರಿ ನುಡಿಯಲ್ಲ' ಎಂಬ ವಿಷಯದ ಕುರಿತು ಚಕ್ರವರ್ತಿ ಸೂಲಿಬೆಲೆ ಅವರು ಮಾತನಾಡಿದರು.

ಮಂಗಳೂರು: ಭಾರತ ಜನ್ಯವಾದ ಎಲ್ಲಾ ಭಾಷೆಗಳು ನೂರು ಪ್ರತಿಶತ ವೈಜ್ಞಾನಿಕವಾಗಿವೆ. ನಮಗೆಲ್ಲರಿಗೂ ಬರೆದಂತೆಯೇ ಓದುವ ಸಾಮರ್ಥ್ಯ ನೀಡಿದ್ದು ನಮ್ಮ ಭಾಷೆ. ಅಕ್ಷರಗಳ ಜನನವೂ ವ್ಯವಸ್ಥಿತವಾಗಿರುವ ವಿಶಿಷ್ಠ ಭಾಷೆ ನಮ್ಮದು ಎಂದು ಖ್ಯಾತ ವಾಗ್ಮಿ ಹಾಗೂ ಯುವಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹೇಳಿದರು.

ಕೇಶವ ಸ್ಮೃತಿ ಸಂವರ್ಧನ ಸಮಿತಿ ಮಂಗಳೂರಿನ ಸಂಘನಿಕೇತನದಲ್ಲಿ ಆಯೋಜಿಸಿದ ಎರಡು ದಿನಗಳ ಕನ್ನಡ ಶಾಲಾ ಮಕ್ಕಳ ಹಬ್ಬ ಕಾರ್ಯಕ್ರಮದ ಎರಡನೇ ದಿನದ ಮೊದಲ ಗೋಷ್ಠಿಯಲ್ಲಿ 'ಕನ್ನಡ ಎಂದರೆ ಬರಿ ನುಡಿಯಲ್ಲ' ಎಂಬ ವಿಷಯದ ಕುರಿತು ಅವರು ಭಾನುವಾರ ಮಾತನಾಡಿದರು.

ಇಂಗ್ಲೀಷ್ ಒಂದು ಭಾಷೆ, ಕನ್ನಡ ಒಂದು ಸಂಸ್ಕೃತಿ. ಹಾಗಾಗಿ ಕನ್ನಡದಲ್ಲಿ ಕಲಿತ ಸಂಗತಿ ಹೆಚ್ಚು ಮನದಟ್ಟಾಗುತ್ತದೆ. ಇಂಗ್ಲೀಷ್ ಗೊಂದಲದ ಗೂಡಾಗಿದೆ. ಚಿಕ್ಕಂದಿನಿಂದಲೇ ಮಗು ಇಂಗ್ಲೀಷ್ ಮಾತಾಡಬೇಕು ಎನ್ನುವ ಪೋಷಕರು ಮಕ್ಕಳು ಸಂಸ್ಕೃತಿ ಮರೆಯುತ್ತಾರೆ ಎನ್ನುವುದನ್ನು ಗಮನಿಸುವುದು ಅಗತ್ಯವೆಂದು ಅಭಿಪ್ರಾಯಪಟ್ಟರು.

ಕನ್ನಡ ಶಾಲೆ ಯಶೋಗಾಥೆ

ಪುತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಕಲ್ಲಡ್ಕ ಪ್ರಭಾಕರ ಭಟ್ ಮತ್ತು ಸುಳ್ಯದ ಸ್ನೇಹ ವಿದ್ಯಾ ಸಂಸ್ಥೆಯ ಅಧ್ಯಕ್ಷ ಚಂದ್ರಶೇಖರ ದಾಮ್ಲೆ ಮುಖ್ಯ ಅತಿಥಿಯಾಗಿ ಎರಡನೇ ವಿಚಾರ ಗೋಷ್ಠಿಯಲ್ಲಿ ಭಾಗವಹಿಸಿದರು.

ಭಾರತೀಯತೆಯ ತಳಹದಿಯ ಮೇಲೆ ಸಂಸ್ಕಾರಭರಿತ ವಿದ್ಯಾರ್ಥಿ ಸಮೂಹದ ನಿರ್ಮಾಣಕ್ಕಾಗಿ ಕಲ್ಲಡ್ಕದ ಶ್ರೀರಾಮ ಶಾಲೆಯನ್ನು ಪ್ರಾರಂಭಿಸಲಾಯಿತು. ಅನೇಕ ವಿರೋಧಗಳು ವ್ಯಕ್ತವಾದರೂ ರಾಷ್ಟ್ರೀಯತೆಯ ಆಧಾರದ ಮೇಲೆಯೇ ಶಾಲೆಯನ್ನು ನಡೆಸುತ್ತಿದ್ದೇವೆ. ವಿದ್ಯಾರ್ಥಿ ಮತ್ತು ಶಿಕ್ಷಕರ ಬಾಂಧವ್ಯ ವೃದ್ಧಿಯ ಮೂಲಕ ವಿದ್ಯಾರ್ಥಿಗಳಿಗೆ ಸಂಸ್ಕೃತಿಯನ್ನು ಪರಿಚಯಿಸಲಾಗುತ್ತದೆ ಎಂದು ಡಾ.ಕಲ್ಲಡ್ಕ ಪ್ರಭಾಕರ ಭಟ್ ಹೇಳಿದರು.

ಶಿಕ್ಷಣದಿಂದ ಸ್ವಾಭಿಮಾನಿ ವಿದ್ಯಾರ್ಥಿಗಳು ನಿರ್ಮಾಣವಾಗಬೇಕು. ಸ್ವಾಭಿಮಾನ ಮರೆತಾಗ ಸಮಾಜದಲ್ಲಿ ಹಲವು ಅನರ್ಥಗಳಾಗುತ್ತವೆ. ಆದ್ದರಿಂದ ವಿದ್ಯಾರ್ಥಿಗಳಿಗೆ ನಮ್ಮ ನೆಲದ ಸತ್ವವನ್ನು ಪರಿಚಯಿಸುವ ಪ್ರೇರಣಾದಾಯಿ ಕಾರ್ಯಕ್ರಮಗಳು ಶಾಲೆಗಳಲ್ಲಾಗಬೇಕು. ಅಂತಹ ಕಾರ್ಯಕ್ರಮಗಳು ಶಿಕ್ಷಕರು, ವಿದ್ಯಾರ್ಥಿ ವೃಂದ ಮತ್ತು ಹೆತ್ತವರನ್ನು ಬೆಸೆಯಬೇಕು ಎಂದು ಅವರು ಹೇಳಿದರು.

ಗುಲಾಮಿ ಮನಸ್ಥಿತಿಯಿಂದ ಹೊರಬರುವ ಉದ್ಧೇಶದಿಂದ ನಿರ್ಮಾಣಗೊಂಡ ವಿದ್ಯಾಲಯ ನಮ್ಮದು. ಶಾಲೆ ಕಟ್ಟುವಾಗ ಹೂದೋಟ ಎನ್ನುವ ಭಾವನೆ ಹೊಂದಿದ್ದೆನು. ಹಾಗಾಗಿ ಕೆಲವು ಸ್ನೇಹಿತರು ಸೇರಿ ಸ್ನೇಹ ಶಾಲೆಯನ್ನು ಪ್ರಾರಂಭಿಸಿದೆವು. ಆದರೆ ಶಾಲೆಯನ್ನು ನಿರ್ಮಾಣ ಮಾಡಿದ ನಂತರ ಹಲವು ಸಮಸ್ಯೆಗಳು ಎದುರಾದವು ಎಂದು ಚಂದ್ರಶೇಖರ ದಾಮ್ಲೆ ಹೇಳಿದರು.

ಕೇವಲ ಬಾಯ್ಪಾಠ ಮಾಡಿ ತೇರ್ಗಡೆಯಾಗುವ ವಿದ್ಯಾರ್ಥಿ ವೃಂದದ ನಿರ್ಮಾಣದಿಂದ ಹಲವು ಸಮಸ್ಯೆಗಳಾಗುತ್ತಿದ್ದವು. ಆದ್ದರಿಂದ ಶಿಕ್ಷಣ ಮತ್ತು ಪ್ರಕೃತಿಗಿರುವ ನಿಕಟ ಸಂಬಂಧವನ್ನು ಅರಿತು ಹಲವು ಪ್ರಯೋಗಗಳ ಮೂಲಕ ನಮ್ಮ ಶಾಲೆಯಲ್ಲಿ ಶಿಕ್ಷಣ ನೀಡಲಾಗುತ್ತಿದೆ. ಕನ್ನಡ ಕಲಿತರೆ ಹಿನ್ನಡೆಯಿಲ್ಲ ಎನ್ನುವ ಸಂದೇಶವನ್ನು ರವಾನಿಸಿ ಕನ್ನಡ ಮಾಧ್ಯಮಕ್ಕೆ ಸರಿಯಾದ ಮಾನ್ಯತೆ ಸಿಗುವಂತೆ ಮಾಡಬೇಕು ಎಂದು ದಾಮ್ಲೆ ನುಡಿದರು.

ಕಾರ್ಯಕ್ರಮದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಪರೀಕ್ಷಾಂಗ ಕುಲಸಚಿವ ಡಾ.ಪಿ.ಎಲ್.ಧರ್ಮ ಸಮನ್ವಯಕಾರರಾಗಿದ್ದರು.

ಸಂಸ್ಕಾರ ನೀಡುವುದೇ ಶಿಕ್ಷಣ: ಪ್ರಕಾಶ್ ಮಲ್ಪೆ

ಶಿವರಾಮ ಕಾರಂತ ವೇದಿಕೆಯಲ್ಲಿ 'ನವದಂಪತಿಗಳ ಸಮಾವೇಶ' ನಡೆಯಿತು‌. ಗೋಷ್ಠಿಯಲ್ಲಿ ಖ್ಯಾತ ವಾಗ್ಮಿ ಪ್ರಕಾಶ್ ಮಲ್ಪೆ ನವದಂಪತಿಗಳ ಸಮಾವೇಶದಲ್ಲಿ ಉಪನ್ಯಾಸ ನೀಡಿದರು. ಭಾಷೆ ಎನ್ನುವುದು ಸಂವಹನ ಮಾಧ್ಯಮವಾಗಿರದೆ ಅದೊಂದು ಸಂಸ್ಕೃತಿಯಾಗಿದೆ. ಸಂಸ್ಕಾರವನ್ನು ಕೊಡುವುದೇ ಶಿಕ್ಷಣವಾದ್ದರಿಂದ ಸಂಸ್ಕೃತಿಯನ್ನು ಪರಿಚಯಿಸುವ ನಮ್ಮ ಭಾಷೆಯಲ್ಲೇ ಮಕ್ಕಳಿಗೆ ಶಿಕ್ಷಣ ನೀಡಬೇಕು. ಮಾತೃ ಭಾಷೆಯಲ್ಲಿ ಕಲಿತ ಮಕ್ಕಳು ಹೆಚ್ಚು ವಿಷಯಾಸಕ್ತಿಯನ್ನು ಹೊಂದುವುದರಿಂದ ಮಕ್ಕಳನ್ನು ಮಾತೃಭಾಷೆಯಲ್ಲಿ ಶಿಕ್ಷಣ ಸಿಗುವ ಮಾಧ್ಯಮಕ್ಕೆ ಸೇರಿಸುವ ಜವಾಬ್ದಾರಿ ಪೋಷಕರಲ್ಲಿದೆ ಎನ್ನುವುದನ್ನು ತಿಳಿಸಿದರು.

ಜೀವನ ಮೌಲ್ಯ

'ಜೀವನ ಮೌಲ್ಯ' ಎಂಬ ವಿಷಯದ ಕುರಿತಾದ ಗೋಷ್ಠಿ ಶಿವರಾಮ ಕಾರಂತ ವೇದಿಕೆಯಲ್ಲಿ ನಡೆಯಿತು. ಗೋಷ್ಠಿಯಲ್ಲಿ ಜೈನ ಪ್ರೌಢಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ಮುನಿರಾಜ ರೆಂಜಾಳ ಉಪನ್ಯಾಸ ನೀಡಿದರು. ಪ್ರತಿ ವ್ಯಕ್ತಿಗೂ ರಾಷ್ಟ್ರೀಯ ಮೌಲ್ಯ, ಸಾಮಾಜಿಕ ಮೌಲ್ಯ ಮತ್ತು ವೈಯಕ್ತಿಕ ಮೌಲ್ಯಗಳಿರುತ್ತವೆ. ಈ ಎಲ್ಲಾ ಮೌಲ್ಯಗಳು ಜೀವನ ಪ್ರೀತಿಯನ್ನು ಆಧರಿಸಿದ್ದಾಗಿದೆ. ಅವುಗಳೆಲ್ಲವನ್ನೂ ಪಾಲಿಸುವುದು ನಮ್ಮ ಆದ್ಯ ಕರ್ತವ್ಯ ಎಂದು ನುಡಿದರು. ವೇದಿಕೆಯಲ್ಲಿ ಸಮನ್ವಯಕಾರರಾಗಿ ಡಾ.ಮೀನಾಕ್ಷಿ ರಾಮಚಂದ್ರ ಉಪಸ್ಥಿತರಿದ್ದರು

IPL_Entry_Point