ಕವಿ ಮುದ್ದಣನ ಸ್ಮಾರಕ ಮೂಲಕ ಗಮನ ಸೆಳೆದಿದ್ದ ಸಾಹಿತ್ಯಪ್ರೇಮಿ ನಂದಳಿಕೆ ಬಾಲಚಂದ್ರ ರಾವ್ ನಿಧನ
ನಂದಳಿಕೆ ಮುದ್ದಣ ಸ್ಮಾರಕ ಮಿತ್ರಮಂಡಳಿಯ ಸ್ಥಾಪಕರಲ್ಲಿ ಓರ್ವರಾದ ನಂದಳಿಕೆ ಬಾಲಚಂದ್ರ ರಾವ್ ಬುಧವಾರ (ಮೇ 14) ಹೃದಯಾಘಾತಕ್ಕೆ ಒಳಗಾಗಿ ನಿಧನರಾದರು. ಕಾರ್ಕಳ ತಾಲೂಕಿನ ನಂದಳಿಕೆಯ ಐಸಿರಿ ಮನೆಯಲ್ಲಿ ನಾಳೆ (ಮೇ 15) ಅಂತ್ಯ ಸಂಸ್ಕಾರ ನಡೆಯಲಿದೆ. (ವರದಿ- ಹರೀಶ್ ಮಾಂಬಾಡಿ, ಮಂಗಳೂರು)

ಮಂಗಳೂರು: ಕರ್ನಾಟಕ ಬ್ಯಾಂಕಿನಲ್ಲಿ ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ ನಿವೃತ್ತಿಯಾಗಿದ್ದ ನಂದಳಿಕೆ ಬಾಲಚಂದ್ರ ರಾವ್ (72) ಬುಧವಾರ ಹೃದಯಾಘಾತದಿಂದ ನಿಧನರಾದರು. ಅವರಿಗೆ ಪತ್ನಿ, ಪುತ್ರಿ ಇದ್ದಾರೆ.
ನಂದಳಿಕೆ ಮುದ್ದಣ ಸ್ಮಾರಕ ಮಿತ್ರಮಂಡಳಿಯ ಸ್ಥಾಪಕರಲ್ಲಿ ಓರ್ವರಾದ ನಂದಳಿಕೆ ಬಾಲಚಂದ್ರ ರಾವ್ ಅವರ ಅಂತಿಮ ದರ್ಶನ ನಾಳೆ (ಮೇ 15) ಗುರುವಾರ ಬೆಳಿಗ್ಗೆ 6ರಿಂದ ಬೆಳಿಗ್ಗೆ ಹತ್ತು ಗಂಟೆಯವರೆಗೆ ಮಂಗಳೂರಿನ ಬಿಜೈನ ಚೌಟಾಸ್ ಕಂಪೌಡಿನಲ್ಲಿರುವ ಅವರ ಸ್ವಗೃಹದಲ್ಲಿರುತ್ತದೆ. ನಂತರ ಕಾರ್ಕಳ ತಾಲೂಕಿನ ನಂದಳಿಕೆಯ ಐಸಿರಿ ಮನೆಯಲ್ಲಿ ಅಂತಿಮ ದರ್ಶನ ವ್ಯವಸ್ಥೆಯಾಗಿದೆ. ಬಳಿಕ ಅಲ್ಲಿಯೇ ಅಂತ್ಯಕ್ರಿಯೆ ನಡೆಯಲಿದೆ.
ನಂದಳಿಕೆ ಮುದ್ದಣ ಸ್ಮಾರಕ ಮಿತ್ರಮಂಡಳಿಯ ಸ್ಥಾಪಕರಲ್ಲಿ ಒಬ್ಬರು ಬಾಲಚಂದ್ರ ರಾವ್
ಅವರು ಕವಿ ಮುದ್ದಣನ ಹುಟ್ಟೂರಾದ ನಂದಳಿಕೆಯಲ್ಲಿ ಮುದ್ದಣ ಸ್ಮಾರಕ ಮಿತ್ರಮಂಡಲಿ ಸ್ಥಾಪನೆ ಮಾಡಿ ಅದರ ಮೂಲಕ ಕವಿಯನ್ನು ನೆನಪಿಸುವ ನೂರಾರು ಕಾರ್ಯಕ್ರಮಗಳನ್ನು, ಕೆಲಸಗಳನ್ನು ಕಾರ್ಕಳದ ನಂದಳಿಕೆ ಗ್ರಾಮದಲ್ಲಿ ಮಾಡಿದರು. ಕವಿ ಮುದ್ದಣನ ಸಮಗ್ರ ಕಾವ್ಯ ಸಂಪುಟ ಬಿಡುಗಡೆ, ಮುದ್ದಣ ಮನೋರಮೆಯರ ಸಂಭಾಷಣೆಯ ಡಿವಿಡಿ, ಹುಟ್ಟೂರಿನಲ್ಲಿ ಮುದ್ದಣನ ನೆನಪಿನ ಗ್ರಂಥಾಲಯ, ಮುದ್ದಣ ಸ್ಮಾರಕ, ಮುದ್ದಣನ ಯಕ್ಷಗಾನ ಸಂಪುಟಗಳು, ಪ್ರತೀ ವರ್ಷ ಕವಿ ಮುದ್ದಣ ದಿನಾಚರಣೆ, ಸ್ಟಾಂಪ್ ಬಿಡುಗಡೆ, ಮುದ್ದಣನ ಹೆಸರಲ್ಲಿ ನೂರಾರು ಸಾಹಿತ್ಯಿಕ ಕಾರ್ಯಕ್ರಮಗಳು, ಮುದ್ದಣ ಸ್ಮಾರಕ ಪ್ರಶಸ್ತಿ ಪೀಠ ಸ್ಥಾಪನೆ, ಮಂಗಳೂರು ವಿವಿಯಲ್ಲಿ ಕವಿಯ ನೆನಪಿನ ಅಧ್ಯಯನ ಪೀಠಕ್ಕಾಗಿ ಶ್ರಮಿಸಿದ್ದರು.
(ವರದಿ- ಹರೀಶ್ ಮಾಂಬಾಡಿ, ಮಂಗಳೂರು)