ಕರ್ನಾಟಕದಲ್ಲಿ 2025-26ನೇ ಸಾಲಿನ ಶೈಕ್ಷಣಿಕ ವರ್ಷ ಆರಂಭ ಯಾವಾಗ; ಖಾಸಗಿ ಶಾಲೆಗಳಲ್ಲಿ ದಿನಾಂಕ ಪ್ರಕಟ
ಕರ್ನಾಟಕದಲ್ಲಿ ಶಾಲೆಗಳು ಮೇ ತಿಂಗಳ ಯಾವಾಗಿನಿಂದ ಆರಂಭವಾಗಲಿವೆ. ಶಾಲೆಗಳಲ್ಲಿ ಮಕ್ಕಳು ಹಾಗೂ ಪೋಷಕರಿಗೆ ನೀಡುತ್ತಿರುವ ಮಾಹಿತಿ ಏನು. ಇಲ್ಲಿದೆ ವಿವರ.

ಬೆಂಗಳೂರು: ಈ ಬಾರಿಯ ಬೇಸಿಗೆ ರಜೆ ಮುಗಿಯುವ ದಿನಗಳು ಸದ್ಯವೇ ಮುಗಿಯಲಿವೆ. ಈಗಾಗಲೇ ಪರೀಕ್ಷೆಗಳು ಮುಗಿದು ಬಹುತೇಕ ಒಂದೂವರೆ ತಿಂಗಳೇ ಕಳೆದು ಒಂದು ತಿಂಗಳಿನಿಂದ ಮಕ್ಕಳು ಬೇಸಿಗೆ ರಜೆ ಖುಷಿ ಮೂಡ್‌ನಲ್ಲಿದ್ದಾರೆ. ಅವರ ರಜೆಗಳು ಮೇ ಮೂರನೇ ವಾರಕ್ಕೆ ಮುಗಿಯಲಿವೆ.ಮೇ ನಾಲ್ಕನೇ ವಾರದಿಂದಲೇ ಕರ್ನಾಟಕದಲ್ಲಿ 2025-26 ನೇ ಸಾಲಿನ ಶೈಕ್ಷಣಿಕ ವರ್ಷ ಆರಂಭವಾಗಲಿದೆ.ಕರ್ನಾಟಕದಲ್ಲಿ ಬಹಳಷ್ಟು ಖಾಸಗಿ ಹಾಗೂ ಅನುದಾನಿತ ಶಿಕ್ಷಣ ಸಂಸ್ಥೆಗಳು 2025ರ ಮೇ 26ರಿಂದಲೇ ಈ ಸಾಲಿನ ತರಗತಿಗಳು ಆರಂಭವಾಗುತ್ತವೆ ಎನ್ನುವ ಪ್ರಕಟಣೆ ನೀಡಿವೆ. ಇದರಿಂದ ಮೇ ಕೊನೆ ವಾರದ ಸೋಮವಾರದಿಂದಹೇ ಹೆಚ್ಚಿನ ಭಾಗದಲ್ಲಿ ಶಾಲೆಗಳು ಆರಂಭವಾಗಲಿವೆ. ಆದರೆ ಸರ್ಕಾರಿ ಶಾಲೆಗಳು ಹಿಂದಿನ ವರ್ಷವೇ ಪ್ರಕಟಿಸುವ ಕ್ಯಾಲೆಂಡರ್ ಪ್ರಕಾರ ಮೇ 29ರಿಂದ ಆರಂಭವಾಗಲಿವೆ.
ಕಳೆದ ವರ್ಷವೇ ಕರ್ನಾಟಕ ಸರ್ಕಾರದ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯು ಪ್ರಕಟಿಸಿರುವಂತೆ ಶಾಲೆಗಳು ಮೇ 29ಕ್ಕೆ ಆರಂಭವಾಗಲಿವೆ. ಕರ್ನಾಟಕದಲ್ಲಿ ಸರ್ಕಾರಿ ಶಾಲೆಗಳು ಇದೇ ದಿನ ಅಂದರೆ ಮೇ 29ರ ಗುರುವಾರದಿಂದ ಶಾಲೆಗಳು ಶುರುವಾಗಲಿವೆ. ಇದಕ್ಕೂ ಎರಡು ದಿನ ಮುಂಚಿತವಾಗಿ ಶಾಲೆಗಳ ಸ್ವಚ್ಚತೆ, ಸಿದ್ದತೆ ಚಟುವಟಿಕೆಗಳನ್ನು ಎಲ್ಲಾ ಶಾಲೆಗಳಲ್ಲಿ ಶಿಕ್ಷಕರು ಸ್ಥಳೀಯ ಎಸ್‌ಡಿಎಂಸಿಗಳ ಸಹಯೋಗದಲ್ಲಿ ಆರಂಭಿಸಲಿವೆ. ಮಕ್ಕಳು ಶಾಲೆಗೆ ಬರುವಂತೆ ಮಾಡಲು ಊರಿನವರು, ಸ್ಥಳೀಯರ ಸಹಕಾರವನ್ನು ಶಿಕ್ಷಣ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಪಡೆಯುವರು. ಅದೂ ಅಲ್ಲದೇ ಪಠ್ಯಪುಸ್ತಕಗಳ ವಿತರಣೆ, ಸಮವಸ್ತ್ರಗಳ ಹಂಚಿಕೆ. ಬಿಸಿಯೂಟಕ್ಕೆ ತಯಾರಿ ಸೇರಿದಂತೆ ಹಲವು ಸಿದ್ದತೆಗಳೂ ಇರುವುದರಿಂದ ಸರ್ಕಾರಿ ಶಾಲೆಗಳಲ್ಲಿ ತಯಾರಿಯೂ ಮೇ 27 ರಿಂದಲೇ ಶುರುವಾದರೆ ಆನಂತರ ಮಕ್ಕಳು ಶಾಲೆಗೆ ಆಗಮಿಸುವರು.
ಆದರೆ ಕರ್ನಾಟಕದ ಬಹುತೇಕ ಶಾಲೆಗಳಲ್ಲಿ ಮೇ 26ರ ಸೋಮವಾರದಿಂದಲೇ ಶಾಲೆಗಳು ಶುರುವಾಗಲಿವೆ. ಈಗಾಗಲೇ ಶಾಲೆಗಳ ಪ್ರಕಟಣಾ ಫಲಕದಲ್ಲೂ ಪ್ರಕಟಿಸಲಾಗಿದ್ದು, ಪೋಷಕರಿಗು ಮಾಹಿತಿ ನೀಡಲಾಗಿದೆ. ಇನ್ನು ಕೆಲವು ಶಾಲೆಗಳಲ್ಲಿ ಮೇ 28ರ ಬುಧವಾರದಿಂದ ಶಾಲೆಗಳು ಶುರುವಾಗಲಿವೆ ತಿಳಿಸಲಾಗಿದೆ. ಆದರೆ ಹೆಚ್ಚಿನ ಶಾಲೆಗಳು ಸೋಮವಾರವೇ ತೆರೆಯಲಿವೆ. ಮುಂದಿನ ಒಂದು ವಾರ ಕಾಲ ಶುಲ್ಕ ಸೇರಿದಂತೆ ಇತರೆ ಚಟುವಟಿಕೆಗಳು ಇರುವುದರಿಂದ ಶೈಕ್ಷಣಿಕ ಚಟುವಟಿಕೆಗಳು ಎಲ್ಲೆಡೆ ಅಧಿಕೃತವಾಗಿ ಜೂನ್ 2ರ ಸೋಮವಾರದಿಂದಲೇ ಶುರುವಾಗಲಿವೆ.
ನಮ್ಮಲ್ಲಿ ಈಗಾಗಲೇ ಮೇ 26ರ ಸೋಮವಾರದಿಂದಲೇ ಮಕ್ಕಳನ್ನು ಕರೆ ತರುವಂತೆ ಪೋಷಕರಿಗೆ ತಿಳಿಸಲಾಗುತ್ತಿದೆ. ನಾಲ್ಕೈದು ದಿನದ ಮುಂಚಿನಿಂದಲೇ ಶಾಲೆಗಳು ಪ್ರಾರಂಭವಾದರೆ ಮುಂದೆ ಏನಾದರೂ ರಜೆ ಕೊಡುವ ಅನಿವಾರ್ಯತೆಗಳು ಬಂದರೆ ಸರಿದೂಗಿಸಲು ಸಹಕಾರಿಯಾಗುತ್ತದೆ ಎನ್ನುವ ಕಾರಣದಿಂದಲೇ ಮುಂಚೆ ಬರಲು ತಿಳಿಸಲಾಗುತ್ತಿದೆ ಎಂದು ಮೈಸೂರಿನ ಖಾಸಗಿ ಶಾಲೆಯೊಂದರ ಶಿಕ್ಷಕರು ತಿಳಿಸಿದರು.
ನಮ್ಮ ಮಗುವನ್ನು ಮೇ28ರ ಬುಧವಾರದಿಂದ ಶಾಲೆಗೆ ಕಳುಹಿಸಿ ಎನ್ನುವ ಸೂಚನೆಯನ್ನು ಶಾಲೆಯಿಂದ ಈಗಾಗಲೇ ನೀಡಲಾಗಿದೆ. ಇದಕ್ಕಾಗಿ ನಾವು ಸಿದ್ದತೆ ಮಾಡಿಕೊಳ್ಳುತ್ತಿದ್ದೇವೆ. ಇನ್ನೊಂದು ವಾರ ಕಳೆದರೆ ರಜೆ ಮುಗಿದ ಹಾಗೆಯೇ. ಮೂರನೇ ವಾರ ಮುಗಿಯುವ ಹೊತ್ತಿಗೆ ಶೈಕ್ಷಣಿಕ ವರ್ಷಕ್ಕೆ ಮಗುವನ್ನು ಕಳುಹಿಸಲು ಸಿದ್ದತೆ ಆರಂಭಿಸಬೇಕಾಗುತ್ತದೆ ಎನ್ನುವುದು ದಕ್ಷಿಣ ಕನ್ನಡ ಜಿಲ್ಲೆಯ ಪೋಷಕರೊಬ್ಬರ ವಿವರಣೆ.
ಶಾಲಾ ಶೈಕ್ಷಣಿಕ ಚಟುವಟಿಕೆಗಳ ಆರಂಭಕ್ಕೆ ಸಂಬಂಧಿಸಿದಂತೆ ಶಿಕ್ಷಣ ಇಲಾಖೆಯು ರಜೆ ನೀಡುವ ವೇಳೆಯೆ ವೇಳಾ ಪಟ್ಟಿ ಪ್ರಕಟಿಸಿದೆ. ಇದರ ಪ್ರಕಾರ ಮೇ 29ರಿಂದ ಶಾಲೆಯ ಆರಂಭವಾಗಲಿದೆ. ಅದಕ್ಕೂ ಮೊದಲು ಸಿದ್ದತೆಗಳು ಇರಲಿವೆ.ಖಾಸಗಿ ಶಾಲೆಗಳಲ್ಲಿ ಒಂದೆರಡು ದಿನ ಆರಂಭಿಸುತ್ತಲೂ ಇರಬಹುದು. ಮೇ ಕೊನೆಯ ವಾರವಂತೂ ಶಾಲೆಗಳು ಪುನಾರಂಭದ ಸಮಯವಂತೂ ಹೌದು ಎಂದು ಶಿಕ್ಷಣ ಇಲಾಖೆ ಅಧಿಕಾರಿಯೊಬ್ಬರು ಹೇಳುತ್ತಾರೆ.