ತಿರುವನಂತಪುರಂ ಅನಂತಪದ್ಮನಾಭ ಸ್ವಾಮಿ ಕ್ಷೇತ್ರದ ಮಹಾಪ್ರಧಾನ ಅರ್ಚಕರಾಗಿ ಬೆಳ್ತಂಗಡಿ ಮೂಲದ ಸತ್ಯನಾರಾಯಣ ನೇಮಕ
ಕನ್ನಡಿಗ ದಕ್ಷಿಣ ಕನ್ನಡ ಬೆಳ್ತಂಗಡಿ ಮೂಲಕ ಸತ್ಯನಾರಾಯಣ ತೋಡ್ತಿಲ್ಲಾಯ ಅವರನ್ನು ಭಾರತದ ಪ್ರಸಿದ್ದ ದೇವಾಲಯಗಳಲ್ಲಿ ಒಂದಾದ ಕೇರಳ ತಿರುವನಂತಪುರ ಅನಂತಪದ್ಮನಾಭ ದೇಗುಲದ ಮಹಾಪ್ರಧಾನ ಅರ್ಚಕರಾಗಿ ನೇಮಕಗೊಂಡಿದ್ದಾರೆವರದಿ: ಹರೀಶ ಮಾಂಬಾಡಿ.ಮಂಗಳೂರು

ಮಂಗಳೂರು: ಭಾರತದ ಅತೀ ಶ್ರೀಮಂತ ದೇವಸ್ಥಾನ ಕೇರಳದ ತಿರುವನಂತಪುರಂನ ಅನಂತಪದ್ಮನಾಭ ಕ್ಷೇತ್ರದ ಮಹಾಪ್ರಧಾನ ಅರ್ಚಕರಾಗಿ ದಕ್ಷಿಣಕನ್ನಡದ ಅರ್ಚಕರು ಆಯ್ಕೆಯಾಗಿದ್ದಾರೆ. ಬೆಳ್ತಂಗಡಿ ತಾಲೂಕಿನ ಕೊಕ್ಕಡ ನಿವಾಸಿ ಸತ್ಯನಾರಾಯಣ ತೋಡ್ತಿಲ್ಲಾಯ (45) ಇದೀಗ ದೇಶದ ಅತೀ ಶ್ರೀಮಂತ ದೇವಸ್ಥಾನಕ್ಕೆ ಮಹಾ ಪ್ರಧಾನ ಅರ್ಚಕರಾಗಿ ಆಯ್ಕೆಯಾಗಿದ್ದು, ಗುರುವಾರವೇ ಕಾರ್ಯಭಾರ ಸ್ವೀಕರಿಸಿದರು.
ಬೆಳ್ತಂಗಡಿಯ ಕೊಕ್ಕಡದ ದಿ. ಸುಬ್ರಾಯ ತೊಡ್ತಿಲ್ಲಾಯರ ಮಗನಾಗಿರುವ ಸತ್ಯನಾರಾಯಣ ತೋಡ್ತಿಲ್ಲಾಯ, ದೇವಸ್ಥಾನದಿಂದ ನೀಡಲಾಗುವ ಛತ್ರಿ ಮರ್ಯಾದೆ ಸ್ವೀಕರಿಸುವ ಮಹಾ ಪ್ರಧಾನ ಅರ್ಚಕ ಸ್ಥಾನವನ್ನು ಅಲಂಕರಿಸಲಿದ್ದಾರೆ. ಇನ್ನು ಇವರ ತಂದೆ ದಿ. ಸುಬ್ರಾಯ ತೊಡ್ತಿಲ್ಲಾಯರೂ ಕೂಡ ಅನಂತ ಪದ್ಮನಾಭ ಕ್ಷೇತ್ರದಲ್ಲಿ ಪ್ರಧಾನ ಅರ್ಚಕರಾಗಿ ಸೇವೆ ಸಲ್ಲಿಸಿದ್ದರು.
ಭಾರತದ ಅತೀ ಶ್ರೀಮಂತ ದೇವಸ್ಥಾನ ಕೇರಳದ ತಿರುವನಂತ ಪುರ ಶ್ರೀ ಅನಂತ ಪದ್ಮನಾಭ ಸ್ವಾಮಿಯ ಪ್ರಧಾನ ಅರ್ಚಕರಾಗಿ ಸೇವೆ ಸಲ್ಲಿಸಲು ಭಾಗ್ಯ ದೊರಕುವುದು ಅಂದ್ರೆ ವೈಕುಂಠದಲ್ಲಿ ದೇವರನ್ನ ಸ್ವತಃ ಪೂಜಿಸಿದ ಗರಿಮೆ ಎಂದು ಇವರ ಕುಟುಂಬ ವರ್ಗ ಸಂತಸಪಟ್ಟಿದೆ. ಈ ಪ್ರಧಾನ ಅರ್ಚಕ ಸ್ಥಾನ ಲಭಿಸಬೇಕಾದರೆ ಅದು ಅದೆಷ್ಟೋ ವರ್ಷ ಕೆಳಗಿನ ಪೂಜಾ ಅರ್ಚಕ ಸ್ಥಾನಗಳನ್ನ ಪೂರೈಸಿ ನಂತರ ಈ ಹುದ್ದೆಯ ಭಾಗ್ಯ ದೊರೆಯುವುದು ವಾಡಿಕೆ. ಅದರಲ್ಲೂ ಮಹಾ ಪ್ರಧಾನ ಅರ್ಚಕರೆಂದರೆ ಅವರಿಗೆ ಸಂಸ್ಥಾನದಿಂದ ನೀಡುವ ಕೊಡೆ ( ಛತ್ರಿ) ಮರ್ಯಾದೆ ಇರುವ ವಿಶೇಷ ಸ್ಥಾನ.ಈ ಮಹಾ ಅರ್ಚಕ ಸ್ಥಾನವನ್ನ ಈವರೆಗೆ ಅತೀ ಸಣ್ಣ ವಯಸ್ಸಿನಲ್ಲಿ ಪಡೆದ ಯಾವುದೇ ನಿದರ್ಶನ ತಿಳಿದಂತೆ ಇಲ್ಲ. ಈಗ ಕಳೆದ ಆರು ತಿಂಗಳ ಹಿಂದೆ ಇಲ್ಲಿಗೆ ಪ್ರಧಾನ ಅರ್ಚಕರಾಗಿ ನೇರವಾಗಿ ನಿಯುಕ್ತಿಗೊಂಡ ಕೊಕ್ಕಡದ ದಿ. ಸುಬ್ರಾಯ ತೋಡ್ತಿಲ್ಲಾಯರ ಮಗ ಬಡೆಕ್ಕರ ಶ್ರೀ ಸತ್ಯನಾರಾಯಣ ತೋಡ್ತಿಲ್ಲಾಯ ಯಾನೆ ನಾಗೇಶ ತೋಡ್ತಿಲ್ಲಾಯ ಇವರಿಗೆ ಅರ್ಚಕರಾಗಿ ಸೇರಿದ ಆರೇ ತಿಂಗಳಲ್ಲಿ ಮಹತ್ತರವಾದ ಗೌರವ ಇರುವ ಮಹಾ ಪ್ರಧಾನ ಅರ್ಚಕ ಸ್ಥಾನ( ಪೆರಿಯ ನಂಬಿ) ( ಕೊಡೆ = ಛತ್ರಿ ಮರ್ಯಾದೆ) ಪ್ರಾಪ್ತಿಯಾಗಿರುವುದು ಇತಿಹಾಸದ ಒಂದು ದೊಡ್ಡ ಮೈಲುಗಲ್ಲು.
ಇದರ ಕೀರ್ತಿ ಇವರ ಹುಟ್ಟೂರಾದ ಬೆಳ್ತಂಗಡಿ ತಾಲೂಕಿನ ಕೊಕ್ಕಡಕ್ಕೆ ಮತ್ತು ವಿಶ್ವವಿಖ್ಯಾತ ನಂ.1 ಶ್ರೀಮಂತ ದೇವಳದ ಮಹಾಪ್ರಧಾನ ಅರ್ಚಕ ಹುದ್ದೆಯು ಕೇರಳದ ನೆರೆಯ ಕರ್ನಾಟಕ ರಾಜ್ಯಕ್ಕೂ ಒಂದು ಅತೀ ಹೆಮ್ಮೆಯ ವಿಷಯವಾಗಿದೆ.
ನಮ್ಮ ಊರಿನ ಓರ್ವ ಅರ್ಚಕರು ಇಂದು ಅತ್ಯಲ್ಪ ಅವಧಿಯಲ್ಲೇ ಇಂತಹ ಮಹಾನ್ ಹುದ್ದೆಗೆ ನಿಯುಕ್ತಿಗೊಂಡಿರುವುದು ನಮ್ಮೂರಿಗೂ ,ನಮ್ಮ ರಾಜ್ಯಕ್ಕೂ ಹೆಮ್ಮೆಯ ವಿಷಯವಾಗಿದೆ. ಇಲ್ಲೀ ತನಕದ ಇತಿಹಾಸದಲ್ಲಿ ಈ ಮಹಾ ಹುದ್ದೆಯನನ್ನು ನಿರ್ವಹಿಸಿದವರು ನಮ್ಮೂರಿನ ಹಲವರು ಇದ್ದಾರಾದರೂ ಜೀವನದ ಸಂಧ್ಯಾಕಾಲದಲ್ಲಿ ಈ ಯೋಗ ಅವರಿಗೆಲ್ಲ ಸಿಕ್ಕಿರುವುದಾಗಿದೆ. ಪ್ರಧಾನ ಅರ್ಚಕ ಸ್ಥಾನಕ್ಕೆ ಸೇರಿದ ಆರುತಿಂಗಳಲ್ಲೇ ಈ ಮಹಾಪ್ರಧಾನ ಅರ್ಚಕ ಸ್ಥಾನ ದ ಸುಯೋಗ ಒದಗಿದ ಅತ್ಯಂತ ಕಿರಿಯ ವಯಸ್ಸಿನ ಮಹಾಪ್ರಧಾನ ಅರ್ಚಕರು( ಪೆರಿಯ ನಂಬಿ) ಶ್ರೀ ಸತ್ಯನಾರಾಯಣ ತೋಡ್ತಿಲ್ಲಾಯರು ಆಗಿದ್ದಾರೆ ಎಂದು ಕೊಕ್ಕಡದ ಸುಬ್ರಹ್ಮಣ್ಯ ಶಗ್ರಿತ್ತಾಯ ಸಂತಸಪಟ್ಟರು.
ಶ್ರೀ ಪದ್ಮನಾಭಸ್ವಾಮಿ ದೇವಸ್ಥಾನವು 8ನೇ ಶತಮಾನದ ಕಾಲಕ್ಕೆ ಸೇರಿದೆ. ಇದು ಭಾರತದಲ್ಲಿರುವ ವಿಷ್ಣುವಿಗೆ ಸಮರ್ಪಿಸಲಾದ ದೇವಾಲಯಗಳಲ್ಲಿ ಒಂದಾಗಿದೆ. ದಿವ್ಯ ದೇಸಮ್‌ಗಳೆಂದರೆ ವಿಷ್ಣು ದೇವರ ಪವಿತ್ರ ನೆಲೆಬೀಡುಗಳಾಗಿದ್ದು ಅವುಗಳನ್ನು ತಮಿಳು ಅಝ್ವರ್‌ಗಳ (ಸಂತರ) ಕೆಲಸಗಳಲ್ಲಿ ನಮೂದಿಸಲಾಗಿದೆ. ಈ ದೇವಸ್ಥಾನದ ಪ್ರಮುಖ ದೇವತೆ ಸರ್ಪದ ಮೇಲೆ ಒರಗಿದ ಮಲಗಿರುವ ಅನಂತ ಹಾಗೂ ವಿಷ್ಣು.
ವರದಿ: ಹರೀಶ ಮಾಂಬಾಡಿ.ಮಂಗಳೂರು
