ಕರ್ನಾಟಕ ಬಿಜೆಪಿಯ ಇಬ್ಬರು ಶಾಸಕರ ಉಚ್ಚಾಟನೆ, ಕಾಂಗ್ರೆಸ್‌ ಜತೆಗೆ ಗುರುತಿಸಿಕೊಂಡಿದ್ದಕ್ಕೆ ಕಮಲ ಪಕ್ಷದಿಂದ ಕ್ರಮ
ಕನ್ನಡ ಸುದ್ದಿ  /  ಕರ್ನಾಟಕ  /  ಕರ್ನಾಟಕ ಬಿಜೆಪಿಯ ಇಬ್ಬರು ಶಾಸಕರ ಉಚ್ಚಾಟನೆ, ಕಾಂಗ್ರೆಸ್‌ ಜತೆಗೆ ಗುರುತಿಸಿಕೊಂಡಿದ್ದಕ್ಕೆ ಕಮಲ ಪಕ್ಷದಿಂದ ಕ್ರಮ

ಕರ್ನಾಟಕ ಬಿಜೆಪಿಯ ಇಬ್ಬರು ಶಾಸಕರ ಉಚ್ಚಾಟನೆ, ಕಾಂಗ್ರೆಸ್‌ ಜತೆಗೆ ಗುರುತಿಸಿಕೊಂಡಿದ್ದಕ್ಕೆ ಕಮಲ ಪಕ್ಷದಿಂದ ಕ್ರಮ

ಎರಡು ವರ್ಷದಿಂದ ಪಕ್ಷ ವಿರೋಧಿ ಚಟುವಟಿಕೆ ನಡೆಸುತ್ತಿದ್ದರು ಎನ್ನುವ ಆರೋಪದ ಮೇಲೆ ಬಿಜೆಪಿಯ ಇಬ್ಬರು ಶಾಸಕರಾದ ಎಸ್.ಟಿ.ಸೋಮಶೇಖರ್‌, ಶಿವರಾಂ ಹೆಬ್ಬಾರ್‌ ಅವರನ್ನು ̇ ಉಚ್ಚಾಟನೆ ಮಾಡಲಾಗಿದೆ.

ಎಸ್‌ಟಿ ಸೋಮಶೇಖರ್‌, ಶಿವರಾಂ ಹೆಬ್ಬಾರ್‌ ಅವರನ್ನು ಬಿಜೆಪಿಯಿಂದ ಉಚ್ಚಾಟಿಸಲಾಗಿದೆ.
ಎಸ್‌ಟಿ ಸೋಮಶೇಖರ್‌, ಶಿವರಾಂ ಹೆಬ್ಬಾರ್‌ ಅವರನ್ನು ಬಿಜೆಪಿಯಿಂದ ಉಚ್ಚಾಟಿಸಲಾಗಿದೆ.

ಬೆಂಗಳೂರು: ನಿರಂತರ ಎರಡು ವರ್ಷದಿಂದ ಬಿಜೆಪಿಯಲ್ಲಿದ್ದುಕೊಂಡೇ ಪಕ್ಷ ವಿರೋಧಿ ಚಟುವಟಿಕೆ ನಡೆಸುತ್ತಿದ್ದರು ಎನ್ನುವ ಆರೋಪದ ಮೇಲೆ ಇಬ್ಬರು ಶಾಸಕರಾದ ಬೆಂಗಳೂರಿನ ಯಶವಂತಪುರ ಶಾಸಕ ಎಸ್.ಟಿ.ಸೋಮಶೇಖರ್‌, ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರ ಶಾಸಕ ಅರೇಬೈಲು ಶಿವರಾಂ ಹೆಬ್ಬಾರ್‌ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ. ಆರು ವರ್ಷದ ಹಿಂದೆ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿ ಬಿಜೆಪಿ ಸೇರಿ ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಅವರ ಸಂಪುಟದಲ್ಲಿ ಸಚಿವರೂ ಆಗಿದ್ದ ಈ ಇಬ್ಬರು ಆನಂತರ 2023ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಚುನಾಯಿತರಾಗಿದ್ದರು. ಕಳೆದ ಲೋಕಸಭೆ ಚುನಾವಣೆ ವೇಳೆ ಟಿಕೆಟ್‌ ಹಂಚಿಕೆ ವಿಚಾರದಲ್ಲಿ ಆದಂತಹ ಬೆಳವಣಿಗೆಗಳ ಬಳಿಕ ಎಸ್‌ಟಿ ಸೋಮಶೇಖರ್‌ ಹಾಗೂ ಶಿವರಾಂ ಹೆಬ್ಭಾರ್‌ ಪಕ್ಷದ ಚಟುವಟಿಕೆಗಳಿಂದ ದೂರ ಉಳಿದು ಕಾಂಗ್ರೆಸ್‌ನಲ್ಲಿ ಗುರುತಿಸಿಕೊಂಡಿದ್ದರು. ಈ ಕಾರಣದಿಂದ ಅವರನ್ನು ಈಗ ಬಿಜೆಪಿ ಉಚ್ಚಾಟನೆ ಮಾಡಲಾಗಿದೆ.

ಎಸ್‌ಟಿ ಸೋಮಶೇಖರ್‌ ಅವರು ಎರಡು ದಿನದ ಹಿಂದೆ ನಡೆದ ಬೆಂಗಳೂರು ಹಾಲು ಒಕ್ಕೂಟದ ಚುನಾವಣೆಯಲ್ಲಿ ಕಾಂಗ್ರೆಸ್‌ ಪರವಾಗಿ ಬಹಿರಂಗವಾಗಿಯೇ ಪ್ರಚಾರ ಮಾಡಿದ್ದರು. ಅಲ್ಲದೇ ಮತ ಕೂಡ ಚಲಾಯಿಸಿದ್ದರು. ಇದು ಪಕ್ಷದ ನಾಯಕರನ್ನು ಕೆರಳಿಸಿತ್ತು. ಇಲ್ಲದೇ ಇತ್ತೀಚಿನ ದಿನಗಳಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರೊಂದಿಗೆ ಗುರುತಿಸಿಕೊಂಡು ಬಿಜೆಪಿ ಚಟುವಟಿಕೆಯಿಂದ ದೂರವೇ ಉಳಿದಿದ್ದರು.

ಇದಲ್ಲದೇ ಶಿವರಾಂ ಹೆಬ್ಭಾರ್‌ ಕೂಡ ಉತ್ತರ ಕನ್ನಡದ ಬಿಜೆಪಿ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ದೂರವೇ ಉಳಿದಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲೂ ಪಕ್ಷದ ಪರವಾಗಿ ಕೆಲಸ ಮಾಡಿರಲಿಲ್ಲ. ಕಾಂಗ್ರೆಸ್‌ನವರೊಂದಿಗೆ ಗುರುತಿಸಿಕೊಂಡಿದ್ದರು. ಅಲ್ಲದೇ ಕಾಂಗ್ರೆಸ್‌ ಪರವಾಗಿ ಹೇಳಿಕೆ ನೀಡುತ್ತಲೇ ಬಂದಿದ್ದರು.

ಈಗಾಗಲೇ ಎಸ್‌.ಟಿ.ಸೋಮಶೇಖರ್‌ ಅವರನ್ನು ಉಚ್ಚಾಟನೆ ಮಾಡಲಾಗಿದೆ. ಆ ಕುರಿತ ಆದೇಶ ಬಂದಿದೆ. ಶಿವರಾಂ ಹೆಬ್ಬಾರ್‌ ವಿರುದ್ದವೂ ಕ್ರಮ ಆಗಿದ್ದು. ಆ ಆದೇಶವು ಸದ್ಯದಲ್ಲೇ ಬರಲಿದೆ ಎಂದು ಬಿಜೆಪಿ ಉನ್ನತ ಮೂಲಗಳು ತಿಳಿಸಿವೆ.

ಎಸ್‌ಟಿ ಸೋಮಶೇಖರ್‌ ಮೂಲತಃ ಕಾಂಗ್ರೆಸ್‌ನಲ್ಲಿದ್ದವರು. 2013ರ ವಿಧಾನಸಭೆ ಚುನಾವಣೆಯಲ್ಲಿ ಯಶವಂತಪುರ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಗೆದ್ದಿದ್ದರು. ಮತ್ತೆ 2018ರ ವಿಧಾನಸಭೆ ಚುನಾವಣೆಯಲ್ಲಿ ಪುನರಾಯ್ಕೆಯಾಗಿದ್ದರು. ಆದರೆ ಮರು ವರ್ಷವೇ ನಡೆದಿದ್ದ ಆಪರೇಷನ್‌ ಕಮಲದ ಹದಿನೇಳು ಶಾಸಕರ ಪಟ್ಟಿಯಲ್ಲಿ ಸೋಮಶೇಖರ್‌ ಕೂಡ ಇದ್ದರು. ಬಳಿಕ ರಾಜೀನಾಮೆ ನೀಡಿ ಬಿಜೆಪಿ ಟಿಕೆಟ್‌ನಿಂದ ಚುನಾವಣೆ ಎದುರಿಸಿ ಗೆದ್ದು ಬಂದಿದ್ದರು. ಸಹಕಾರ ಹಾಗೂ ಎಪಿಎಂಸಿ ಸಚಿವರೂ ಆಗಿದ್ದರು. ಮೈಸೂರು ಹಾಗೂ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಹೊಣೆಯನ್ನೂ ಅವರಿಗೆ ನೀಡಲಾಗಿತ್ತು. ಯಡಿಯೂರಪ್ಪ ಅವರ ನಂತರ ಬಸವರಾಜ ಬೊಮ್ಮಾಯಿ ಅವರ ಸಂಪುಟದಲ್ಲೂ ಸಚಿವರಾಗಿದ್ದರು. 2023ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಗೆದ್ದರೂ ನಂತರ ಪಕ್ಷದಿಂದ ದೂರವಾಗಿ ಕಾಂಗ್ರೆಸ್‌ ಜತೆಗೆ ಗುರುತಿಸಿಕೊಂಡಿದ್ದರು.

ಅದೇ ರೀತಿ ಯಲ್ಲಾಪುರದಿಂದ ಶಿವರಾಂ ಹೆಬ್ಭಾರ್‌ ಅವರು 2013ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಗೆದ್ದಿದ್ದರು. ಮರು ಚುನಾವಣೆಯಲ್ಲಿ ಗೆದ್ದು ಬಳಿಕ ನಡೆದ ಆಪರೇಷನ್‌ ಕಮಲದಲ್ಲಿ ಬಿಜೆಪಿ ಸೇರಿ ಕಾರ್ಮಿಕ ಸಚಿವರಾಗಿದ್ದರು. ಅವರು ಕೂಡ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಗೆದ್ದ ನಂತರ ಪಕ್ಷದಿಂದ ವಿಮುಖರಾಗಿದ್ದರು. ಈ ಕಾರಣದಿಂದಲೇ ಈ ಇಬ್ಬರ ಮೇಲೆ ಬಿಜೆಪಿ ಶಿಸ್ತುಕ್ರಮದ ತೂಗುಕತ್ತಿ ಬೀಸುತ್ತಲೇ ಇತ್ತು. ಈಗ ಅದು ಜಾರಿಯಾಗಿದೆ ಎಂದು ಮೂಲಗಳು ತಿಳಿಸಿವೆ.

ಎರಡು ತಿಂಗಳ ಹಿಂದೆ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರನ್ನು ಇದೇ ರೀತಿ ಪಕ್ಷದಿಂದ ಅಮಾನತುಪಡಿಸಲಾಗಿತ್ತು. ಅವರು ಕೂಡ ಪಕ್ಷದ ನಾಯಕರ ವಿರುದ್ದ ಹೇಳಿಕೆ ನೀಡಿದ್ದಕ್ಕೆ ಈ ಕ್ರಮ ಕೈಗೊಳ್ಳಲಾಗಿತ್ತು.

ಕುಂದೂರು ಉಮೇಶಭಟ್ಟ ಪಿ.ಎಚ್.: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಡೆಪ್ಯುಟಿ ಚೀಫ್ ಕಂಟೆಂಟ್ ಪ್ರೊಡ್ಯೂಸರ್. ವಿಜಯ ಕರ್ನಾಟಕದಲ್ಲಿ ವಿಜಯಪುರ ಬ್ಯೂರೊ ಚೀಫ್ ಸೇರಿ ಹಲವು ಮಹತ್ವದ ಹುದ್ದೆಗಳ ನಿರ್ವಹಣೆ. ಮಲೆನಾಡು ಮಿತ್ರ, ಆಂದೋಲನ ಸೇರಿ ವಿವಿಧ ಪತ್ರಿಕೆಗಳಲ್ಲಿ 25 ವರ್ಷಗಳ ಅನುಭವ. ಪರಿಸರ, ಅರಣ್ಯ, ವನ್ಯಜೀವಿ, ಅಭಿವೃದ್ದಿ, ರಾಜಕೀಯ ಆಸಕ್ತಿ ಕ್ಷೇತ್ರಗಳು. 'ಕಾಡಿನ ಕಥೆಗಳು' ಅಂಕಣ ಬರೆಯುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ಕುಂದೂರು ಸ್ವಂತ ಊರು. ಸದ್ಯಕ್ಕೆ ಮೈಸೂರು ನಿವಾಸಿ.